ಪಂಜಾಬ್ (ಜೂನ್ 04); ಕೊರೋನಾ ನಿಯಂತ್ರಣದ ಸಲುವಾಗಿ ಕೇಂದ್ರ ಸರ್ಕಾರ ಮೇ 1 ರಿಂದ 18-44 ವರ್ಷದವರಿಗೆ ಲಸಿಕೆ ಅಭಿಯಾನ ಆರಂಭಿಸಿತ್ತು. ಆದರೆ, ಪೂರ್ಣ ಪ್ರಮಾಣದ ಲಸಿಕೆ ನೀಡದೆ ಕೇಂದ್ರ ಎಲ್ಲರಿಗೂ ಆದ್ಯತೆ ಮೇರೆ ಲಸಿಕೆಯನ್ನು ಹಂಚುತ್ತಿದೆ. ಅಲ್ಲದೆ, ರಾಜ್ಯಗಳೇ ಸ್ವತಃ ಲಸಿಕೆಯನ್ನೂ ಖರೀದಿಸುವಂತೆ ಸೂಚಿಸಿತ್ತು. ಹೀಗಾಗಿ ಪಂಜಾಬ್ ಸರ್ಕಾರ ಖಾಸಗಿ ಆಸ್ಪತ್ರೆಗಳ ಮೂಲಕ ಜನರಿಗೆ ಲಸಿಕೆಗಳನ್ನು ನೀಡಲು ಮುಂದಾಗಿತ್ತು. ಆದರೆ, ತೀವ್ರ ಜನಾಕ್ರೋಶ ಮತ್ತು "ಇದು ಲಸಿಕೆ ಹಗರಣ, ಕೋವಾಕ್ಸಿನ್ ಅನ್ನು ಖಾಸಗಿ ಆಸ್ಪತ್ರೆಗಳು ದುಬಾರಿ ದರಕ್ಕೆ ಮಾರಿಕೊಳ್ಳುವ ನಡೆ" ಎಂಬ ಕೂಗೆಬ್ಬಿಸಿದ್ದ ಪ್ರತಿಪಕ್ಷದ ಅಕಾಲಿ ದಳದ ಆರೋಪದಿಂದಾಗಿ ಇದೀಗ ಎಚ್ಚೆತ್ತಿರುವ ಪಂಜಾಬ್ ಸರ್ಕಾರವು ಶುಕ್ರವಾರ ಸಂಜೆ, "ಖಾಸಗಿ ಆಸ್ಪತ್ರೆಗಳ ಮೂಲಕ 18-44 ವಯೋಮಾನದವರಿಗೆ ಒಂದು ಬಾರಿ ಸೀಮಿತ ಲಸಿಕೆ ಪ್ರಮಾಣವನ್ನು" ನೀಡುವ ಆದೇಶವನ್ನು ಹಿಂತೆಗೆದುಕೊಂಡಿದೆ.
ರಾಜ್ಯ ಲಸಿಕಾ ಅಭಿಯಾನದ ಉಸ್ತುವಾರಿ ವಿಕಾಸ್ ಗರ್ಗ್ ಅವರು ಸಹಿ ಮಾಡಿದ ಸಂಕ್ಷಿಪ್ತ ಪತ್ರದಲ್ಲಿ, "ಲಸಿಕೆ ಅಭಿಯಾನವನ್ನು ಖಾಸಗಿ ಆಸ್ಪತ್ರೆಗೆ ನೀಡಿದ ರಾಜ್ಯ ಸರ್ಕಾರ ಈ ಆದೇಶವನ್ನು ವಿರೋಧ ಪಕ್ಷಗಳು ಸರಿಯಾದ ಮನೋಭಾವದಿಂದ ತೆಗೆದುಕೊಂಡಿಲ್ಲ. ಹೀಗಾಗಿ ಈ ಆದೇಶವನ್ನು ಹಿಂಪಡೆಯಲಾಗಿದೆ" ಎಂದು ತಿಳಿಸಿದ್ದಾರೆ.
ಇದಲ್ಲದೆ, ಖಾಸಗಿ ಆಸ್ಪತ್ರೆಗಳು ತಮ್ಮೊಂದಿಗೆ ಲಭ್ಯವಿರುವ ಎಲ್ಲಾ ಲಸಿಕೆಗಳನ್ನು ಕೂಡಲೇ ಮರಳಿಸಬೇಕು ಎಂದು ಸೂಚಿಸಲಾಗಿದೆ. ಈವರೆಗೆ ಬಳಸಿದ ಲಸಿಕಾ ಡೋಸ್‌ಗಳ ಪ್ರಮಾಣವನ್ನು ತಯಾರಕರಿಂದ ಖರೀದಿಸಿ ವಾಪಸ್ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಲಸಿಕೆ ನಿಧಿಯಲ್ಲಿ ಆಸ್ಪತ್ರೆಗಳು ಠೇವಣಿ ಇಟ್ಟ ಹಣವನ್ನು ಹಿಂದಿರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶವನ್ನು ಹಿಂಪಡೆಯುವ ಸ್ವಲ್ಪ ಸಮಯದ ಮೊದಲು, ಕೇಂದ್ರವು ರಾಜ್ಯಕ್ಕೆ ಪತ್ರ ಬರೆದಿದ್ದು, ಈ ವಿಷಯದಲ್ಲಿ ತಕ್ಷಣವೇ ಕೇಂದ್ರ ಆರೋಗ್ಯ ಇಲಾಖೆಗೆ ಸ್ಪಷ್ಟೀಕರಣ ನೀಡುವಂತೆ ಕೇಳಿತ್ತು. ಲಸಿಕೆಗಳ ಮೇಲೆ ನನಗೆ ನಿಯಂತ್ರಣವಿಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಬಿ.ಎಸ್.. ಸಿಧು ಶುಕ್ರವಾರ ಮುಂಜಾನೆ ತಿಳಿಸಿದ್ದರು. “ನಾನು ಚಿಕಿತ್ಸೆ, ಪರೀಕ್ಷೆ, ಕೋವಿಡ್ ಮಾದರಿ ಮತ್ತು ಲಸಿಕಾ ಶಿಬಿರಗಳನ್ನು ನೋಡಿಕೊಳ್ಳುತ್ತಿದ್ದೇನೆ. ನಾವು ಖಂಡಿತವಾಗಿಯೂ ವಿಚಾರಣೆಯನ್ನು ನಡೆಸುತ್ತೇವೆ. ನಾನೇ ವಿಚಾರಿಸಬಹುದು” ಎಂದು ಸಿಧು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಸಂಭವನೀಯ ಭಿನ್ನಮತವನ್ನು ಅಮರಿಂದರ್ ಸಿಂಗ್ ಸರ್ಕಾರ ಎದುರಿಸುತ್ತಿದೆ. ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಬಾದಲ್ ಅವರು, 40,000 ಡೋಸ್ ಕೋವಾಕ್ಸಿನ್ ಅನ್ನು ಹೆಚ್ಚಿನ ದರದಲ್ಲಿ ಮರು ಮಾರಾಟ ಮಾಡಲಾಗಿದೆ ಎಂದು ಗುರುವಾರ ಹೇಳಿದ ನಂತರ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.
ಡೋಸೇಜ್‌ಗೆ 400 ರೂ. ದರದಲ್ಲಿ ಖರೀದಿಸಲಾಗಿದೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 1,060 ರೂ,ಗೆ ಮಾರಾಟ ಮಾಡಲಾಗಿದೆ. ಆಸ್ಪತ್ರೆಗಳು ಅದನ್ನು ಅರ್ಹ ಫಲಾನುಭವಿಗಳಿಗೆ ಪ್ರತಿ ಡೋಸ್‌ಗೆ 1,560 ರೂ.ಗೆ ನೀಡಿವೆ ಎಂದು ಬಾದಲ್ ಹೇಳಿದ್ದಾರೆ.
ಇದನ್ನೂ ಓದಿ: Pinarayi Vijayan: ಬಜೆಟ್ನಲ್ಲಿ 20,000 ಕೋಟಿ ವಿಶೇಷ ಕೋವಿಡ್ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ!
ರಾಷ್ಟ್ರೀಯ ಲಸಿಕಾ ನೀತಿಯ ಬಗ್ಗೆ ತೀವ್ರವಾಗಿ ಟೀಕಿಸಿದ ಕಾಂಗ್ರೆಸ್ ವಿರುದ್ಧ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್ ಅವರು ಇಂದು ಮಧ್ಯಾಹ್ನ ಪಂಜಾಬ್ ವಿಷಯ ಉಲ್ಲೇಖಿಸಿ ಟೀಕಿಸಿದ್ದಾರೆ. ಗುರುವಾರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಕೂಡ ಪಂಜಾಬ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಎಎನ್‌ಐ ಪ್ರಕಾರ ಅವರು, "ಜನರ ಬಗ್ಗೆ ಪಂಜಾಬ್ ಸರ್ಕಾರ ಕಠಿಣ ಮನೋಭಾವ" ತೋರಿಸುತ್ತಿದೆ’ ಎಂದು ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಲಸಿಕೆಯ ಕಡಿಮೆ ದಾಸ್ತಾನು ಹೊಂದಿರುವ ಹಲವಾರು ರಾಜ್ಯಗಳಲ್ಲಿ ಪಂಜಾಬ್ ಕೂಡ ಸೇರಿದೆ.
ಇದನ್ನೂ ಓದಿ: ಸರಳವಾಗಿ ಎರಡು ದಿನದಲ್ಲೇ SSLC ಪರೀಕ್ಷೆ ನಡೆಯುವುದು ಹಾಗೂ ಫಲಿತಾಂಶ ಹೇಗೆ?; ಇಲ್ಲಿದೆ ಮಾಹಿತಿ!
ಲಸಿಕೆ ಸರಬರಾಜು ವಿಷಯವು ಕೇಂದ್ರ ಮತ್ತು ಹಲವಾರು ರಾಜ್ಯಗಳ ನಡುವೆ ವಿವಾದದ ವಿಷಯವಾಗಿ ಮಾರ್ಪಟ್ಟಿದೆ.. ಕಳೆದ ಕೆಲವು ತಿಂಗಳುಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಲಸಿಕೆ ಕೊರತೆಯಿಂದ ಪದೇ ಪದೇ ಲಸಿಕಾ ಅಭಿಯಾನವನ್ನು ಸ್ಥಗಿತಗೊಳಿಸಿದ್ದವು. ಅದರಲ್ಲೂ ವಿಶೇಷವಾಗಿ 18-44 ವಯೋಮಾನದವರಿಗೆ, 45 ವರ್ಷಕ್ಕಿಂತ ಮೇಲ್ಪಟ್ಟವರಂತೆ ನೀಡಿದಂತೆ ಉಚಿತವಾಗಿ ನೀಡಲಾಗಿಲ್ಲ, ಕೇಂದ್ರವು ಅಗತ್ಯವಿರುವ ಶೇಕಡಾ 50 ರಷ್ಟು ಪ್ರಮಾಣವನ್ನು ಮಾತ್ರ ಒದಗಿಸುತ್ತದೆ. ಅದರ ಹೊಸ ನೀತಿಯಡಿಯಲ್ಲಿ ಉಳಿದವುಗಳನ್ನು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಉತ್ಪಾದಕರಿಂದ ಖರೀದಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ