ಆ ದಿನಗಳು, ಬಿರುಗಾಳಿ, ಸೂರ್ಯಕಾಂತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಸ್ಯಾಂಡಲ್‌ವುಡ್ ನಟ ಚೇತನ್. ನಟನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ಹೊತ್ತು ಹಲವು ಹೋರಾಟಗಳಲ್ಲೂ ಮುಂಚೂಣಿಯಲ್ಲಿ ನಿಂತು ಗುರುತಿಸಿಕೊಂಡಿದ್ದಾರೆ. ಹಾಗೇ ಕೆಲವೊಮ್ಮೆ ಬೇಡದ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಹಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇಂತಹ ಚೇತನ್ ಅಹಿಂಸಾ ಸದ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು, ಅದರಿಂದ ಆಗುತ್ತಿರುವ ಸಾವುಗಳನ್ನು ನಿಲ್ಲಿಸಲು, ಅದನ್ನು ಎದುರಿಸಲು ಬೇಕಾದ ವೈದ್ಯಕೀಯ ವ್ಯವಸ್ಥೆಯನ್ನು ನೀಡುವಲ್ಲಿ ರಾಜ್ಯ ಸರ್ಕಾರ ವೈಫಲ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು, ಅಂದಹಾಗೆ ಇದಕ್ಕೆಲ್ಲ ಕಾರಣ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಬಲಿಯಾದ ಕೊರೋನಾ ಸೋಂಕಿತರು ಹಾಗೂ ಬಿಬಿಎಂಪಿ ಕೋವಿಡ್ ವಾರ್ ರೂಮಿನಲ್ಲಿ ನಡೆಯುತ್ತಿದೆ ಎನ್ನಲಾದ ಬೆಡ್ ಬ್ಲಾಕ್ ದಂಧೆಯ ಘಟನೆಗಳು. ಈ ಕುರಿತು ವಿಡಿಯೋ ಮೂಲಕ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿರುವ ನಟ ಚೇತನ್ ಅಹಿಂಸ, ಸಿಎಂ ಬಿ ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಬೆಡ್ ಬ್ಲಾಕಿಂಗ್ ದಂಧೆಯನ್ನು ಬೆಳಕಿಗೆ ತಂದ ಸಂಸದ ತೇಜಸ್ವಿ ಸೂರ್ಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
View this post on Instagram
ಇದನ್ನೂ ಓದಿ: Juhi Chawla: ಬೆರಗು ಮೂಡಿಸಿದ ಜೂಹಿ ಚಾವ್ಲಾ ಕೆಲಸ; ದನದ ಕೊಟ್ಟಿಗೆ ಕಾರ್ಯದಲ್ಲಿ ಬ್ಯುಸಿಯಾದ ಪ್ರೇಮಲೋಕದ ಬೆಡಗಿ
ಇನ್ನು, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಬೆಡ್ ಬ್ಲಾಕ್ ಹಗರಣದ ಬಗ್ಗೆಯೂ ಮಾತನಾಡಿರುವ ಅವರು, `ಕರ್ನಾಟಕದ ಒಬ್ಬ ಸಂಸದರು ಹಾಗೂ ಮೂವರು ಶಾಸಕರು ಹೀರೋಗಳಂತೆ ಬೆಡ್ ಬ್ಲಾಕ್ ಸ್ಕ್ಯಾಮ್ ಅನ್ನು ಬೆಳಕಿಗೆ ತಂದಿದ್ದಾರೆ. ಹೌದು, ಸ್ಕ್ಯಾಮ್ ನಡೀತಾಯಿದೆ. ನಿಮ್ಮ ಸರ್ಕಾರವೇ ಸ್ಕ್ಯಾಮ್ ಸರ್ಕಾರ. ಬಿಬಿಎಂಪಿ ರಾಜ್ಯ ಸರ್ಕಾರದ ಅಡಿಯಲ್ಲೇ ಬರುವುದು. ಈ ಸ್ಕ್ಯಾಮ್ಗೆ ನೀವೇ ಹೊಣೆಗಾರರು. ನೀವೇ ಜವಾಬ್ದಾರಿ ತಗೊಂಡು ರಾಜೀನಾಮೆ ಕೊಡಿ. ಅದೇ ರೀತಿ ಮೇಯರ್, ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ರಾಜೀನಾಮೆ ಕೊಡಿ. ಇಷ್ಟು ಸ್ಕ್ಯಾಮ್ ನಡೆದ ಬಳಿಕವೂ ಐಸಿಯು, ಆಕ್ಸಿಜನ್ ಸಮಸ್ಯೆಗಳು ಬೆಳಕಿಗೆ ಬರುತ್ತಲೇ ಇವೆ. ಅದನ್ನು ಸರಿಪಡಿಸಿ. ಈ ವಿಚಾರದಲ್ಲೂ ನೀವು ಕೋಮು ವಿಷಬೀಜ ಬಿತ್ತುತ್ತಿದ್ದೀರ. ಬಿಬಿಎಂಪಿ ಕೊವಿಡ್ ವಾರ್ ರೂಮಿನಲ್ಲಿ ಇರುವ 206 ಜನರನ್ನು ಬಿಟ್ಟು 17 ಮಂದಿ ಮುಸಲ್ಮಾನರನ್ನು ಮಾತ್ರ ಪ್ರಶ್ನೆ ಮಾಡಿದ್ದೀರ. ಇಷ್ಟು ದಿನ ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ಯಾವ ಪೇಷೆಂಟ್ ಯಾವ ಜಾತಿ ಯಾವ ಧರ್ಮ, ವೈದ್ಯರು ಯಾವ ಜಾತಿ ಯಾವ ಧರ್ಮ, ಸ್ವಯಂಸೇವಕರು ಯಾವ ಜಾತಿ ಯಾವ ಧರ್ಮ ಅಂತ ನಾವು ಕೇಳಿಲ್ಲ. ಆದರೆ ಸರ್ಕಾರವೇ ಕೊವಿಡ್ ವೈರಸ್‌ಗಿಂತ ಹಾನಿಕಾರಕವಾಗಿರುವ ಕಮ್ಯುನಲ್ ವೈರಸ್ ಅನ್ನು ತರುತ್ತಿದ್ದಾರೆ ಎಂದು ವಿಡಿಯೋ ಮೂಲಕ ನಟ ಚೇತನ್ ಅಹಿಂಸ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ