ದೊಡ್ಡ ಆಫರ್ ತಿರಸ್ಕರಿಸಿ, ಜನಸಾಮಾನ್ಯರಿಗಾಗೇ 20 ರೂಗೆ ಮಾಸ್ಕ್ ಹೊಲಿದು ಮಾರುತ್ತಿರುವ ಟೈಲರ್ ದಂಪತಿ

ಲಾಕ್‌ಡೌನ್‌ನಲ್ಲಿ ಮಾಸ್ಕ್ ಮಾರಾಟ ಮಾಡಿ ಸೇವೆ ಜೊತೆ ಜೀವನ ನಡೆಸುತ್ತಿರುವ ಈ  ದಂಪತಿ ನಿಜಕ್ಕೂ ಮಾದರಿ ಟೈಲರ್‌ಗಳಾಗಿದ್ದಾರೆ.

news18-kannada
Updated:April 9, 2020, 8:37 PM IST
ದೊಡ್ಡ ಆಫರ್ ತಿರಸ್ಕರಿಸಿ, ಜನಸಾಮಾನ್ಯರಿಗಾಗೇ 20 ರೂಗೆ ಮಾಸ್ಕ್ ಹೊಲಿದು ಮಾರುತ್ತಿರುವ ಟೈಲರ್ ದಂಪತಿ
ಮೈಸೂರಿನ ಟೈಲರ್ ವಾಸು
  • Share this:
ಮೈಸೂರು(ಏ. 09): ಕೊರೊನಾದಿಂದಾಗಿ ಅದೆಷ್ಟೋ ಮಂದಿಯ ಜೀವನ ಕಷ್ಟದ ಪರಿಸ್ಥಿತಿಗೆ ದೂಡಿದೆ. ಅಂದೇ ದುಡಿದು ಅಂದೇ ತಿನ್ನೋರ ಕಷ್ಟ ಹೇಳ ತೀರದಾಗಿದೆ. ಈ ಲಾಕ್‌ಡೌನ್ ನಡುವೆ ಬಟ್ಟೆ ಹೊಲೆಯುವ ಟೈಲರ್‌ಗಳ ಸ್ಥಿತಿ ಅಯೋಮಯವಾಗಿದೆ. ಇಂತಹ ಸಂದರ್ಭದಲ್ಲೂ ಮೈಸೂರಿನ ದಂಪತಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಬೇಕಾದ ಅಗತ್ಯಗಳ ವಸ್ತುಗಳಲ್ಲೊಂದಾದ ಮಾಸ್ಕ್​ಗಳನ್ನ ತಯಾರಿಸಿ ಜೀವನದ ಜೊತೆ ಸೇವೆಯನ್ನೂ ಮಾಡ್ತಿದ್ದಾರೆ. ನ್ಯೂಸ್‌18 ‌ಕನ್ನಡದ ಅಭಿಯಾನಕ್ಕೂ ಜೊತೆಯಾಗಿ ನಿಂತಿದ್ಧಾರೆ.

ಮೈಸೂರಿನಲ್ಲಿ ನ್ಯೂಸ್‌18 ಕನ್ನಡದ ‘Make your own Mask’ ಅಭಿಯಾನಕ್ಕೆ ಬೆಂಬಲವಾಗಿರುವ ಈ ದಂಪತಿ, ಮನೆಯಲ್ಲಿ ಕುಳಿತು ಮಾಸ್ಕ್ ತಯಾರಿಸಿ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಮಾರಾಟ ಮಾಡಿ ಮಾದರಿಯಾಗಿದ್ದಾರೆ. ವಾಸು ಮತ್ತು ತೇನ್ ಮೊಳಿ ಅವರೇ ಈ ಮಾದರಿ ದಂಪತಿ.

ಮೈಸೂರಿನ ಅಗ್ರಹಾರ ಬಡಾವಣೆಯಲ್ಲಿ ಹಳೆ ಜೆಎಸ್‌ಎಸ್ ಆಸ್ಪತ್ರೆ ಬಳಿ ಬಾಡಿಗೆ ಮನೆಯೊಂದರಲ್ಲಿ ಈ ದಂಪತಿ ವಾಸವಿದ್ದಾರೆ. ಟೈಲರ್ ವಾಸು ಮೈಸೂರಿನಲ್ಲಿ 10 ವರ್ಷಗಳಿಂದ ಟೈಲರಿಂಗ್ ಮಾಡುತ್ತಿದ್ದು,  ಹೊಟೇಲ್‌ಗಳಿಗೆ ಹಾಗೂ ಅಂಗಡಿಗಳಿಗೆ ಬೇಕಾದ ಬಟ್ಟೆಗಳನ್ನ ಹೊಲೆಯುತ್ತಿದ್ದರು. ಇವರಿಗೆ ಪತ್ನಿ ತೇನ್ ಮೋಳಿ ಸಹಾಯ‌‌ ನೀಡುತ್ತಿದ್ದರು. ದೇಶದಲ್ಲಿ ಲಾಕ್‌ಡೌನ್ ಜಾರಿಯಾದ ನಂತರ ಇವರಿಗೆ ಆರ್ಡರ್ ನೀಡೋರಿಲ್ಲದೆ ಜೀವನ‌ ನಡೆಸೋಕೆ ಆರ್ಥಿಕ ಸಂಕಷ್ಟ ಉಂಟಾಯಿತು. ಆಗ ತನ್ನ ಬಳಿ ಇದ್ದ ಹಳೆ ಬಟ್ಟೆಗಳನ್ನ ಮಾಸ್ಕ್ ಆಗಿ ತಯಾರಿಸಿದರು. ಅದನ್ನ 20 ರೂಪಾಯಿ ಬೆಲೆ ನಿಗದಿ ಮಾಡಿ ಮನೆ ಮುಂಭಾಗ ನೇತು ಹಾಕಿ ಮಾರಾಟಕ್ಕಿಟ್ಟರು‌.‌

ಇದನ್ನೂ ಓದಿ: ಮೈಸೂರಿನ ಕೊರೋನಾ ಅಡ್ಡೆ ಜುಬಿಲೆಂಟ್ಸ್ ಫಾರ್ಮಾಗೆ ಲೀಗಲ್ ನೋಟಿಸ್; ಕಾರ್ಖಾನೆ ಪುನರಾರಂಭಕ್ಕೆ ಇದೆಯಾ ಒತ್ತಡ?

ಲಾಕ್‌ಡೌನ್ ಆದ ದಿನದಿಂದಲೂ ಇವರ ಮಾಸ್ಕ್‌ಗಳಿಗೆ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಇವರ ಬಳಿ ನೋ ಹೋಲ್‌ಸೆಲ್, ನೋ ರೀಟೆಲ್ ವ್ಯಾಪಾರ. ಇಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು,  ಹಾಗೂ ಮನೆಯಿಂದ ಹೊರಹೋಗದೆ ಮನೆಯ ಮುಂಭಾಗದಲ್ಲೇ ಕುಳಿತು ಮಾರಾಟ ಮಾಡುವ ಈ ದಂಪತಿ ಇತರರಿಗೆ ಮಾದರಿ.

ಇಬ್ಬರು ಮಕ್ಕಳನ್ನ ಹೊಂದಿರುವ ವಾಸು ದಂಪತಿ, ತಮ್ಮ‌ ಮಗಳನ್ನ ತಿರುಪುರ್‌ನಲ್ಲಿ ಲ್ಯಾಬ್ ಟಕ್ನಿಷನ್‌ ಮಾಡಿದ್ದಾರೆ.‌ ಮತ್ತೊಬ್ಬ ಮಗನನ್ನ ಈರೋಡ್‌ನಲ್ಲಿ ಟೆಕ್ಸ್​​ಟೈಲ್ ಇಂಜಿನಿಯರ್ ಓದಿಸಿದ್ದಾರೆ.‌ ಸದ್ಯ ನಿವೃತ್ತಿ ಜೀವನ‌ ನಡೆಸುತ್ತಿರುವ ಇವರು ಒಂದು ಕಾಲದಲ್ಲಿ ಬಟ್ಟೆ ಅಂಗಡಿಯೊಂದರ ಮಾಲೀಕರಾಗಿದ್ದರು. ಆದ್ರೆ ಇಂದು ಗಂಡ ಮಾಸ್ಕ್ ಹೊಲಿದರೆ ಹೆಂಡತಿ ಮಾಸ್ಕ್ ಮಾರಾಟ ಮಾಡ್ತಿದ್ದಾರೆ. ಲಾಕ್‌ಡೌನ್ ಆರಂಭವಾದ ದಿನದಿಂದ 3 ಸಾವಿರ ಮಾಸ್ಕ್ ತಯಾರಿಸಿ ಮಾರಾಟ ಮಾಡಿರುವ ಈ ದಂಪತಿ ಕೇವಲ 20 ರೂಪಾಯಿಗೆ ಮಾಸ್ಕ್ ಮಾರಾಟ ಮಾಡ್ತಿದ್ದಾರೆ. ಇವರ ಕೆಲಸ ನೋಡಿದ ಸ್ಥಳಿಯರೊಬ್ಬರು 50 ಸಾವಿರ ಮಾಸ್ಕ್‌ಗೆ ಬೇಡಿಕೆ ನೀಡಿದ್ರು. ಆದ್ರೆ ಆಸೆಗೆ ಬೀಳದೆ ಧಾವಂತದಲ್ಲಿ ಹಣ ಮಾಡಲು ಒಪ್ಪಿಕೊಳ್ಳದ ದಂಪತಿ, ನಮಗೆ ಅಷ್ಟು ದೊಡ್ಡ ಆರ್ಡರ್ ಬೇಡ ಎಂದು ಆಫರ್ ತಿರಸ್ಕರಿಸಿದರು.

ಈ ಒಂದು ತಿಂಗಳಲ್ಲಿ ಅತ್ಯಂತ ಬೇಡಿಕೆ ವಸ್ತು ಅಂದ್ರೆ ಅದು ಮಾಸ್ಕ್. ಅಷ್ಟು ದೊಡ್ಡ ಆರ್ಡರ್ ಬಂದರೂ ಒಂದೇ ಒಂದು ರೂಪಾಯಿಯೂ ಬೇಡ ಎನ್ನುವ ಈ ದಂಪತಿ ನಾವು ಕೇವಲ ಸಾಮಾನ್ಯ ಜನರಿಗಾಗಿ ಮಾತ್ರ ಮಾಸ್ಕ್ ತಯಾರಿಸೋದು. ನಮ್ಮಲ್ಲಿ ವ್ಯಾಪಾರ ಮನೋಭಾವ ಇಲ್ಲ. ನಾವು ಮನೆಯಿಂದ ಹೊರಗೆ ಹೋಗೋಲ್ಲ. ನಮ್ಮ ವ್ಯಾಪಾರವೂ ಸಹ ಮನೆಯಲ್ಲೇ ನಡೆಯಲಿದೆ ಎಂದು ಹೇಳ್ತಾರೆ.ಲಾಕ್‌ಡೌನ್‌ನಲ್ಲಿ ಮಾಸ್ಕ್ ಮಾರಾಟ ಮಾಡಿ ಸೇವೆ ಜೊತೆ ಜೀವನ ನಡೆಸುತ್ತಿರುವ ಈ  ದಂಪತಿ ನಿಜಕ್ಕೂ ಮಾದರಿ ಟೈಲರ್‌ಗಳಾಗಿದ್ದಾರೆ.

First published: April 9, 2020, 8:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading