ರಾಮನಗರ(ಏ. 11): ಕೊರೋನಾ ಎಫೆಕ್ಟ್ನಿಂದಾಗಿ ವಿಶ್ವದ ಅನೇಕ ಭಾಗ ಲಾಕ್ ಡೌನ್ ಆಗಿದೆ. ರಾಜ್ಯದಲ್ಲಿ ಮದ್ಯ ಸಿಗುತ್ತಿಲ್ಲವೆಂದು ಹಲವರು ಸಾವನ್ನಪ್ಪಿದ್ದಾರೆ. ಇನ್ನು ಕೆಲ ಕುಡುಕರು ಮದ್ಯದಂಗಡಿಗಳಲ್ಲಿ ಕಳ್ಳತನ ಮಾಡಿ ಎಣ್ಣೆ ಬಾಟಲ್ಗಳನ್ನ ಕದ್ದಿದ್ದಾರೆ, ಕದಿಯುತ್ತಿದ್ದಾರೆ. ಆದರೆ ಇವತ್ತು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರದ ಶ್ರೀ ಲಕ್ಷ್ಮಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕಳ್ಳದಾರಿಯಲ್ಲಿ ಹಣ ಮಾಡಲು ಬಾರ್ ಮಾಲೀಕ ಐನಾತಿ ಬುದ್ಧಿ ಉಪಯೋಗಿಸಿ ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಚನ್ನಪಟ್ಟಣದ ಅರಳಾಳುಸಂದ್ರದ ಗಂಗಾಧರ್ ಎಂಬಾತ ಈ ಬಾರ್ನ ಉಸ್ತುವಾರಿ ವಹಿಸಿಕೊಂಡಿದ್ದ. ಕಳೆದ ರಾತ್ರಿ ಬಾರ್ ಕಳ್ಳತನವಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಬಾರ್ನವರೆ ಈ ಖತರ್ನಾಕ್ ಐಡಿಯಾ ಮಾಡಿ ತಾವೇ ಬಾರ್ನ ಕಿಟಕಿ ಹೊಡೆದು ಬೇರೆ ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪ್ರಚಾರ ಮಾಡಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ತಮಿಳುನಾಡು ಗಡಿ ಸಂಪೂರ್ಣ ಬಂದ್: ಎಸ್ಪಿ ಅನೂಪ್ ಕಟ್ಟುನಿಟ್ಟಿನ ಕ್ರಮ
ಆದರೆ ಮೊದಲೇ ಆ ಕಿಟಕಿಯಲ್ಲಿ ಕ್ಲೋಸ್ ಅಂಡ್ ಓಪನ್ ಸಿಸ್ಟಮ್ ಇತ್ತು ಎನ್ನಲಾಗಿದೆ. ಇದರಿಂದಾಗಿ ಬಾರ್ನವರೆ ಒಳಗಿದ್ದ ಎಣ್ಣೆ ಸ್ಟಾಕ್ ಅನ್ನು ಕದ್ದು ಹೊರಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡೋ ಭರ್ಜರಿ ಪ್ಲ್ಯಾನ್ ಮಾಡಿದ್ದರು. ಅಕ್ಕೂರು ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ನಡೆಸಿದಾಗ ಬಾರ್ನವರ ಈ ಖತರ್ನಾಕ್ ಪ್ಲ್ಯಾನ್ ಬಯಲಾಗಿದೆ.
ಕಿಟಕಿಯನ್ನ ಹೊರಗಿನಿಂದ ಒಡೆದಿದ್ದರೆ ಬಾರ್ನ ಒಳ ಭಾಗಕ್ಕೆ ಇಟ್ಟಿಗೆ ಚೂರುಗಳು ಬೀಳಬೇಕಿತ್ತು. ಆದರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಇದ್ಯಾವುದೂ ಕಂಡು ಬಂದಿಲ್ಲ. ಈ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದಾಗ ಬಾರ್ನವರು ತಬ್ಬಿಬ್ಬಾಗಿದ್ದಾರೆ. ಜೊತೆಗೆ ಅಬಕಾರಿ ಇಲಾಖೆಯ ಪ್ರಕಾರ ಲಾಕ್ ಡೌನ್ ಆದ ಸಂದರ್ಭದಲ್ಲಿ ಎಷ್ಟು ಸ್ಟಾಕ್ ಇರುತ್ತೋ, ಲಾಕ್ ಡೌನ್ ಮುಗಿದ ನಂತರದಲ್ಲಿ ಪರಿಶೀಲನೆ ನಡೆಸಿದಾಗ ಬಾರ್ನಲ್ಲಿ ಅಷ್ಟೇ ಸ್ಟಾಕ್ ಮದ್ಯ ಇರಬೇಕು, ಇಲ್ಲದಿದ್ರೆ ಆ ಬಾರ್ ಲೈಸೆನ್ಸ್ ರದ್ದಾಗುತ್ತದೆ. ಇದರಿಂದಾಗಿ ಕಳ್ಳತನದ ನೆಪವೊಡ್ಡಿ ಬಾರ್ನಲ್ಲಿದ್ದ ಎಣ್ಣೆ ಬಾಟಲ್ಗಳನ್ನ ತಾವೇ ಕದ್ದು ಹೊರಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ಹಣ ಮಾಡೋ ಪ್ಲ್ಯಾನ್ ನಡೆಸಿದ್ದರು. ಕಳ್ಳತನದ ನೆಪ ಹೇಳಿದರೆ ಸ್ಟಾಕ್ನ ಲೆಕ್ಕ ಕೊಡುವ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರಲ್ಲ ಅಂದುಕೊಂಡಿದ್ದರು. ಆದರೆ ಪೊಲೀಸರ ತನಿಖೆಯಿಂದಾಗಿ ಈ ಕಳ್ಳರ ಕರಾಮತ್ತು ಬಟಾಬಯಲಾಗಿದೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ