ಬಳ್ಳಾರಿ (ಮಾರ್ಚ್ 25); ಮೂರು ವರ್ಷದ ಮಗುವಿನ ಕಣ್ಣಿನ ಆಪರೇಷನ್ ಗೆ ಹೈದ್ರಾಬಾದ್ ಆಸ್ಪತ್ರೆಗೆ ತೆರಳಿದ್ದ ಬಡ ಕುಟುಂಬವೊಂದು ದಿಢೀರ್ ಭಾರತ ಲಾಕ್ಡೌನ್ನಿಂದಾಗಿ ವಾಪಸ್ ರಾಜ್ಯಕ್ಕೂ ಬರಲಾಗದೆ, ಹೈದ್ರಾಬಾದ್ನಲ್ಲೂ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ಬೀದಿ ಬದಿಯಲ್ಲಿ ಊಟ ನಿದ್ರೆ ಬಿಟ್ಟು ಅರಣ್ಯ ರೋಧನ ಅನುಭವಿಸುತ್ತಿದೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ತಾಲೂಕಿನ ಚಾಣಕನೂರಿನ ನಿಂಗಣ್ಣ-ಮಹಾಲಿಂಗಮ್ಮ ದಂಪತಿ ಇದೀಗ ತಮ್ಮ ಮಕ್ಕಳಾದ ಶ್ರೀರಕ್ಷ ಮತ್ತು ಉಮೇಶ್ ಜೊತೆಗೆ ಭಾರತ ಲಾಕ್ಡೌನ್ ಪರಿಣಾಮ ಹೈದ್ರಾಬಾದ್ನಲ್ಲಿ ಸಿಲುಕಿಕೊಂಡಿರುವ ಕುಟುಂಬ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ನಿಂಗಣ್ಣ-ಮಹಾಲಿಂಗಮ್ಮ ದಂಪತಿಗಳ ಮೂರು ವರ್ಷದ ಮಗು ಶ್ರೀರಕ್ಷಾಗೆ ಎರಡೂ ಕಣ್ಣಿನಲ್ಲೂ ಸಮಸ್ಯೆ ಇತ್ತು. ಹೀಗಾಗಿ ಈ ದಂಪತಿಗಳು ಮಗುವಿಗೆ ಉಚಿತವಾಗಿ ಆಪರೇಷನ್ ಮಾಡಿಸಲು ಹೈದ್ರಾಬಾದ್ ನ ಎಲ್.ವಿ ಪ್ರಸಾದ್ ಐ ಇನ್ಸಿಟ್ಯೂಟ್ ಗೆ ಮಾರ್ಚ್ 18 ರಂದು ತಮ್ಮ ಮಗುವನ್ನು
ದಾಖಲಿಸಿದ್ದರು. ಮಾರ್ಚ್ 21 ರಂದು ಮಗುವಿನ ಆಪರೇಷನ್ ಯಶಸ್ವಿಯಾಗಿ ನಡೆದಿದೆ. ಅಲ್ಲದೆ, ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಸಹ ಮಾಡಲಾಗಿದೆ.
ಆದರೆ, ಡಿಸ್ಚಾರ್ಚ್ ಆಗಿ ಎರಡು ದಿನವಾದರೂ ಸಹ ಭಾರತ ಲಾಕ್ಡೌನ್ ಆಗಿರುವ ಪರಿಣಾಮ ಈ ಕುಟುಂಬ ಸ್ವಗ್ರಾಮಕ್ಕೆ ವಾಪಾಸಾಗಲು ಸಾಧ್ಯವಾಗುತ್ತಿಲ್ಲ. ರಾಜ್ಯಕ್ಕೆ ಮರಳಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೆ, ರಸ್ತೆಯಲ್ಲೇ ಕಾಲಕಳೆಯುತ್ತಿದ್ದಾರೆ. ಅಲ್ಲದೆ ಎಲ್ಲೂ ಊಟ ಸಹ ಸಿಗದ ಕಾರಣ ಕೇವಲ ಬಿಸ್ಕೆಟ್ ತಿಂದು ಬದುಕುತ್ತಿದ್ದಾರೆ.
ಆಪರೇಷನ್ ಮುಗಿದ ಎರಡು ದಿನದಲ್ಲಿ ಮಗುವಿನ ಕಣ್ಣಿಗೆ ಡ್ರೆಸಿಂಗ್ ಮಾಡಿಸಬೇಕು ಇಲ್ಲದಿದ್ದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಆದರೆ, ಅದಕ್ಕೂ ಅವಕಾಶ ಇಲ್ಲದಂತಾಗಿದೆ. ಇದೀಗ ಈ ಕುಟುಂಬದ ಗೋಳಿನ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ವೈರಲ್ ಆಗಿದೆ. ಅಲ್ಲದೆ, ಆರೋಗ್ಯ ಸಚಿವ ಬಿ. ಶ್ರೀರಾಮುಲು ತಮ್ಮ ಕ್ಷೇತ್ರದ ಈ ಕುಟುಂಬವನ್ನು ಹೈದ್ರಾಬಾದ್ನಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿ ಕರೆತರಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಅಲ್ಲದೆ, ಈ ಬಡ ಕುಟುಂಬವೂ ಸಹ ಇದೀಗ ರಾಜ್ಯ ಸರ್ಕಾರದ ನಿರೀಕ್ಷೆಯಲ್ಲಿದೆ. ಹೀಗಾಗಿ ಶೀಘ್ರದಲ್ಲಿ ಈ ಕುಟುಂಬವನ್ನು ರಾಜ್ಯಕ್ಕೆ ಮರಳಿ ಕರೆತರುವಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂಬುದೇ ಎಲ್ಲರ ಆಶಯ.
ಇದನ್ನೂ ಓದಿ : ಕೊರೋನಾದಿಂದ ರಾಜ್ಯದಲ್ಲಿ ಎರಡನೇ ಸಾವು?; ಶಂಕಿತೆಯ ವರದಿ ಬಂದ ನಂತರ ದೃಢ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ