ನವ ದೆಹಲಿ (ಆಗಸ್ಟ್ 19); ದೇಶದಲ್ಲಿ ಕೊರೋನಾ ಎರಡನೇ ಅಲೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಈ ಮಾರಣಾಂತಿಕ ಸೋಂಕಿಗೆ ಇಡೀ ದೇಶದ ಆರ್ಥಿಕತೆ ಹಳ್ಳ ಹಿಡಿದಿದ್ದರೆ, ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಗಂಗಾ ನದಿಯಲ್ಲಿ ಸಾಲು ಸಾಲು ಶವಗಳು ತೇಲಿದ್ದನ್ನು ಭಾಗಶಃ ಯಾರೂ ಮರೆತಿರಲಿಕ್ಕೆ ಸಾಧ್ಯವಿಲ್ಲ. ಈ ಸೋಂಕನ್ನು ನಿವಾರಿಸಲು ಇರುವ ಏಕೈಕ ಮಾರ್ಗ ಎಲ್ಲರಿಗೂ ಲಸಿಕೆ ನೀಡುವುದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಅನೇಕರ ಒತ್ತಾಯ ಮತ್ತು ಹೋರಾಟದ ಪರಿಣಾಮ ಕಳೆದ ಮೇ.01 ರಿಂದ ಲಸಿಕೆ ಅಭಿಯಾನವನ್ನು ಆರಂಭಿಸಿದ್ದ ಕೇಂದ್ರ ಸರ್ಕಾರ ಎಲ್ಲರಿಗೂ ಉಚತ ಲಸಿಕೆ ಘೋಷಿಸಿತ್ತು. ಆದರೆ, ದೇಶದಲ್ಲಿ 2 ಡೋಸ್ ಲಸಿಕೆ ಪಡೆದ 87,000 ಕ್ಕೂ ಹೆಚ್ಚು ಜನರಲ್ಲಿ ಮತ್ತೆ ಕೋವಿಡ್ ಸೋಂಕು ಕಾಣಿಸಿಕೊಂಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಬಳಿಕವೂ ದೇಶಾದ್ಯಂತ ಸುಮಾರು 87,000 ಕ್ಕೂ ಹೆಚ್ಚು ಜನರಿಗೆ ಮತ್ತೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅದರಲ್ಲಿ ಶೇ.46 ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದಲ್ಲದೆ, ಕೇರಳದಲ್ಲಿ ಲಸಿಕೆಯ ಮೊದಲ ಡೋಸ್ ಪಡೆದ 80,000 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಎರಡನೇ ಡೋಸ್ ಪಡೆದಿರುವ 40,000 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಕೇರಳದಲ್ಲಿ ಪ್ರತಿನಿತ್ಯದ ಪ್ರಕರಣಗಳು ಏರಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಲಸಿಕೆ ಪಡೆದು ಸೋಂಕಿಗೆ ಒಳಗಾಗಿರುವವರ ಸುಮಾರು 200 ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಮಾಡಲಾಗಿದೆ ಆದರೆ ಇಲ್ಲಿಯವರೆಗೆ ಯಾವುದೇ ರೂಪಾಂತರ ಪ್ರಕರಣಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಸೋಂಕಿನ ರೂಪಾಂತರವು ಯಾವಾಗಲೂ ಹೊಸ ಅಲೆ ಉಂಟಾಗಲು ಕಾರಣವಾಗುತ್ತದೆ. ಈ ವರ್ಷದ ಆರಂಭದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ವೈರಸ್‌ನ ಡೆಲ್ಟಾ ರೂಪಾಂತರವು ಆತಂಕಕ್ಕೆ ಕಾರಣವಾಗಿತ್ತು. ಸದ್ಯ ದೇಶದಲ್ಲಿ ಎರಡನೇ ಅಲೆ ಇಳಿಮುಖವಾಗುತ್ತಿರುವುದರಿಂದ, ಸೋಂಕಿನ ಹೊಸ ರೂಪಾಂತರಗಳು ಕಂಡು ಬರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಿದ್ದಾರೆ. ಈ ನಡುವೆ ಕೊರೋನಾ ಮೂರನೇ ವಿಶ್ವದಾದ್ಯಂತ ಕಂಡು ಬರುತ್ತಿದೆ.
ಇದನ್ನೂ ಓದಿ: ಅಫ್ಘಾನ್ನಲ್ಲಿರುವ ಹಿಂದೂ-ಸಿಖ್ಖರಿಗೆ ತಾಲಿಬಾನ್ಗಳಿಂದ ಆತಂಕ ಇಲ್ಲ; ಗುರುದ್ವಾರದ ಮುಖ್ಯಸ್ಥರಿಂದ ಭರವಸೆ
ಭಾರತದಲ್ಲೂ ಮೂರನೇ ಅಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿರುವುದು ಈಗಾಗಲೇ ಆತಂಕ ಸೃಷ್ಟಿಸಿದೆ. ಈ ನಡುವೆ ಲಸಿಕೆ ಪಡೆದವರಲ್ಲೂ ಸೋಂಕು ಪತ್ತೆಯಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೇರಳವು ಅತಿ ಹೆಚ್ಚು ದೈನಂದಿನ ಕೋವಿಡ್ ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿದ್ದು, ಗುರುವಾರ 21,427 ಪ್ರಕರಣಗಳು ಮತ್ತು 179 ಸಾವುಗಳನ್ನು ವರದಿ ಮಾಡಿದೆ. ಶೇಕಡಾ 100 ರಷ್ಟು ವ್ಯಾಕ್ಸಿನೇಷನ್ ನಡೆಸಿರುವ ವಯನಾಡಿನಿಂದಲೂ ಹೊಸ ಪ್ರಕರಣಗಳು ವರದಿಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ