Corona Vaccine: ರಾಜ್ಯದಲ್ಲಿ ಶೇ.83 ಜನರಿಗೆ ಮೊದಲ ಡೋಸ್, ಶೇ.38 ಜನರಿಗೆ 2ನೇ ಡೋಸ್ ಹಂಚಿಕೆ; ಸಚಿವ ಸುಧಾಕರ್

ಲಸಿಕೆ ಬಂದಾಗ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಹೇಳಿದರು. ಪ್ರಾರಂಭದಲ್ಲಿ ಜನರು ಇವರ ಮಾತು ನಂಬಿ ಲಸಿಕೆ ಪಡೆಯದೆ ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ. ಕಾಂಗ್ರೆಸ್ ಗೆ ಈಗ ನೈತಿಕತೆ ಇದೆಯೇ ಎಂದು ಪ್ರಶ್ನೆ ಮಾಡಬೇಕು. ಮೋದಿ ಲಸಿಕೆ ಎಂದವರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದರು.

ಆರೋಗ್ಯ ಸಚಿವ ಕೆ ಸುಧಾಕರ್.

ಆರೋಗ್ಯ ಸಚಿವ ಕೆ ಸುಧಾಕರ್.

 • Share this:
  ಹುಬ್ಬಳ್ಳಿ (ಅಕ್ಟೋಬರ್ 22, ಶುಕ್ರವಾರ): ಇಡೀ ಜಗತ್ತಿನಲ್ಲಿ ಉಚಿತ ಹಾಗೂ ಬೇರೆ ದೇಶಗಳಿಗಿಂತ ಹೆಚ್ಚು ಪಟ್ಟು ಲಸಿಕೆಯನ್ನು (Corona Vaccine) ಭಾರತದಲ್ಲಿ ನೀಡಿರುವುದು ಮೈಲಿಗಲ್ಲಾಗಿದೆ. ಇನ್ನೂ ಉಳಿದವರಿಗೆ ವೇಗವಾಗಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು (Health And Medical Education Minister K Sudhakar). ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್ ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಎರಡೂ ಡೋಸ್ ಪಡೆದವರ ಸಂಖ್ಯೆ 27.4 ಕೋಟಿ. ಅನೇಕ ದೇಶಗಳಲ್ಲಿ ಹಣ ಕೊಟ್ಟು ಖರೀದಿ ಮಾಡುವ ವ್ಯವಸ್ಥೆ ಇದ್ದು, ಭಾರತದಲ್ಲಿ ಉಚಿತ ಲಸಿಕೆ ನೀಡಲಾಗಿದೆ. ಇದಕ್ಕಾಗಿ 35 ಸಾವಿರ ಕೋಟಿ ರೂ. ನೀಡಲಾಗಿದೆ. ಲಸಿಕೆ ಖರೀದಿಗೆ ರಾಜ್ಯ ಸರ್ಕಾರದಿಂದ ಒಂದು ರೂಪಾಯಿಯೂ ನೀಡಿಲ್ಲ. ಕರ್ನಾಟಕದಲ್ಲಿ ಅತಿ ಕಡಿಮೆ ಲಸಿಕೆಯನ್ನು ಮಾರ್ಚ್ ನಲ್ಲಿ ನೀಡಲಾಗಿತ್ತು. ಸೆಪ್ಟೆಂಬರ್ ನಲ್ಲಿ 1.48 ಕೋಟಿ ನೀಡಲಾಗಿತ್ತು. ಒಂದೇ ದಿನ 31.75 ಲಕ್ಷ ಲಸಿಕೆಯನ್ನು ಸೆಪ್ಟೆಂಬರ್ 17 ರಂದು ನೀಡಲಾಗಿತ್ತು ಎಂದರು.

  ರಾಜ್ಯದಲ್ಲಿ ಇನ್ನೂ ಶೇ.17 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.62 ಜನರಿಗೆ 2ನೇ ಡೋಸ್ ನೀಡಬೇಕಿದೆ. ರಾಜ್ಯದಲ್ಲಿ ಈಗ 60 ಲಕ್ಷ ಲಸಿಕೆ ದಾಸ್ತಾನು ಇದೆ. ಒಂದನೇ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಉದಾಸೀನ ತೋರಬಾರದು. ಒಂದೇ ಡೋಸ್ ನಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ದೊರೆಯುವುದಿಲ್ಲ. ಎರಡನೇ ಡೋಸ್ ಅನ್ನು 52 ಲಕ್ಷ ಜನರು ಪಡೆಯಬೇಕಿದ್ದು, ಅವರು ಆದಷ್ಟು ಬೇಗ ಬಂದು ಲಸಿಕೆ ಪಡೆಯಬೇಕು ಎಂದರು.

  100 ಕೋಟಿ ಕೋವಿಡ್ ಲಸಿಕೆಯ ದೊಡ್ಡ ಮೈಲಿಗಲ್ಲನ್ನು ದೇಶ ತಲುಪಿದೆ. ಲಸಿಕೆ ಆವಿಷ್ಕರಿಸಿದ ವಿಜ್ಞಾನಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ ಎಲ್ಲರೂ ಇದಕ್ಕಾಗಿ ಶ್ರಮಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಞರು, ಕಾರ್ಯಕರ್ತರು ಕೂಡ ಹಗಲಿರುಳು ಕೊರೊನಾ ನಿಯಂತ್ರಿಸಲು ಶ್ರಮಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಬಿಸಿಜಿ ಲಸಿಕೆ ಆವಿಷ್ಕಾರವಾದ 24 ವರ್ಷಗಳ ಬಳಿಕ ಭಾರತಕ್ಕೆ ಬಂತು. ಹೆಪಟೈಟಿಸ್-ಬಿ 15 ವರ್ಷದ ಬಳಿಕ ಬಂದಿತ್ತು. 12 ರೋಗಗಳ ಲಸಿಕೆಗಳು ಬೇರೆ ದೇಶಗಳಿಂದ ಭಾರತಕ್ಕೆ ಬರಲು ಅನೇಕ ವರ್ಷ ಬೇಕಾಯಿತು. ಆದರೆ ಕೊರೊನಾ ಲಸಿಕೆಯನ್ನು 2021 ರ ಜನವರಿ 16 ರಂದು ಮೊದಲು ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ, ದೂರದೃಷ್ಟಿ, ನಾಯಕತ್ವದಿಂದ ಇದನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.

  ಪ್ರಗತಿಗೆ ವಿರೋಧಿ

  ಸಿದ್ದರಾಮಯ್ಯನವರು ಯಾವುದೇ ಪ್ರಗತಿ ಕಾರ್ಯವನ್ನು ವಿರೋಧಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಅಲ್ಲದಿದ್ದರೂ, ಒಬ್ಬ ಭಾರತೀಯರಾಗಿ ಕೋವಿಡ್ ಲಸಿಕೆಯ ಸಾಧನೆಯನ್ನು ಅವರು ಶ್ಲಾಘಿಸಬಹುದಿತ್ತು. ಸರ್ಕಾರ ನೀಡುವ ಅಂಕಿ, ಸಂಖ್ಯೆಯನ್ನು ಬುಡಮೇಲು ಮಾಡಿ ಅವರದ್ದೇ ಆದ ಅಂಕಿ, ಸಂಖ್ಯೆ ನೀಡಿದ್ದಾರೆ. ಅವರು ಕೂಡ ಮುಖ್ಯಮಂತ್ರಿಯಾಗಿದ್ದು, ಆಗಲೂ ಇದೇ ಇಲಾಖೆ ಅಂಕಿ ಅಂಶ ನೀಡುತ್ತಿತ್ತು. ಇಂತಹ ನಾಯಕರಿಂದ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ ಎಂದರು.

  ಲಸಿಕೆಯ ವಿಚಾರದಲ್ಲೂ ಅನೇಕರು ರಾಜಕಾರಣ ಮಾಡಿದರು. ಒಂದಾಗಿ ಹೋರಾಡಬೇಕಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕಾರಣದಲ್ಲಿ ತೊಡಗಿಕೊಂಡಿತು. ಸಹಕಾರದ ಹೆಸರಲ್ಲಿ ಅಸಹಕಾರ ಮಾಡಿದರು. ಇದನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಲಸಿಕೆ ಬಂದಾಗ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಹೇಳಿದರು. ಪ್ರಾರಂಭದಲ್ಲಿ ಜನರು ಇವರ ಮಾತು ನಂಬಿ ಲಸಿಕೆ ಪಡೆಯದೆ ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ. ಕಾಂಗ್ರೆಸ್ ಗೆ ಈಗ ನೈತಿಕತೆ ಇದೆಯೇ ಎಂದು ಪ್ರಶ್ನೆ ಮಾಡಬೇಕು. ಮೋದಿ ಲಸಿಕೆ ಎಂದವರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದರು.

  ಸಾವಿನಲ್ಲೂ ರಾಜಕೀಯ

  ಕೋವಿಡ್ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಪ್ರತೀ ದಶ ಲಕ್ಷ ಜನ ಸಂಖ್ಯೆಗೆ ರಷ್ಯಾದಲ್ಲಿ 1,500, ಇಂಗ್ಲೆಂಡ್ ನಲ್ಲಿ 2,020 ಜನ ಕೋವಿಡ್ ನಿಂದ ಮೃತರಾಗಿದ್ದರೆ ಭಾರತದಲ್ಲಿ 323 ಜನರು ಕೋವಿಡ್ ನಿಂದ ಮೃತರಾಗಿದ್ದಾರೆ ಎಂದರು.

  ಪ್ರಶ್ನೆ ಕೇಳಿದ್ದೇನೆ

  ನಾನು ಅಧಿಕಾರದ ಮದದಿಂದ ಏನನ್ನೂ ಮಾತನಾಡಿಲ್ಲ. ಜವಾಬ್ದಾರಿಯಿಂದ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿಶೇಷ ಗೌರವವಿದೆ. ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆರೇಳು ವರ್ಷಗಳಿಂದ ಅವರು ಸಿಎಂ ಆಗಿದ್ದಾಗಿನಿಂದಲೂ ಈ ಸಮಸ್ಯೆ ಇದೆ. ಕೆ.ಎಚ್.ಮುನಿಯಪ್ಪನವರು ಆಗಲೇ ಈ ಕುರಿತು ದೂರು ನೀಡಿದ್ದರು. ತನಿಖೆಗೆ ಆದೇಶ ನೀಡಿ ಎಂದು ಅವರು ಕೋರಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತನಿಖೆ ಮಾಡಿಸಲು ಒಪ್ಪಲೇ ಇಲ್ಲ. ಇಂದು ಕೂಡ ಅವರ ಪಕ್ಷದ ನಾಯಕರು, ಹಿಂಬಾಲಕರು ಮಾಡುವ ತಪ್ಪನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆಯೇ? ಭ್ರಷ್ಟಾಚಾರದ ಪರವಾಗಿ ಅವರು ಇದ್ದಾರಾ? ಎಂದು ಪ್ರಶ್ನೆ ಮಾಡಿದರು.

  ಸಹಕಾರ ಕ್ಷೇತ್ರದ ಜನರಿಗೆ, ರೈತರಿಗೆ ಸರಿಯಾದ ಆಡಳಿತ ನೀಡಬೇಕೆಂಬ ಬದ್ಧತೆ ಇದ್ದರೆ, ಅವರೇ ತನಿಖೆಗೆ ಆದೇಶ ಮಾಡಿ ಎಂದು ಒತ್ತಾಯ ಮಾಡಬೇಕಿತ್ತು. ಆದರೆ ವಿರೋಧ ಪಕ್ಷದ ನಾಯಕರ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಇದನ್ನು ಅಧಿಕಾರದ ಮದ ಎನ್ನುವುದಾದರೆ ಜನರ ತೀರ್ಮಾನಕ್ಕೆ ಬಿಡುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

  ಇದನ್ನು ಓದಿ: Kodagu District: ಕೊರಗಜ್ಜ ದೇವಾಲಯದಿಂದ ಎರಡು ಪ್ಯಾಕೇಟ್ ಮದ್ಯ ಎಗರಿಸಿದ ಭೂಪ!

  ಹಾನಗಲ್ ನಲ್ಲಿ ಬಿಜೆಪಿಗೆ ಜನಸ್ಪಂದನೆ

  ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರಿಗೆ ಉತ್ತಮ ಜನಸ್ಪಂದನೆ ದೊರೆಯುತ್ತಿದೆ. 100 ಕೋಟಿ ಲಸಿಕೆ ನೀಡಿ ಕೋವಿಡ್ ಸಾಂಕ್ರಾಮಿಕ ತಡೆಗಟ್ಟಲು ಶ್ರಮಿಸಿದ ಬಿಜೆಪಿ ಸರ್ಕಾರ ಪಟ್ಟ ಶ್ರಮವನ್ನು ಜನರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ವೈಖರಿಯನ್ನು ಜನತೆ ಮೆಚ್ಚಿ ಬಿಜೆಪಿಯನ್ನು ಬೆಂಬಲಿಸುವುದು ಖಚಿತವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿರುವುದು ಕಾಂಗ್ರೆಸ್ ನ ನೀಚ ನಡೆಯನ್ನು ಕೂಡ ಜನರು ಇಲ್ಲಿ ಗಮನಿಸಿದ್ದಾರೆ. ಆದ್ದರಿಂದ ಸಿ.ಎಂ.ಉದಾಸಿಯವರ ಕಾರ್ಯವನ್ನು ಮುಂದುವರಿಸಲು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
  Published by:HR Ramesh
  First published: