ಅಪಾಯದಲ್ಲಿವೆ ಬದುಕಿನ ಇಳಿಸಂಜೆಯಲ್ಲಿರುವ 61 ಲಕ್ಷ ಜೀವಗಳು; ಬೆಂಗಳೂರಿನಲ್ಲೇ 7.5 ಲಕ್ಷ ವೃದ್ಧಜೀವಗಳು!

ಕೊರೋನಾವನ್ನು ಎದುರಿಸಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಾವು ಬದುಕುವ ಜೊತೆಗೆ ನಮ್ಮ ಬದುಕಿನ ಸಾಕ್ಷಿಪ್ರಜ್ಞೆಯಂತಿರುವ ವೃದ್ಧಜೀವಗಳ ಬದುಕನ್ನು ಉಳಿಸುವ ಹೊಣೆಗಾರಿಕೆ ಕೂಡ ನಮ್ಮ ಮೇಲಿದೆ. ವೃದ್ದ ಜೀವಗಳ ರಕ್ಷಣೆ-ಕಾಳಜಿ ಮಾಡೋಣ. ಬದುಕುವ ಅವಕಾಶವನ್ನು ಕಲ್ಪಿಸೋಣ.

news18-kannada
Updated:July 1, 2020, 2:39 PM IST
ಅಪಾಯದಲ್ಲಿವೆ ಬದುಕಿನ ಇಳಿಸಂಜೆಯಲ್ಲಿರುವ 61 ಲಕ್ಷ ಜೀವಗಳು; ಬೆಂಗಳೂರಿನಲ್ಲೇ 7.5 ಲಕ್ಷ ವೃದ್ಧಜೀವಗಳು!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ನಮ್ಮಗಳ ಸುಖ- ಸಂತೋಷಕ್ಕಾಗಿ ತಮ್ಮ ಬದುಕನ್ನೇ ಸವೆಸಿದ ವೃದ್ಧ ಜೀವಗಳು ಆತಂಕದಲ್ಲಿವೆ. ಬರೋಬ್ಬರಿ‌ 61 ಲಕ್ಷ ವಯೋವೃದ್ದರು ರಾಜ್ಯದಲ್ಲಿದ್ದು, ಬದುಕಿನ ಇಳಿಸಂಜೆಯಲ್ಲಿ ಇರುವ ಇವರಿಗೆ ಕೊರೋನಾ ಸೋಂಕಿನ ಭಯ ಹೆಚ್ಚೆಚ್ಚು‌ ಆವರಿಸುತ್ತಿದೆ. ಇದು ನಾವು ಹೇಳ್ತಿರೋದಲ್ಲ. ಸಮೀಕ್ಷೆಗಳು ‌ಇಂಥದ್ದೊಂದು ಆತಂಕದ ಮಾಹಿತಿ ಬಹಿರಂಗಗೊಳಿಸಿದೆ.

ಹೌದು, ಕೊರೋನಾದ ಭಯ ಹೆಚ್ಚೆಚ್ಚು ಕಾಡುತ್ತಿರುವುದು ವೃದ್ಧರನ್ನು. ಇದಕ್ಕೆ ಕಾರಣವೂ ಕೂಡ ಇದೆ. ಕೊರೋನಾ ಸೋಂಕು ಹೆಚ್ಚು ತಗುಲುವುದರಿಂದ ಹಿಡಿದು ಸಾವನ್ನಪ್ಪುವವರ ವಯೋಮಾನ ನೋಡಿದ ಸಂದರ್ಭದಲ್ಲಿ ಅತಿ ಹೆಚ್ಚಿನ ಪ್ರಮಾಣ ಹಿರಿಜೀವಗಳದ್ದೇ ಆಗಿದೆ. ಶೇಕಡಾ 80 ರಷ್ಟು ವೃದ್ದರೇ ಈವರೆಗೂ ಕೊರೋನಾಗೆ ಬಲಿಯಾಗಿರುವುದು ಸಹಜವಾಗೇ ಹಿರಿಜೀವಗಳನ್ನು ಕನಲಿಸಿದೆ.

ಕೊರೋನಾ ಸೋಂಕು ಹೆಚ್ಚಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡ ಮನೆ ಮನೆ ಸಮೀಕ್ಷೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಈ ಸಮೀಕ್ಷೆ ಹೇಳುವ ಪ್ರಕಾರ, ರಾಜ್ಯದಲ್ಲಿ 60 ವರ್ಷ ಮೀರಿದ ವೃದ್ಧರ ಸಂಖ್ಯೆ 61 ಲಕ್ಷದಷ್ಟಿದೆ. ಇನ್ನು ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ವೃದ್ಧರ ಪ್ರಮಾಣ ಕೂಡ ಶೇಕಡಾ 80ರಷ್ಟಿದೆ. ಇಂಥ ಪರಿಸ್ಥಿತಿಯಲ್ಲಿ ವೃದ್ಧರ ಜೀವಗಳನ್ನು ಕಾಳಜಿ ಮಾಡಬೇಕಾದ ದೊಡ್ಡಮಟ್ಟದ ಸವಾಲು ಹಾಗೂ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎನ್ನುವುದನ್ನು ಸಮೀಕ್ಷೆಯ ಅಂಶಗಳೇ ಸಾರಿ‌ ಹೇಳುತ್ತವೆ.

ಮನೆಮನೆ ಸಮೀಕ್ಷೆಯ ಅಂಕಿ ಅಂಶಗಳು, ರಾಜ್ಯದಲ್ಲಿ  61,50,513 ಮಂದಿ 60 ವರ್ಷ ಮೇಲ್ಪಟ್ಟವರು ವಾಸವಾಗಿದ್ದಾರೆ. ಅವರಲ್ಲಿ ಅತಿ ಹೆಚ್ಚಿನ ಅಂದರೆ 7,48,536 ಮಂದಿ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ ಎನ್ನುವುದು ಗಮನಾರ್ಹ. ಜೂನ್ 28 ಕ್ಕೆ ಅನ್ವಯವಾಗುವಂತೆ ಈವರೆಗೂ ಶೇಕಡಾ 98.20 ರಷ್ಟು ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ 15,200ಕ್ಕೂ ಹೆಚ್ಚು ಸೋಂಕಿತರಲ್ಲಿ 1000ದಷ್ಡು ಸೋಂಕಿತರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಇದಕ್ಕಿಂತ ಆತಂಕಕಾರಿ‌ ಸಂಗತಿ ಏನ್ ಗೊತ್ತಾ, ಕೊರೋನಾಗೆ ಬಲಿಯಾಗಿರುವ 246 ಮಂದಿಯಲ್ಲಿ 120 ನೂರ ಮಂದಿ ವಯೋವೃದ್ಧರೇ ಆಗಿದ್ದಾರೆ. ವೃದ್ಧರಲ್ಲಿ ಸರ್ವೇ ಸಾಮಾನ್ಯವಾಗಿ ಜ್ವರ, ಕೆಮ್ಮು, ಶೀತ ಉಸಿರಾಟದ ತೊಂದರೆ ವಿಷಮಶೀತ ಜ್ವರದಂಥ ಸಮಸ್ಯೆ ಕಾಣಿಸಿಕೊಳೋದು ಸಹಜ. ಆದರೆ ಕೊರೋನಾ ಸಂದರ್ಭದಲ್ಲಿ ಅವನ್ನು ವಯೋಸಹಜ ಸಮಸ್ಯೆಗಳೆಂದು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ‌ ಎಂಬ ತೀರ್ಮಾನಕ್ಕೆ ಬಂದಿಯೇ ಮನೆ ಮನೆ ಸಮೀಕ್ಷೆಯನ್ನು ವೃದ್ಧರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ.

1.68 ಕೋಟಿ ಮನೆಗಳ ಸರ್ವೆ ಗುರಿ ಹೊಂದಲಾಗಿದ್ದ ಈ ಸಮೀಕ್ಷೆಯಲ್ಲಿ,ಈಗಾಗಲೇ 1.58 ಕೋಟಿ ಮನೆಗಳ ಸರ್ವೇ ಮಾಡಿ ಮುಗಿಸಲಾಗಿದೆ. ಅದರ ಪೈಕಿ 64.16 ಲಕ್ಷದಷ್ಟು ಜನರು ಕೊರೋನಾಗೆ ತುತ್ತಾಗುವ ಎಲ್ಲಾ ಲಕ್ಷಣ ಒಳಗೊಂಡಿದ್ದಾರಂತೆ.ಇವರ ಪೈಕಿ 60.50 ಲಕ್ಷದಷ್ಟು ಜನರೇ 60 ವರ್ಷ ಮೇಲ್ಪಟ್ಟವರು ಎನ್ನುವ ಸಂಗತಿ ನಿಜಕ್ಕೂ ಆತಂಕಕಾರಿಯಾಗಿದೆ.

ಇದಷ್ಟೇ ಅಲ್ಲದೇ, ಈ ಪೈಕಿ 4.89  ಲಕ್ಷ ಗರ್ಭಿಣಿಯರು ಸೋಂಕಿಗೆ ತುತ್ತಾಗಬಹುದು ಎನ್ನುವ ಆತಂಕಕಾರಿ ಮಾಹಿತಿಯನ್ನು ಕೂಡ ಈ ಸಮೀಕ್ಷೆ ಒಳಗೊಂಡಿದೆ. ಹಾಗೆಯೇ 16.14 ಲಕ್ಷ ಜನ ಅಧಿಕ ರಕ್ತದ ಒತ್ತಡ, ಮಧುಮೇಹ. 1.80 ಲಕ್ಷ ಜನ ಶೀತ ಜ್ವರ 29,705 ಮಂದಿ ವಿಷಮಜೀತ ಜ್ವರದ ಲಕ್ಷಣ ಹೊಂದಿದ್ದಾರೆನ್ನುವ ಸಂಗತಿಯೂ‌ ಸಮೀಕ್ಷೆಯಿಂದ ಬಹಿರಂಗವಾಗಿದೆ.ಇದನ್ನು ಓದಿ: ಇನ್ಮುಂದೆ ಮಲ್ಲೇಶ್ವರಂನಲ್ಲಿ ಶಾಪಿಂಗ್​ ಮಾಡೋಕಾಗಲ್ಲ; ಸೆಲ್ಫ್​ ಲಾಕ್​ಡೌನ್​ ಮೊರೆ ಹೋದ ವ್ಯಾಪಾರಿಗಳು!

ಮೇಲ್ಕಂಡ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಸಂಗತಿಗಳು ನಿಜಕ್ಕೂ ಕೂಡ ನಮ್ಮ ನಡುವೆ ಇರುವ ವೃದ್ಧಜೀವಗಳ ಬಗ್ಗೆ ಸಾಕಷ್ಟು ಆತಂಕವನ್ನು ಮೂಡಿಸುತ್ತದೆ. ಕೊರೋನಾವನ್ನು ಎದುರಿಸಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಾವು ಬದುಕುವ ಜೊತೆಗೆ ನಮ್ಮ ಬದುಕಿನ ಸಾಕ್ಷಿಪ್ರಜ್ಞೆಯಂತಿರುವ ವೃದ್ಧಜೀವಗಳ ಬದುಕನ್ನು ಉಳಿಸುವ ಹೊಣೆಗಾರಿಕೆ ಕೂಡ ನಮ್ಮ ಮೇಲಿದೆ. ವೃದ್ದ ಜೀವಗಳ ರಕ್ಷಣೆ-ಕಾಳಜಿ ಮಾಡೋಣ. ಬದುಕುವ ಅವಕಾಶವನ್ನು ಕಲ್ಪಿಸೋಣ.
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading