60 ಮಂದಿ ಕೊರೋನಾ ಶಂಕಿತರಿಗೆ ಮನೆ ನಿಗಾದಿಂದ ಮುಕ್ತಿ; ವಿಜಯಪುರ ಜಿಲ್ಲಾಧಿಕಾರಿ ವೈ ಎಸ್​​ ಪಾಟೀಲ್​​

ಮೈಸೂರು ಮತ್ತು ದಾವಣಗೆರೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿಯೂ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸ್ಪಷ್ಟಪಡಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿಜಯಪುರ(ಮಾ.17): ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ 66 ಜನರ ಮೇಲೆ ವಹಿಸಲಾಗಿದ್ದ ನಿಗಾ ಹಿಂಪಡೆಯಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್​​ ತಿಳಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತಾಡಿದ ಅವರು, ಫೆಬ್ರವರಿ 1ನೇ ತಾರೀಕಿನ ನಂತರ ನಮ್ಮ ಜಿಲ್ಲೆಗೆ ನಾನಾ ದೇಶಗಳಿಂದ ಸುಮಾರು 244 ಜನ ವಾಪಸ್ಸಾಗಿದ್ದರು. ಅವರ ಮೇಲೆ 14 ದಿನಗಳ ಕಾಲ ಅವರವರ ಮನೆಯಲ್ಲಿಯೇ ನಿಗಾ ವಹಿಸಲಾಗಿತ್ತು. ಇವರ ಪೈಕಿ 66 ಜನರ ಮೇಲೆ ಇರಿಸಿದ್ದ ನಿಗಾ ಅವಧಿ ಈಗ ಪೂರ್ಣಗೊಂಡಿದೆ ಎಂದರು.

  ಇನ್ನು, ಈಗಲೂ 178 ಜನರನ್ನು ಮನೆಯಲ್ಲಿಯೇ ನಿಗಾ ವಹಿಸಲಾಗುತ್ತಿದೆ. ಅಲ್ಲದೇ, ಕಲಬುರಗಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಿಗೆ ಬಸ್ಸುಗಳ ಸಂಚಾರವನ್ನು ಕಡಿಮೆ ಮಾಡಲಾಗಿದೆ. ಅಲ್ಲಿಗೆ ಹೋಗಿ ಬರುವ ಸರ್ಕಾರಿ ಬಸ್ಸುಗಳನ್ನು ಸ್ಯಾನಿಟೈಜೇಶನ್ ಮಾಡಲಾಗುತ್ತಿದೆ ಎಂದರು ವೈ.ಎಸ್​ ಪಾಟೀಲ್​​.

  ಮಹಾರಾಷ್ಟ್ರದ ಗಡಿಯಲ್ಲಿ ಯಾವುದೇ ಚೆಕ್ ಪೋಸ್ಟ್​ ತೆರೆದಿಲ್ಲ. ವಿದೇಶಗಳಿಂದ ಬರುವವರ ಬಗ್ಗೆ ವಿಮಾನ ನಿಲ್ದಾಣಗಳಿಂದಲೇ ಮಾಹಿತಿ ಪಡೆಯಲಾಗುತ್ತಿದೆ. ಒಂದು ವೇಳೆ ಚೆಕ್ ಪೋಸ್ಟ್​ ತೆರೆದರೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದ್ದು, ಅದು ಕಾರ್ಯ ಸಾಧ್ಯವಾಗುವುದಿಲ್ಲ. ಕಲಬುರಗಿ ಕಡೆ ಪ್ರತಿನಿತ್ಯ 4 ರಿಂದ 5 ಸಾವಿರ ಜನ ಪ್ರಯಾಣ ಮಾಡುತ್ತಾರೆ. ಮಹಾರಾಷ್ಟ್ರದ ಕಡೆಗೆ ಸುಮಾರು ಏಳೆಂಟು ಸಾವಿರ ಜನ ಪ್ರಯಾಣ ಮಾಡುತ್ತಾರೆ. ಆದರೆ, ಚೆಕ್ ಪೋಸ್ಟ್​ ಬದಲು ಮಾಹಿತ ಪಡೆಯಲು ಕಲಬುರಗಿ ಮತ್ತು ಮಹಾರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ವೈ. ಎಸ್. ಪಾಟೀಲ್​​ ತಿಳಿಸಿದರು.

  ಇದನ್ನೂ ಓದಿ: ಕಲಬುರಗಿಗೆ ಕಾಲಿಡದ ಗೋವಿಂದ ಕಾರಜೋಳ: ‘ಕೊರೋನಾ ಕಂಡ್ರೆ ಭಯ‘ ಎಂದ ಉಸ್ತುವಾರಿ ಸಚಿವ; ಸಾರ್ವಜನಿಕರ ಆಕ್ರೋಶ

  ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಾಕಷ್ಟು ವೆಂಟಿಲೇಟರ್​​ಗಳಿವೆ.  ಹೆಚ್ಚಿನ ಸಂಖ್ಯೆ ವೆಂಟಿಲೇಟರ್​​ಗಾಗಿ ಆರೋಗ್ಯ ಸಚಿವರು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆ ಕಳುಹಿಸಲಾಗಿದೆ. ವಿಜಯಪುರದಲ್ಲಿ ಲ್ಯಾಬ್ ಆರಂಭದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಇಲ್ಲಿಂದ ಪರೀಕ್ಷೆಗೆ ಕಳುಹಿಸಲಾಗುವ ಸ್ಯಾಂಪಲ್​​ಗಳ ವರದಿಯನ್ನು 6 ರಿಂದ 12 ಗಂಟೆಯೊಳಗೆ ಸಿಗುವ ವ್ಯವಸ್ಥೆ ಸರ್ಕಾರ ಮಾಡಿದೆ ಎಂದರು.

  ಮೈಸೂರು ಮತ್ತು ದಾವಣಗೆರೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿಯೂ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸ್ಪಷ್ಟಪಡಿಸಿದರು.
  First published: