ನವ ದೆಹಲಿ (ಮೇ 26); ಕೊರೋನಾ ಎರಡನೇ ಅಲೆ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಅಲೆಗೆ ಈಗಾಗಲೇ ದೇಶದಾದ್ಯಂತ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಈಗಲೂ ಪ್ರತಿನಿತ್ಯ 4 ಸಾವಿರಕ್ಕೂ ಅಧಿಕ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಾರಕ ಕೊರೋನಾ ವೈರಸ್ಗೆ ಒಂದೇ ಕುಟುಂಬದ ಅನೇಕರು ಹಾಗೂ ತಂದೆ-ತಾಯಿ ಒಟ್ಟಿಗೆ ಮೃತಪಟ್ಟಿರುವ ಕುರಿತ ಹಲವಾರು ಸುದ್ದಿಗಳು ಭಾರತದ ಮಟ್ಟಿಗೆ ಆಗಿಂದಾಗ್ಗೆ ಸದ್ದು ಮಾಡುತ್ತಲೇ ಇವೆ. ಈ ನಡುವೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಂಗಳವಾರ ಮಹತ್ವದ ಅಂಕಿ ಅಂಶವೊಂದನ್ನು ಬಹಿರಂಗಪಡಿಸಿದ್ದು, ಈ ಅಂಕಿ ಅಂಶದ ಪ್ರಕಾರ, "ಕೋವಿಡ್ ಎರಡನೇ ಅಲೆಯಿಂದಾಗಿ ಕಳೆದ 55 ದಿನಗಳಲ್ಲಿ ದೇಶಾದ್ಯಂತ 577 ಮಕ್ಕಳು ಅನಾಥರಾಗಿದ್ದಾರೆ" ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದ್ದು ಕಳವಳಕ್ಕೆ ಕಾರಣವಾಗಿದೆ.
ಕಳೆದ ಒಂದು ತಿಂಗಳಿಂದ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಕೋವಿಡ್ ಕಾರಣಕ್ಕೆ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ ಎಂಬ ಸಂದೇಶಗಳು ಹಲವೆಡೆ ಹರಿದಾಡಿ ವೈರಲ್ ಆಗಿದೆ. ಈ ಸಂದೇಶದ ಮೂಲವನ್ನು ಹುಡುಕಿ ತನಿಖೆಗೆ ಮುಂದಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಂತಹದ್ದೊಂದು ಮಹತ್ವದ ದಾಖಲೆಯನ್ನು ಕಲೆಹಾಕಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು, "ನಾವು ಎಲ್ಲಾ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಆ ರಾಜ್ಯಗಳ ಎಲ್ಲಾ ಜಿಲ್ಲೆಗಳಿಂದ ಕೋವಿಡ್ ಅನಾಥರನ್ನು ಗುರುತಿಸಲು ಕೇಳಿಕೊಂಡಿದ್ದೇವೆ. ಇಲ್ಲಿವರೆಗೆ ಸ್ವೀಕರಿಸಿದ ಮಾಹಿತಿ ಪ್ರಕಾರ 577 ಮಕ್ಕಳು ಇಂತಹ ಸ್ಥಿತಿಯಲ್ಲಿವೆ ಎಂಬುದು ಖಚಿತವಾಗಿದೆ. ಉದಾಹರಣೆಗೆ, ದೆಹಲಿಯಲ್ಲಿ ಈ ಅವಧಿಯಲ್ಲಿ ಒಂದು ಕೋವಿಡ್ ಅನಾಥ ಮಗುವನ್ನು ಗುರುತಿಸಲ್ಪಟ್ಟಿದೆ” ಎಂದು ಅವರು ತಿಳಿಸಿದ್ದಾರೆ. ಅಧಿಕಾರಿಗಳು ರಾಜ್ಯವಾರು ವಿಘಟನೆಯನ್ನು ಬಹಿರಂಗಪಡಿಸಲಿಲ್ಲ. ಆದರೆ ಹಲವಾರು ರಾಜ್ಯಗಳು ಒಂದು ಪ್ರಕರಣವನ್ನು ಸಹ ವರದಿ ಮಾಡಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, "ಕೋವಿಡ್‌ಗೆ ಪೋಷಕರನ್ನು ಕಳೆದುಕೊಂಡಿರುವ ಪ್ರತಿ ಅತಂತ್ರ ಮಗುವನ್ನು ಬೆಂಬಲಿಸಲು ಮತ್ತು ರಕ್ಷಿಸಲು ಸರ್ಕಾರ ಬದ್ಧವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, "ಏಪ್ರಿಲ್ 1, 2021 ರಿಂದ ಮಂಗಳವಾರ ಮಧ್ಯಾಹ್ನ 2 ರವರೆಗೆ, ದೇಶಾದ್ಯಂತ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಇಂತಹ 577 ಪ್ರಕರಣ ದಾಖಲಾಗಿವೆ" ಎಂದು ಸ್ವತಃ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಈ ಅನಾಥರ ಸಾಂಸ್ಥಿಕೇತರ ಆರೈಕೆಗಾಗಿ ನಾವು ಪ್ರತಿ ಜಿಲ್ಲೆಗೆ 10 ಲಕ್ಷ ರೂ. ನಿಗದಿಪಡಿಸಿದ್ದೇವೆ. ಇದನ್ನು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲಾ ನ್ಯಾಯಾಧೀಶರು ವಿತರಿಸುತ್ತಾರೆ. ಒಂದು ಮಗು ಕೂಡ ಅನಾಥ ಸ್ಥಿತಿಯಲ್ಲಿ ಇರಬಾರದು ಎಂಬುದು ನಮ್ಮ ಗುರಿ. ನಮ್ಮ ಆದ್ಯತೆಯೆಂದರೆ, ಮಕ್ಕಳನ್ನು ಅವರ ಕುಟುಂಬ ಮತ್ತು ಸಮುದಾಯ ರಚನೆಗಳಲ್ಲಿ ಉಳಿಸಿಕೊಳ್ಳಬೇಕು. ಈ ಸಂರಚನೆಗಳಿಂದ ದೂರವಾಗದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಸಾಂಕ್ರಾಮಿಕ ರೋಗದಿಂದ ಅನಾಥವಾಗಿರುವ ಮಕ್ಕಳಿಗೆ ಕಲ್ಯಾಣ ಕ್ರಮಗಳನ್ನು ಹಲವಾರು ರಾಜ್ಯಗಳು ಘೋಷಿಸಿರುವ ಸಮಯದಲ್ಲಿ ಕೇಂದ್ರ ಸಚಿವಾಲಯದ ಈ ಕಾಳಜಿ ವ್ಯಕ್ತವಾಗಿದೆ. ದೆಹಲಿ, ಪಂಜಾಬ್ ಮತ್ತು ಮಧ್ಯಪ್ರದೇಶಗಳು ಹಣಕಾಸಿನ ನೆರವಿನ ಹೊರತಾಗಿ ಉಚಿತ ಶಿಕ್ಷಣದ ಭರವಸೆ ನೀಡಿದರೆ, ಉತ್ತರಾಖಂಡ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ವಿವಿಧ ಕಲ್ಯಾಣ ಯೋಜನೆಗಳನ್ನು ಘೋಷಿಸಿವೆ.
ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೊರೋನಾ ಅಟ್ಟಹಾಸ; ಕೇರಳ, ತಮಿಳುನಾಡಿನಲ್ಲಿ ಅತಿ ಹೆಚ್ಚು ಸೋಂಕು
ಈ ಮಕ್ಕಳನ್ನು ಪತ್ತೆ ಹಚ್ಚಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಗಳಲ್ಲಿನ ಕಲ್ಯಾಣ ಸಮಿತಿಗಳಿಂದ ಹಿಡಿದು ನಿಮ್ಹಾನ್ಸ್ ಸಹಯೋಗದೊಂದಿಗೆ ಈ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
"ಈ ಮಕ್ಕಳನ್ನು ದತ್ತು ಪಡೆಯಲು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಪ್ರಸಾರ ಮಾಡುವುದರ ವಿರುದ್ಧ ಮೇ 17 ರಂದು ಸಚಿವಾಲಯ ಸಾರ್ವಜನಿಕ ನೋಟಿಸ್ ನೀಡಿದೆ. ಇದು ಮಕ್ಕಳ ಕಳ್ಳಸಾಗಣೆಗೆ ಕಾರಣವಾಗಬಹುದು ಎಂಬ ಆತಂಕಗಳು ಇದ್ದವು. ನಾವು ಹೆಚ್ಚಿನ ಸಂಖ್ಯೆಯ ಈ ಸಂದೇಶಗಳ ಬಗ್ಗೆ ತನಿಖೆ ನಡೆಸಿದ್ದೇವೆ ಮತ್ತು ಅವೆಲ್ಲವೂ ಇಲ್ಲಿಯವರೆಗೆ ನಕಲಿ ಎಂದು ನಾವು ಕಂಡುಕೊಂಡಿದ್ದೇವೆ. ಇವುಗಳನ್ನು ರಾಜ್ಯ ಪೊಲೀಸ್ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ, ಅವರು ಸೈಬರ್ ಸೆಲ್‌ಗಳ ಜೊತೆಗೆ ಈ ತನಿಖೆಯನ್ನು ಮುಂದುವರಿಸುತ್ತಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ