ಚೆನ್ನೈ ಮತ್ತು ಗ್ರೇಟರ್ ಚೆನ್ನೈ ಪೊಲೀಸರ ವ್ಯಾಪ್ತಿಗೆ ಬರುವ ಹಲವು ಪ್ರದೇಶಗಳಲ್ಲಿ ಸರ್ಕಾರ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ. ಹಾಗೆಯೇ ತಿರುವಳ್ಳೂರು, ಚೆಂಗಲ್ಪೆಟ್ ಮತ್ತು ಕಂಚಿಪುರಂ ಜಿಲ್ಲೆಗಳಲ್ಲಿ ಜೂನ್ 19ರಿಂದ 30ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ.
12 ದಿನಗಳ ಲಾಕ್ಡೌನ್ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ನಿಬಂಧನೆಗಳೊಂದಿಗೆ ಅವಕಾಶ ನೀಡಲಾಗಿದೆ. ಮತ್ತು ಜೂನ್ 21 ಮತ್ತು ಜೂನ್ 28ರ ಭಾನುವಾರ ಪೂರ್ಣಪ್ರಮಾಣದಲ್ಲಿ ಶಟ್ಡೌನ್ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ದಿನಸಿ, ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ಪೆಟ್ರೋಲ್ ಬಂಕ್ಗಳು ಸೇರಿದಂತೆ ಅಗತ್ಯ ಸೇವೆಗಳು ಗುರುವಾರ ಮಧ್ಯರಾತ್ರಿಯಿಂದ ಮುಂದಿನ 12 ದಿನಗಳವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ತೆರೆದಿರುತ್ತವೆ. ಟೀ ಶಾಪ್ಗಳು ಮುಚ್ಚಲಿವೆ. ಹೋಟೆಲ್ಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 8ರವರೆಗೆ ಪಾರ್ಸೆಲ್ಗೆ ಅವಕಾಶ ನೀಡಲಾಗಿದೆ. ಫುಡ್ ಡಿಲಿವರಿಗೆ ಅವಕಾಶ ನೀಡಲಾಗಿದೆ. ಆದರೆ, ಸಂಬಂಧಿತ ಉದ್ಯೋಗಿಗಳು ಕಡ್ಡಾಯವಾಗಿ ಐಡಿ ಕಾರ್ಡ್ ಹೊಂದಿರಲೇಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನು ಓದಿ: ರಾಜ್ಯದಲ್ಲಿ ಕೊರೋನಾ ರೋಗಿಗಳ ಸಾವಿನ ಪ್ರಮಾಣ ಶೇ.1.2 ಹೀಗಾಗಿ ಜನ ಭಯಪಡುವ ಅಗತ್ಯ ಇಲ್ಲ; ಬಿ.ಎಸ್. ಯಡಿಯೂರಪ್ಪ
ಲಾಕ್ಡೌನ್ನ 12 ದಿನಗಳಲ್ಲಿ ಟ್ಯಾಕ್ಸಿ, ಆಟೋ, ಖಾಸಗಿ ವಾಹನಗಳ ಓಡಾಟಕ್ಕೆ ತಡೆ ಹಾಕಲಾಗಿದೆ. ಈ ಅವಧಿಯಲ್ಲಿ ಹೊರರಾಜ್ಯದಿಂದ ಬರುವ ರೈಲು ಮತ್ತು ವಿಮಾನಗಳು ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಎರಡು ಭಾನುವಾರ ಸಂಪೂರ್ಣ ಲಾಕ್ಡೌನ್ ಇರಲಿದೆ. ಹಾಲು, ಆಸ್ಪತ್ರೆ, ಮೆಡಿಕಲ್ಸ್ ಹಾಗೂ ತುರ್ತು ಆರೋಗ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿದೆ.