• ಹೋಂ
 • »
 • ನ್ಯೂಸ್
 • »
 • Corona
 • »
 • West Bengal Assembly Election; ಫಲಿತಾಂಶಕ್ಕೆ ಮುನ್ನವೇ ಕೊರೋನಾ ಆರ್ಭಟಕ್ಕೆ 4 ಅಭ್ಯರ್ಥಿಗಳು ಬಲಿ!

West Bengal Assembly Election; ಫಲಿತಾಂಶಕ್ಕೆ ಮುನ್ನವೇ ಕೊರೋನಾ ಆರ್ಭಟಕ್ಕೆ 4 ಅಭ್ಯರ್ಥಿಗಳು ಬಲಿ!

ಪಶ್ಚಿಮ ಬಂಗಾಳ ಚುನಾವಣಾ ರ‍್ಯಾಲಿ (ಸಾಂದರ್ಭಿಕ ಚಿತ್ರ).

ಪಶ್ಚಿಮ ಬಂಗಾಳ ಚುನಾವಣಾ ರ‍್ಯಾಲಿ (ಸಾಂದರ್ಭಿಕ ಚಿತ್ರ).

ಸೋಮವಾರ (ಏಪ್ರಿಲ್ 26) ರ ರಾತ್ರಿ ಕೊರೋನಾ ಸೋಂಕು ದೃಢಪಟ್ಟ ನಂತರ ಅಭ್ಯರ್ಥಿ ಸಮೀರ್ ಘೋಷ್ (42) ಮೃತರಾಗಿದ್ದಾರೆ. ಸಮೀರ್ ಘೋಷ್ ಮಾಲ್ಡಾ ಜಿಲ್ಲೆಯ ಬೈಸ್ನಾಬ್‌ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

 • Share this:

  ಕೋಲ್ಕತ್ತಾ (ಏಪ್ರಿಲ್ 27); ಭಾರತದಲ್ಲಿ ಕೊರೋನಾ ಎರಡನೇ ಅಲೆ ಕೈಮೀರಿ ಹೋಗುತ್ತಿದೆ. ಸೋಂಕು ಪೀಡಿತರ ಸಂಖ್ಯೆ ದಿನಕ್ಕೆ 3.5 ಲಕ್ಷದ ಗಡಿ ದಾಟಿದರೆ, ಸಾವಿನ ಸಂಖ್ಯೆಯೂ ಮಿತಿಮೀರುತ್ತಲೇ ಇದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುಣಾವಣೆ ನಡೆಯುತ್ತಿದೆ. ಹೀಗಾಗಿ ಎಲ್ಲಾ ಪಕ್ಷಗಳೂ ಕೊರೋನಾವನ್ನೂ ಲೆಕ್ಕಿಸದೆ ಅತಿಯಾದ ಚುನಾವಣಾ ರ್ಯಾಲಿಯನ್ನು ಆಯೋಜಿಸಿದ್ದವು. ಪರಿಣಾಮ ಅನೇಕ ಜನ ಸಾಮಾನ್ಯರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ, ಈವರೆಗೆ ಒಟ್ಟು 4 ಜನ ಅಭ್ಯರ್ಥಿಗಳು ಚುನಾವಣಾ ಫಲಿತಾಂಶ ಹೊರ ಬೀಳುವ ಮುನ್ನವೇ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ಸುದ್ದಿ ಇದೀಗ ಹೊರ ಬಿದ್ದಿದೆ.


  ಸೋಮವಾರ (ಏಪ್ರಿಲ್ 26) ರ ರಾತ್ರಿ ಕೊರೋನಾ ಸೋಂಕು ದೃಢಪಟ್ಟ ನಂತರ ಅಭ್ಯರ್ಥಿ ಸಮೀರ್ ಘೋಷ್ (42) ಮೃತರಾಗಿದ್ದಾರೆ. ಸಮೀರ್ ಘೋಷ್ ಮಾಲ್ಡಾ ಜಿಲ್ಲೆಯ ಬೈಸ್ನಾಬ್‌ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬೈಸ್ನಾಬ್‌ನಗರಕ್ಕೆ ಏಪ್ರಿಲ್ 29 ರ ಗುರುವಾರ ಬಂಗಾಳದ ಕೊನೆಯ ಮತ್ತು ಎಂಟನೇ ಹಂತದಲ್ಲಿ ಮತದಾನ ನಡೆಯಲಿದೆ.


  ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೇಂದ್ರ ಸಚಿವ, ಕೊಲ್ಕತ್ತಾದ ಟಾಲಿಗಂಜ್‌ನ ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಮುರ್ಷಿದಾಬಾದ್‌ನ ಜಂಗೀಪುರದ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರದೀಪ್ ಕುಮಾರ್‌ ನಂದಿ, ಅದೇ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್ಸಿನ ರೆಝಾಲ್ ಹಾಕ್ ಮತ್ತು ಉತ್ತರ 24 ಪರಗಣಗಳ ಖಾರ್ದಾಹಾದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಕಾಜಲ್ ಸಿನ್ಹಾ ಸಹ ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ.


  ಪಶ್ಚಿಮ ಬಂಗಾಳದಲ್ಲಿ ಸುಮಾರು 95,000 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ಸುಮಾರು 16,000 ಹೊಸ ಪ್ರಕರಣಗಳು ಮತ್ತು 68 ಸಾವುಗಳು ವರದಿಯಾಗಿವೆ.


  ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕುಗಳು, ಔಷಧಿಗಳು ಮತ್ತು ಆಮ್ಲಜನಕದ ಕೊರತೆಯ ಮಧ್ಯೆ ಸೋಮವಾರ ನಡೆದ ಏಳನೇ ಹಂತದ ಮತದಾನದಲ್ಲಿ ಇದುವರೆಗೆ ನಡೆದ ಅತಿ ಕಡಿಮೆ (ಸರಿಸುಮಾರು 75%) ಮತದಾನವಾಗಿರುವುದು ಕಂಡು ಬಂದಿದೆ.


  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೊರೊನಾ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರಲು ಚುನಾವಣಾ ಆಯೋಗ ಕೈಗೊಂಡ ಕ್ರಮಗಳ ಬಗ್ಗೆ ಕಲ್ಕತ್ತಾ ಹೈಕೋರ್ಟ್ ಕಳೆದ ವಾರ ಅಸಮಾಧಾನ ವ್ಯಕ್ತಪಡಿಸಿದೆ.


  ಏಪ್ರಿಲ್ 06 ರಂದು ತಮಿಳುನಾಡು, ಕೇರಳ ಮತ್ತು ಪುದುಚೇರಿಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಅಸ್ಸಾಂನ್ಲಲಿ ಮೂರು ಹಂತಗಳಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಿಗದಿಪಡಿಸಲಾಗಿತ್ತು. ಬಂಗಾಳದಲ್ಲಿ ಮಾರ್ಚ್ 27 ರಂದು ಆರಂಭವಾಗಿರುವ ಮತದಾನ ಏಪ್ರಿಲ್ 29 ಕ್ಕೆ ಕೊನೆಗೊಳ್ಳಲಿದೆ. ಮೇ 2 ರಂದು ಮತಎಣಿಕೆ ನಡೆಯಲಿದೆ.


  ಮೇ ಎರಡನೇ ವಾರದಲ್ಲಿ ಕಾದಿದೆ ಆತಂಕ:


  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಆದರೀಗ ಮೇ ತಿಂಗಳ ಮಧ್ಯಭಾಗದಲ್ಲಿ ಇನ್ನೂ ದೊಡ್ಡ ಆಪತ್ತು ಕಾದಿದೆ ಎಂದು ಐಐಟಿ ವಿಜ್ಞಾನಿಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.


  ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ವಿಜ್ಞಾನಿಗಳು ಗಣಿತಶಾಸ್ತ್ರೀಯ ಮಾದರಿಯಲ್ಲಿ ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನದ ಪ್ರಕಾರ ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ. ಆಗ ದೇಶದಲ್ಲಿ 38ರಿಂದ 48 ಲಕ್ಷ ಸಕ್ರಿಯ ಪ್ರಕರಣಗಳು ಇರಲಿವೆ. ಆ ಅವಧಿಯಲ್ಲಿ ಪ್ರತಿದಿನ 4.4 ಲಕ್ಷದಷ್ಟು ಹೊಸ ಕೇಸುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಗಣಿತಶಾಸ್ತ್ರೀಯದಲ್ಲಿನ 'ಸೂತ್ರ' ಎಂಬ ಮಾದರಿಯ ಆಧಾರದ ಮೇಲೆ ದೇಶದಲ್ಲಿ ಕಂಡುಬರುತ್ತಿರುವ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ‘ಸೂತ್ರ’ ಮಾದರಿಯು ಹಲವು ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಹೊಸ ಮಾದರಿಯಾಗಿದೆ.


  ಇದನ್ನೂ ಓದಿ: Corona Death: ದೆಹಲಿ ಸಾರ್ವಜನಿಕ ದಾಖಲೆಗಳಿಂದ ಕಾಣೆಯಾದ 1,000 ಕೋವಿಡ್ ಸಾವುಗಳು; ಸತ್ಯ ಬಹಿರಂಗ!


  ಮೂರು ಪ್ರಮುಖ ಸಂಗತಿಗಳನ್ನು ಒಳಗೊಂಡ ಸೂತ್ರ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕೊರೋನಾ ವೈರಸ್ ತಗುಲಿದ ವ್ಯಕ್ತಿಯು ಪ್ರತಿ ದಿನ ಎಷ್ಟು ಜನರಿಗೆ ಸೋಂಕು ಹರಡುತ್ತಾನೆ ಎಂಬ ಸಂಖ್ಯೆ, ನಾಗರಿಕರು ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂಬ ಅಂಶ ಹಾಗೂ ದೃಢಪಡದ ಪ್ರಕರಣಗಳ ಸಂಖ್ಯೆಯನ್ನು ಅಧ್ಯಯನ ನಡೆಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ತಮ್ಮ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಪ್ರಕಟಣೆ ಮಾಡಿಲ್ಲ‌.


  ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ ಎಂದಿರುವ ವಿಜ್ಞಾನಿಗಳು ಅದಕ್ಕೂ ಮೊದಲು ಮೇ 11ರಿಂದ15ರ ನಡುವೆ 33ರಿಂದ 35 ಲಕ್ಷ ಸಕ್ರಿಯ ಪ್ರಕರಣಗಳಾಗುವ ಸಾಧ್ಯತೆ ಇದೆ ಹೇಳಿದ್ದಾರೆ. ಹಾಗೆಯೇ ಮೇ ಮಧ್ಯದಲ್ಲಿ ಗರಿಷ್ಠ ಹಂತ ತಲುಪಿ ನಂತರ ಮೇ ತಿಂಗಳ ಕಡೆಯಲ್ಲಿ ಇಳಿಮುಖವಾಗಲಿದೆ ಎಂಬುದಾಗಿಯೂ ತಿಳಿಸಿದ್ದಾರೆ. ತಮ್ಮ ಈ ಭವಿಷ್ಯ ನಿಜವಾಗಲಿದೆ ಎಂದು ಪ್ರಾಧ್ಯಾಪಕ ಮನಿಂದರ್ ಅಗರ್‌ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  Published by:MAshok Kumar
  First published: