ನವದೆಹಲಿ: ಜನ್ ಧನ್ ಖಾತೆ ಇರುವ ಮಹಿಳೆಯರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂರನೇ ಕಂತಾಗಿ 500 ರುಪಾಯಿಯನ್ನು ನೀಡಲಾಗುತ್ತಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಈ ಹಣವನ್ನು ಫಲಾನುಭವಿಗಳಿಗೆ ನೀಡಲು ವಿಶೇಷ ವ್ಯವಸ್ಥೆ ಮಾಡಿದೆ. ತುರ್ತಾಗಿ ಹಣ ಬೇಕಿದ್ದವರು ಒಮ್ಮೆಲೇ ಬ್ಯಾಂಕ್ಗಳಿಗೆ ಗುಂಪುಗೂಡುವ ಬದಲು ಪ್ರತ್ಯೇಕ ದಿನಗಳನ್ನು ನಿಗದಿಪಡಿಸಿದೆ. ಅದರಂತೆ, ಜೂನ್ 5 ರಿಂದ 10 ವರೆಗೆ ಖಾತೆದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಹಣ ಹಿಂಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಮೂರು ತಿಂಗಳಲ್ಲಿ ನೀಡಲಾಗುವ ಒಟ್ಟು 1,500 ರೂ.ಗಳ ಮೂರನೇ ಕಂತಾಗಿದೆ. ಈಗಾಗಲೇ ಎರಡು ಕಂತುಗಳಲ್ಲಿ ಹಣವನ್ನು ನೀಡಲಾಗಿದೆ. ಈಗ 500 ರೂನ ಕೊನೆಯ ಕಂತು ಸಂದಾಯವಾಗುತ್ತಿದೆ.
ಜೂನ್ 5 ರಿಂದ 10ರವರೆಗೆ ಖಾತೆಗಳ ಕೊನೆಯ ಸಂಖ್ಯೆಗಳ ಆಧಾರದಲ್ಲಿ ಹಣ ನೀಡುವುದಾಗಿ ಎಸ್ಬಿಐ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ. ಖಾತೆ ಸಂಖ್ಯೆಯ ಕೊನೆ ಅಂಕಿ 0 ಅಥವಾ 1 ಇರುವ ಖಾತೆದಾರರು ಜೂನ್ 5 ರಂದು ಹಣ ಪಡೆದುಕೊಳ್ಳಬಹುದಾಗಿದೆ. ಜೂನ್ 6 ರಂದು ಕೊನೆಯ ಅಂಕಿಯಾಗಿ 2 ಅಥವಾ 3 ಇರುವ ಖಾತೆದಾರರು ಹಣ ಪಡೆದುಕೊಳ್ಳಬಹುದು. ಜೂನ್ 8 ರಂದು ಕೊನೆ ಅಂಕಿ 4 ಅಥವಾ 5 ಇರುವ ಖಾತೆದಾರರಿಗೆ; ಜೂನ್ 9 ರಂದು 6 ಅಥವಾ 7 ಕೊನೆಯಂಕಿ ಇರುವ ಖಾತೆದಾರರಿಗೆ; ಹಾಗೂ ಜೂನ್ 10 ರಂದು ಕೊನೆ ಅಂಕಿ 8 ಅಥವಾ 9 ಇರುವ ಖಾತೆದಾರರಿಗೆ ಹಣ ಕೊಡಲಾಗುತ್ತದೆ.
ಆದರೆ, ಇದು ತುರ್ತಾಗಿ ಬೇಕೆನ್ನುವವರಿಗೆ ನೀಡಲಾಗಿರುವ ಅವಕಾಶ. ಜೂನ್ 10ರಿಂದ ಯಾರು ಬೇಕಾದರೂ ಎಟಿಎಂ ಅಥವಾ ಬ್ಯಾಂಕ್ ಶಾಖೆಯ ಮೂಲಕ ಹಣ ವಿತ್ಡ್ರಾ ಮಾಡಿಕೊಳ್ಳಬಹುದಾಗಿದೆ. ಆದರೆ, ಎಲ್ಲಿಯೇ ಆದರೂ ಗ್ರಾಹಕರು ಸಾಮಾಜಿಕ ಅಂತರ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಎಸ್ಬಿಐ ಮನವಿ ಮಾಡಿದೆ.
ಇದನ್ನೂ ಓದಿ :
SBI interest rates - ಎಸ್ಬಿಐ, ಐಸಿಐಸಿಐ ಗ್ರಾಹಕರಿಗೆ ಶಾಕ್; ದೇಶದ ಎರಡು ಅತಿದೊಡ್ಡ ಬ್ಯಾಂಕುಗಳಿಂದ ಬಡ್ಡಿ ಇಳಿಕೆ
38.08 ಕೋಟಿ ಪ್ರಧಾನ್ ಮಂತ್ರಿ ಜನ್ ಧನ್ ಯೋಜನಾ ಖಾತೆಗಳು ಇದ್ದು, ಅದರಲ್ಲಿ 20.60 ಕೋಟಿ ಖಾತೆಗಳು ಮಹಿಳೆಯರು ಹೊಂದಿದ್ದಾರೆ. ಏಪ್ರಿಲ್ 1ನೇ ತಾರೀಕಿಗೆ ಜನ್ ಧನ್ ಖಾತೆಗೆ ಠೇವಣಿ ಮಾಡಿದ ಮೊತ್ತ 1.19 ಲಕ್ಷ ಕೋಟಿ ರುಪಾಯಿ. ಕೊರೋನಾ ವೈರಾಣು ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್- ಮೇ- ಜೂನ್ ಮೂರು ತಿಂಗಳು ತಲಾ 500 ರುಪಾಯಿಯಂತೆ 20.5 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ