ಆನೇಕಲ್: ಎಗ್ಗಿಲ್ಲದೆ ಲಗ್ಗೆಯಿಡುತ್ತಿರುವ ಮಹಾಮಾರಿ ಕೊರೋನಾ ಸಿಕ್ಕ ಸಿಕ್ಕವರನ್ನು ಬಾಧಿಸುತ್ತಿದೆ . ಅದರಲ್ಲು ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಕೊರೋನಾ ವೈರಸ್ ಹೆಚ್ಚು ಮಾರಕವಾಗಿ ಪರಿಣಮಿಸಿದ್ದು, ಬಹುತೇಕ ಕೊರೋನಾ ಸೋಂಕಿತರಿಗೆ ಅಕ್ಸಿಜನ್ ಅತ್ಯವಶ್ಯಕ ಎನ್ನುವಂತಾಗಿದೆ. ಅದರಲ್ಲು ಕರ್ನಾಟಕದಲ್ಲಿ ಅಕ್ಸಿಜನ್ ಕೊರತೆಯಿಂದ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಆಕ್ಸಿಜನ್ಗಾಗಿ ಕೇಂದ್ರಕ್ಕೆ ಮೊರೆಯಿಟ್ಟಿತ್ತು. ಇದೀಗ ಕೇಂದ್ರ ಕಳೆದ ಮೂರು ದಿನಗಳಲ್ಲಿ ಟ್ರೈನ್ ಮೂಲಕ 360 ಟನ್ ಲಿಕ್ವಿಡ್ ಆಕ್ಸಿಜನ್ ರಾಜ್ಯಕ್ಕೆ ರವಾನಿಸಿದ್ದು, ರಾಜ್ಯದ ಜನ ಕೊಂಚ ಉಸಿರಾಡುವಂತಾಗಿದೆ.
ಹೌದು, ಮಹಾಮಾರಿ ಕೊರೋನಾ ಎರಡನೆಯ ಅಲೆಯ ಹೊಡೆತಕ್ಕೆ ಇಡೀ ದೇಶವೇ ಕಂಗಾಲಾಗಿ ಹೋಗಿದೆ. ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಜೀವವಾಯು ಆಕ್ಸಿಜನ್ ಕೊರತೆಯಿಂದ ದಿನನಿತ್ಯ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದೀಗ ವಾರದಲ್ಲಿ ಮೂರನೇ ಬಾರಿಗೆ ವಿಶೇಷ ಟ್ರೈನ್ ಮೂಲಕ ಬೆಂಗಳೂರಿಗೆ 360 ಟನ್ ಗಳಷ್ಟು ಆಕ್ಸಿಜನ್ ವೈಟ್ ಪೀಲ್ಡ್ ಗೆ ರವಾನಿಸಲಾಗಿದೆ. ಇದೇ ತಿಂಗಳ 11 ನೇ ತಾರೀಖು ಆರು ಕಂಟೇನರ್ಗಳಲ್ಲಿ 120 ಟನ್ ಅಕ್ಸಿಜನ್ ವೈಟ್ ಫೀಲ್ಡ್ ಗೆ ರವಾನಿಸಲಾಗಿತ್ತು. ಬಳಿಕ ಇಂದು ಮುಂಜಾನೆ ಕಾಂಕಾರ್ ಎಕ್ಸ್‌ಪ್ರೆಸ್ ಮೂಲಕ 120 ಟನ್ ಆಕ್ಸಿಜನ್ ಮತ್ತು ಶನಿವಾರ ಸಂಜೆ ಮತ್ತೊಂದು ರೈಲಿನಲ್ಲಿ ಆರು ಕಂಟೈನರ್ಗಳಲ್ಲಿ 120 ಟನ್ ಲಿಕ್ವಿಡ್ ಆಕ್ಸಿಜನ್ ವೈಟ್ ಫೀಲ್ಡ್ಗೆ ರವಾನಿಸಲಾಗಿದೆ.
ಇದನ್ನು ಓದಿ: ಪಾಸಿಟಿವಿಟಿ ಇರುವ ಕಡೆ ಟೆಸ್ಟ್ ಹೆಚ್ಚಿಸಲು, ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೌಕರ್ಯ ಹೆಚ್ಚಿಸಲು ಪ್ರಧಾನಿ ಮೋದಿ ಕರೆ
ಇನ್ನೂ ಆಕ್ಸಿಜನ್ ಕೊರತೆಯಿಂದ ರಾಜ್ಯದ ಹಲವು ಕಡೆ ಸಾವು ನೋವುಗಳು ಸಂಭವಿಸುತ್ತಿವೆ. ಇದೀಗ 360 ಟನ್ ಆಕ್ಸಿಜನ್ ಬೆಂಗಳೂರಿಗೆ ರವಾನೆಯಾಗಿದ್ದು, ಅಗತ್ಯ ಸ್ಥಳಗಳಿಗೆ ಸಕಾಲಕ್ಕೆ ಆಕ್ಸಿಜನ್ ರವಾನೆ ಆಗಬೇಕಿದೆ. ಕರ್ನಾಟಕ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಲಿಂಡೆ ಕಂಪನಿಯವರು ಈ ಆಕ್ಸಿಜನ್ ಅನ್ನು ನಿರ್ದಿಷ್ಟ ಸ್ಥಳದಲ್ಲಿ ಇಟ್ಟುಕೊಂಡು ಸರ್ಕಾರ ಸೂಚಿಸುವ ಆಸ್ಪತ್ರೆಗಳಿಗೆ ಹಂಚಿಕೆ ಮಾಡುತ್ತಾರೆ . ಖಾಲಿಯಾದ ಕಂಟೇನರ್ ಗಳನ್ನು ತೆಗೆದುಕೊಂಡು ಮತ್ತೆ ವಾಪಸ್ ಹೋಗಿ ಅವುಗಳನ್ನು ಫಿಲ್ ಮಾಡಿಕೊಂಡು ಮತ್ತೆ ಬೆಂಗಳೂರಿಗೆ ತರುವ ಕೆಲಸ ಮಾಡಲಾಗುತ್ತದೆ ಎನ್ನಲಾಗಿದೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ