ಕೊರೋನಾ ಎಫೆಕ್ಟ್: ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ ಮೇ- ಜೂನ್ ತಿಂಗಳಲ್ಲಿ 31 ಕೋಟಿ ರೂಪಾಯಿ ನಷ್ಟ

ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿದಿನ  1.30 ರಿಂದ  1.45 ಲಕ್ಷ ಜನರು ಪ್ರಯಾಣಿಸಿದ್ದು 50 ರಿಂದ 55 ಲಕ್ಷ ರೂ  ಆದಾಯ ಸಂಗ್ರಹವಾಗಿತ್ತು. ಪ್ರಸ್ತುತ ನಿತ್ಯ 22 ರಿಂದ 23 ಸಾವಿರ ಜನರು ಮಾತ್ರ ಪ್ರಯಾಣಿಸುತ್ತಿದ್ದು 11ರಿಂದ 13 ಲಕ್ಷ ರೂ. ಮಾತ್ರ ಆದಾಯ ಸಂಗ್ರಹವಾಗಿದೆ.

news18-kannada
Updated:July 6, 2020, 9:52 AM IST
ಕೊರೋನಾ ಎಫೆಕ್ಟ್: ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ ಮೇ- ಜೂನ್ ತಿಂಗಳಲ್ಲಿ 31 ಕೋಟಿ ರೂಪಾಯಿ ನಷ್ಟ
ಹುಬ್ಬಳ್ಳಿ ಸಾರಿಗೆ
  • Share this:
ಹುಬ್ಬಳ್ಳಿ(ಜು.06): ಕೋವಿಡ್-19‌ ಲಾಕ್ ಡೌನ್ ಭಾಗಶಃ ತೆರವಿನ ನಂತರ ಸರ್ಕಾರದ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ, ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಮೇ 19 ರಿಂದ ಸಾರ್ವಜನಿಕ‌ ಸಾರಿಗೆ ಪುನರಾರಂಭಗೊಂಡಿದೆ. ಆದರೆ ಕೊರೋನಾ ವೈರಾಣು ಸೋಂಕಿನ ಭೀತಿಯಲ್ಲಿರುವ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ಮೂಲಕ ದೂರ ಪ್ರಯಾಣ ಮಾಡಲು ಇನ್ನೂ ಮನಸ್ಸು ಮಾಡುತ್ತಿಲ್ಲ. ಹೀಗಾಗಿ  ವಾ.ಕ.ರ.ಸಾ. ಸಂಸ್ಥೆಯ ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ ಮೇ ತಿಂಗಳಲ್ಲಿ ಅಂದಾಜು 17 ಕೋಟಿ ರೂ. ಹಾಗೂ ಜೂನ್ ತಿಂಗಳಲ್ಲಿ 14 ಕೋಟಿ ರೂ. ಸಾರಿಗೆ ಆದಾಯ ನಷ್ಟ ಆಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್  ಘಟಕಗಳಲ್ಲಿ ಒಟ್ಟು 462 ಬಸ್ಸುಗಳು ಹಾಗೂ 2173 ಸಿಬ್ಬಂದಿಗಳಿದ್ದಾರೆ. ಲಾಕ್ ಡೌನ್ ಪೂರ್ವದಲ್ಲಿ  ಜಿಲ್ಲೆಯೊಳಗೆ, ಅಂತರ ಜಿಲ್ಲೆಗಳು ಹಾಗೂ ಅಂತರ ರಾಜ್ಯಗಳ ಪ್ರಮುಖ ಸ್ಥಳಗಳಿಗೆ ಯಾವುದೆ ನಿರ್ಬಂಧವಿಲ್ಲದೆ ಬಸ್ಸುಗಳು ಸಂಚರಿಸುತ್ತಿದ್ದವು. 419 ಅನುಸೂಚಿಗಳಲ್ಲಿ ಪ್ರತಿದಿನ 1.90 ಲಕ್ಷ ಕಿಲೊಮೀಟರುಗಳಷ್ಟು  ಕ್ರಮಿಸುತ್ತಿದ್ದವು. ವಿವಿಧ ರಿಯಾಯಿತಿ ಪಾಸು ಪ್ರಯಾಣಿಕರು ಸೇರಿದಂತೆ 1.30 ರಿಂದ 1.45 ಲಕ್ಷಗಳಷ್ಟು  ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರಗಳಷ್ಟು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಬೊಕ್ಕಸಕ್ಕೆ ನಿತ್ಯ 50 ರಿಂದ 55 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು.

ಅಬಕಾರಿ ಸಚಿವ ಎಚ್ ನಾಗೇಶ್ ತವರಿನಲ್ಲೇ ಲಾಕ್​ಡೌನ್ ನಿಯಮ ಉಲ್ಲಂಘನೆ; ಡಾಬಾದಲ್ಲಿ ಎಣ್ಣೆ ಪಾರ್ಟಿ ಮಾಡಿ ಉದ್ದಟತನ ತೋರಿದ ಯುವಕರು

ಆದರೆ ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ  ಮಾರ್ಚ್ 22 ರಿಂದ ಮೇ 18 ರವರೆಗೆ ಯಾವುದೇ ಬಸ್ಸು ರಸ್ತೆಗಿಳಿದಿರಲಿಲ್ಲ. ಸರ್ಕಾರದ ಅನುಮತಿ ಮೇರೆಗೆ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮೇ19ರಿಂದ  ಬಸ್ಸುಗಳ ಸಂಚಾರ ಪುನರಾರಂಭಗೊಂಡಿತು. ಆದರೆ ಪ್ರಯಾಣಿಕರು ಕಾದು ನೋಡುವ ತಂತ್ರಕ್ಕೆ  ಮೊರೆ ಹೋಗಿದ್ದಾರೆ. ಇದರಿಂದ ಬಸ್ ಸಂಚಾರ ಸಾರ್ವತ್ರಿಕವಾಗದೆ ಸಾಂಕೇತಿಕ ಕಾರ್ಯಾಚರಣೆಗಷ್ಟೇ  ಸೀಮಿತವಾಯಿತು. ಹೀಗಾಗಿ ತಿಂಗಳ ಕೊನೆಯವರೆಗೆ ಕೇವಲ 59 ಲಕ್ಷ ರೂ.ಗಳ ಆದಾಯ ಸಂಗ್ರಹವಾಗಿದ್ದು, ವಿಭಾಗಕ್ಕೆ 17 ಕೋಟಿ  ರೂ. ಗಳಷ್ಟು ಆದಾಯ ನಷ್ಟವಾಗಿದೆ.

ಜೂನ್ ತಿಂಗಳಲ್ಲಿ  ಪೂರ್ಣಪ್ರಮಾಣದಲ್ಲಿ ಬಸ್ಸುಗಳ ಕಾರ್ಯಾಚರಣೆಯನ್ನು  ಮಾಡಲು ಸಾರಿಗೆ ಸಂಸ್ಥೆ ಸಿದ್ಧವಿದ್ದರೂ ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ  ಜನರು ಸಾರ್ವಜನಿಕ ಸಾರಿಗೆ ಮೂಲಕ ದೂರಪ್ರಯಾಣ ಮಾಡಲು ಹಿಂಜರಿದರು. ತೀರಾ ಅಗತ್ಯವಿದ್ದವರು ಮಾತ್ರ ಬಸ್ಸುಗಳಲ್ಲಿ ಪರ ಊರುಗಳಿಗೆ ತೆರಳಿದರು. ತಮ್ಮ ಕೆಲಸ ಕಾರ್ಯಗಳನ್ನು ಕ್ಷಿಪ್ರವಾಗಿ ಮುಗಿಸಿಕೊಂಡು ಬಂದಷ್ಟೇ ವೇಗದಲ್ಲಿ ಮತ್ತೆ ಮನೆ ಸೇರಿದರು. ಪ್ರಯಾಣಿಕರ ಕೊರತೆಯಿಂದಾಗಿ  ಬಸ್ಸುಗಳ ಸಂಖ್ಯೆ  ಹೆಚ್ಚಿಸಲು ಸಾಧ್ಯವಾಗಲಿಲ್ಲ.

ಪ್ರತಿದಿನವೂ 180 ರಿಂದ 200 ಬಸ್ಸುಗಳನ್ನು ಘಟಕದಿಂದ ಹೊರತೆಗೆದು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಕಾಯ್ದುಕೊಂಡಿರುವಂತಾಯಿತು. ಸಂಜೆಯ ವೇಳೆಗೆ ದೂರ ಮಾರ್ಗದ  ಕೆಲವು ಬಸ್ಸುಗಳನ್ನು ಹೊರತುಪಡಿಸಿದರೆ ಇನ್ನುಳಿ ಬಸ್ಸುಗಳನ್ನು ಒಂದೆರಡು ಟ್ರಿಪ್ಪುಗಳ ಭಾಗಶಃ ಸಂಚಾರಕ್ಕಷ್ಟೇ ಸೀಮಿತಗೊಳಿಸಬೇಕಾದ ಅನಿವಾರ್ಯತೆ ಉದ್ಭವಿಸಿತು.ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿದಿನ  1.30 ರಿಂದ  1.45 ಲಕ್ಷ ಜನರು ಪ್ರಯಾಣಿಸಿದ್ದು 50 ರಿಂದ 55 ಲಕ್ಷ ರೂ  ಆದಾಯ ಸಂಗ್ರಹವಾಗಿತ್ತು. ಪ್ರಸ್ತುತ ನಿತ್ಯ 22 ರಿಂದ 23 ಸಾವಿರ ಜನರು ಮಾತ್ರ ಪ್ರಯಾಣಿಸುತ್ತಿದ್ದು 11ರಿಂದ 13 ಲಕ್ಷ ರೂ. ಮಾತ್ರ ಆದಾಯ ಸಂಗ್ರಹವಾಗಿದೆ.

ಹೀಗಾಗಿ ಆದಾಯ ಸಂಗ್ರಹಣೆಯಲ್ಲಿ ಶೇಕಡಾ  80 ರಷ್ಟು ಖೋತಾ ಆಗಿದೆ. ತಿಂಗಳಾಂತ್ಯಕ್ಕೆ 3.55 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, 14.00 ಕೋಟಿ ರೂ. ಆದಾಯ ನಷ್ಟ ಉಂಟಾಗಿರುತ್ತದೆ ಎಂದು ರಾಮನಗೌಡರ ತಿಳಿಸಿದ್ದಾರೆ.
Published by: Latha CG
First published: July 6, 2020, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading