ಬೆಳಗಾವಿಯಲ್ಲಿ ಬಿಮ್ಸ್​ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ: ಚಿಕಿತ್ಸೆ ಸಿಗದೇ 30 ವರ್ಷದ ಯುವತಿ ಸಾವು

ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ವರದಿಗಳು ಮೇಲಿಂದ ಮೇಲೆ ಹೊರ ಬರುತ್ತಲೇ ಇದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಇತ್ತ ಗಮನ ಹರಿಸಬೇಕಾಗಿದೆ.

ಬಿಮ್ಸ್​​ ಆಸ್ಪತ್ರೆ

ಬಿಮ್ಸ್​​ ಆಸ್ಪತ್ರೆ

  • Share this:
ಬೆಳಗಾವಿ(ಜು.19): ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಸಾವನ್ನಪ್ಪುವವರ ಸಂಖ್ಯೆಯೂ ಕೂಡ ಹೆಚ್ಚಿದೆ. ಇದುವರೆಗೂ ಬೆಳಗಾವಿ ಜಿಲ್ಲೆಯಾದ್ಯಂತ 932 ಜನರಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಅದರಲ್ಲಿ 435 ಜನರು ಗುಣಮುಖರಾಗಿದ್ದರೆ, 24 ಜನರ ಸಾವನ್ನಪ್ಪಿದ್ದಾರೆ.

ಇನ್ನು, 473 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಒಂದರ ಹಿಂದೆ ಇನ್ನೊಂದು ಆಸ್ಪತ್ರೆಯ ಸಿಬ್ಬಂದಿಗಳು ಯಡವಟ್ಟು ಮಾಡುತ್ತಿದ್ದಾರೆ. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಬ್ಬಂದಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಆಸ್ಪತ್ರೆಯ ಕೆಲ ಪ್ರಕರಣಗಳೆ ಸಾಕ್ಷಿಯಾಗಿವೆ. ಕಳೆದ ಎರಡು ದಿನಗಳ ಹಿಂದಷ್ಟೇ ಬಿಮ್ಸ್ ‌ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿತ್ತು. ಅಥಣಿ ತಾಲೂಕಿನ ಓರ್ವ ವೃದ್ದ ಲಿವರ್ ಬಾವು ಸಮಸ್ಯೆ ಹಿನ್ನೆಲೆಯಲ್ಲಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ ಶಸ್ತ್ರ ಚಿಕಿತ್ಸೆಗೆ ಬೆಡ್ ಖಾಲಿಯಿಲ್ಲ ಎಂದು ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ವೃದ್ದನಿಗೆ ಕೊರೋನಾ ಸೋಂಕು ಧೃಡಪಟ್ಟರೂ ಮೂರು‌‌ ದಿನದಿಂದ ಯಾವುದೇ ‌ಚಿಕಿತ್ಸೆ ನೀಡಿರಲಿಲ್ಲ. ಹೊಟ್ಟೆ ನೋವು‌ ತಾಳದೇ ಬಿದ್ದು, ಒದ್ದಾಡಿದ್ರು ಯಾವೊಬ್ಬ ಸಿಬ್ಬಂದಿಯ ಇತ್ತ ನೋಡಿರಲಿಲ್ಲ. ಕೊನೆಗೆ ವೃದ್ದ ಸರಿಯಾದ ಚಿಕಿತ್ಸೆ ಸಿಗದೆ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದ್ದ.

ಈ ಪ್ರಕರಣ ಮಾಸುವ ಮುನ್ನವೇ ಎರಡೇ ದಿನದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಪ್ರಕರಣಕ್ಕೆ 30 ವರ್ಷದ ಯುವತಿ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾಳೆ. ಕಾಗವಾಡ ತಾಲೂಕಿನ ಗ್ರಾಮವೊಂದರ 30 ವರ್ಷದ ಯುವತಿ ತೀವ್ರ ಮಧುಮೇಹದಿಂದ ಬಳಲುತ್ತಿದ್ದಳು. ಸಾಕಷ್ಟು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದರು ಯಾರು ಸಹ ಆಸ್ಪತ್ರೆಗೆ ದಾಖಲಿಸಿಕೊಂಡಿರಲಿಲ್ಲ. ಕೊನೆಗೆ ಅನಿರ್ವಾರ್ಯವಾಗಿ ಮೂರು ದಿನದ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು.

ಇದೇ ವೇಳೆ ಕೊರೋನಾ ಟೆಸ್ಟ್ ನಡೆಸಿದಾಗ ಸೋಂಕು ಇರೋದು ಪತ್ತೆಯಾಗಿತ್ತು. ಬಳಿಕ ಯುವತಿಯನ್ನ ಕೊರೋನಾ ವಾರ್ಡ್​ಗೆ ಶಿಪ್ಟ ಮಾಡಲಾಗಿತ್ತು. ಆದ್ರೆ ಕೊರೋನಾ ವಾರ್ಡ್​​ನಲ್ಲಿ ಯುವತಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ. ಮಧುಮೇಹ ಹಾಗೂ ಕೊರೋನಾದಿಂದಾಗಿ ಯುವತಿ ಎಷ್ಟೇ ನರಳಾಡಿದ್ರು ಯಾರು ಸಹ ಬಂದಿರಲಿಲ್ಲ. ಸಾಕಷ್ಟು ಉಸಿರಾಟದ ತೊಂದರೆ ಇದ್ರು, ಸರಿಯಾಗಿ ಆಕ್ಸಿಜನ್ ಕೂಡ ಕೊಟ್ಟಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಇನ್ನು, ಯುವತಿ ಸಾವನ್ನಪ್ಪುವ ಕೊನೆಯ ಕ್ಷಣದ ವಿಡಿಯೋ ಹೊರಗಡೆ ಬಂದಿದೆ. ನನಗೆ ಶುಗರ್ ಐತ್ರಿ ಯಾರಾದ್ರು ಬನ್ರಿ ಅಂತಾ ಹೇಳಿ ನರಳಿ ನರಳಿ ಮೃತಪಟ್ಟ ಯುವತಿಯ ಕೊನೆಯ ಘಳಿಗೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಡಿಸಿಎಂ ಕ್ಷೇತ್ರದ ‘ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ‘ಗೆ ಆರ್ಥಿಕ ಸಂಕಷ್ಟ: ಕ್ಯಾರೇ ಎನ್ನದ ಗೋವಿಂದ ಕಾರಜೋಳ

ಒಟ್ಟಿನಲ್ಲಿ ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ವರದಿಗಳು ಮೇಲಿಂದ ಮೇಲೆ ಹೊರ ಬರುತ್ತಲೇ ಇದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಇತ್ತ ಗಮನ ಹರಿಸಬೇಕಾಗಿದೆ.
Published by:Ganesh Nachikethu
First published: