ಚೆನ್ನೈ: ಇಲ್ಲಿನ ಸುದ್ದಿಸಂಸ್ಥೆಯೊಂದರ 24 ವರ್ಷದ ಪತ್ರಕರ್ತನಲ್ಲಿ ಕೊರೋನಾ ವೈರಸ್ ಕಂಡುಬಂದಿದ್ದು, ಈತನ 26 ಮಂದಿ ಸಹೋದ್ಯೋಗಿಗಳಲ್ಲೂ ಕೋವಿಡ್-19 ಸೋಂಕು ತಗುಲಿರುವುದು ಪರೀಕ್ಷೆಯಿಂದ ಮಂಗಳವಾರ ದೃಢಪಟ್ಟಿದೆ.
ರೊಯಪುರಂನ ಪೊಲೀಸ್ ಕ್ವಾರ್ಟಸ್ನಲ್ಲಿ 24 ವರ್ಷದ ಪತ್ರಕರ್ತ ವಾಸವಾಗಿದ್ದರು. ಚೆನ್ನೈನ ರೊಯಪುರಂನಲ್ಲಿ ತಮಿಳು ಟಿವಿಯನ್ನು ಸದ್ಯ ಸೀಲ್ಡ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ ರೊಯಪುರಂ ವಲಯದಲ್ಲಿ ಅತಿಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚೆನ್ನೈನಲ್ಲಿ ಈವರೆಗೂ 92 ಪ್ರಕರಣಗಳು ವರದಿಯಾಗಿವೆ.
ಪತ್ರಕರ್ತನಲ್ಲಿ ಕೊರೋನಾ ವೈರಸ್ ಪರೀಕ್ಷಾ ವರದಿ ಪಾಸಿಟಿವ್ ಬಂದ ಬಳಿಕ, ಅವರು ಕೆಲಸ ಮಾಡುವ ಸಂಸ್ಥೆಯಿಂದ 94 ಜನರ ಮಾದರಿಗಳನ್ನು ನಗರ ಪಾಲಿಕೆ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿತ್ತು. ಇದರಲ್ಲಿ 26 ಜನರಿಗೆ ಕೊರೋನಾ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಇನ್ನು ಕೆಲವು ಪರೀಕ್ಷಾ ವರದಿಗಳು ಬರಬೇಕಿದ್ದು, ಸೋಂಕಿತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಲಾಕ್ಡೌನ್ ತಂದ ಸಾವು; ಕಾಲ್ನಡಿಗೆಯಲ್ಲೇ 150 ಕಿಮೀ ಕ್ರಮಿಸಿದ 12 ವರ್ಷದ ಬಾಲಕಿ ಮೃತ
ಸುದ್ದಿಸಂಸ್ಥೆಯ 27 ಸಿಬ್ಬಂದಿಯನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇವರೊಂದಿಗೆ ಹೈರಿಸ್ಕ್ ಕಾಂಟ್ಯಾಕ್ಟ್ನಲ್ಲಿದ್ದವರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ