• ಹೋಂ
  • »
  • ನ್ಯೂಸ್
  • »
  • Corona
  • »
  • Pinarayi Vijayan: ಬಜೆಟ್​ನಲ್ಲಿ 20,000 ಕೋಟಿ ವಿಶೇಷ ಕೋವಿಡ್​ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ!

Pinarayi Vijayan: ಬಜೆಟ್​ನಲ್ಲಿ 20,000 ಕೋಟಿ ವಿಶೇಷ ಕೋವಿಡ್​ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ!

ಪಿಣರಾಯಿ ವಿಜಯನ್.

ಪಿಣರಾಯಿ ವಿಜಯನ್.

ಕೇರಳ ಬಜೆಟ್​ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿತರಿಸಲು 1,000 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂಬುದು ಗಮನಾರ್ಹವಾದ ವಿಚಾರ ಎನಿಸಿಕೊಂಡಿದೆ.

  • Share this:

ಕೊಚ್ಚಿ (ಜೂನ್​ 04); ದೇಶದಲ್ಲಿ ಕೊರೋನಾ ದಿನೇ ದಿನೇ ಹೆಚ್ಚುತ್ತಿದ್ದು, ಎಲ್ಲಾ ರಾಜ್ಯಗಳ ಪರಿಸ್ಥಿತಿ ಬಹುತೇಕ ಒಂದೇ ರೀತಿ ಇದೆ. ಕೊರೋನಾ ನಿಯಂತ್ರಣಕ್ಕಾಗಿ ಲಾಕ್​ಡೌನ್ ಸಹ ಘೋಷಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಇಡೀ ದೇಶ ಬಹುತೇಕ ಸ್ಥಬ್ಧವಾಗಿದೆ. ಪರಿಣಾಮ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರ ಬದುಕು ಹೇಳತೀರದಷ್ಟು ಅಸಹಬೀಯವಾಗಿ ಬದಲಾಗಿದೆ. ಹೀಗಾಗಿ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ ಅನೇಕ ರಾಜ್ಯಗಳು ಸಾವಿರಾರು ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುತ್ತಿದೆ. ಗುರುವಾರ ಸಹ ಕರ್ನಾಟಕ ಸರ್ಕಾರ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಇದರ ಬೆನ್ನಿಗೆ ಇಂದು ಕೇರಳ ವಿಧಾನಮಂಡಲ ಅಧಿವೇಶದಲ್ಲಿ ಪರಿಷ್ಕೃತ ಬಜೆಟ್ ಸಲ್ಲಿಸಿರುವ ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ 20,000 ಕೋಟಿ ರೂಪಾಯಿ ಮೊತ್ತದ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಅಲ್ಲದೆ, 150 ಮೆಟ್ರಿಕ್ ಟನ್ ಸಾಮರ್ಥ್ಯದ ದ್ರವ ವೈದ್ಯಕೀಯ ಆಮ್ಲಜನಕ ಘಟಕ, ಕೋವಿಡ್ ಲಸಿಕೆಗಳ ಖರೀದಿಗೆ 1,000 ಕೋಟಿ ರೂಪಾಯಿ ಮೀಸಲಿಡುವ ಮೂಲಕ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದಾರೆ.


ಕೇಂದ್ರ ಸರ್ಕಾರ ಕೊರೋನಾ ಸೋಂಕನ್ನು ನಿಯಂತ್ರಿಸಲು ಲಸಿಕೆಯನ್ನು ಕಡ್ಡಾಯಗೊಳಿಸಿದೆಯಾದರೂ ಉಚಿತವಾಗಿ ನೀಡಲು ಮುಂದಾಗಿಲ್ಲ. ಅಲ್ಲದೆ, ಅನೇಕ ರಾಜ್ಯಗಳಲ್ಲಿ ಜನರಿಗೆ ಉಚಿತ ಲಸಿಕೆ ನೀಡಬೇಕು ಎಂಬ ಒತ್ತಾಯ ಇದ್ದರೂ ಸಹ ಸರ್ಕಾರಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಕೇರಳ ವಿಧಾನಸಭೆಯಲ್ಲಿ 2021-22ರ ಹಣಕಾಸು ವರ್ಷದ ರಾಜ್ಯ ಬಜೆಟ್‌ನಲ್ಲಿ 20,000 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಅಲ್ಲದೆ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿತರಿಸಲು 1,000 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂಬುದು ಗಮನಾರ್ಹವಾದ ವಿಚಾರ ಎನಿಸಿಕೊಂಡಿದೆ.


ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಕೇರಳದಲ್ಲಿ ಸತತ ಎರಡನೇ ಬಾರಿ ಐತಿಹಾಸಿಕ ಗೆಲುವು ದಾಖಲಿಸಿ ಅಧಿಕಾರಕ್ಕೆ ಬಂದಿದೆ. ಪರಿಷ್ಕೃತ ಬಜೆಟ್‌ ಗಮನಾರ್ಹವಾಗಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಕೇರಳದ ಆರೋಗ್ಯ ಮತ್ತು ವೈದ್ಯಕೀಯ ಸಾಮರ್ಥ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.


ಕೋವಿಡ್, ಎಬೊಲಾ ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ. ಪ್ರತಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ.


"ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಆಮ್ಲಜನಕ ಪೂರೈಕೆ ಅಗತ್ಯವಾಗಿದೆ. 150 ಮೆಟ್ರಿಕ್ ಟನ್ ದ್ರವ ಆಮ್ಲಜನಕದ ಸ್ಥಾವರವನ್ನು ಸ್ಥಾಪಿಸಲಾಗುವುದು. 1,000 ಮೆಟ್ರಿಕ್ ಟನ್ ಸಾಮರ್ಥ್ಯದ ಟ್ಯಾಂಕ್ ಮತ್ತು ತುರ್ತು ಸಾಗಣೆಗೆ ಟ್ಯಾಂಕರ್ ಲಭ್ಯವಾಗಲಿದೆ. ಯೋಜನೆಯ ಆರಂಭಿಕ ಹಂತಕ್ಕೆ 25 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 14 ರೊಳಗೆ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ನಿರೀಕ್ಷೆಯಲ್ಲಿದ್ದೇವೆ" ಎಂದು ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.


ಇದನ್ನೂ ಓದಿ: Karnataka Weather: ಕರ್ನಾಟಕವನ್ನು ಪ್ರವೇಶಿಸಿದ ಮುಂಗಾರು: ಬೆಂಗಳೂರಲ್ಲಿ ವರುಣನ ಆರ್ಭಟ, ಇತರೆಡೆ ಸಾಮಾನ್ಯ!


ಸಾಂಕ್ರಾಮಿಕ ರೋಗದ ಪರಿಣಾಮದಿಂದ ರಾಜ್ಯದ ಹೆಚ್ಚಿನ ಜನರು ತತ್ತರಿಸುತ್ತಿದ್ದಾರೆ. ಹೀಗಾಗಿ ಯಾವುದೇ ಹೊಸ ತೆರಿಗೆಗಳನ್ನು ಘೋಷಿಸಿಲ್ಲ ಎನ್ನಲಾಗಿದೆ. 14.3 ಲಕ್ಷಕ್ಕೂ ಹೆಚ್ಚು ಅನಿವಾಸಿ ಕೇರಳಿಗರು ರಾಜ್ಯಕ್ಕೆ ಮರಳಿದ್ದಾರೆ. ಅವರಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡಲು 1,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.


ಇದನ್ನೂ ಓದಿ: Juhi Chawla: ಪ್ರಚಾರಕ್ಕಾಗಿ ಅರ್ಜಿ ಹಾಕಬೇಡಿ; 5ಜಿ ವಿರೋಧಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್


ದಿವಂಗತ ಹಿರಿಯ ರಾಜಕಾರಣಿ ಕೆ.ಆರ್.ಗೌರಿಯಮ್ಮ ಮತ್ತು ಬಾಲಕೃಷ್ಣ ಪಿಳ್ಳೈ ಅವರಿ ಸ್ಮರಣಾರ್ಥವಾಗಿ, ಎರಡು ಹೊಸ ಸ್ಮಾರಕಗಳನ್ನು ನಿರ್ಮಿಸಲು ತಲಾ 2 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: