ಬೆಂಗಳೂರು (ಏ.8): 21 ದಿನಗಳ ಲಾಕ್ಡೌನ್ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತರೂ ಕೊರೋನಾ ವೈರಸ್ ಅಟ್ಟಹಾಸ ಮಾತ್ರ ನಿಲ್ಲುವ ಲಕ್ಷಣ ಗೋಚರವಾಗಿಲ್ಲ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈಗ ರಾಜ್ಯದಲ್ಲಿ ಐದನೇ ಸಾವು ಸಂಭವಿಸಿದೆ.
ಕೊರೋನಾ ಸೋಂಕು ದೃಢಪಟ್ಟಿದ್ದ ಕಲಬುರ್ಗಿಯ ಮತ್ತೋರ್ವ ವ್ಯಕ್ತಿ ಇಂದು ಮೃತಪಟ್ಟಿದ್ದಾನೆ. ಈ ಮೂಲಕ ಕೊರೋನಾದಿಂದ ಕಲಬುರ್ಗಿಯಲ್ಲಿ ಮೃತಪಟ್ಟವರ ಸಂಖ್ಯೆ ಎರಡು ಹಾಗೂ ರಾಜ್ಯದ ಸಾವಿನ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.
ದೇಶದ ಮೊಟ್ಟ ಮೊದಲು ಸಾವು ಸಂಭವಿಸಿದ್ದು ಕಲಬುರ್ಗಿಯಲ್ಲಿ. ಹೊರ ದೇಶದಿಂದ ಬಂದ ವೃದ್ಧ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದ. ಇದಾದ ನಂತರ ಈ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗ ಈ ಭೀಕರ ವೈರಸ್ಗೆ ಮತ್ತೋರ್ವ ಬಲಿ ಆದಂತೆ ಆಗಿದೆ.
ಮಾರಣಾಂತಿಕ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರದ ಅಂತ್ಯಕ್ಕೆ ದೇಶದಲ್ಲಿ 150ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ 4,789 ಜನರಿಗೆ ಈ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 508 ಹೊಸ ಪ್ರಕರಣಗಳು ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಏಪ್ರಿಲ್ 14ರ ವರೆಗೆ 21 ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಈ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮತ್ತು ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಿರುವುದು ಮತ್ತಷ್ಟು ತಲೆನೋವಿಗೆ ಕಾರಣವಾಗಿದೆ. ಅಲ್ಲದೆ, ಲಾಕ್ಡೌನ್ ಅವಧಿ ಮುಂದುವರೆಯುವ ಸೂಚನೆಯನ್ನೂ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ