ಲಾಂಡ್ರಿ ಮಾಲೀಕನಿಗೆ ಕೊರೋನಾ ಸೋಂಕು; ಸೂರತ್‌ನಲ್ಲಿ 54,000 ಜನರನ್ನು ಕ್ವಾರಂಟೈನ್‌ನಲ್ಲಿಟ್ಟಿರುವ ಅಧಿಕಾರಿಗಳು

ಈ ಏರಿಯಾಗೆ ಜನರ ಪ್ರವೇಶವನ್ನು ನಿರ್ಬಂಧಿಸಿರುವ ಪೊಲೀಸರು ನಗರದ ನಾಲ್ಕೂ ದಿಕ್ಕುಗಳಲ್ಲಿ ಒಂದು ಕಿಲೋ ಮೀಟರ್‌ಗೆ ಬ್ಯಾರಿಕೇಡ್‌ಗಳನ್ನು ಅವಳವಡಿಸಿ ಬೃಹತ್ ಸರ್ಪಗಾವಲು ಹಾಕಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಸೂರತ್ (ಏಪ್ರಿಲ್ 03); ಗುಜರಾತ್ ರಾಜ್ಯದ ಸೂರತ್‌ನಲ್ಲಿ ಲಾಂಡ್ರಿ ಅಂಗಡಿ ಮಾಲೀಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸುಮಾರು 16,000 ಮನೆಯ 54,000 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಲಾಂಡ್ರಿಯ ಮಾಲೀಕ ಅಧಿಕ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಕಾರಣ ಅಧಿಕ ಜನರಿಗೆ ಈ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬೃಹತ್ ಕಾರ್ಯಾಚರಣೆಯಲ್ಲಿ ತೊಡಗಿರುವ ಗುಜರಾತ್ ಆರೋಗ್ಯ ಇಲಾಖೆ ಈ ಎಲ್ಲಾ ಮನೆಗಳನ್ನೂ ಸಂಪರ್ಕ ತಡೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಲಾಂಡ್ರಿ ಕಾರ್ಯ ನಿರ್ವಹಿಸುತ್ತಿದ್ದ ಏರಿಯಾದಲ್ಲಿ 12 ಆಸ್ಪತ್ರೆಗಳು, 23 ಮಸೀದಿಗಳು, 22 ಮುಖ್ಯರಸ್ತೆಗಳು ಹಾಗೂ 82 ಆಂತರಿಕ ರಸ್ತೆಗಳಿದ್ದು ಈ ಇಡೀ ವಲಯವನ್ನು ಪೊಲೀಸರು ಸ್ಯಾನಿಟೈಸ್ ಮೂಲಕ ಸ್ವಚ್ಚಗೊಳಿಸಿದ್ದಾರೆ ಎಂದು ವರದಿಯಾಗಿದೆ.

ನಗರದ ಜನನಿಬಿಡ ವಲಯದ 16,785 ಮನೆಗಳನ್ನು ಪುರಸಭೆ ನಿಗಮವು ಸ್ವಚ್ಚಗೊಳಿಸಿದೆ. ಅಲ್ಲದೆ, 55 ತಂಡಗಳು 16,785 ಮನೆಗಳಲ್ಲಿ ಆರೋಗ್ಯ ಕುರಿತ ಮನೆ-ಮನೆ ಸಮೀಕ್ಷೆ ನಡೆಸಿದ ನಂತರ 54,003 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲು ನಿರ್ಧರಿಸಲಾಗಿದೆ.

ಅಲ್ಲದೆ, ಈ ಏರಿಯಾಗೆ ಜನರ ಪ್ರವೇಶವನ್ನು ನಿರ್ಬಂಧಿಸಿರುವ ಪೊಲೀಸರು ನಗರದ ನಾಲ್ಕೂ ದಿಕ್ಕುಗಳಲ್ಲಿ ಒಂದು ಕಿಲೋ ಮೀಟರ್‌ಗೆ ಬ್ಯಾರಿಕೇಡ್‌ಗಳನ್ನು ಅವಳವಡಿಸಿ ಬೃಹತ್ ಸರ್ಪಗಾವಲು ಹಾಕಿದ್ದಾರೆ.

ಸೋಂಕಿಗೆ ಒಳಗಾಗಿರುವ 67 ವರ್ಷದ ವ್ಯಕ್ತಿಯ ಜೊತೆಗೆ ಅವರ ಪತ್ನಿ, ಸೋದರಳಿಯ, ಅವರ ಸೋದರ ಮಾವ ಮತ್ತು ಲಾಂಡ್ರಿ ಸಿಬ್ಬಂದಿ ಸದಸ್ಯರನ್ನು ಸಹ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಅಲ್ಲದೆ, ಅಧಿಕಾರಿಗಳು ಸಮೀಕ್ಷೆ ನಡೆಸುವ ಸಲುವಾಗಿ ಈ ಲಾಂಡ್ರಿ ಕಂಪೆನಿಯ ಎಲ್ಲಾ ಗ್ರಾಹಕರ ಹೆಸರನ್ನೂ ಪಡೆದಿದ್ದಾರೆ. ಈ ಏರಿಯಾ ಅಲ್ಲದೆ ಗ್ರಾಹಕರು ಬೇರೆಡೆ ಇದ್ದರೂ ಸಹ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ಧಾರೆ.

ಇದನ್ನೂ ಓದಿ : ಲಾಕ್‌ಡೌನ್‌ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ದಿನಸಿ ಅಂಗಡಿಗಳು ಸೀಜ್; ಜನಪರ ನಿಂತ ಮೈಸೂರಿನ ಜಿಲ್ಲಾಡಳಿತ
First published: