ಚಾಮರಾಜನಗರದ ಈ ಗ್ರಾಮಕ್ಕೆ ಹೊರಗಿನವರು ಬಂದರೆ 14 ದಿನ ಕ್ವಾರಂಟೈನ್ ಕಡ್ಡಾಯ!

ಗ್ರಾಮದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ 100 ರೂಪಾಯಿ ದಂಡ ವಿಧಿಸಲಾಗುವುದು ಎಂದು ಒಕ್ಕೊರಲ ನಿರ್ಧಾರ ಕೈಗೊಂಡು ಡಂಗೂರ ಸಾರಿಸಲಾಗಿದೆ.

news18-kannada
Updated:July 16, 2020, 2:25 PM IST
ಚಾಮರಾಜನಗರದ ಈ ಗ್ರಾಮಕ್ಕೆ ಹೊರಗಿನವರು ಬಂದರೆ 14 ದಿನ ಕ್ವಾರಂಟೈನ್ ಕಡ್ಡಾಯ!
ಮುಳ್ಳೂರು ಗ್ರಾಮದ ಮುಖಂಡರು
  • Share this:
ಚಾಮರಾಜನಗರ (ಜು. 16): ಗ್ರಾಮಕ್ಕೆ ಹೊರಗಿನಿಂದ ಯಾರೇ ಬರಲಿ, ಕೊರೋನಾ ಇಲ್ಲ ಎಂಬ ದೃಢೀಕರಣ ಪತ್ರ ತರಬೇಕು, ಇಲ್ಲದಿದ್ದರೆ ಗ್ರಾಮದ  ಹೊರವಲಯದಲ್ಲಿರುವ  ಸರ್ಕಾರಿ ಪ್ರೌಢಶಾಲಾ ಕಟ್ಟಡದಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನಲ್ಲಿ ಇರಬೇಕು ಅಂತಹವರಿಗೆ ಗ್ರಾಮದ ವತಿಯಿಂದಲೇ ಊಟ-ತಿಂಡಿ ಒದಗಿಸಲಾಗವುದು. ಕ್ವಾರಂಟೈನ್ ನಲ್ಲಿ  ಇರುವಾಗಲೇ ಕೊರೋನಾ ಪರೀಕ್ಷೆಗೆ ಒಳಪಡಬೇಕು ಎಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮಸ್ಥರು ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.

ಕೊಳ್ಳೇಗಾಲ ತಾಲೂಕಿನಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಮೂವರು ಸಾವನ್ನಪ್ಪಿದ್ದಾರೆ. ಹಾಗಾಗಿ  ಮುಳ್ಳೂರು ಗ್ರಾಮಸ್ಥರು ಕೋಮುವಾರು ಸಭೆ ನಡೆಸಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಗ್ರಾಮಕ್ಕೆ ಯಾರೇ ಅಕ್ಕಪಕ್ಕದ ಹಳ್ಳಿಗಳಿಂದ  ಅಥವಾ ಮೈಸೂರು, ಬೆಂಗಳೂರಿನಿಂದ ಬಂದರೆ ಗ್ರಾಮದ ಮುಖಂಡರಿಗೆ  ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅಂತಹವರನ್ನು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲಾ ಕಟ್ಟಡದಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಪಡಿಸಬೇಕು. ಅವರಿಗೆ ಗ್ರಾಮದ ವತಿಯಿಂದಲೇ ಊಟ-ತಿಂಡಿ ಒದಗಿಸಬೇಕು ಎಂದು ನಿರ್ಧರಿಸಿದ್ದಾರೆ.

ಮುಳ್ಳೂರು ಗ್ರಾಮದಲ್ಲಿ  10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ಸಾಕಷ್ಟಿವೆ. ಸಂಜೆ ವೇಳೆ ಅಂಗಡಿ ಮುಂಗಟ್ಟುಗಳ ಮುಂದೆ ಹೋಟೆಲ್ ಗಳ ಮುಂದೆ ಜನ ಸೇರುವುದರಿಂದ  ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ಮಾತ್ರ ತೆರೆಯಬೇಕು ಎಂದು ಸಹ ಸ್ವಯಂ ನಿರ್ಣಯ ಕೈಗೊಂಡಿದ್ದಾರೆ.  ಗ್ರಾಮದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ 100 ರೂಪಾಯಿ ದಂಡ ವಿಧಿಸಲಾಗುವುದು ಎಂದು ಒಕ್ಕೊರಲ ನಿರ್ಧಾರ ಕೈಗೊಂಡು ಡಂಗೂರ ಸಾರಿಸಲಾಗಿದೆ.

ಕೊರೋನಾ ಹರಡದಂತೆ ಮುಂಜಾಗ್ರತೆ ಕೈಗೊಳ್ಳುವಲ್ಲಿ ನಗರಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೆ ಹೆಚ್ಚಿನ ಜಾಗೃತಿ ಮೂಡುತ್ತಿದೆ. ಅದರಲ್ಲೂ ಗಡಿ  ಭಾಗದ ಚಾಮರಾಜನಗರ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಗ್ರಾಮಸ್ಥರು ಕೊರೋನಾ ಸೋಂಕು ಹರಡದಂತೆ ಹಲವಾರು ರೀತಿಯಲ್ಲಿ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಹೊರಗಿನಿಂದ ಬಂದವರಿಗೆ ಪ್ರವೇಶ ನಿರ್ಬಂಧ, ಅಪ್ಪಿ ತಪ್ಪಿ ಬಂದರೆ ದಂಡ ವಿಧಿಸುವುದು, ಹೊರಗಿನವರಿಗೆ ಕ್ಷೌರ ಮಾಡುವುದು ನಿಷೇಧ , ಗ್ರಾಮದ ರಸ್ತೆಗಳಿಗೆ ಹೊರಗಿನವರು  ಬಾರದಂತೆ ರಸ್ತೆಗಳಿಗೆ ಬೇಲಿ ಹಾಕುವುದು ಹೀಗೆ ಹಲವಾರು ರೀತಿಯಲ್ಲಿ ಸ್ವಯಂ ರಕ್ಷಣಾ ಕ್ರಮಗಳಿಗೆ ಮುಂದಾಗಿದ್ದಾರೆ.

ಇದೀಗ ಮುಳ್ಳೂರು ಗ್ರಾಮಸ್ಥರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊರಗಿನಿಂದ  ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಲು ನಿರ್ಧರಿಸಿರುವುದಲ್ಲದೆ, ಗ್ರಾಮದ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ ಮಾಡುವ ಮೂಲಕ ಮುಂಜಾಗ್ರತೆ ವಹಿಸಿರುವುದು ವಿಶೇಷವಾಗಿದೆ.
Published by: Latha CG
First published: July 16, 2020, 2:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading