ಛತ್ತೀಸ್ಘಡ (ಏಪ್ರಿಲ್ 21); ರಾಷ್ಟ್ರವ್ಯಾಪಿ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ತೆಲಂಗಾಣದಿಂದ ಛತ್ತೀಸ್ಘಡ ರಾಜ್ಯದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲೇ ಹೊರಟಿದ್ದ 12 ವರ್ಷದ ಬಾಲಕಿ ಜಾಮ್ಲೊ ಮಕ್ಡಾಮ್ ಸತತ 150 ಕಿಮೀ ಕ್ರಮಿಸಿದ ನಂತರ ಇಂದು ನಿರ್ಜಲೀಕರಣ ಮತ್ತು ಅಪೌಷ್ಠಿಕತೆಯಿಂದಾಗಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಛತ್ತೀಸ್ಘಡದಿಂದ ತೆಲಂಗಾಣಕ್ಕೆ ಮೆಣಸಿನಕಾಯಿ ಹೊಲದಲ್ಲಿ ಕೆಲಸ ಮಾಡಲು ಬಂದಿದ್ದ ಕುಟುಂಬಕ್ಕೆ ಲಾಕ್ಡೌನ್ ಬದುಕು ಸಾಗಿಸುವುದೇ ಕಷ್ಟವಾಗಿದೆ. ಹೀಗಾಗಿ ಕಳೆದ ಏಪ್ರಿಲ್ 15 ರಂದು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ 11 ಜನರೊಂದಿಗೆ ಈ ಕುಟುಂಬ ದೀರ್ಘ ಪ್ರಯಾಣಕ್ಕೆ ಮುಂದಾಗಿದೆ.
ಕಳೆದ 5 ದಿನಗಳಿಂದ ಕಾಡು ದಾರಿಯಲ್ಲಿ ಕ್ರಮಿಸಿದ್ದ ಈ ತಂಡ ಇಂದು ಹೆದ್ದಾರಿಗೆ ಆಗಮಿಸಿತ್ತು. ಆದರೆ, ತನ್ನ ಹಳ್ಳಿಗೆ ಇನ್ನೂ ಕೇವಲ 14 ಕಿಮೀ ದೂರದಲ್ಲಿ ಇದ್ದ ವೇಳೆ ನತದೃಷ್ಟ ಬಾಲಕಿ ಮೃತಪಟ್ಟಿದ್ದಾಳೆ.
ಕಳೆದ ಶನಿವಾರ ಮಧ್ಯಾಹ್ನವೇ ಬಾಲಕಿಯ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಆದರೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ಆಕೆ ಮೃತಪಟ್ಟಿದ್ದು ಕೊನೆಗೆ ಆಂಬ್ಯುಲೆನ್ಸ್ ಮೂಲಕ ಆಕೆಯ ಮೃತ ದೇಹವನ್ನು ಮನೆಗೆ ಸಾಗಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವೈದ್ಯರು, “ಆಕೆಯಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಕಂಡು ಬಂದಿಲ್ಲ. ಆದರೆ, ತೀವ್ರವಾದ ನಿರ್ಜಲೀಕರಣ ಮತ್ತು ಅಪೌಷ್ಠಿಕತೆ ಆಕೆಯ ಸಾವಿಗೆ ಕಾರಣ” ಎಂದು ತಿಳಿಸಿದ್ದಾರೆ.
ಮೃತ ಬಾಲಕಿಯ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ ನೀಡುವುದಾಗಿ ಛತ್ತೀಸ್ಘಡ ಸರ್ಕಾರ ತಿಳಿಸಿದೆ. ಆದರೆ, ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಇಂತಹ ಸಾವಿರಾರು ವಲಸೆ ಕಾರ್ಮಿಕ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವುದಾಗಿ ತಿಳಿಸಿದ್ದ ಯಾವ ಸರ್ಕಾರಗಳು ಈ ವರೆಗೆ ಅಂತಹ ಕೆಲಸಕ್ಕೆ ಮುಂದಾಗಿಲ್ಲ. ಪರಿಣಾಮ ದೇಶದಲ್ಲಿ ಮತ್ತೊಂದು ಸಾವು ಸಂಭವಿಸಿದೆ.
ಈ ಹಿಂದೆ ಗಂಗಮ್ಮ ಎಂಬ ಕಾರ್ಮಿಕ ಮಹಿಳೆ ತನ್ನ ಸ್ವಗ್ರಾಮಕ್ಕೆ ಮರಳಲು ನೂರಾರು ಕಿಮೀ ಕ್ರಮಿಸಿ ಕೊನೆಗೆ ಕರ್ನಾಟಕದ ರಾಯಚೂರಿನಲ್ಲಿ ಮೃತಪಟ್ಟಿದ್ದನ್ನು ಹಾಗೂ ದೆಹಲಿಯಿಂದ ಸಾವಿರಾರು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ಉತ್ತರಪ್ರದೇಶ, ಬಿಹಾರಕ್ಕೆ ಕ್ರಮಿಸಿದ್ದು. ಈ ವೇಳೆ ತಾಯಿಯೊಂದು ತನ್ನ ಮಗುವಿನ ಮೃತ ದೇಹವನ್ನು ಹೊತ್ತು ನಡೆದದ್ದನ್ನು ಭಾಗಶಃ ಭಾರತೀಯರು ಮರೆತಿರಲಿಕ್ಕಿಲ್ಲ.
ಇದನ್ನೂ ಓದಿ : ಲಾಕ್ಡೌನ್ ಎಫೆಕ್ಟ್: ದೆಹಲಿಯಿಂದ 200 ಕಿ.ಮೀ. ನಡೆದ ವ್ಯಕ್ತಿ ಮನೆ ತಲುಪುವ ಮುನ್ನವೇ ಸಾವು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ