ತಿರುಪತಿ (ಆಂಧ್ರಪ್ರದೇಶ) ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡು ರಾಜ್ಯದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ರೋಗಿಗಳು ಅಸುನೀಗಿದ ದುರಂತ ಘಟನೆ ಇನ್ನು ಹಸಿಹಸಿಯಾಗಿರುವಾಗಲೇ ಪಕ್ಕದ ರಾಜ್ಯದಲ್ಲಿ ಅದೇ ರೀತಿಯ ದುರ್ಘಟನೆ ಸಂಭವಿಸಿದೆ. ಆಂಧ್ರಪ್ರದೇಶದ ತಿರುಪತಿಯ ಎಸ್ವಿಆರ್ಆರ್ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ರೋಗಿಗಳು ಮೃತಪಟ್ಟಿದ್ದಾರೆ. ಪ್ರಸ್ತುತ ಈಗಲೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತರುವ 13 ರೋಗಿಗಳ ಪರಿಸ್ಥಿತಿ ಗಂಭೀರವಾಗಿದೆ.
ರೋಗಿಗಳು ಐಸಿಯುನಲ್ಲಿ ಉಸಿರಾಟ ಸಮಸ್ಯೆ ಎದುರಿಸಿದಾಗ ಗಾಬರಿಗೊಂಡ ಸಂಬಂಧಿಕರು ಐಸಿಯು ಒಳಗೆ ಧಾಮಿಸಿ ಕೃತಕವಾಗಿ ಬೀಸಣಿಕೆಗಳಿಂದ ಗಾಳಿ ಬೀಸಿದರು. ಆಸ್ಪತ್ತೆ ಬೆಡ್ಗಳ ಮೇಲೆ ರೋಗಿಗಳು ನಿರ್ಜೀವವಾಗಿ ಮಲಗಿದ್ದರು. ಹೈಪರ್ವೆಂಟಿಲೆಟರಿಂಗ್ ಹಾಸಿಗೆ ಪಕ್ಕದಲ್ಲಿದ್ದ ಅರ್ಧ ಖಾಲಿಯಾದ ಆಮ್ಲಜನಕ ಸಿಲಿಂಡರ್‌ಗಳನ್ನು ಖಾಲಿಯಾದ ಬೆಡ್ಗಳಿಗೆ ಅಳವಡಿಸಲು ಆಸ್ಪತ್ರೆ ಸಿಬ್ಬಂದಿ ಹೆಣಗಾಡಿದರು. ಸುಮಾರು 45 ನಿಮಿಷಗಳ ಕಾಲ ಆಮ್ಲಜನಕ ಇಲ್ಲದೆ ರೋಗಿಗಳು ಪರದಾಡಿದ್ದರು.
“ಆಮ್ಲಜನಕವಿಲ್ಲ, ಹಾಸಿಗೆಗಳಿಲ್ಲ, ಚುಚ್ಚುಮದ್ದು ಇಲ್ಲ. ನನ್ನ ತಾಯಿ ಕಳೆದ 30 ನಿಮಿಷದಿಂದ ಉಸಿರಾಡಲು ಕಷ್ಟಪಡುತ್ತಿದ್ದಾರೆ. ಆದರೂ ಯಾವುದೇ ಆಸ್ಪತ್ರೆಯ ಸಿಬ್ಬಂದಿ ನಮಗೆ ಸಹಾಯ ಮಾಡುತ್ತಿಲ್ಲ "ಎಂದು ರೋಗಿಯ ಮಗ ಹೇಳಿದರು.
ಐದರಿಂದ ಹತ್ತು ನಿಮಿಷಗಳವರೆಗೆ ಮಾತ್ರ ಆಮ್ಲಜನಕದ ಪೂರೈಕೆಯಲ್ಲಿ ಅಡ್ಡಿ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಕರ್ತವ್ಯದಲ್ಲಿದ್ದ ವೈದ್ಯರು ತೋರಿಸಿದ ಜಾಗರೂಕತೆಯಿಂದ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣನ್ ಹೇಳಿದ್ದಾರೆ. ಆಮ್ಲಜನಕದ ಒತ್ತಡದಲ್ಲಿ ಕುಸಿತ ಕಂಡುಬಂದಿದೆ. ಆದರೆ ದುರಂತವನ್ನು ತಪ್ಪಿಸಲು ನಾವು ತಕ್ಷಣ ಬೃಹತ್ ಆಮ್ಲಜನಕ ಸಿಲಿಂಡರ್‌ಗಳನ್ನು ಸ್ಥಾಪಿಸಿದ್ದೇವೆ. ಆದರೆ 11 ಜನರು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ ಎಂದಿದ್ದಾರೆ.
ಇದನ್ನು ಓದಿ: ಚಂದ್ರನ ಅಂಗಳಕ್ಕೆ ವಸ್ತುವೊಂದನ್ನು ಕಳುಹಿಸಿದ ವಿಶ್ವದ ಮೊದಲ ಬಾಲಕಿ; ಇಂಗ್ಲೆಂಡ್ ಪುಟಾಣಿಯ ಅದ್ಭುತ ಸಾಧನೆ
ಚೆನ್ನೈನಿಂದ ಆಮ್ಲಜನಕ ಟ್ಯಾಂಕರ್ ಸುಮಾರು 2 ಗಂಟೆಗಳ ವಿಳಂಬದ ನಂತರ ಆಸ್ಪತ್ರೆಗೆ ತಲುಪಿದೆ ಎಂದು ನ್ಯೂಸ್ 18ಗೆ ತಿಳಿದುಬಂದಿದೆ. ಆದರೆ ಆ ಹೊತ್ತಿಗೆ, ಬಹುತೇಕ ಬಫರ್ ಸ್ಟಾಕ್ ಖಾಲಿಯಾಗಿದೆ. ಪುನರ್ಭರ್ತಿ ಪ್ರಕ್ರಿಯೆಗೆ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಆಮ್ಲಜನಕದ ಹರಿವಿನಲ್ಲಿ ತಾತ್ಕಾಲಿಕ ಅಡ್ಡಿ ಉಂಟಾಗಿದೆ. ಹೀಗಾಗಿ ಐಸಿಯುನಲ್ಲಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ರೋಗಿಗಳ ಸಾವಿಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ