ಬೆಂಗಳೂರು (ಜುಲೈ 14); ಕೊರೋನಾ ನಿಯಂತ್ರಿಸುವ ಸಲುವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ನಾಳೆಯಿಂದ ಒಂದು ವಾರಗಳ ಕಾಲ ಲಾಕ್‌ಡೌನ್ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಎರಡು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಸಂಬಂಧ ಪೊಲೀಸ್ ಇಲಾಕೆ ಸಜ್ಜಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿರುವ ಪ್ರವೀಣ್ ಸೂದ್ ನಿನ್ನೆ ಹಿರಿಯ ಆಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ್ದಾರೆ.
ಲಾಕ್‌ಡೌನ್ ಅನ್ನು ಯಶಸ್ವಿಯಾಗಿ ಚಾಲ್ತಿಗೆ ತರುವ ಉದ್ದೇಶದಿಂದ ಒಂದು ವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಪ್ರವೇಶಿಸುವ ಗಡಿ ಭಾಗದ ರಸ್ತೆಗಳನ್ನು ಬಂದ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದಲೇ ಬೆಂಗಳೂರು ಪ್ರವೇಶಿಸುವ ಗಡಿ ಭಾಗಗಳು ಬಂದ್ ಅಗಲಿದ್ದು ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲು ಪೊಲೀಸ್ ಇಲಾಖೆ ತಯಾರಿ ನಡೆಸಿದೆ. ಅದರೆ, ತುರ್ತು ಸೇವೆಗಳು ಮತ್ತು ಆರೋಗ್ಯ, ದಿನಸಿ ವಸ್ತುಗಳು, ಹಾಲು, ತರಕಾರಿ ಹಣ್ಣು ಹಂಪಲು ಮತ್ತು ಅವಶ್ಯಕ ವಸ್ತುಗಳಿಗಷ್ಟೆ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ದಿನ ಬಳಕೆಯ ಅಗತ್ಯ ವಸ್ತುಗಳ ಖರೀದಿಗಷ್ಟೆ ಜನ ಮನೆಯಿಂದ ಹೊರ ಬರಬೇಕು. ಉಳಿದಂತೆ ಯಾರು ಸಹ ಸುಖಾಸುಮ್ಮನೆ ಓಡಾಡುವಂತಿಲ್ಲ. ವಾಹನಗಳು ಸಹ ಅನಗತ್ಯವಾಗಿ ಓಡಾಡಿದರೇ ಅಂತವರ ಮೇಲೆ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
ಅಲ್ಲದೆ, ಇಂದು ರಾತ್ರಿ 8 ರಿಂದ ಜುಲೈ 22ರ ಬೆಳಗ್ಗೆ 5 ರವರೆಗೆ ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲು ಪೊಲೀಸರು ತೀರ್ಮಾನಿಸಿದ್ದಾರೆ. ಎರಡು ಜಿಲ್ಲೆಯಲ್ಲಿ ಕಂಪ್ಲೀಟ್ ನಿರ್ಬಂಧ ಹೇರಿರುವ ಡಿಜಿಪಿ ಪ್ರವೀಣ್ ಸೂದ್, ಭದ್ರತೆಗೆ ಸಿಬ್ಬಂದಿಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೊಲೀಸರಲ್ಲೂ ಕೊರೋನಾ ಸೋಂಕು ಕಂಡು ಬಂದಿದ್ದು. ನಗರದಲ್ಲಿ ಸುಮಾರು 500ಕ್ಕೂ ಅಧಿಕ ಪೊಲೀಸರು ಈ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಸಂಪರ್ಕದಿಂದ ಸುಮಾರು 800ಕ್ಕು ಹೆಚ್ಚು ಪೊಲೀಸರು ಕ್ವಾರಂಟೈನ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ