ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ (Karnataka Assembly Elections) ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ಈ ಬಾರಿ ಯಾರು ಚುನಾವಣೆಗೆ (Karnataka Politics) ಸ್ಪರ್ಧಿಸುತ್ತಾರೆ? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ರಾಜ್ಯದ ಯಾವುದೇ ಊರಿಗೇ ಹೋದರೂ ಈಗ ಇದೇ ಪ್ರಶ್ನೆ! ಅಭ್ಯರ್ಥಿಗಳಾಗಿ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳ ಭರಪೂರ ಭರವಸೆ, ಪ್ರಚಾರದ ಓಡಾಟ. ಈ ಎಲ್ಲದರ ನಡುವೆ ರಾಜ್ಯದಲ್ಲಿ ಹೊಸ ಟ್ರೆಂಡ್ ಒಂದು ಸೃಷ್ಟಿಯಾಗುತ್ತಿದೆ.
ರಾಜ್ಯದ (Karnataka Elections 2023) ಎಷ್ಟೋ ಗ್ರಾಮಗಳಿಗೆ ಇನ್ನೂ ಸಿಗದ ಮೂಲಭೂತ ಸೌಲಭ್ಯಗಳು, ಒಂದು ಕಿವಿಯಲ್ಲಿ ಚುನಾವಣಾ ಪ್ರಣಾಳಿಕೆ, ಭರವಸೆ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡುವುದೇ ಪ್ರತಿವರ್ಷದ ರೂಢಿ! ಇದರಿಂದ ಬೇಸತ್ತ ಮತದಾರರು ಜನಪ್ರತಿನಿಧಿಗಳಿಗೆ ಬುದ್ಧಿ ಕಲಿಸಲು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬಂಡೆದ್ದ ಜನತೆ
ಹೌದು, ಚುನಾವಣಾ ಬಹಿಷ್ಕಾರದ ಹಲವು ಬೋರ್ಡ್ಗಳು ರಾಜ್ಯದ ಅಲ್ಲಲ್ಲಿ ಕಂಡುಬರುತ್ತಿವೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಶಂಕರಕೊಡಿಗೆ, ತನೂಡಿ ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕಾರದ ಬೋರ್ಡ್ ಬಿದ್ದಿದೆ.
ಮುಖ್ಯಮಂತ್ರಿವರೆಗೆ ಮನವಿ ನೀಡಿದ್ರೂ ಪ್ರಯೋಜನವಿಲ್ಲ
ಸೋಮೇಶ್ವರಖಾನ್ನಿಂದ ಶಂಕರಕೊಡಿಗೆವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 14 ವರ್ಷಗಳಿಂದ ಯಾವುದೇ ದುರಸ್ಥಿ ಕಂಡಿಲ್ಲ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಹಿಂದೆ ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿಯವರೆಗೂ ಮನವಿ ಸಲ್ಲಿಸಲಾಗಿತ್ತು. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ.
ರಸ್ತೆಗೆ ಡಾಂಬರು ಬೀಳೋವರೆಗೂ ಕೇಳೋಕ್ ಬರ್ಬೇಡಿ!
ಅಲ್ಲದೇ, ಗ್ರಾಮಸ್ಥರ ಮನವಿಗೆ ಯಾವುದೇ ಸ್ಪಂದನೆಯೂ ಸಿಕ್ಕಿಲ್ಲ. ಈ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಡಾಂಬರೀಕರಣ ಆಗೋವರೆಗೂ ಮತದಾನ ಮಾಡಲ್ಲ ಎಂದು ಗ್ರಾಮಸ್ಥರು ಬ್ಯಾನರ್ ಹಾಕಿದ್ದಾರೆ. ಕಳಸ ತಾಲೂಕಿನ ಶಂಕರಕೊಡಿಗೆ, ಬಚ್ಚಿನಕೊಡಿಗೆ, ಬಾನಡ್ಲು ಮತ್ತು ಹಡ್ಲು ಭಾಗದ ಎಲ್ಲ ಗ್ರಾಮಸ್ಥರೂ ಒಟ್ಟಾಗಿ ಚುನಾವಣಾ ಬಹಿಷ್ಕಾರ ನಿರ್ಣಯ ಕೈಗೊಂಡಿದ್ದಾರೆ.
ರಾಜಿ ಸಂಧಾನಗಳಿಗೆ ಅವಕಾಶವೂ ಇಲ್ಲ
ಅಷ್ಟೇ ಅಲ್ಲ, ರಸ್ತೆ ಸಂಪೂರ್ಣ ದುರಸ್ಥಿಯಾಗುವವರೆಗೂ ಯಾವುದೇ ರೀತಿಯಲ್ಲೂ ಮನವೊಲಿಕೆಗೆ ನಾವು ಒಪ್ಪಲ್ಲ, ರಾಜಿ ಸಂಧಾನಗಳಿಗೆ ಅವಕಾಶವೂ ಇಲ್ಲ ಎಂದು ಈ ಭಾಗದ ಗ್ರಾಮಸ್ಥರು ದೃಢ ನಿರ್ಧಾರ ಮಾಡಿದ್ದಾರೆ.
ಹಾಡುಗಾರು ಗ್ರಾಮಸ್ಥರದ್ದೂ ಇದೇ ಮಾತು!
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಗ್ರಾಮವೊಂದರ ನಾಗರಿಕರೂ ಇಂತಹದೇ ನಿರ್ಣಯ ಮಾಡಿದ್ದಾರೆ. ಕೊಪ್ಪ ತಾಲೂಕಿನ ಹೇರೂರಿನ ಹಾಡುಗಾರು ಗ್ರಾಮದ ಜನತೆ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದೆ.
ಇದನ್ನೂ ಓದಿ: Bhaira Elephant: ಅರಣ್ಯ ಇಲಾಖೆ-ಜನರ ನಡುವೆ 'ಆನೆ' ಕದನ! ಭೈರನ ವಿಚಾರದಲ್ಲಿ ಭಾರೀ ಅನುಮಾನ
ನೀವೇನೇ ಹೇಳಿ, ನಾವು ಮತ ಹಾಕಲ್ಲ ಕಣ್ರೀ!
ಊರಿನ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆಗಳ ನಿರ್ಮಾಣ ಕಾಮಗಾರಿಗೆ ಗಮನ ಹರಿಸದ ರಾಜಕಾರಣಿಗಳು ಹಾಗೂ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸಿ ಹಾಡುಗಾರು ಗ್ರಾಮಸ್ಥರು ಮತ ಹಾಕದಿರಲು ನಿರ್ಧರಿಸಿದ್ದಾರೆ.
ಇದನ್ನು ಓದಿ: Hoysala Temple: ಕರುನಾಡನ್ನು 40 ವರ್ಷ ಆಳಿದ ರಾಜವಂಶ ಹುಟ್ಟಿದ್ದು ಈ ಪುಟ್ಟ ಹಳ್ಳಿಯ ದೇಗುಲದಲ್ಲಿ!
ಊರಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸಭೆಗಳನ್ನು ಸಹ ನಿಷೇಧಿಸಿ ಬ್ಯಾನರ್ ಅಳವಡಿಸಲಾಗಿದೆ. ಹಾಡುಗಾರಿನ ರಸ್ತೆ ಮತ್ತು ಮೂಲಸೌಲಭ್ಯ ಹೋರಾಟ ಸಮೀತಿ ಹಾಗೂ ಊರವರು ಈ ನಿರ್ಧಾರ ಕೈಗೊಂಡಿದ್ದಾಗಿ ಬ್ಯಾನರ್ ಹಾಕಿದ್ದಾರೆ. ಒಟ್ಟಾರೆ ಮಲೆನಾಡಿನ ಗ್ರಾಮಗಳು ತಮ್ಮೂರಿಗೆ ಅಗತ್ಯ ಸೌಕರ್ಯ ಒದಗಿಸಲು ಎತ್ತಿದ ಕೂಗು ಇನ್ನಾದರೂ ಜನಪ್ರತಿನಿಧಿಗಳ ಕಿವಿ ತಲುಪಲಿದೆಯೇ ಎಂದು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ