Monkey Temple: ಆಕ್ಸಿಡೆಂಟ್ ಆಗಿ ಸತ್ತ ಕೋತಿಗೆ ಇಲ್ಲೊಂದು ಸುಂದರ ಗುಡಿ, ಜೀವಪ್ರೀತಿಗೆ ಸಾಟಿಯೆಲ್ಲಿ?

ಆತ ತನ್ನ ಪಾಡಿಗೆ ತಾನು ಹೋಗ್ತಾ ಇದ್ದಾಗ ಅಪಘಾತವಾಗಿ ಕೋತಿಯೊಂದು ಜೀವ ಚೆಲ್ಲಿತ್ತು. ಅದನ್ನು ನೋಡಿ ಆತ ಹಾಗೇ ಮುಂದೆ ಹೋಗ್ಲಿಲ್ಲ, ಬದಲಾಗಿ ಆಗ ಆತ ಮಾಡಿದ ಕೆಲಸಕ್ಕೆ ಜನ ಇಂದಿಗೂ ಅಲ್ಲಿ ತಲೆ ಬಾಗಿ ನಿಲ್ಲುತ್ತಾರೆ...ಅಂಥ್ದೇನಾಯ್ತು? ಮುಂದೆ ಓದಿ...

ಕೋತಿ ಅಂತ್ಯಸಂಸ್ಕಾರದ ಜಾಗದಲ್ಲಿ ಗುಡಿ ನಿರ್ಮಾಣ

ಕೋತಿ ಅಂತ್ಯಸಂಸ್ಕಾರದ ಜಾಗದಲ್ಲಿ ಗುಡಿ ನಿರ್ಮಾಣ

 • Share this:
  ಚಿಕ್ಕಮಗಳೂರು: ಭಾರತದ ಸಂಸ್ಕೃತಿಯಲ್ಲಿ ಕೋತಿಯನ್ನು (Monkey) ಆಂಜನೇಯನ ಸ್ವರೂಪವೆಂದು ಅನೇಕರು ಗೌರವದಿಂದ (Respectable) ಕಾಣುತ್ತಾರೆ. ಎಲ್ಲಾದರೂ ಕೋತಿಗಳು ಸತ್ತಾಗ ಸಾವಿರಾರು ಜನರು ಸೇರಿ ಪೂಜೆ ಸಲ್ಲಿಸಿ ಕೋತಿಯನ್ನು ಅಂತ್ಯಸಂಸ್ಕಾರ ಮಾಡುವುದನ್ನು ನೋಡಿದ್ದೇವೆ. ನಿರಂತರವಾಗಿ ಕೋತಿಗಳಿಗೆ ಆಹಾರ (Food) ನೀಡುವವರು ಒಂದು ಕಡೆಯಾದ್ರೆ, ಪ್ರವಾಸಿ ತಾಣಗಳಲ್ಲಿ ಗುಂಪುಗುಂಪಾಗಿ ಜನರ ಮೇಲೆ  ದಾಳಿ ಮಾಡುವ ಕೋತಿಗಳನ್ನು ಕಂಡು ಹೆದರಿ ಓಡುವ ಸನ್ನಿವೇಶಗಳೂ ಹಲವು ಕಡೆಯಲ್ಲಿದೆ. ಇಂಥಾ ವಿವಿಧ ರೀತಿಯ ಜನರ ನಡುವೆ ಇಲ್ಲೊಬ್ಬ ಚಾಲಕ (driver) ವಿಶಿಷ್ಟವಾಗಿ ನಿಲ್ಲುತ್ತಾರೆ. ಆತ ಮಾಡಿದ ಕೆಲಸ ಪ್ರಾಯಶ್ಚಿತ್ತದಿಂದಲೋ, ಪಶ್ಚಾತ್ತಾಪದಿಂದಲೋ ಗೊತ್ತಿಲ್ಲ. ಆದ್ರೆ ಮನಕಲಕುವ ದೃಶ್ಯವೊಂದು ಈ ದಾರಿಯಲ್ಲಿ ಹೋಗುವವರಿಗೆಲ್ಲಾ ಪ್ರತಿದಿನ ಕಾಣುತ್ತದೆ.

  ಅಂದು ನಡೆದಿತ್ತು ಆ ಒಂದು ಘಟನೆ

  ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮೋಹನ್ ವೃತ್ತಿಯಲ್ಲಿ ಚಾಲಕ. ಕೆಲ ವರ್ಷಗಳ ಹಿಂದೆ ಧರ್ಮಸ್ಥಳದಿಂದ ಚಾರ್ಮಾಡಿ ಘಾಟ್ (charmadi ghat) ಮಾರ್ಗವಾಗಿ ಹೊರನಾಡಿಗೆ ಹೋಗುವಾಗ ದುರದೃಷ್ವಶಾತ್ ಆ ಕಡಿದಾದ ರಸ್ತೆಯಲ್ಲಿ ಒಂದು ಅಪಘಾತ ನಡೆದುಬಿಡುತ್ತದೆ. ಚಾರ್ಮಾಡಿ ರಸ್ತೆಯಲ್ಲಿ ಯಾವುದೋ ವಾಹನ ಢಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡ ಕೋತಿಯೊಂದನ್ನು ಕಂಡ ಅವರು ತಮ್ಮ ವಾಹನ ನಿಲ್ಲಿಸುತ್ತಾರೆ. ನಂತರ ಕೋತಿಯ ಮೃತದೇಹಕ್ಕೆ ಪೂಜಾ ವಿಧಾನಗಳನ್ನು ನೆರೆವೇರಿಸಿ ಅಲ್ಲೇ ರಸ್ತೆ ಬದಿಯಲ್ಲಿ ಅಂತ್ಯಸಂಸ್ಕಾರವನ್ನೂ ಮಾಡಿರುತ್ತಾರೆ.

  ಗತಿಸಿದ ಆತ್ಮದ ಬಗ್ಗೆ ಗೌರವ

  ಕೆಲ ತಿಂಗಳ ನಂತರ ಬೇರೆ ಯಾವುದೋ ವಿಚಾರಕ್ಕೆ ಮೋಹನ್ ಜ್ಯೋತಿಷಿಯೊಬ್ಬರ ಬಳಿ ಹೋಗಿರುತ್ತಾರೆ. ಆಗ ಆ ಜ್ಯೋತಿಷಿ, ಅಂತ್ಯಸಂಸ್ಕಾರ ಮಾಡಿದ ಕೋತಿಗೆ ಒಂದು ಪುಟ್ಟ ಗುಡಿ ಕಟ್ಟಿಸುವಂತೆ ಸೂಚಿಸುತ್ತಾರೆ. ಅದರಂತೆ ಚಾಲಕ ಮೋಹನ್ ಆ ಜಾಗಕ್ಕೆ ತೆರಳಿ ಕೋತಿಯನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲೇ ಪುಟ್ಟದೊಂದು ಗುಡಿ ಕಟ್ಟಿಸುತ್ತಾರೆ.

  ಇದನ್ನೂ ಓದಿ: Viral Video: ಮೃತ ತಾಯಿಯನ್ನು ತಬ್ಬಿ ಅಳುತ್ತಿದ್ದ ಕೋತಿಮರಿಗೆ ಹಾಲು ಕುಡಿಸಿದ ಸ್ವಯಂ ಸೇವಕರು

  ಚಾರ್ಮಾಡಿ ಘಾಟಿಯ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇವಾಲಯದ ಪಕ್ಕದಲ್ಲೇ ಕೋತಿಯ ಗುಡಿಯೂ ಇದ್ದು ಆಗಾಗ ಮೋಹನ್ ಅಲ್ಲಿಗೆ ಭೇಟಿ ಕೊಟ್ಟು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲ, ಕೊಟ್ಟಿಗೆಹಾರದ ಮೂಲಕ ಧರ್ಮಸ್ಥಳ ಮುಂತಾದ ಸ್ಥಳಗಳಿಗೆ ತೆರಳುವ ಪ್ರವಾಸಿಗರು ಕೂಡಾ ಒಂದೆರಡು ಕ್ಷಣ ವಾಹನ ನಿಲ್ಲಿಸಿ ಗುಡಿಯ ವಾನರನಿಗೆ ನಮಸ್ಕರಿಸಿ ತೆರಳುತ್ತಾರೆ. ಮೃತ ಕೋತಿಯ ನೆನಪಲ್ಲಿ ಆಂಜನೇಯನ ಗುಡಿ ನಿರ್ಮಿಸಿರುವುದಕ್ಕೆ ಸರಿಯಾಗಿ ಹೊಂದುವಂತೆ ಕೆಲವು ಕೋತಿಗಳು ಕೂಡಾ ಅಲ್ಲೇ ಓಡಾಡಿಕೊಂಡಿರುತ್ತವೆ. ಪ್ರವಾಸಿಗರು ಅವುಗಳಿಗೂ ಹಣ್ಣು ಹಂಪಲು ನೀಡುತ್ತಾರೆ.


  ಕೋತಿಗಳಿಗೆ ಬದುಕಲು ಆಸರೆಯಾದ ಗುಡಿ

  ಪ್ರವಾಸ ತಾಣವಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಬಂದಂತಹ ಪ್ರವಾಸಿಗರು ಈ ಚಾರ್ಮಾಡಿ ಘಾಟ್‍ನ ಮಾರ್ಗವಾಗಿ ತೆರಳುವ ವೇಳೆ ಚಾಲಕ ಮೋಹನ್ ಕಟ್ಟಿಸಿರುವ ಈ ಗುಡಿಗೆ ತೆರಳಿ ಆಂಜನೇಯನ ಆರ್ಶೀವಾದ ಪಡೆಯುತ್ತಾರೆ. ಈ ವೇಳೆ ಅಲ್ಲಿದ್ದ ಕೋತಿಗಳಿಗೆ ಹಣ್ಣು ಹಂಪಲು ನೀಡುತ್ತಾರೆ. ಇದರಿಂದ ಹಸಿವು ನೀಗಿಸಿಕೊಂಡ ಕೋತಿಗಳು ಗುಡಿಯಲ್ಲಿಯೇ ವಾಸವಾಗಿವೆ. ದಿನನಿತ್ಯ ಬರುವ ಪ್ರವಾಸಿಗರು ಆಂಜನೇಯನ ದರ್ಶನ ಪಡೆಯದೇ ಇಲ್ಲಿಂದ ಮುಂದೆ ಹೋಗಲ್ಲಾ ಅನ್ನುತ್ತಾರೆ ಇಲ್ಲಿಯ ಕೆಲ ನಿವಾಸಿಗರು.

  ಇದನ್ನೂ ಓದಿ: ಕೊಲೆ ಪ್ರಕರಣದ ಸಾಕ್ಷಿಯನ್ನೇ ಎತ್ತಿ ಓಡಿದ ಕೋತಿ! ಇದೇನಾ ಕಪಿ ಚೇಷ್ಟೆ?

  ಚಾಲಕನ ಮಾನವೀಯತೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿರುವ ಪ್ರವಾಸಿಗರು

  ಚಿಕ್ಕಮಗಳೂರು ಜಿಲ್ಲೆಗೆ ಬಂದಂತಹ ಪ್ರವಾಸಿಗರು ತಮ್ಮ ಕಷ್ಟಗಳನ್ನು ದೂರ ಮಾಡಪ್ಪ ಆಂಜನೇಯ ಎಂದು ಗುಡಿಯ ಬಳಿ ನಿಂತು ಪ್ರಾರ್ಥಿಸುವ ದೃಶ್ಯ ಸಾಮಾನ್ಯವಾಗಿದೆ. ಒಟ್ಟಿನಲ್ಲಿ ಕೋತಿ ಸತ್ತರೆ ಅಂತ್ಯಸಂಸ್ಕಾರ ಮಾಡುವುದು ಪುಣ್ಯದ ಕೆಲಸವೆಂದು ನಂಬಿದ ಚಾಲಕ ಮೋಹನ ಆ ಕೋತಿ ಸತ್ತ ಜಾಗದಲ್ಲಿ ಪುಟ್ಟ ಗುಡಿ ಕಟ್ಟಿ ಮಾನವೀಯತೆ ಮೆರೆದಿದ್ದು ಶ್ಲಾಘನೀಯ.

  (ವರದಿ: ನಂದೀಶ್, ಚಿಕ್ಕಮಗಳೂರು)
  Published by:Suraj Risaldar
  First published: