ಚಾಮರಾಜನಗರ: ಬೇಸಿಗೆ ಸಮೀಪಿಸುತ್ತಿದ್ದಂತೆ ಚಾಮರಾಜನಗರ ಜಿಲ್ಲೆಯಲ್ಲಿ (Chamarajagar News) ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಪ್ರಾಣಹಾನಿ, ಬೆಳೆ ಹಾನಿ ಜೊತೆಗೆ ಆನೆಗಳ ಜೀವಕ್ಕೂ ಕಂಟಕ (Elephant Problem)ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಕೊನೆಗೂ ಎಚ್ಚೆತ್ತ ಸರ್ಕಾರ ಕಾಡಾನೆಗಳ ಹಾವಳಿ ತಡೆಗಟ್ಟಲು ಚಾಮರಾಜನಗರ ಜಿಲ್ಲಾ ಟಾಸ್ಕ್ ಫೋರ್ಸ್ (Chamarajanagar Elephant Task Force) ರಚನೆ ಮಾಡಿ ಆದೇಶ ಹೊರಡಿಸಿದೆ.
ಹೇಳಿ ಕೇಳಿ ಚಾಮರಾಜನಗರ ಶೇಕಡಾ 51 ರಷ್ಟು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ. ಇಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು ಪ್ರಾಣ ಹಾನಿ, ಬೆಳೆ ಹಾನಿ, ಜೊತೆಗೆ ವನ್ಯಪ್ರಾಣಿಗಳ ಜೀವಕ್ಕೂ ಕಂಟಕ ಎದುರಾಗುತ್ತಿದೆ. ಆನೆಗಳ ಹಿಂಡು ಕಾಡಂಚಿನಲ್ಲಿ ರೈತರು ವರ್ಷಪೂರ್ತಿ ಬೆವರು ಸುರಿಸಿ ಬೆಳೆದ ಬೆಳೆ ಹಾನಿ, ದನಕರುಗಳ ಮೇಲೆ ದಾಳಿ ಪ್ರಕರಣಗಳು ವರದಿ ಆಗುತ್ತಲೇ ಇವೆ.
ಹೆಚ್ಚುತ್ತಿದೆ ಆನೆ-ಮಾನವ ಸಂಘರ್ಷ
ರೈತರು ಬೆಳೆ ರಕ್ಷಣೆಗೆ ಜಮೀನಿನಲ್ಲಿ ತಂತಿ ಬೇಲಿಗೆ ವಿದ್ಯುತ್ ಹರಿಸುವುದರಿಂದ ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುವ ಘಟನೆಗಳು ಆಗಾಗ ಮರುಕಳಿಸುತ್ತಲೆ ಇದ್ದು ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ಸರ್ಕಾರ ಚಾಮರಾಜನಗರ ಜಿಲ್ಲಾ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ ಮಾಡಿ ಆದೇಶ ಹೊರಡಿಸಿದೆ.
ಈ ಜಿಲ್ಲೆಗಳಲ್ಲಿದೆ ಟಾಸ್ಕ್ ಫೋರ್ಸ್
ಈಗಾಗಲೇ ಚಿಕ್ಕಮಗಳೂರು, ಹಾಸನ, ಕೊಡಗು ಹಾಗು ಮೈಸೂರು ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಆದರೆ ಸರ್ಕಾರ ಚಾಮರಾಜನಗರ ಜಿಲ್ಲೆಯನ್ನು ಕೈಬಿಟ್ಟಿತ್ತು. ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ ನಿರಂತರವಾಗಿ ಬೆಳೆ ಹಾನಿ, ಕಾಡಾನೆ ದಾಳಿಯಿಂದ ದಿನಗೂಲಿ ಫಾರೆಸ್ಟ್ ವಾಚರ್ ಸಾವು, ವಿದ್ಯುತ್ ತಗುಲಿ ಕಾಡಾನೆ ಸಾವಿನಂತಹ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಸರ್ಕಾರ ಕೊನೆಗೂ ಟಾಸ್ಕ್ ಫೋರ್ಸ್ ರಚನೆ ಮಾಡಿದೆ.
ಟಾಸ್ಕ್ ಫೋರ್ಸ್ನಲ್ಲಿ ಯಾರೆಲ್ಲ ಇದ್ದಾರೆ?
ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್, ಕೊಳ್ಳೇಗಾಲ ಉಪವಿಭಾಗದ ಎಸಿಎಫ್ ನೇತೃತ್ವದಲ್ಲಿ ಒಬ್ಬ ಆರ್‌ಎಫ್ಒ, 4 ಮಂದಿ ಡಿಆರ್‌ಎಫ್ಒ, 8 ಮಂದಿ ಅರಣ್ಯ ರಕ್ಷಕರು, 32 ಮಂದಿ ವಾಚರ್ಸ್ಗಳನ್ನು ಒಳಗೊಂಡ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಅಗತ್ಯ ಬಂದೂಕು, ಪಟಾಕಿ, ವಾಕಿಟಾಕಿ, ವಾಹನಗಳು ಹಾಗು ಇತರೆ ಸಲಕರಣೆ ಒದಗಿಸಲು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.
ಟಾಸ್ಕ್ ಫೋರ್ಸ್ ಮುಂದಿದೆ ಈ ಮಹತ್ವದ ಜವಾಬ್ದಾರಿ
ಕಾಡಂಚಿನಲ್ಲಿ ಆನೆಗಳ ಚಲನವಲನಗಳ ಮೇಲೆ ನಿಗಾ ಇಟ್ಟು, ಗ್ರಾಮಸ್ಥರಿಗೆ ಅಗತ್ಯ ಮಾಹಿತಿ ನೀಡುವುದು, ಜಾಗೃತಿ ಮೂಡಿಸುವುದು ಹಾಗು ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮಾಡುವುದು ಟಾಸ್ಕ್ ಫೋರ್ಸ್‌ನ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: Chamarajanagar: ಬಿಳಿಗಿರಿರಂಗನ ಬೆಟ್ಟದಲ್ಲಿ ಬಹುವರ್ಣದ ಕಣಜ ಪತ್ತೆ! ಸೋಜಿಗದ ಕಣಜಕ್ಕೆ ಸೋಲಿಗ ಹೆಸರು!
ಆದರೆ ಕೇವಲ ಟಾಸ್ಕ್ ಫೋರ್ಸ್ ರಚನೆ ಮಾಡಿದರೆ ಸಾಲದು, ಕಾಡಂಚಿನ ಉದ್ದಕ್ಕೂ ಸಮರ್ಪಕ ಆನೆ ಕಂದಕ ನಿರ್ಮಾಣ ಮಾಡಬೇಕು, ರೈಲ್ವೆ ಕಂಬಿ ಹಾಗು ಸೋಲಾರ್ ತಂತಿ ಬೇಲಿ ಅಳವಡಿಸಬೇಕು. ಹಾಗಾದಲ್ಲಿ ಮಾತ್ರ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎನ್ನುತ್ತಾರೆ ರೈತರು.
ಇದನ್ನೂ ಓದಿ: Chamarajangar: ದಕ್ಷಿಣ ಆಫ್ರಿಕಾ ಮೂಲದ ಬೆಳೆಯಿಂದ ಲಾಭ ಪಡೆದ ಚಾಮರಾಜನಗರ ರೈತರು!
ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಯಿಂದ ಕಾಡಾನೆಗಳ ಉಪಟಳ ತಾತ್ಕಾಲಿಕವಾಗಿ ಕಡಿಮೆಯಾಗಲಿದೆ. ಹಾಗಾಗಿ ಶಾಶ್ವತ ಪರಿಹಾರ ಕ್ರಮಗಳತ್ತ ಸರ್ಕಾರ ಚಿಂತನೆ ನಡೆಸಬೇಕಿದೆ
ವರದಿ: ಎಸ್.ಎಂ.ನಂದೀಶ್, ನ್ಯೂಸ್18 ಕನ್ನಡ ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ