ಚಾಮರಾಜನಗರ: ಜೇನುತುಪ್ಪದ ರುಚಿ ಸಿಹಿಯಾಗಿರುತ್ತೆ ಎಂಬುದು ಎಲ್ಲರಿಗು ಗೊತ್ತಿರುವ ವಿಚಾರ. ಆದರೆ ಕಹಿ ಜೇನು (Bitter Honey) ಇದೆ ಅಂದ್ರೆ ನಂಬ್ತೀರಾ? ಹೌದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಸಿಹಿ ಜೇನಷ್ಟೇ ಅಲ್ಲ, ಕಹಿ ಜೇನು ಸಿಗುತ್ತೆ! ಜೇನುತುಪ್ಪ ಅಂದಾಕ್ಷಣ ಯಾರಿಗಾದರು ಬಾಯಲ್ಲಿ ನೀರೂರದೆ ಇರದು. ಕಾರಣ ಈ ಜೇನು ಸಕ್ಕರೆಗಿಂತಲು ಹೆಚ್ಚು ಸಿಹಿ. ಹೆಜ್ಹೇನು, ತುಡವೇ ಜೇನು, ಕಡ್ಡಿಜೇನು, ನೆಸರೆ ಜೇನು ಹೀಗೆ ನಾಲ್ಕೈದು ಬಗೆಯ ಜೇನುತುಪ್ಪಗಳಿದ್ದರೂ (Honey) ಇವುಗಳ ರುಚಿ ಮಾತ್ರ ಸಿಹಿಯಾಗಿಯೇ ಇರುತ್ತೆ. ಆದರೆ ಜೀವವೈವಿಧ್ಯತೆಯ ತಾಣವಾದ ಚಾಮರಾಜನಗರ (Chamarajanagar News) ಬಿಳಿಗಿರಿರಂಗನ ಬೆಟ್ಟದಲ್ಲಿ (BR Hills) ಸಿಹಿ ಜೇನಷ್ಟೇ ಅಲ್ಲ, ಕಹಿ ಜೇನು ಸಿಗುತ್ತೆ.
ನೇರಳೆ ಹೂ, ತಾರೆ ಹೂ, ಬೀಟೆ ಹೂಗಳ ಮಕರಂದವನ್ನು ಹೀರುವ ಜೇನುನೊಣಗಳಿಂದ ಆ ಋತುವಿನಲ್ಲಿ ಉತ್ಪಾದನೆಯಾಗುವ ಜೇನುತುಪ್ಪ ಕಹಿಯಾಗಿರುತ್ತೆ. ಇದನ್ನು ತಿಳಿದ ಇಲ್ಲಿನ ಬುಡಕಟ್ಟು ಸೋಲಿಗರು ಕಾಡಿಗೆ ಜೇನು ಸಂಗ್ರಹಿಸಲು ಹೋದಾಗ ರುಚಿ ನೋಡಿ ಕಹಿ ಜೇನನ್ನೇ ಪ್ರತ್ಯೇಕವಾಗಿ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ಕಹಿ ಜೇನನ್ನು ಬಿಳಿಗಿರಿರಂಗನಾಥಸ್ವಾಮಿ ಸೋಲಿಗರ ಸಂಸ್ಕರಣ ಸಂಘದಲ್ಲಿ ಸಂಸ್ಕರಿಸಿ "ಅಡವಿ" ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆ ಗೆ ಬಿಡುಗಡೆ ಮಾಡಿದ್ದಾರೆ .
ಸಿಹಿ-ಕಹಿ ಜೇನಿನ ಪ್ರತ್ಯೇಕ ಸಂಗ್ರಹ
ಈ ಹಿಂದೆ ಕಾಡಿನಿಂದ ಸಂಗ್ರಹಿಸಿ ತಂದ ಜೇನು ತುಪ್ಪವನ್ನು ಒಟ್ಟಿಗೆ ಸಂಸ್ಕರಿಸಲಾಗುತ್ತಿತ್ತು. ಹಾಗಾಗಿ ಅದರ ರುಚಿ ಒಂದೇ ಆಗಿರುತ್ತಿತ್ತು. ಆದರೆ ಕಳೆದ ವರ್ಷದಿಂದ ಸೋಲಿಗರು ಕಹಿ ಜೇನನ್ನೇ ಪ್ರತ್ಯೇಕವಾಗಿ ಸಂಗ್ರಹಿಸಿ ತರುತ್ತಾರೆ. ಇದನ್ನು ಸಂಸ್ಕರಿಸಿ ಪ್ರತ್ಯೇಕವಾಗಿ ಬಾಟ್ಲಿಂಗ್ ಮಾಡಲಾಗುತ್ತಿದೆ.
ಕಹಿ ಜೇನಿನಲ್ಲಿ ಔಷಧೀಯ ಗುಣ
"ಸಿಹಿ ಜೇನಿಗಿಂತ ಕಹಿ ಜೇನು ಮಧುಮೇಹಿಗಳಿಗಂತೂ ಹೇಳಿಮಾಡಿಸಿದಂತಿದೆ. ಕಹಿ ಜೇನಿನಲ್ಲಿ ಔಷಧೀಯ ಗುಣಗಳು ಹೆಚ್ಚಾಗಿದೆ ಎಂಬ ನಂಬಿಕೆ ಇದ್ದು ಬೇಡಿಕೆಯು ಹೆಚ್ಚಾಗಿದೆ" ಎನ್ನುತ್ತಾರೆ ಸೋಲಿಗರ ಮುಖಂಡ ಸಿ.ಮಾದೇಗೌಡ.
ಆರ್ಥಿಕ ಬೆಳವಣಿಗೆಗೆ ಚೈತನ್ಯ
ಅಶೋಕಾ ಟ್ರಸ್ಟ್ ಫಾರ್ ರೀಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್ಮೆಂಟ್ ( ATREE ) ಎಂಬ ಸಂಸ್ಥೆ ಬಿಳಿಗಿರಿರಂಗನಾಥ ಸ್ವಾಮಿ ಸೋಲಿಗರ ಸಂಸ್ಕರಣ ಸಂಘಕ್ಕೆ ಅಗತ್ಯವಾಗಿ ಬೇಕಾದ ಯಂತ್ರೋಪಕರಣಗಳನ್ನು ಒದಗಿಸಿ "ಅಡವಿ ಬ್ರಾಂಡ್"ನ ಕಹಿ ಜೇನುತುಪ್ಪ, ಸಿಹಿಜೇನು ತುಪ್ಪ, ಕಾಫಿಪುಡಿ ಉತ್ಪಾದನೆ ಹಾಗು ಮಾರಾಟವನ್ನು ಉತ್ತೇಜಿಸುತ್ತಿದೆ ಆ ಮೂಲಕ ಸೋಲಿಗರ ಆರ್ಥಿಕ ಬೆಳವಣಿಗೆಗೆ ಸಹಕರಿಸುತ್ತಿದೆ ಎಂದು ಸಿ. ಮಾದೇಗೌಡ ನ್ಯೂಸ್ 18 ಗೆ ತಿಳಿಸಿದರು.
ಇದನ್ನೂ ಓದಿ: Chamarajanagar: ಬಿಳಿಗಿರಿರಂಗನ ಬೆಟ್ಟದಲ್ಲಿ ಬಹುವರ್ಣದ ಕಣಜ ಪತ್ತೆ! ಸೋಜಿಗದ ಕಣಜಕ್ಕೆ ಸೋಲಿಗ ಹೆಸರು!
ಬಿಳಿಗಿರಿರಂಗನಾಥ ಸ್ವಾಮಿ ಸೋಲಿಗರ ಸಂಸ್ಕರಣ ಸಂಘದಲ್ಲಿ 600 ಮಂದಿ ಸೋಲಿಗರು ಸದಸ್ಯರಾಗಿದ್ದಾರೆ. ಇವರು ಕಾಡಿನಿಂದ ಸಂಗ್ರಹಿಸಿ ತರುವ ಜೇನುತುಪ್ಪವನ್ನು ಇಲ್ಲಿ ಖರೀದಿಸಲಾಗುತ್ತದೆ. ಅಲ್ಲದೆ ಲ್ಯಾಂಪ್ಸ್ ಸೊಸೈಟಿಯಿಂದಲೂ ಜೇನು ತುಪ್ಪ ಖರೀದಿಸಿ ಸಿಹಿ ಹಾಗು ಕಹಿ ಜೇನುತುಪ್ಪವನ್ನು ಪ್ರತ್ಯೇಕವಾಗಿ ಸಂಸ್ಕರಿಸಿ ಬಾಟ್ಲಿಂಗ್ ಮಾಡಲಾಗುತ್ತಿದೆ.
ಇದನ್ನೂ ಓದಿ: Chamarajanagar: ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್ ಬೈ, ರಾಜಕೀಯಕ್ಕೆ ಜೈ ಎಂದ ಇನ್ಸ್ಪೆಕ್ಟರ್!
ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ಪ್ರಮುಖ ಸ್ಥಾನವಿದ್ದು ಆಯುರ್ವೇದ ಔಷಧಿಗಳನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬ ನಂಬಿಕೆಯು ಇದೆ
ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ