ಚಾಮರಾಜನಗರ: ಇಲ್ಲಿ ನಿಗಿನಿಗಿ ಉರಿಯುವ ಕೆಂಡವನ್ನು ಬರಿಗೈಲಿ ಕೊಳಗಕ್ಕೆ ತುಂಬಲಾಗುತ್ತೆ. ಕೊಳಗದಿಂದ ಜೋಳಿಗೆಗೆ ಸುರಿದು ಕೊಂಡೊಯ್ದು ದೇವರಿಗೆ (Satyavati Devi) ನೈವೇದ್ಯ ಮಾಡಲಾಗುತ್ತೆ. ಇಷ್ಟೆಲ್ಲಾ ಮಾಡಿದರು ಕೈಗೆ ಮಾತ್ರ ಏನೂ ಆಗಲ್ಲ!
ಚಾಮರಾಜನಗರ ತಾಲೂಕು ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆ ತನ್ನ ವಿಶಿಷ್ಟತೆಯಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಜಾತ್ರೆಗಳಲ್ಲಿ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದನ್ನು ನೋಡಿದ್ದೇವೆ. ಆದರೆ ಬಾಣಹಳ್ಳಿಯ ಸತ್ಯವತಿ ಜಾತ್ರೆ ಇದಕ್ಕಿಂತ ವಿಭಿನ್ನ. ಇಲ್ಲಿ ನಿಗಿನಿಗಿ ಉರಿಯುವ ಕೆಂಡವೇ ದೇವರಿಗೆ ನೈವೇದ್ಯ!
ಬಾಳೆ ಎಲೆ ಮೇಲೆ ಕೆಂಡ ಸುರಿದು ನೈವೇದ್ಯ!
ಹೌದು, ಬರಿಗೈಲಿ ಉರಿಯುವ ಕೆಂಡವನ್ನು ಕೊಳಗಕ್ಕೆ ತುಂಬಲಾಗುತ್ತೆ. ನಂತರ ಕೊಳಗದಿಂದ ಜೋಳಿಗೆಗೆ ಕೆಂಡ ಸುರಿಯಲಾಗುತ್ತೆ. ಕೆಂಡ ತುಂಬಿದ ಜೋಳಿಗೆಯನ್ನು ಗರ್ಭಗುಡಿಗೆ ಕೊಂಡೊಯ್ದು ಬಾಳೆ ಎಲೆ ಮೇಲೆ ಕೆಂಡ ಸುರಿದು ಸತ್ಯವತಿ ದೇವಿಗೆ ನೈವೇದ್ಯ ಮಾಡಲಾಗುತ್ತೆ.
ಕೆಂಡದ ರಾಶಿಗೆ ಬರಿಗೈ ಹಾಕಿ ಕೊಳಗದಲ್ಲಿ ಅಳೆಯುವ ಅರ್ಚಕರು!
ಗ್ರಾಮಸ್ಥರೆಲ್ಲಾ ಸೇರಿ ಬೆಳಿಗ್ಗೆಯೇ ಕಾಡಿನಿಂದ ಕಡಿದು ತರುವ ಸೌದೆಯನ್ನು ಸತ್ಯವತಿ ದೇವಸ್ಥಾನದ ಮುಂದೆ ರಾಶಿ ಮಾಡಿ ಬೆಂಕಿ ಹಾಕಲಾಗುತ್ತೆ. ಬಳಿಕ ಕೆಂಡದ ರಾಶಿ ಸಿದ್ದಗೊಳಿಸಲಾಗುತ್ತದೆ. ಸತ್ಯವತಿ ದೇವಸ್ಥಾನದ ಅರ್ಚಕ ಬೆಳಿಗ್ಗೆಯಿಂದ ಉಪವಾಸವಿದ್ದು ಬಳಿಕ ಕೊಂಡ ಹಾಕುವ ಸ್ಥಳಕ್ಕೆ ಸತ್ತಿಗೆ ಸೂರಿಪಾನಿಗಳೊಂದಿಗೆ ಮೆರವಣಿಗೆಯಲ್ಲಿ ಬರುತ್ತಾರೆ. ಕೆಂಡದ ರಾಶಿಗೆ ಬರಿಗೈ ಹಾಕಿ ಕೆಂಡವನ್ನು ಕೊಳಗದಲ್ಲಿ ಅಳೆದ ಜೋಳಿಗೆಗೆ ತುಂಬುತ್ತಾರೆ.
ಇದನ್ನೂ ಓದಿ: Maha Shivaratri 2023: ಕೇಳಿದ್ದೆಲ್ಲ ಕೊಡುವ ಮಹದೇಶ್ವರನಿಗೆ ಇಷ್ಟಾದ್ರೂ ಮಾಡ್ಬೇಕಲ್ಲ! ದರ್ಶನಕ್ಕೆ ಭಕ್ತರ ಸಾಹಸ
ಬರಿಗೈಯಲ್ಲಿ ಕೆಂಡ ತುಂಬಿದರೂ ಅರ್ಚಕರ ಕೈ ಸುಡುವುದಿಲ್ಲವಂತೆ! ಜೋಳಿಗೆ ಸುಟ್ಟು ಹೋಗುವುದಿಲ್ಲವಂತೆ. ಇದೆಲ್ಲಾ ಸತ್ಯವತಿ ದೇವಿಯ ಪವಾಡ ಎಂಬ ಗ್ರಾಮಸ್ಥರ ನಂಬಿಕೆ.
ಇದನ್ನೂ ಓದಿ: Chamarajanagar: ಸಿಹಿ ಜೇನಷ್ಟೇ ಅಲ್ಲ, ಇಲ್ಲಿ ಕಹಿ ಜೇನೂ ಸಿಗುತ್ತೆ!
ದೇವಸ್ಥಾನಕ್ಕೆ ಪ್ರವೇಶ ವಿವಾದ ಹಾಗೂ ಕೊರೊನಾ ಕಾರಣದಿಂದ ಸತ್ಯವತಿ ಜಾತ್ರೆ ಕಳೆದ ಐದು ವರ್ಷಗಳಿಂದ ನಿಂತು ಹೋಗಿತ್ತು. ಇದೀಗ ಐದು ವರ್ಷಗಳ ಬಳಿಕ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಕೆಂಡವನ್ನು ಕೊಳಗಕ್ಕೆ ಬರಿಗೈಲಿ ತುಂಬುವ ಮೈನವಿರೇಳಿಸುವ ದೃಶ್ಯ ಕಣ್ತುಂಬಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ