ಚಾಮರಾಜನಗರ: ರಾಜಕೀಯ ಕ್ಷೇತ್ರ ಅಂದ್ರೆ ಕೆಲವರಿಗೆ ಅದೇನೋ ಸೆಳೆತ. ಹಾಗಾಗಿಯೇ ಕೆಲವರು ತಮ್ಮ ವ್ಯಾಪಾರ ವಹಿವಾಟು ಜೊತೆಗೆ ಒಂದು ಕೈ ನೋಡೇ ಬಿಡೋಣ ಅಂತಾ ರಾಜಕೀಯದತ್ತ ಆಸಕ್ತಿ ತೋರಿಸ್ತಾ ಇದ್ದಾರೆ. ಇನ್ನೂ ಕೆಲವರು ಖಾಸಗಿಯಾಗಿ ವೃತ್ತಿ ಮಾಡುತ್ತಲೇ ರಾಜಕೀಯ ಕ್ಷೇತ್ರದಲ್ಲಿ Politics) ಗುರುತಿಸಿಕೊಂಡಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿರುವವರು (Government Officer) ನಿವೃತ್ತಿ ಆದ ನಂತರ ರಾಜಕೀಯ ಸೇರ್ತಾ ಇದ್ದಾರೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ (Police Officer) ಇನ್ನೂ 13 ವರ್ಷ ಸೇವಾ ಅವಧಿ ಇದ್ದರೂ ಹುದ್ದೆಗೆ ಗುಡ್ ಬೈ ಹೇಳಿ ರಾಜಕೀಯ ಪ್ರವೇಶ ಮಾಡಿದ್ದಾರೆ!
ಹೌದು, ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧೆಡೆ ಕಾನ್ಸ್‌ಟೇಬಲ್, ಸಬ್ ಇನ್ಸ್ಪೆಕ್ಟರ್, ಪೊಲೀಸ್ ಇನ್ಸ್ಪೆಕ್ಟರ್ ಆಗಿ 27 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಬಿ.ಪುಟ್ಟಸ್ವಾಮಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಬಯಸಿ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯು ಅಂಗೀಕಾರವಾಗಿದೆ.
ಪೊಲೀಸ್ ಆಗಿದ್ದಾಗಲೇ ಸಾಮಾಜಿಕ ಸೇವೆ
ಸೇವೆಯಲ್ಲಿದ್ದಾಗಲೇ ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗ, ಬಿ.ಪುಟ್ಟಸ್ವಾಮಿ ಸೇವಾ ಟ್ರಸ್ಟ್ ಮೂಲಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಿ.ಪುಟ್ಟಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.
ಬಿಜೆಪಿ ಸೇರ್ತಾರಾ ಇಲ್ವಾ?
ಮೊದಲಿಗೆ ಅವರು ಬಿಜೆಪಿ ಸೇರ್ತಾರೆ ಎಂಬ ಮಾತು ಕೇಳಿ ಬರ್ತಾ ಇತ್ತು. ಆದರೆ ಬಿಜೆಪಿಯಲ್ಲಿ ಈಗಾಗಲೇ ಹಾಲಿ ಶಾಸಕ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಸೇರಿದಂತೆ ಸಾಕಷ್ಟು ಸಂಖ್ಯೆಯ ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಪುಟ್ಟಸ್ವಾಮಿ ಬಿಜೆಪಿ ಸೇರುವುದು ಅನುಮಾನವಾಗಿದೆ.
ಜೆಡಿಎಸ್ ಸೇರ್ತಾರೆ ಅನ್ನೋ ಮಾತು
ಆದರೆ ಇದೀಗ ಪುಟ್ಟಸ್ವಾಮಿ ಜೆಡಿಎಸ್ ಸೇರ್ಪಡೆ ಆಗ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಮೈಸೂರಿನಲ್ಲಿ ಮಾತನಾಡಿದ್ದ ಜೆಡಿಎಸ್ ಮುಖಂಡ ಮಾಜಿ ಸಚಿವ ಸಾ.ರಾ. ಮಹೇಶ್, ಕೊಳ್ಳೇಗಾಲದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ಎಂಬ ಹೇಳಿಕೆ ನೀಡಿದ್ದು ಪುಟ್ಟಸ್ವಾಮಿ ಜೆಡಿಎಸ್ ಸೇರುವ ವಿಚಾರಕ್ಕೆ ಪುಷ್ಟಿ ನೀಡಿದೆ.
ಯಾವ ಪಕ್ಷ ಸೇರ್ತಾರೆ ಅನ್ನೋ ಕುತೂಹಲ
ಆದರೆ ಇದೀಗ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಘೋಷಿಸಿರುವ ಮಾಜಿ ಪೊಲೀಸ್ ಅಧಿಕಾರಿ ಬಿ.ಪುಟ್ಟಸ್ವಾಮಿ , ತಾವು ಯಾವ ಪಕ್ಷ ಸೇರ್ತೀನಿ ಎಂಬುದರ ಗುಟ್ಟುಬಿಟ್ಟು ಕೊಟ್ಟಿಲ್ಲ. ಸಾ.ರಾ ಮಹೇಶ ಹೇಳಿಕೆಯನ್ನು ಸಹ ಅಲ್ಲಗೆಳೆದಿಲ್ಲ. "ನಮ್ಮ ಬೆಂಬಲಿಗರ ಒತ್ತಾಯಕ್ಕೆ ಸಾ.ರಾ. ಮಹೇಶ್ ಹಾಗೆ ಹೇಳಿರಬಹುದು. ತಮಗೆ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳಿಂದಲು ಆಹ್ವಾನ ಇದೆ. ಎಲ್ಲಾ ಪಕ್ಷದ ಮುಖಂಡರು ತಮ್ಮ ಸಂಪರ್ಕದಲ್ಲಿದ್ದಾರೆ. ಯಾವ ಪಕ್ಷ ಸೇರಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ, ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳ ಸಭೆ ನಡೆಸಿ ಅವರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ಅವರು ನ್ಯೂಸ್18 ಗೆ ತಿಳಿಸಿದರು.
ಸಮಾವೇಶ ನಡೆಸಿ ನಿರ್ಧಾರ
ಜನಾಭಿಪ್ರಾಯ ಸಂಗ್ರಹಿಸಲು ಫೆಬ್ರವರಿ 11 ರಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೇಮರಹಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದಲ್ಲಿ ಜನರ ಅಭಿಪ್ರಾಯ ಪಡೆದು ಯಾವ ಪಕ್ಷ ಸೇರಬೇಕೆಂದು ನಿರ್ಧಾರ ಮಾಡ್ತೇನೆ. ಈ ಬಾರಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಂತು ಖಚಿತ ಎಂದು ಅವರು ಹೇಳಿದ್ದಾರೆ.
ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ