ಚಾಮರಾಜನಗರ: ಪೂರ್ವ ಹಾಗೂ ಪಶ್ಚಿಮ ಘಟ್ಟಗಳನ್ನು (Western Ghats) ಬೆಸೆಯುವ ಜೀವವೈವಿಧ್ಯತೆಗೆ ಹೆಸರಾದ ಬಿಳಿಗಿರಿರಂಗನ ಬೆಟ್ಟದ (Biligiriranga Hills) ಅರಣ್ಯದಲ್ಲಿ ಬಹುವರ್ಣದ ಕಣಜ (Wasp Genus) ಪತ್ತೆಯಾಗಿದೆ. ದಕ್ಷಿಣ ಭಾರತದಲ್ಲಿ (South India) ಮೊದಲ ಬಾರಿಗೆ ಪತ್ತೆಯಾದ ಹೊಸಬಗೆಯ ಕೀಟ ಇದಾಗಿದ್ದು ಬಹುವರ್ಣೀಯವಾಗಿರುವ ಈ ಕಣಜಕ್ಕೆ “ಸೋಲಿಗ ಎಕಾರಿನಾಟ”(Soliga Ecarinata) ಎಂದು ನಾಮಕರಣ ಮಾಡಲಾಗಿದೆ
ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್ಮೆಂಟ್ನ (ATREE) ಕೀಟಶಾಸ್ತ್ರಜ್ಞರ ತಂಡ ಈ ಕಣಜವನ್ನು ಪತ್ತೆ ಮಾಡಿದೆ. ಚಾಮರಾಜನಗರದ ಬಿಳಿಗಿರಿರಂಗನಬೆಟ್ಟ ಹಾಗೂ ಮಲೆ ಮಹದೇಶ್ವರ ಬೆಟ್ಟಗಳಲ್ಲಿ ಡಾರ್ವಿನ್ ಕಣಜಗಳ ಕುಟುಂಬದ, ಮೆಟೋಪಿನೆ ಉಪಕುಟುಂಬಕ್ಕೆ ಸೇರಿದ ಇಚ್ನೋಮೊನಿಡೆ- ಕಣಜವನ್ನು ಪತ್ತೆಹಚ್ಚಲಾಗಿದೆ.
ದಕ್ಷಿಣ ಭಾರತದಲ್ಲಿ ಪತ್ತೆಯಾದ ಮೊದಲ ಕಣಜ!
ಹೊಸ ಕಣಜದ ಸ್ಪೆಸಿಮನ್ಗಳನ್ನು ಪಶ್ಚಿಮ ಘಟ್ಟದ ಶುಷ್ಕ, ಪತನಶೀಲ ಕಾಡುಗಳು ಮತ್ತು ಈಶಾನ್ಯ ಹಿಮಾಲಯದ ಆರ್ದ್ರ ಅರಣ್ಯಗಳಿಂದ ಸಂಗ್ರಹಿಸಲಾಗಿದೆ. ದಕ್ಷಿಣ ಭಾರತದ ಕಾಡುಗಳಲ್ಲಿ ಪತ್ತೆಯಾದ ಈ ಹೊಸ ಜಾತಿಯ ಕಣಜವು ಮೆಟೋಪಿನೆ ಉಪ ಕುಟುಂಬದ ಎರಡನೇ ಹಾಗು ದಕ್ಷಿಣ ಭಾರತದಿಂದ ವರದಿಯಾದ ಮೊದಲ ಕಣಜವಾಗಿದೆ ಎಂದು ಸಂಶೋಧನಾ ತಂಡದ ಹಿರಿಯ ಸಂಶೋಧಕರಾದ ಪ್ರಿಯದರ್ಶನನ್ ಧರ್ಮರಾಜನ್ ಮತ್ತು ರಂಜಿತ್ ಮಾಹಿತಿ ನೀಡಿದ್ದಾರೆ.
ಯುರೋಪಿಯನ್ ಜರ್ನಲ್ನಲ್ಲಿ ಪ್ರಕಟ
ಈ ಸಂಶೋಧನಾ ವರದಿಯನ್ನು ಯುರೋಪಿಯನ್ ಜರ್ನಲ್ ಆಫ್ ಟ್ಯಾಕ್ಸಾನಮಿಯಲ್ಲಿ ಪ್ರಕಟಿಸಲಾಗಿದೆ. ಮೆಟೋಪಿನೆ ಉಪ ಕುಟುಂಬವು 27 ಜೆನೆರಾಗಳನ್ನು(ಕುಲ) ಮತ್ತು 862 ಜಾತಿಯ ಕಣಜಗಳನ್ನೊಳಗೊಂಡಿದೆ. ಇವುಗಳಲ್ಲಿ ಹೆಚ್ಚಿನ ಜಾತಿಯ ಕಣಜಗಳು ಪ್ಯಾಲೆಯಾರ್ಕ್ಟಿಕ್, ನಿಯೋಟ್ರೋಪಿಕ್ಲ ಮತ್ತು ನಾರ್ಕ್ಟಿಕ್ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ.
ಸ್ಥಳೀಯರ ಪ್ರಯತ್ನಕ್ಕೆ ಶ್ಲಾಘನೆ
ಸೋಲಿಗರು ಬಿಳಿಗಿರಿರಂಗನ ಬೆಟ್ಟದ ವಾಸಿಗಳಾಗಿದ್ದು ಬಿಳಿಗಿರಿರಂಗನ ಬೆಟ್ಟದ ಅಭಯಾರಣ್ಯ ಸುಸ್ಥಿರತೆ ಮತ್ತು ಅದನ್ನು ಸಂರಕ್ಷಿಸುವಲ್ಲಿ ಈ ಸ್ಥಳೀಯ ಸಮುದಾಯದ ಪ್ರಯತ್ನ ಶ್ಲಾಘನೀಯವಾಗಿದೆ. ಇವರ ಈ ಕಾರ್ಯಕ್ಕೆ ಗೌರವಸೂಚಕವಾಗಿ ಈ ವರ್ಣರಂಜಿತ ಹೊಸ ಕಣಜಕ್ಕೆ “ಸೋಲಿಗ ಎಕಾರಿನಾಟ” ಎಂದು ಹೆಸರಿಸಲಾಗಿದೆ ಎಂದು ಪ್ರಿಯದರ್ಶನ್ ತಿಳಿಸಿದರು.
ಇದನ್ನೂ ಓದಿ: Chamarajanagar: ರೈತರನ್ನು ಬೆಚ್ಚಿಬೀಳಿಸ್ತಿದ್ದ ಆನೆ ಸೆರೆ, ಹೀಗಿತ್ತು ಕಾರ್ಯಾಚರಣೆ
"ಈಗಾಗಲೇ ಬಿ.ಆರ್.ಟಿ ಅಭಯಾರಣ್ಯದಲ್ಲಿ 120 ಜಾತಿಯ ಇರುವೆ, 120 ಜಾತಿಯ ಚಿಟ್ಟೆಗಳು, 105 ಜಾತಿಯ ಜೀರುಂಡೆಗಳು ಪತ್ತೆಯಾಗಿವೆ. ಸೋಲಿಗರು ಬಿಳಿಗಿರಿ ರಂಗನ ಬೆಟ್ಟದಲ್ಲಿನ ಸ್ಥಳೀಯ ಸಮುದಾಯವಾಗಿದ್ದು ಅಭಯಾರಣ್ಯದ ಸೂಕ್ಷ್ಮತೆಗಳನ್ನು ಚೆನ್ನಾಗಿ ಅರಿತವರಾಗಿದ್ದಾರೆ. ಜೊತೆಗೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ಹೀಗಾಗಿ ಹೊಸ ಕಣಜಕ್ಕೆ ಸೋಲಿಗರ ಹೆಸರನ್ನಿಟ್ಟಿರುವುದು ತುಂಬಾ ಸೂಕ್ತವಾಗಿದೆ. ಕೀಟಗಳು ಕಾಡಿನ ಪರಿಸರದ ವ್ಯವಸ್ಥೆಯ ಸಮತೋಲನದಲ್ಲಿ ಮಹತ್ತರ ಪಾತ್ರವಹಿಸುತ್ತವೆ" ಎನ್ನುತ್ತಾರೆ ಗದಗದ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ.
ಅಚ್ಚರಿ ಮೂಡಿಸಿದ್ದ ಪಕ್ಷಿಗಳು!
ಬಿಳಿಗಿರಿರಂಗನ ಬೆಟ್ಟದ ಅರಣ್ಯದಲ್ಲಿ ಇತ್ತೀಚೆಗೆ ನಡೆದ ಪಕ್ಷಿ ಸಮೀಕ್ಷೆಯಲ್ಲಿ ಹೊಸದಾಗಿ ಎರಡು ಪ್ರಬೇಧದ ಪಕ್ಷಿಗಳು ಕಂಡು ಬಂದಿದ್ದವು. ನಾರ್ದನ್ ಶೋವೇಲರ್ ಹಾಗೂ ನಾರ್ದನ್ ಪಿಂಟೈಲ್ ಪಕ್ಷಿಗಳು ಕಂಡುಬಂದು ಅಚ್ಚರಿ ಮೂಡಿಸಿದ್ದವು.
ಇದನ್ನೂ ಓದಿ: Chamarajanagar: ಮಗಳಿಲ್ಲ ಎಂದು ಸಾಕಿದ ಬೆಕ್ಕಿಗೇ ಸೀಮಂತ ಮಾಡಿದ ದಂಪತಿ!
ಇದಲ್ಲದೇ ಬಹಳ ವರ್ಷಗಳ ಬಳಿಕ ಹಾರ್ನ್‌ಬಿಲ್ ಪಕ್ಷಿಯು ಇಲ್ಲಿ ಕಾಣಿಸಿಕೊಂಡಿದೆ. ಇದೀಗ ಬಹುವರ್ಣದ ಕಣಜ ಪತ್ತೆಯಾಗಿದ್ದು ಬಿಳಿಗಿರಿರಂಗನ ಬೆಟ್ಟದ ಅರಣ್ಯ ಅಪರೂಪದ ಜೀವ ವೈವಿಧ್ಯತೆಗೆ ಸಾಕ್ಷಿಯಾಗಿದೆ.
ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ