ಯಾವ ಕಾಡುಪ್ರಾಣಿಗಳ ಬಾಧೆಯಿಲ್ಲ, ನೀರಿಲ್ಲ ಅನ್ನೋ ಚಿಂತೆಯಿಲ್ಲ. ಹೆಚ್ಚು ಖರ್ಚು ಮಾಡಿ ಕೈಸುಟ್ಟುಕೊಳ್ಳೋ ತಲೆಬಿಸಿಯೂ ಇಲ್ಲ. ವರ್ಷಪೂರ್ತಿ ಕಾಡು ಪ್ರಾಣಿಗಳ ಹಾವಳಿ, ಬೆವರು ಸುರಿಸಿ ಬೆಳೆದ ಬೆಳೆಗೆ ಬಾಯಿ ಹಾಕೋ ಜಿಂಕೆ, ಕನ್ನ ಹಾಕೋ ಕಾಡುಕುರಿ, ದಾಳಿಯಿಡೋ ಆನೆಗಳ ಹಿಂಡು.ಈ ಎಲ್ಲಾ ಸಮಸ್ಯೆಯಿಂದ (Farmer's Problem) ಪಾರಾಗ್ಬೇಕು ಅಂತ ಯೋಚಿಸಿದ ಚಾಮರಾಜನಗರದ ಕಾಡಂಚಿನ ರೈತರಿಗೆ (Chamarajanagar Farmers) ಹೊಳೆದದ್ದೇ ಹೊಸ ಬೆಳೆ!
ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಾದ ಪುಣಜನೂರು, ಕುಳ್ಳೂರು, ರಂಗಸಂದ್ರ, ಬೂದಿಪಡಗ ಮೊದಲಾದ ಗ್ರಾಮಗಳಲ್ಲಿ ನಳನಳಿಸುತ್ತಿದೆ ದಕ್ಷಿಣ ಆಫ್ರಿಕಾ ಮೂಲದ ಚಿಯಾ ಬೆಳೆ!
ಮೈಸೂರಿನ ರೈತರಿಂದ ಪ್ರೇರಣೆ
ಅಂದಹಾಗೆ ಈ ಚಿಯಾ ಬೆಳೆಯನ್ನು ಕೆಲ ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ರೈತರು ಮೊದಲ ಬಾರಿಗೆ ಬೆಳೆದಿದ್ರು. ಅವರ ಯಶೋಗಾಥೆಯಿಂದ ಸ್ಪೂರ್ತಿಗೊಂಡು ಚಾಮರಾಜನಗರ ಜಿಲ್ಲೆಯ ರೈತರೂ ಚಿಯಾಗೆ ಜೈ ಹೇಳ್ತಿದ್ದಾರೆ.
ಎಲ್ಲ ಸಮಸ್ಯೆಗಳೂ ಮಂಗಮಾಯ
ಜೋಳ, ರಾಗಿ, ಕಬ್ಬು ಬೆಳೆಯುತ್ತಿದ್ದ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲದಂತ ಪರಿಸ್ಥಿತಿ ಎದುರಿಸುತ್ತಿದ್ರು. ಆದ್ರೆ ಈ ಚಿಯಾ ಬೆಳೆಯಿಂದ ಈ ಎಲ್ಲ ಸಮಸ್ಯೆಗಳೂ ಮಂಗಮಾಯ ಆಗ್ಬಿಟ್ಟಿದೆ. ಯಾವ ಕಾಡುಪ್ರಾಣಿಗೂ ಚಿಯಾ ತಿನ್ನೋ ಆಸೆಯಿಲ್ಲ, ಹೀಗಾಗಿ ಕಾಡುಪ್ರಾಣಿ ಹಾವಳಿ ಇಲ್ಲವೇ ಇಲ್ಲ ಅಂತಿದ್ದಾರೆ ರೈತರು.
ಹೆಚ್ಚಿನ ನೀರೂ ಬೇಕಿಲ್ಲ
ಅಷ್ಟೇ ಅಲ್ಲ ಕಣ್ರೀ, ಈ ಬೆಳೆಗೆ ಹೆಚ್ಚಿನ ನೀರು ಬೇಕಿಲ್ಲ. ಅತಿ ಹೆಚ್ಚು ಪ್ರೋಟೀನ್, ನಾರಿನಂಶ ಇರೋ ಚಿಯಾ ಒಮೆಗಾ-3 ಸೇರಿದಂತೆ ಹೇರಳ ಪೋಷಕಾಂಶ ಹಾಗು ಔಷಧೀಯ ಗುಣ ಹೊಂದಿದೆ. ಐಸ್ಕ್ರೀಂ, ಡೆಸರ್ಟ್, ಯೋಗರ್ಟ್ ಹಾಗು ಬ್ರೆಡ್ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತೆ.
ಒಂದು ಕ್ವಿಂಟಲ್ಗೆ 30 ಸಾವಿರದವರೆಗೂ ಸಿಗುತ್ತೆ
ಎಕರೆಗೆ ಮೂರರಿಂದ ನಾಲ್ಕು ಕ್ವಿಂಟಾಲ್ ಚಿಯಾ ಬೆಳೆದು ಕ್ವಿಂಟಲ್ಗೆ 25 ರಿಂದ 30 ಸಾವಿರ ರೂಪಾಯಿ ಮಾರಾಟ ಮಾಡಿದ ರೈತರ ಮುಖದಲ್ಲಿ ನಗು ಮೂಡುತ್ತಿದೆ.
ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!
ಹೊಸ ಪ್ರಯೋಗಕ್ಕೆ ರೆಡಿಯಾಗಿ!
ಒಟ್ಟಾರೆ ನಮ್ಮ ನಿಮ್ಮೂರಲ್ಲೂ ಹೊಸ ಹೊಸ ಪ್ರಯೋಗ ಮಾಡೋಕೆ ಸ್ಪೂರ್ತಿಯಾಗಿದ್ದಾರೆ ಚಾಮರಾಜನಗರದ ರೈತರು. ಹೊಸ ಬೆಳೆಯತ್ತ ಮುಖ ಮಾಡಿ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡ್ಕೊಂಡಿರುವ ಇವರಿಗೆ ನಾವೂ ಶುಭಾಶಯ ಹೇಳೋಣ ಅಲ್ವೇ.
ವರದಿ, ವಿಡಿಯೋ ಕೃಪೆ: ನಂದೀಶ್, ನ್ಯೂಸ್ 18 ಕನ್ನಡ ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ