ಚಾಮರಾಜನಗರ: ದೇಶದಲ್ಲಿ ಹುಲಿ ಯೋಜನೆ ಘೋಷಣೆಯಾಗಿ 50 ವರ್ಷ ತುಂಬಿದೆ. ಕೇಂದ್ರ ಸರ್ಕಾರ (Centre Government) ಕರ್ನಾಟಕದ ಬಂಡೀಪುರ (Bandipur Tigers) ಸೇರಿದಂತೆ ದೇಶದ 9 ಅರಣ್ಯಗಳನ್ನು 1973 ಏಪ್ರಿಲ್ 1 ರಂದು ಹುಲಿ ಸಂರಕ್ಷಿತ ಪ್ರದೇಶಗಳೆಂದು ಘೋಷಿಸಿ ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಸಂರಕ್ಷಣೆಗೆ ಮುನ್ನುಡಿ ಬರೆದಿತ್ತು.
ಭಾರತದಲ್ಲಿ ಪ್ರಸ್ತುತ 3000 ಕ್ಕೂ ಹೆಚ್ಚು ಹುಲಿಗಳಿವೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹುಲಿಗಣತಿ ನಡೆಯುತ್ತಿದ್ದು 2018ರ ಸಮೀಕ್ಷೆ ಪ್ರಕಾರ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.
ತುದಿಗಾಲಲ್ಲಿ ಕಾಯುವಂತೆ ಮಅಡಿದ ಹೊಸ ಹುಲಿ ಗಣತಿ
2022 ರ ಹುಲಿ ಸಮೀಕ್ಷಾ ವರದಿ ಇನ್ನಷ್ಟೇ ಹೊರಬೀಳಬೇಕಿದೆ. ಏಪ್ರಿಲ್ 9 ರಂದು ಮೈಸೂರಿನಲ್ಲಿ ನಡೆಯಲಿರುವ ಹುಲಿ ಯೋಜನೆಯ 50 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 2022 ರ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿರುವ ನಿರೀಕ್ಷೆ ಮೂಡಿಸಿದೆ.
ಹುಲಿಗಳ ಸಂಖ್ಯೆ ಹೀಗಿತ್ತು
2006ರಲ್ಲಿ ಭಾರತದಲ್ಲಿ 1411 ಹುಲಿಗಳಿದ್ದವು. ಆಗ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 290 ಇತ್ತು. 2010 ರಲ್ಲಿ ದೇಶದಲ್ಲಿ 1706 ಹುಲಿಗಳಿದ್ದರೆ, ಈ ಪೈಕಿ ಕರ್ನಾಟಕದಲ್ಲಿ 300 ಹುಲಿಗಳಿದ್ದವು. 2014ರಲ್ಲಿ ದೇಶದಲ್ಲಿ 2226, ಕರ್ನಾಟಕದಲ್ಲಿ 406 ಹಾಗೂ 2018ರಲ್ಲಿ ದೇಶದಲ್ಲಿ 2967, ಕರ್ನಾಟಕದಲ್ಲಿ 524 ಹುಲಿಗಳಿದ್ದವು.
ಇದನ್ನೂ ಓದಿ: Bandipur Tigers: ಇಂದಿರಾ ಗಾಂಧಿ ಕಾಲದಲ್ಲಿ 12, ಮೋದಿ ಟೈಮ್ನಲ್ಲಿ 173 ಹುಲಿಗಳು!
2018ರ ಗಣತಿ ಪ್ರಕಾರ 526 ಹುಲಿಗಳನ್ನು ಹೊಂದಿರುವ ಮದ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022 ರ ಹುಲಿ ಸಮೀಕ್ಷೆ ಪ್ರಕಾರ ಕರ್ನಾಟಕ ಮೊದಲ ಸ್ಥಾನಕ್ಕೆ ಏರುವ ನಿರೀಕ್ಷೆ ಇದ್ದು ಏಪ್ರಿಲ್ 9 ರಂದು ಮೈಸೂರಿನಲ್ಲಿ ಪ್ರದಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿರುವ ಹುಲಿಗಣತಿ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಹುಲಿಗಳ ಸಂಖ್ಯೆ ಹೆಚ್ಚಲು ಇದೇ ಕಾರಣ
ಕರ್ನಾಟಕದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಡೀಪುರದಲ್ಲಿ ಹಲವಾರು ಸಂರಕ್ಷಣಾ ಕ್ರಮಗಳ ಫಲವಾಗಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. 1931 ರಲ್ಲಿ ಅಂದಿನ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಬಂಡೀಪುರ ಅರಣ್ಯ ಪ್ರದೇಶದಲ್ಲಿ 90 ಚದುರ ಕಿಲೋ ಮೀಟರ್ ವಿಸ್ತೀರ್ಣದ ಅಭಯಾರಣ್ಯ ಪ್ರಾರಂಭಿಸಿದರು. ಈ ಅಭಯಾರಣ್ಯವನ್ನು 1941 ರಲ್ಲಿ 800 ಚದುರ ಕಿಲೋ ಮೀಟರ್ಗೆ ವಿಸ್ತರಿಸಿ ವೇಣುಗೋಪಾಲ ವನ್ಯಜೀವಿ ಉದ್ಯಾನವನ ಎಂದು ಘೋಷಿಸಿದ್ದರು.
ಬಂಡೀಪುರವನ್ನು ಕೇಂದ್ರ ಸರ್ಕಾರ 1973 ರಲ್ಲಿ ಹುಲಿ ಮೀಸಲು ಅರಣ್ಯ ಎಂದು ಘೋಷಿಸಿದಾಗ ಇಲ್ಲಿ ಕೇವಲ 12 ಹುಲಿಗಳಿದ್ದವು. ಈ ಹುಲಿ ಮೀಸಲು ಅರಣ್ಯವನ್ನು 1985 ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಗಿತ್ತು.
ಇದನ್ನೂ ಓದಿ: Inspiration: ಚಾಮರಾಜನಗರದಲ್ಲಿ ಈಗೇನಿದ್ರೂ 92 ವರ್ಷದ ಮಾದಮ್ಮರದ್ದೇ ಹವಾ!
ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ
ಚಾಮರಾಜನಗರ ಹಾಗು ಮೈಸೂರು ಜಿಲ್ಲೆಗಳಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ 2018 ಹುಲಿಗಣತಿ ಪ್ರಕಾರ 173 ಹುಲಿಗಳನ್ನು ಹೊಂದಿದ್ದು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅರಣ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡ್ ರಾಜ್ಯದ ಜಿಮ್ ಕಾರ್ಬೆಟ್ ಅಭಯಾರಣ್ಯ 231 ಹುಲಿಗಳಿದ್ದು ಮೊದಲ ಸ್ಥಾನದಲ್ಲಿದೆ. ಬಂಡೀಪುರದಲ್ಲಿ ಈ ಬಾರಿಯು ಹುಲಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ
ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ