ಚಾಮರಾಜನಗರ: ಗ್ರಾಮದೇವತೆ ಪ್ರೀತ್ಯರ್ಥವಾಗಿ ಪೂಜೆ (Worship) ಪುನಸ್ಕಾರ ಮಾಡಿ, ಗ್ರಾಮಸ್ಥರು ಆಕೆಯ ಆಶೀರ್ವಾದ ಪಡೆಯುವ ಪದ್ಧತಿ ಗ್ರಾಮಾಂತರ ಪ್ರದೇಶಗಳಲ್ಲಿ (Rural Area) ಇದೆ. ಕೆಲವೊಂದು ಕಡೆ ದೇವಿಯನ್ನು (Devi) ಸಮಾಧಾನಪಡಿಸಬೇಕು ಅಂತ ಕೋಳಿ, ಕುರಿ ಇತ್ಯಾದಿಗಳನ್ನು ಬಲಿ ಕೊಡುತ್ತಾರೆ. ಹಿಂದೆಲ್ಲ ನಾಗರಿಕತೆ (Civilization) ಬೆಳೆಯುವ ಮುನ್ನ ನರಬಲಿ ಅಂದರೆ ಮನುಷ್ಯನನ್ನು ಬಲಿ ಪಡೆಯುವ ಪದ್ಧತಿಯೂ ಇತ್ತು. ಆದರೀಗ ಆಧುನಿಕ ಸಮಾಜ ಬೆಳೆದಂತೆಲ್ಲ, ಕಾನೂನು (Law) ಕಟ್ಟಳೆಗಳು ಜಾಸ್ತಿಯಾಯಿತು. ಆಮೇಲೆ ನರಬಲಿಗೆ ನಿಷೇಧ ಹೇರಲಾಯಿತು. ಆದರೀಗ ಕರ್ನಾಟಕದಲ್ಲೇ (Karnataka) ಹೀಗೊಂದು ಆಚರಣೆ ಇದೆ ಅಂದರೆ ನಂಬುತ್ತೀರಾ? ಅರೇ ಏನಪ್ಪಾ ಇದು ನರಬಲಿ ಆಚರಣೆ? ಇದು ನಡೆಯುವುದು ಎಲ್ಲಿ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…
ಕೊಳ್ಳೆಗಾಲದಲ್ಲಿ ಹೀಗೊಂದು ವಿಚಿತ್ರ ಆಚರಣೆ
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಪಾಳ್ಯಗ್ರಾಮದ ಸೀಗಮಾರಮ್ಮನ ನರಬಲಿ ಹಬ್ಬ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಿಗ್ಗೆಯವರೆಗೆ ವಿಚಿತ್ರ ಆಚರಣೆಯೊಂದು ನಡೆಯಿತು. ಗ್ರಾಮದ ಎಲ್ಲ ಜನಾಂಗದವರು ಒಟ್ಟಾಗಿ ಆಚರಿಸುವ ಈ ಹಬ್ಬ 19 ವರ್ಷಗಳ ಬಳಿಕ ನಡೆಯಿತು.
ಸೀಗಮಾರಮ್ಮನಿಗೆ ನರಬಲಿ!
ಸೀಗಮಾರಮ್ಮನಿಗೆ ರಾತ್ರಿ ನರ ಬಲಿ ಕೊಟ್ಟು, ಗ್ರಾಮದ ಮಾರಮ್ಮನ ಗುಡಿಯ ಮುಂದೆ ಬಲಿ ಕೊಟ್ಟ ವ್ಯಕ್ತಿಯನ್ನು ಭಕ್ತರ ದರ್ಶನಕ್ಕೆ ಇರಿಸಿಲಾಗುತ್ತದೆ. ಬೆಳಿಗ್ಗೆ ಸಮೀಪದ ಗುಂಡೇಗಾಲ ಗ್ರಾಮದ ಒಳಗೆರೆ ಹುಚ್ಚಮ್ಮ ದೇವಿಯ ತೀರ್ಥವನ್ನು ಆತನ ಮೇಲೆ ಪ್ರೋಕ್ಷಣೆ ಮಾಡಲಾಗುತ್ತದೆ. ಆಗ ಆ ವ್ಯಕ್ತಿಗೆ ಜೀವ ಬರುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಇದನ್ನೂ ಓದಿ: Corona 4th Wave: "ಕೊರೋನಾದಿಂದ ಕಾಪಾಡಮ್ಮ" ಅಂತ ಸೋಂಕಿನ ಮಾರಿಯಮ್ಮನಿಗೆ ಪ್ರಾಣಿ ಬಲಿ ಕೊಟ್ಟ ಜನರು!
ದೇವಿಯ ಮುಂದೆ ಹೋಗುತ್ತಂತೆ ವ್ಯಕ್ತಿ ಪ್ರಾಣ
ಇಲ್ಲಿ ದೇವರಿಗೆ ಬಲಿಯಾಗುವ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಗ್ರಾಮದ ವಿವಿಧ ದೇವಾಲಯಗಳಿಂದ ಹೊರಟ ಐದು ಮೆರವಣಿಗೆಗಳು ಅಂದರೆ ಹೆಬ್ಬರದವರು, ಕೇಲಿನವರು, ಬಲಿಯವರು, ಸೀಗಮಾರಮ್ಮನ ಮುಖವಾಡ ಹೊರುವ ಮಡಿವಾಳರು ದೇವಿಯ ಉತ್ಸವ ಮೂರ್ತಿ ಹೊರುವ ಲಿಂಗಾಯತರು ಗ್ರಾಮದ ಮಧ್ಯದ ಕೂಡು ರಸ್ತೆಯಲ್ಲಿ ಸೇರುತ್ತಾರೆ.
ಈ ಸಂದರ್ಭದಲ್ಲಿ ಕೇಲಿನವರು ತೀರ್ಥವನ್ನು ಬಲಿಯಾಗುವ ವ್ಯಕ್ತಿಗೆ ಪ್ರೋಕ್ಷಣೆ ಮಾಡಿದಾಗ, ಆತ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ನಂತರ ಅವರನ್ನು ಗ್ರಾಮದ ಬಲಿ ದೇವರ ಮನೆಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಗೆ ಸೀಗಮಾರಮ್ಮ ದೇವಾಲಯದ ಅರ್ಚಕ ಬಂದು ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯ ಎದೆ ಮೇಲೆ ಕಾಲಿಟ್ಟಾಗ ಪ್ರಾಣ ಹೋಗುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಭಕ್ತರ ದರ್ಶನಕ್ಕೆ ವ್ಯವಸ್ಥೆ
ಮುಂಜಾವು ನಾಲ್ಕು ಗಂಟೆ ಸಮಯದಲ್ಲಿ ಬಲಿ ಬಿದ್ದ ವ್ಯಕ್ತಿಯನ್ನು ಬಲಿ ದೇವರ ಮನೆಯಿಂದ ಮಾರಮ್ಮನ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ. ಈ ಸಂದರ್ಭದಲ್ಲಿ ಬಲಿ ಬಿದ್ದ ವ್ಯಕ್ತಿಯನ್ನು ಮೇಲಕ್ಕೆ ಎಸೆಯಲಾಗುತ್ತದೆ. ಮಾರಮ್ಮನ ಗುಡಿ ಎದುರು ಒಣ ಹುಲ್ಲಿನ ಮೇಲೆ ವ್ಯಕ್ತಿಯನ್ನು ಮಲಗಿಸಿ ಪೂಜೆ ಮಾಡಲಾಗುತ್ತದೆ. ಕಣ್ಣು ಬಾಯಿ, ಮುಖಕ್ಕೆ ಅರಿಸಿನ, ಕುಂಕುಮ ಹಾಕಲಾಗುತ್ತದೆ. ಬೆಳಿಗ್ಗೆ 8.45ರವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: Mandya: ಬಲಿಗೆ ತಂದಿದ್ದ ಹುಂಜ ಎಸ್ಕೇಪ್! ಮರಹತ್ತಿ ಕುಳಿತ ಕೋಳಿಯನ್ನ ಹುಡುಕಿ ಹುಡುಕಿ ಸುಸ್ತು
ನಂತರ ಸೀಗಮಾರಮ್ಮದೇವಿಯ ತಂಗಿ ಅಂತಾನೇ ಹೆಸರಾದ ಒಳಗೆರೆ ಹುಚ್ಚಮ್ಮ ದೇವಸ್ಥಾನದ ತೀರ್ಥವನ್ನು ಮೆರವಣಿಗೆಯ ಮೂಲಕ ತರಲಾಗುತ್ತದೆ. ಬಳಿಕ ಬಲಿ ವ್ಯಕ್ತಿಗೆ ಪೂಜೆ ಮಾಡಿ ಮುಖಕ್ಕೆ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅವರು ಕಣ್ಣು ಬಿಡುತ್ತಾರೆ. ನಂತರ ಅವರನ್ನು ಹೊತ್ತುಕೊಂಡು ಸೀಗಮಾರಮ್ಮನ ದೇವಾಲಯಕ್ಕೆ ಕರೆ ತಂದು ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಉತ್ಸವ ಪೂರ್ಣಗೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ