ವೈಯಕ್ತಿಕ ( Personal) ಅಗತ್ಯಗಳ ಪೂರೈಕೆಗೆ, ಶಿಕ್ಷಣಕ್ಕೆ, ಮನೆ ಕಟ್ಟಲು, ವಾಹನ ತೆಗೆದುಕೊಳ್ಳಲು ಹೀಗೆ ಹತ್ತಾರು ಕಾರಣಗಳಿಗೆ ಹಣ ಹೊಂದಿಸಲು ಸಾಲ (Loan) ಎಂಬ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಾಲ ಒಬ್ಬರ ಸಂಕಷ್ಟದ ಸಮಯದಲ್ಲಿ ಕೈಹಿಡಿಯುತ್ತದೆ. ಆದರೂ ಮೈತುಂಬಾ ಸಾಲ ಮತ್ತೊಂದು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಸಾಲ ಮಾಡಿದರೆ ಅದು ಪ್ರಯೋಜನಕ್ಕೆ ಬರಬೇಕು ಮತ್ತು ಅದನ್ನು ನಮ್ಮ ಏಳಿಗೆಗೆ ಬಳಸಿಕೊಂಡು ಅದನ್ನು ತೀರಿಸುವ ಅರ್ಹತೆ ಹೊಂದಬೇಕು.
ಸಾಲಗಳಲ್ಲಿ ಕೈಸಾಲ, ಅಡಮಾನ ಸಾಲ, ವಾಹನ ಸಾಲ, ವಿದ್ಯಾರ್ಥಿ ಸಾಲ, ಮದುವೆ ಸಾಲ, ಗೃಹ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ ಅಂತಾ ಹಲವು ವಿಧಗಳಿವೆ. ಇವುಗಳಲ್ಲಿ ಹೆಚ್ಚಾಗಿ ಜನ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ. ವೈಯಕ್ತಿಕ ಸಾಲ ಹಿಂದಿನ ಸಾಲ ತೀರಿಸಲು, ವಸ್ತುಗಳನ್ನು ಖರೀದಿಸಲು ಅಥವಾ ದೂರದ ಪ್ರಯಾಣಕ್ಕೆ ಸಹಕಾರಿಯಾಗಿವೆ. ಅಂತೆಯೇ ಈ ಸಾಲ ನಮ್ಮ ವೃತ್ತಿಜೀವನಕ್ಕೂ ಸಹಕಾರಿಯಾಗಿದೆ.
ಇಲ್ಲಿ ವೈಯಕ್ತಿಕ ಸಾಲಗಳು ನಮ್ಮ ವೃತ್ತಿ ಜೀವನಕ್ಕೆ ಹೇಗೆ ಸಹಕಾರಿಯಾಗುತ್ತವೆ ಎಂಬುದನ್ನು ನೋಡೋಣ.
1) ತರಬೇತಿ ವೆಚ್ಚದಲ್ಲಿ ಹೂಡಿಕೆ
ವೃತ್ತಿಜೀವನದಲ್ಲಿ ಭವಿಷ್ಯ ಉತ್ತಮವಾಗಿರಬೇಕು, ಕೆಲಸದಲ್ಲಿ ಭದ್ರತೆ ಬೇಕು, ಹೆಚ್ಚಿನ ಕೌಶಲ್ಯ ಕಲಿತು ಅದರ ಪ್ರಯೋಜನ ಪಡೆಯಬೇಕು ಎನ್ನುವವರು ಕೆಲಸದ ಜೊತೆ ಜೊತೆಯೇ ಕೆಲ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.
ಈ ತರಬೇತಿಗೆ ಹೂಡಿಕೆ ಮಾಡಲು ನೀವು ವೈಯಕ್ತಿಕ ಸಾಲದ ಮೊರೆ ಹೋಗಬಹುದು. ನಿಮ್ಮ ಸಂಪೂರ್ಣ ಸಂಬಳವನ್ನು ಈ ಕೋರ್ಸ್‌ಗಳಲ್ಲಿ ಹೂಡಿಕೆ ಮಾಡುವ ಬದಲು ಈ ಸಾಲ ತೆಗೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಇದು ನಿಮಗೆ ಹೆಚ್ಚಿನ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.
2) ನಿಮ್ಮ ಭವಿಷ್ಯದ ಬೆಳವಣಿಗೆಯಲ್ಲಿ ಹೂಡಿಕೆ ಮಾಡಿ
ವೃತ್ತಿಪರ ನೆಟ್‌ವರ್ಕಿಂಗ್ ಈವೆಂಟ್‌ಗಳು ಮತ್ತು ಕಾರ್ಯಾಗಾರಗಳಿಗೆ ಪಾವತಿಸಲು ಅಥವಾ ನಿಮ್ಮ ವೃತ್ತಿಜೀವನಕ್ಕೆ ನೆರವಾಗುವ ಕಾರ್ಯಗಾರಗಳು, ಸೆಮಿನಾರ್‌ಗಳಿಗೆ ಹಾಜರಾಗಲು ನಿಮ್ಮ ವೈಯಕ್ತಿಕ ಸಾಲವನ್ನು ನೀವು ಬಳಸಬಹುದು.
ಹೋಟೆಲ್ ವಸತಿ ಅಥವಾ ಫ್ಲೈಟ್ ಟಿಕೆಟ್‌ನಂತಹ ಪ್ರಯಾಣ ವೆಚ್ಚಗಳನ್ನು ಪಾವತಿಸಲು ನೀವು ವೈಯಕ್ತಿಕ ಸಾಲವನ್ನು ಬಳಸಬಹುದು. ನೀವು ಹೊಸ ಉದ್ಯೋಗಕ್ಕಾಗಿ ಹೊಸ ನಗರಕ್ಕೆ ಹೋಗುತ್ತಿದ್ದರೆ, ವೈಯಕ್ತಿಕ ಸಾಲವು ಪ್ರಯಾಣ ವೆಚ್ಚವನ್ನು ಭರಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: Top 5 Courses: ಈ 5ರಲ್ಲಿ ಒಂದು ಕೋರ್ಸ್ ಮಾಡಿದ್ರೂ ಕೆಲಸ ಸಿಗೋ ಚಾನ್ಸ್ ದುಪ್ಪಟ್ಟಾಗುತ್ತೆ!
3) ಅಗತ್ಯ ವೃತ್ತಿಪರ ವಸ್ತುಗಳನ್ನು ಖರೀದಿಸಿ
ಪುಸ್ತಕಗಳು, ಗ್ಯಾಜೆಟ್‌ಗಳು ಅಥವಾ ವೃತ್ತಿಪರ ಪರಿಕರಗಳಂತಹ ವಸ್ತುಗಳನ್ನು ಪಾವತಿಸಲು ನೀವು ವೈಯಕ್ತಿಕ ಸಾಲದ ಹಣವನ್ನು ಬಳಸಬಹುದು. ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಅಗತ್ಯವಿರುವ ಕೆಲಸವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.
ಉದಾಹರಣೆಗೆ, ನೀವು ಕಂಪ್ಯೂಟರ್ ಇಂಜಿನಿಯರ್ ಆಗಿದ್ದರೆ, ಅಗ್ಗದ ಮಾದರಿಯ ಬದಲಿಗೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್ ಖರೀದಿಸಲು ನೀವು ಈ ಹಣವನ್ನು ಬಳಸಬಹುದು. ಅಥವಾ ನೀವು ಛಾಯಾಗ್ರಾಹಕರಾಗಿದ್ದರೆ ಒಳ್ಳೆಯ ಕ್ಯಾಮೆರಾ ಖರೀದಿಸಲು ಈ ಹಣ ಬಳಕೆ ಮಾಡಬಹುದು.
4) ಬಾಕಿ ಇರುವ ಸಾಲಗಳನ್ನು ವೈಯಕ್ತಿಕ ಸಾಲದಿಂದ ಪಾವತಿಸಿ
ಕ್ರೆಡಿಟ್ ಕಾರ್ಡ್‌ಗಳು, ಕಾರು ಸಾಲಗಳು ಅಥವಾ ವಿದ್ಯಾರ್ಥಿ ಸಾಲಗಳು ಸೇರಿದಂತೆ ಯಾವುದೇ ಬಾಕಿ ಇರುವ ಸಾಲಗಳನ್ನು ಪಾವತಿಸಲು ವೈಯಕ್ತಿಕ ಸಾಲವು ನಿಮಗೆ ಸಹಾಯ ಮಾಡುತ್ತದೆ.
ವೈಯಕ್ತಿಕ ಸಾಲವು ನಿಮ್ಮ ಕ್ರೆಡಿಟ್ ಕಾರ್ಡ್ ಸಾಲದಂತಹ ಯಾವುದೇ ಬಾಕಿ ಇರುವ ಸಾಲಗಳನ್ನು ಹೆಚ್ಚು ತ್ವರಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಒಂದೇ ಬಾರಿ ಈ ಎಲ್ಲಾ ಸಾಲಗಳನ್ನು ತೀರಿಸಿ ಒತ್ತಡಗಳನ್ನು ಕಡಿಮೆ ಮಾಡಿಕೊಂಡು ವೃತ್ತಿಜೀವನದ ಯಶಸ್ಸಿನ ಕಡೆ ಗಮನಹರಿಸಬಹುದು.
5) ದೈನಂದಿನ ಜೀವನ ವೆಚ್ಚಗಳಿಗೆ ಸಹಾಯ
ವೈಯಕ್ತಿಕ ಸಾಲವು ನಿಮ್ಮ ಕೆಲವು ದೈನಂದಿನ ವೆಚ್ಚಗಳನ್ನು ಸರಿದೂಗಿಸಲು ಸಹಾಯ ಮಾಡುವ ಕೈಗೆಟುಕುವ ಮಾರ್ಗವಾಗಿದೆ. ದಿನಸಿ, ಬಾಡಿಗೆ, ಯುಟಿಲಿಟಿ ಬಿಲ್‌ಗಳು ಅಥವಾ ನಿಮಗೆ ಹಣದ ಅಗತ್ಯವಿರುವ ಯಾವುದಕ್ಕಾದರೂ ಪಾವತಿಸಲು ನಿಮ್ಮ ಸಾಲವನ್ನು ಬಳಸಬಹುದು.
ವೃತ್ತಿ ಜೀವನವನ್ನು ಈಗಷ್ಟೇ ಆರಂಭಿಸಿದ್ದರೆ ಸಂಬಳದ ಹಣ ಈ ಎಲ್ಲಾ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದಲ್ಲಿ ಈ ಸಾಲದ ಮೂಲಕ ಈ ವೆಚ್ಚಗಳನ್ನು ಭರಿಸಬಹುದು.
6) ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಿ
ವೈಯಕ್ತಿಕ ಸಾಲವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ ಮತ್ತೆ ನಿಮಗೆ ಸಾಲ ಬೇಕಿದ್ದಲ್ಲಿ ಈ ಕ್ರೆಡಿಟ್ ಸ್ಕೋರ್ ನಿಮಗೆ ಸಹಾಯ ಮಾಡಿ ಹೆಚ್ಚಿನ ಸಾಲ ದೊರೆಯಲು ಸಹಕಾರಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ