ಉದ್ಯೋಗದಾತ (Employer) ಹಾಗೂ ಉದ್ಯೋಗಿ (Employee) ನಿರ್ವಹಣೆಯ ನಿಯಮಾವಳಿಗಳನ್ನು ಪರಿಷ್ಕರಿಸಲು ಹಾಗೂ ಕಾರ್ಮಿಕ ಕಾನೂನುಗಳನ್ನು (New Labour Law) ಇನ್ನಷ್ಟು ಸುಧಾರಿತಗೊಳಿಸಲು ಸರಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಜಾರಿಗೊಳಿಸಲಾದ ಕಾರ್ಮಿಕ ಸಂಹಿತೆಗಳು ವೇತನ, ಸಾಮಾಜಿಕ ಭದ್ರತೆ (ಪಿಂಚಣಿ, ಗ್ರಾಚ್ಯುಟಿ), ಕಾರ್ಮಿಕ ಕಲ್ಯಾಣ, ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಸಮಯದ (ಮಹಿಳೆಯರನ್ನು ಒಳಗೊಂಡಂತೆ) ಸುಧಾರಣೆಗಳನ್ನು ರೂಪಿಸುತ್ತವೆ.
ಕೆಲಸದ ಸಮಯದ ಮೇಲೆ ನೀತಿಯ ಪ್ರಭಾವ
ಪ್ರಸ್ತುತ, ಉದ್ಯೋಗಿಗಳ ಕೆಲಸದ ಸಮಯ ಮತ್ತು ರಜೆಯನ್ನು (ಪಾವತಿ/ಸವಲತ್ತು ರಜೆ) ಕೇಂದ್ರ ಮಟ್ಟದಲ್ಲಿ ಕಾರ್ಖಾನೆಗಳ ಕಾಯಿದೆ, 1948 ಮತ್ತು ರಾಜ್ಯ ಮಟ್ಟದಲ್ಲಿ ಸಂಬಂಧಿತ ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆಯಿಂದ ನಿಯಂತ್ರಿಸಲ್ಪಡುತ್ತದೆ.
ಕಾರ್ಮಿಕರ ಕೆಲಸದ ಸಮಯ ಮತ್ತು ರಜೆಯನ್ನು ಸುಗಮಗೊಳಿಸುವುದು ಮತ್ತು ಸೇವಾ ಉದ್ಯಮವನ್ನು ಜೊತೆಯಾಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿರುವ ಸರಕಾರವು ಉದ್ಯೋಗಿಗಳ ಕ್ಷೇಮಾಭಿವೃದ್ಧಿಯತ್ತ ಗಮನ ಹರಿಸಿದೆ. ಕಾರ್ಮಿಕ ಸಂಹಿತೆಗಳು ಪ್ರತಿಯೊಂದು ಉದ್ಯಮಕ್ಕೂ ಅನ್ವಯಿಸುತ್ತವೆ.
ಈ ಕಾನೂನುಗಳ ಅಡಿಯಲ್ಲಿ ಕಾರ್ಮಿಕರೆಂದು ವರ್ಗೀಕರಿಸಲಾದ ನೌಕರರಿಗೆ ಪ್ರಯೋಜನಗಳನ್ನು ಒದಗಿಸಲು ಸರಕಾರ ಸಿದ್ಧವಾಗಿದೆ. ಆಡಳಿತಾತ್ಮಕ ಸಿಬ್ಬಂದಿಯ ಕೆಲಸದ ಸಮಯ ಹಾಗೂ ರಜಾದಿನಗಳನ್ನು ರಾಜ್ಯ ಸರಕಾರದ ಅಂಗಡಿಗಳು ಮತ್ತು ಸ್ಥಾಪನೆಯ ಶಾಸನವು ನಿಯಂತ್ರಿಸುತ್ತದೆ.
ಮಾಸಿಕ ವೇತನದ ಮೌಲ್ಯ
ಸೇವಾ ವಲಯ ಸೇರಿದಂತೆ ಎಲ್ಲಾ ಕೈಗಾರಿಕೆಗಳಿಗೆ ಹೊಸ ಕಾರ್ಮಿಕ ನೀತಿಯ ಅನ್ವಯ ವೈಯಕ್ತಿಕ ಕೊಡುಗೆದಾರರಿಗೆ ಮಾಸಿಕ ವೇತನದ ಮಿತಿ 18,000 ರೂ. ಅಗಿದೆ.
ನಿರ್ವಹಣೆ, ಆಡಳಿತಾತ್ಮಕ ಹಾಗೂ ಮೇಲ್ವಿಚಾರಣೆ ಕರ್ತವ್ಯಗಳನ್ನು ಹೊಂದಿರದ ಹಾಗೂ ರೂ 20 ಲಕ್ಷ ಆದಾಯ ಹೊಂದಿರುವಂತಹ ವೈಯಕ್ತಿಕ ಕೊಡುಗೆದಾರರಾದ ಸಾಫ್ಟ್ವೇರ್ ಡೆವಲಪರ್ಗಳನ್ನು ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಕೆಲಸಗಾರ ಎಂದು ಪರಿಗಣಿಸಬಹುದು ಎಂದು ವರದಿ ತಿಳಿಸಿದೆ.
ವಾರದಲ್ಲಿ ನಾಲ್ಕು ದಿನ ಕೆಲಸ
ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ, ದೈನಂದಿನ ಮತ್ತು ಸಾಪ್ತಾಹಿಕ ಕೆಲಸದ ಸಮಯವನ್ನು ಕ್ರಮವಾಗಿ 12 ಗಂಟೆಗಳು ಮತ್ತು 48 ಗಂಟೆಗಳವರೆಗೆ ಮಿತಿಗೊಳಿಸಲಾಗಿದೆ.
ಹೆಚ್ಚುವರಿಯಾಗಿ, ಕೈಗಾರಿಕೆಗಳಾದ್ಯಂತ ತ್ರೈಮಾಸಿಕದಲ್ಲಿ ಕಾರ್ಮಿಕರಿಗೆ ಗರಿಷ್ಠ ಅಧಿಕಾವಧಿ ಸಮಯವನ್ನು 50 ಗಂಟೆಗಳಿಂದ (ಕಾರ್ಖಾನೆಗಳ ಕಾಯಿದೆಯಡಿಯಲ್ಲಿ) 125 ಗಂಟೆಗಳವರೆಗೆ (ಹೊಸ ಕಾರ್ಮಿಕ ಸಂಹಿತೆಗಳಲ್ಲಿ) ಹೆಚ್ಚಿಸಲಾಗಿದೆ.
ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡುವುದು ಕಾರ್ಮಿಕರಿಗೆ ದೀರ್ಘಾವಧಿ ವಿಶ್ರಾಂತಿಯನ್ನು ನೀಡುವುದರ ಜೊತೆಗೆ ವಾರದ ದಿನಗಳಲ್ಲಿ ಹೆಚ್ಚಿನ ಕೆಲಸದ ಒತ್ತಡವನ್ನು ಉಂಟು ಮಾಡಬಹುದು. ಇದರಿಂದ ಕಾರ್ಮಿಕರ ಆರೋಗ್ಯ ಕ್ಷೀಣಗೊಳ್ಳಬಹುದು ಎಂಬ ಅಂಶ ಕೂಡ ಪರಿಗಣಿತವಾಗಿದೆ. ಅದೇ ರೀತಿ ಹೆಚ್ಚುವರಿ ಸಮಯಗಳಲ್ಲಿ ಕೆಲಸ ಮಾಡುವುದು ಕಾರ್ಮಿಕರಿಗೆ ಹೆಚ್ಚಿನ ವೇತನವನ್ನು ಗಳಿಸುವುದಕ್ಕೆ ಅನುವು ಮಾಡಿಕೊಡುತ್ತದೆ.
ವಾರ್ಷಿಕ ರಜೆಗಳ ಮೇಲೆ ಬೀರಿರುವ ಪರಿಣಾಮಗಳು
ಉದ್ಯೋಗಿಯು ಉದ್ಯೋಗದ ಸಮಯದಲ್ಲಿ ಪಡೆಯಬಹುದಾದ ರಜೆ
ಮುಂದಿನ ವರ್ಷಕ್ಕೆ ಮುಂದುವರಿಸುವ ರಜೆ
ಉದ್ಯೋಗದ ಅವಧಿಯಲ್ಲಿ ರಜೆಯನ್ನು ನಗದಿನ ರೂಪದಲ್ಲಿ ಪರಿವರ್ತಿಸಿಕೊಳ್ಳುವುದು
ಹೊಸ ಕಾರ್ಮಿಕ ಸಂಹಿತೆಗಳು ರಜೆ ಪಡೆದುಕೊಳ್ಳುವ ಅರ್ಹತೆಯನ್ನು 240 ಕೆಲಸದ ದಿನಗಳನ್ನು 180 ದಿನಗಳಿಗೆ ಕಡಿಮೆ ಮಾಡಿದೆ. ಇದರರ್ಥ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ, ಹೊಸ ಉದ್ಯೋಗಿ ಸೇರಿಕೊಂಡಾಗ, ಅವರು ರಜೆ ತೆಗೆದುಕೊಳ್ಳಲು ಅರ್ಹರಾಗಲು 240 ದಿನಗಳು ಕೆಲಸ ಮಾಡಬೇಕಾಗುತ್ತದೆ.
ಆದಾಗ್ಯೂ, ಹೊಸ ಕಾರ್ಮಿಕ ಸಂಹಿತೆಗಳ ಪ್ರಕಾರ ಹೊಸದಾಗಿ 180 ದಿನಗಳು ಕೆಲಸ ಮಾಡಿದರೆ ಸಾಕು. ಅರ್ಹತಾ ಮಾನದಂಡಗಳನ್ನು ಹೊರತುಪಡಿಸಿ ರಜೆಗೆ ಸಂಬಂಧಿಸಿದ ನಿಬಂಧನೆಗಳು ಬದಲಾಗಿಲ್ಲ.
ಉದಾಹರಣೆಗೆ, ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ನೌಕರನಿಗೆ 45 ದಿನಗಳ ರಜೆ ಬಾಕಿ ಇದೆ ಎಂದಾದಲ್ಲಿ, ಅಂತಹ ಸನ್ನಿವೇಶದಲ್ಲಿ, ಉದ್ಯೋಗದಾತನು ನೌಕರನಿಗೆ 15 ದಿನಗಳ ರಜೆಯ ನಗದನ್ನು ಪಾವತಿಸಬೇಕಾಗುತ್ತದೆ. ಉಳಿದ 30 ದಿನಗಳ ರಜೆಯನ್ನು ಮುಂದಿನ ಕ್ಯಾಲೆಂಡರ್ ವರ್ಷಕ್ಕೆ ಮುಂದುವರಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ