ಅನಿರೀಕ್ಷಿತ ಉದ್ಯೋಗ ಕಡಿತಗಳು ( Layoff) ಇಂದು ಉದ್ಯೋಗಿಗಳ ಮೇಲೆ ಹಲವಾರು ಹೊಡೆತಗಳನ್ನುಂಟು ಮಾಡುತ್ತಿದೆ. ಅದೆಷ್ಟೋ ಕನಸುಗಳನ್ನು ಕಟ್ಟಿ ಕನಸಿನ ಸಂಸ್ಥೆಗೆ ಸೇರಿದ ಕೆಲವೇ ದಿನಗಳಲ್ಲಿ ಸಂಸ್ಥೆಯಿಂದ ವಜಾಗೊಳಿಸಿದ (Job Cut) ಸೂಚನೆಗಳು ಕೈ ಸೇರುತ್ತಿವೆ. ಕೈ ತುಂಬಾ ಸಂಬಳ ನೀಡುತ್ತಿದ್ದ ಕಂಪನಿಗಳು ಉದ್ಯೋಗಿಗಳ ಸುಖ ಸಂತೋಷಕ್ಕೆ ಆದ್ಯತೆ ನೀಡುತ್ತಿದ್ದ ಸಂಸ್ಥೆಗಳೇ ಆರ್ಥಿಕ ಸ್ಥಿಮಿತವನ್ನು ಸರಿದೂಗಿಸಲು ಉದ್ಯೋಗಿಗಳ ಹೊಟ್ಟೆಗೆ ಬಡಿಯುವಂತಹ ನಿರ್ಧಾರವನ್ನು ಕೈಗೊಳ್ಳುತ್ತಿದೆ.
ಈ ಸಮಯದಲ್ಲಿ ಉದ್ಯೋಗ ನಷ್ಟಗೊಂಡ ಉದ್ಯೋಗಿಗಳಿಗೆ ಶೀಘ್ರವೇ ಉದ್ಯೋಗ ಹುಡುಕುವ ಧಾವಂತ, ಒತ್ತಡ ಎದುರಾಗಿರುತ್ತದೆ. ಯಾವುದಾದರೂ ಉದ್ಯೋಗ ಸಿಕ್ಕಿದರೂ ಸಾಕು ತಾವು ಬದುಕಿಕೊಳ್ಳುತ್ತೇವೆ ಎಂಬ ಭರವಸೆಗೆ ಅವರು ಜೋತುಬೀಳುತ್ತಾರೆ.
ಈ ಸಂದರ್ಭದಲ್ಲಿ ಉದ್ಯೋಗ ಸಂದರ್ಶನಗಳು ಅತಿಮುಖ್ಯವಾಗಿರುತ್ತವೆ. ಅದಕ್ಕಾಗಿಯೇ ಈ ಲೇಖನದಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಯಾವುದೇ ಉದ್ಯೋಗ ಸಂದರ್ಶನಕ್ಕೆ ಹಾಜರಾಗುವ ಮುನ್ನ ನಿಮ್ಮನ್ನು ಸಂದರ್ಶಿಸುವ ನೇಮಕಾತಿದಾರರು, ಸಂಸ್ಥೆ, ಅಲ್ಲಿನ ಪರಿಸರದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ತಜ್ಞರು ತಿಳಿಸುತ್ತಾರೆ. ಸಂದರ್ಶನಕ್ಕೆ ಹಾಜರಾಗುವ ಮುನ್ನವೇ ಸಂದರ್ಶನ ನಡೆಸುವ ಸಂದರ್ಶನದಾರರ ಬಗ್ಗೆ ಮಾಹಿತಿಯನ್ನು ಕಲೆಹಾಕುವುದು ಹೇಗೆ ಎಂಬುದು ಕೊಂಚ ಸವಾಲಿನದ್ದಾದರೂ ಅದಕ್ಕೂ ಕೆಲವು ಸಲಹೆಗಳನ್ನು ಪಾಲಿಸಿದರೆ ಸಾಕು.
1) ಕಂಪನಿಯ ಬಗ್ಗೆ ಪರಿಶೀಲನೆ ನಡೆಸಿ
ಕಂಪನಿಯ ವೆಬ್ಸೈಟ್ ಹಾಗೂ ಸೋಶಿಯಲ್ ಮೀಡಿಯಾ ಪುಟಕ್ಕೆ ಭೇಟಿ ನೀಡಿ. ಇದರಿಂದ ಕಂಪನಿ ಯಾವುದನ್ನು ಪ್ರಚಾರಪಡಿಸುತ್ತದೆ ಹಾಗೂ ಇದು ಯಾವ ರೀತಿಯ ಉದ್ಯಮ ನಡೆಸುತ್ತದೆ, ಇದರ ಗ್ರಾಹಕರು ಯಾರು ಎಂಬ ವಿವರ ದೊರೆಯುತ್ತದೆ. ನಿಮ್ಮಲ್ಲಿರುವ ಕೌಶಲ್ಯಗಳು ಕಂಪನಿಯ ವಿಭಾಗಕ್ಕೆ ಸರಿಹೊಂದುತ್ತದೆಯೇ ಎಂಬುದನ್ನು ಗಮನಿಸಿ. ಸಂದರ್ಶನಕ್ಕೆ ಉತ್ತಮವಾಗಿ ಸಿದ್ಧರಾಗಿ ಹೋಗುವುದು ಹೇಗೆ ಎಂಬ ಸಲಹೆಯನ್ನು ಇದು ನಿಮಗೆ ನೀಡುತ್ತದೆ.
2) ಸಂದರ್ಶಕರ ಪರಿಶೋಧನೆ ನಡೆಸಿ
ಸಂದರ್ಶಕರ ಲಿಂಕ್ಡ್ಇನ್ ಪ್ರೊಫೈಲ್ಗೆ ಭೇಟಿ ನೀಡಿ ಹಾಗೂ ಅವರ ಅನುಭವ ವಿಶೇಷತೆಗಳ ಬಗ್ಗೆ ಅರಿತುಕೊಳ್ಳಿ. ತಮ್ಮ ವೃತ್ತಿಜೀವನವನ್ನು ಸಂದರ್ಶಕ ಹೇಗೆ ಮೇಲ್ದರ್ಜೆಗೆ ಕೊಂಡೊಯ್ದಿದ್ದಾನೆ ಎಂಬುದನ್ನು ಪರಿಶೀಲಿಸಿ. ಸಂದರ್ಶಕರ ವ್ಯಕ್ತಿತ್ವವನ್ನು ಗಮನಿಸಿ. ಅವರಿಗೆ ಸಾಮಾಜಿಕ ಖಾತೆಗಳು ಯಾವುದಾದರೂ ಇದೆಯೇ ಎಂಬುದನ್ನು ವಿಶ್ಲೇಷಣೆ ನಡೆಸಿ. ಅವರ ಹವ್ಯಾಸಗಳ ಬಗ್ಗೆ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕಿ. ಅವರ ನಿಮ್ಮ ನಡುವಿನ ಸಾಮ್ಯತೆಗಳೇನು ಎಂಬುದನ್ನು ಕಂಡುಕೊಳ್ಳಿ.
3) ಜನರೊಂದಿಗೆ ಸಂವಹನ ನಡೆಸಿ
ನಿಮ್ಮ ಮಾರ್ಗದರ್ಶಕರು, ಸಂಪರ್ಕದಲ್ಲಿರುವ ಜನರು ಹಾಗೂ ಸಂದರ್ಶಕರ ಬಗ್ಗೆ ಗೊತ್ತಿರುವ ಜನರೊಂದಿಗೆ ಸಂವಹನ ನಡೆಸಿ. ಸಂದರ್ಶನವು ಹೇಗೆ ನಡೆಯಬಹುದು? ಸಂದರ್ಶಕರು ಹೆಚ್ಚಾಗಿ ಯಾವ ವಿಷಯ ಬಗ್ಗೆ ಪ್ರಶ್ನೆಯನ್ನು ಕೇಳುತ್ತಾರೆ? ಅವರ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ. ಇದರಿಂದ ಸಂದರ್ಶನವನ್ನು ನೀವು ಸುಲಭವಾಗಿ ಗೆಲ್ಲಬಹುದು.
4) ಸಂದರ್ಶನಕ್ಕೆ ಬೇಕಾದ ಅಂಶಗಳನ್ನು ಹುಡುಕಿ
ನೀವು ನಡೆಸಿದ ಸಂಶೋಧನೆ ಹಾಗೂ ಪಟ್ಟಿಗಳೊಂದಿಗೆ ಹೋಲಿಕೆಗಳನ್ನು ಗುರುತಿಸಿ. ಸಂದರ್ಶನಕ್ಕೆ ಬೇಕಾದ ಇನ್ನಷ್ಟು ವಿವರಗಳನ್ನು ಕಲೆಹಾಕಿದ ಮಾಹಿತಿಗಳಿಂದ ಪಡೆದುಕೊಳ್ಳಬಹುದಾಗಿದೆ. ಸಕಾರಾತ್ಮಕ ಪ್ರಭಾವ ಬೀರಲು ನಿಮ್ಮ ಸಂಭಾಷಣೆಯ ಭಾಗವನ್ನು ಎಲ್ಲಿ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಪರಿಶೀಲಿಸಿ. ಸಂದರ್ಶಕರೊಂದಿಗೆ ಯಾವ ರೀತಿಯಲ್ಲಿ ಸಂವಹನ ನಡೆಸಬೇಕು ಎಂಬುದನ್ನು ಕಂಡುಕೊಳ್ಳಿ
5) ಸಂದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಿ
ನಿಮಗೆ ಗೊತ್ತಿರುವ ಸಂದರ್ಶಕರೊಂದಿಗೆ ನೀವು ಸಂದರ್ಶನ ನಡೆಸಲು ಇದೀಗ ಸಿದ್ಧರಾಗಿರುವಿರಿ. ಅವರ ಬಗ್ಗೆ ಸಾಧ್ಯವಾದಷ್ಟು ಮಾಹಿತಿಗಳನ್ನುಇದೀಗ ನೀವು ಕಲೆಹಾಕಿದ್ದೀರಿ. ಸಂಸ್ಥೆಯ ಕುರಿತು ಮಾಹಿತಿಗಳನ್ನು ಪಡೆದುಕೊಂಡಿರುವಿರಿ. ಸಂಸ್ಥೆಯು ಯಾವ ರೀತಿಯ ಅಭ್ಯರ್ಥಿಗಳನ್ನು ಹುಡುಕುತ್ತಿದೆ ಎಂಬುದನ್ನು ನೀವು ಮನಗಂಡಿದ್ದೀರಿ.
ಸಂದರ್ಶಕರೊಂದಿಗೆ ಸಂವಹನ ನಡೆಸುವಾಗ ಅವರ ಬಗ್ಗೆ ನಿಮಗೆ ಎಲ್ಲಾ ತಿಳಿದಿದೆ ಎಂಬ ರೀತಿಯಲ್ಲಿ ವರ್ತಿಸದಿರಿ ಇದರಿಂದ ಅವರು ನಿಮ್ಮ ಮೇಲೆ ಸಂದೇಹ ಪಡಬಹುದು. ಪರಿಸ್ಥಿತಿ ಆಧರಿಸಿ ಸಂದರ್ಶಕರೊಂದಿಗೆ ಸೌಮ್ಯವಾದ ಸಂವಹನಗಳನ್ನು ನಡೆಸಿ. ನೀವು ಅರಿತುಕೊಂಡಿರುವುದರ ಬಗ್ಗೆ ದೃಢವಾಗಿ ಹಾಗೂ ಧೈರ್ಯದಿಂದ ಮಾತನಾಡಿ. ಸಂದರ್ಶನದ ಸಮಯದಲ್ಲಿ ನಿಮ್ಮನ್ನು ಸಂದರ್ಶಿಸುವವರ ಕುರಿತು ಕೊಂಚವಾದರೂ ಮಾಹಿತಿಯನ್ನು ಕಲೆಹಾಕುವುದು ಅಗತ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ