ಯಾವುದಕ್ಕಾದರೂ ಕಾಯೋದು (Waiting) ಅಂದರೆ ಅದು ಈಗಿನ ಬಿಡುವಿಲ್ಲದ ಜೀವನದಲ್ಲಿ ತುಂಬಾನೆ ಕಷ್ಟದ ಕೆಲಸ. ಗಡಿಯಾರದ ಮುಳ್ಳುಗಳು (Fast World) ಮುಂದೆ ಸರಿಯುವುದನ್ನೇ ಪದೇ ಪದೇ ನೋಡುತ್ತಿರುತ್ತೇವೆ. ಇದು ವೇಗದ ಯುಗ, ಕಾಯಲು ಈಗ ಯಾರೊಬ್ಬರೂ ಸಿದ್ಧರಿಲ್ಲ. ಸದಾ ಕಾಲ ಅವಸರ, ಧಾವಂತಗಳ ನಡುವೆ ಜೀವನ ಸಾಗಿಸುತ್ತಾರೆ. ಪ್ರತಿಕ್ಷಣ ಸವಾಲು, ಸ್ಪರ್ಧೆಗಳ ನಡುವೆಯೇ ಬದುಕುವ ನಾವು ಸ್ವಲ್ಪ ಕಾದು ನೋಡೋಣ ಎಂದು ನಿಧಾನಿಸಿದರೂ ಆ ಅವಕಾಶ ಮತ್ತಾರದೋ ಪಾಲಾಗಿ ಹೋಗಿರುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಕಾಯಲೇಬೇಕಾಗುತ್ತದೆ.
ಇದು ನಮ್ಮ ನಿಮ್ಮ ಯಾವುದೋ ಕೆಲಸದ ವಿಚಾರದಲ್ಲಿ ಸಹ ತಪ್ಪಿದ್ದಲ್ಲ. ಸಂದರ್ಶನ ವಿಚಾರದಲ್ಲಿ ಕಾಯುವ ಪ್ರಕ್ರಿಯೆಯನ್ನು ನೋಡುವುದಾದರೆ ಇಲ್ಲಿ ಕಾಯುವಿಕೆ ವಿಭಿನ್ನವಾಗಿರುತ್ತದೆ. ಇಲ್ಲಿ ಸ್ವಲ್ಪ ತಾಳ್ಮೆ, ಸಹನೆ ಇರಲೇಬೇಕು.
ಉದ್ಯೋಗ ಸಂದರ್ಶನ
ಕೆಲಸದ ಸಂದರ್ಶನ ಎಂದರೆ ಸುಲಭವಲ್ಲ. ಪೂರ್ವ ತಯಾರಿ, ಅಗತ್ಯವಾದ ಪದವಿ, ತಾಳ್ಮೆ ಎಲ್ಲವೂ ಇರಬೇಕು. ಸಂದರ್ಶನ ಕೊಟ್ಟ ಎಲ್ಲಾ ಕಡೆಯೂ ಕೆಲಸ ಸಿಗಲ್ಲ, ಇದಕ್ಕಾಗಿ ಹಲವು ಪ್ರಯತ್ನಗಳು ಬೇಕಾಗುತ್ತದೆ. U.S. ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ ಸಂದರ್ಶನದ ನಂತರ ಕೇವಲ 37% ಅಭ್ಯರ್ಥಿಗಳು ಉದ್ಯೋಗದ ಪ್ರಸ್ತಾಪವನ್ನು ಪಡೆಯುತ್ತಾರೆ ಎಂದು ಹೇಳಿದೆ.
ಉದ್ಯೋಗ ಸಂದರ್ಶನ ಪ್ರಕ್ರಿಯೆ ವಿಳಂಬವಾದರೆ ಏನು ಮಾಡಬೇಕು?
ಸಂದರ್ಶನ ನೀಡಿ ಬಂದ ನಂತರ ಕಂಪನಿಯ ಉತ್ತರಕ್ಕಾಗಿ ಕಾಯುವುದು ತುಂಬಾನೇ ಅಸಹನೀಯ. ಕೆಲಸದ ಅಗತ್ಯವಿದ್ದಲ್ಲಿ, ಹಣದ ಅವಶ್ಯಕತೆ ಇದ್ದಲ್ಲಿ ಕೆಲಸ ಬೇಗ ಸಿಕ್ಕಿ ಬಿಡಲಿ ಎನ್ನುವ ಅಭಿಲಾಷೆ ಇರುತ್ತದೆ.
ಕೆಲವು ಕಂಪನಿಗಳು ಈ ಪ್ರಕ್ರಿಯೆಯನ್ನು ಬೇಗನೆ ಮುಗಿಸಿದರೆ, ಇನ್ನೂ ಕೆಲ ಕಂಪನಿಗಳು ವಿಳಂಬ ಮಾಡುತ್ತವೆ. ಈ ಸಂದರ್ಭದಲ್ಲಿ ನಾವು ಕಾಯಲೇ ಬೇಕಾಗುತ್ತದೆ. ಫೋರ್ಬ್ಸ್ ವರದಿ ಪ್ರಕಾರ, ಒಂದೆರಡು ವಾರಗಳನ್ನು ಎಲ್ಲಾ ಕಂಪನಿಗಳು ಈ ಪ್ರಕ್ರಿಯೆಯನ್ನು ಮುಗಿಸಲು ತೆಗೆದುಕೊಳ್ಳುತ್ತವೆ.
ಕೆಲವೊಮ್ಮೆ ಈ ಸಮಯ ಉದ್ಯಮದಿಂದ ಉದ್ಯಮಕ್ಕೆ ಬದಲಾಗುತ್ತದೆ ಎಂದು ಹೇಳಿದೆ. ತಂತ್ರಜ್ಞಾನ ಮತ್ತು ಉತ್ಪಾದನಾ ವ್ಯವಹಾರಗಳು 16 ವ್ಯವಹಾರ ದಿನಗಳನ್ನು ತೆಗೆದುಕೊಳ್ಳಬಹುದು, ಇನ್ನೂ ಆತಿಥ್ಯ ವ್ಯವಹಾರಗಳಾದ (hospitality businesses) ಹೋಟೇಲ್ಗಳು,ಪ್ರವಾಸಿ ಏಜೆನ್ಸಿಗಳು, ರೆಸ್ಟೋರೇಂಟ್ಗಳು ಸುಮಾರು 40 ದಿನಗಳನ್ನು ತೆಗೆದುಕೊಳ್ಳಬಹುದು.
* ಬಲವಂತ ಮಾಡದೇ ವಿಚಾರಿಸಿ
ಸಂದರ್ಶನ ನೀಡಿದ ನಂತರ ಕಂಪನಿಯು ಪ್ರತಿಕ್ರಿಯೆ ನೀಡಲು ಒಂದು ಟೈಮ್ಲೈನ್ ನೀಡಿರುತ್ತದೆ. ಒಂದು ವಾರದ ನಂತರ ನಿಮಗೆ ಇಮೇಲ್ ಅಥವಾ ಫೋನ್ ಮಾಡುತ್ತೇವೆ ಎಂದು ಹೇಳಲಾಗುತ್ತದೆ.
ಹೀಗೆ ಒಂದಿಷ್ಟು ದಿನ ಗಡುವು ನೀಡಿದ್ದರೆ ಅಲ್ಲಿಯವರೆಗೂ ನೀವು ಕಾಯಬಹುದು. ಕೆಲವು ಕಂಪನಿಗಳಲ್ಲಿ ಈ ಪ್ರಕ್ರಿಯೆ ವಿಳಂಬ ಕೂಡ ಆಗಬಹುದು. ಹೀಗೆ ಕಂಪನಿ ನೀಡಿದ ಅವಧಿ ಮುಗಿದ ನಂತರವೂ ಪ್ರತಿಕ್ರಿಯೆ ಬರದೇ ಇದ್ದರೆ, ಆಗ ನೀವು ಸಂಬಂಧಿತ ವಿಭಾಗದ ಮುಖ್ಯಸ್ಥರಿಗೆ ಇಮೇಲ್ ಮಾಡುವ ಮೂಲಕ ಮೆಲ್ನೋಟಕ್ಕೆ ವಿಚಾರಿಸಬಹುದು. ಮುಖ್ಯವಾಗಿ ಇಲ್ಲಿ ಹೆಚ್ಚು ಬಲವಂತ ಮಾಡದೇ ನೀವು ಸಂಬಂಧ ಪಟ್ಟವರನ್ನು ವಿಚಾರಿಸಬಹುದು.
* ಹೊಸ ಉದ್ಯೋಗ ಅವಕಾಶಗಳನ್ನು ಹುಡುಕಲು ಪ್ರಾರಂಭಿಸಿ
ಕೆಲಸದ ಬಗ್ಗೆ ಕಂಪನಿ ನಿಮ್ಮ ಸಂವಹನದ ನಂತರವೂ ಖಚಿತಪಡಿಸದಿದ್ದರೆ ಅಥವಾ ಅವರು ನೀಡಿದ್ದ ಗಡುವು ಮುಗಿದಿದ್ದರೆ ನೀವು ನಿಸ್ಸಂದೇಹವಾಗಿ ಬೇರೆ ಕೆಲಸ ಹುಡುಕಲು ಆರಂಭಿಸಬಹುದು.
ತುಂಬಾ ಕಾಯುವುದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹದಗೆಡಿಸಬಹುದು. ಹೀಗಾಗಿ ಅಗತ್ಯವಿದ್ದಲ್ಲಿ ಬೇರೆ ಕಡೆ ಅವಕಾಶ ಹುಡುಕಲು ಆರಂಭಿಸಬಹುದು. ನಿಮ್ಮ ವಿಚಾರಣೆಗಳಿಗೆ ಪ್ರತಿಕ್ರಿಯಿಸಲು ಸಮಯ ಅಥವಾ ಪರಿಗಣನೆಯನ್ನು ಹೊಂದಿರದ ಕಂಪನಿಗಳಲ್ಲಿ ಕೆಲಸಕ್ಕೆ ದುಂಬಾಲು ಬೀಳುವುದಕ್ಕಿಂದ ಬೇರೆ ಕಡೆ ಕೆಲಸ ಹುಡುಕುವುದು ಸೂಕ್ತ.
ಯಾವುದೋ ಒಂದು ಸಂದರ್ಶನ ವಿಫಲವಾದ್ದಲ್ಲಿ ಹೆಚ್ಚಿನ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೆಚ್ಚಿನ ಸಂದರ್ಶನಗಳು ನಮಗೆ ಮತ್ತಷ್ಟು ವಿಶ್ವಾಸ ನೀಡುತ್ತವೆ. ಸುಲಭವಾಗಿ ಹೇಳೋದಾದರೆ, ಸಂದರ್ಶನವು ಯಾವಾಗಲೂ ಉತ್ತಮ ಅಭ್ಯಾಸವಾಗಿದೆ ಮತ್ತು ಮುಂದಿನ ಅವಕಾಶಕ್ಕಾಗಿ ನಿಮ್ಮನ್ನು ಸಿದ್ಧಗೊಳಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ