ಇಂದಿನ ಜಗತ್ತಿನಲ್ಲಿ ಬೇರೆ ಬೇರೆ ರೀತಿಯ ಅಪರಾಧವು (Crime) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದುವರಿದ ತಂತ್ರಜ್ಞಾನಗಳೊಂದಿಗೆ ಅತಿ ಹೆಚ್ಚಿನ ಬುದ್ದಿಮತ್ತೆಯಿಂದ ಕೂಡಿರುವ ಅಪರಾಧಗಳ ಸಂಖ್ಯೆ ( Criminal Cases) ಹೆಚ್ಚುತ್ತಲೇ ಇದೆ. ನಮ್ಮ ಸುತ್ತಮುತ್ತ ಮಾತ್ರವಲ್ಲ, ಪ್ರಪಂಚದಾದ್ಯಂತ ಕ್ರೈಂ ರೇಟ್ ಹೆಚ್ಚುತ್ತಲೇ ಸಾಗಿದೆ. ಜನರನ್ನು ಬೆಚ್ಚಿ ಬೀಳಿಸುವಂಥ, ಕ್ರೂರವಾದ ಅಪರಾಧ ಕೃತ್ಯಗಳ ಬಗ್ಗೆ ನಾವು ಮಾಧ್ಯಮಗಳಿಂದ ಕೇಳುತ್ತಲೇ ಇರುತ್ತೇವೆ.
ಇಂತಹ ಅಪರಾಧವನ್ನು ವಿಶ್ಲೇಷಿಸಿ, ಬಗೆಹರಿಸುವಲ್ಲಿ ಅಪರಾಧ ಶಾಸ್ತ್ರಜ್ಞರು (Criminology) ಬಹಳ ಮುಖ್ಯವಾಗುತ್ತಾರೆ. ಕ್ರೈಂ ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಬಗೆಹರಿಸುವ ಅಪರಾಧಶಾಸ್ತ್ರಜ್ಞರ ಅವಶ್ಯಕತೆ ಕೂಡ ಹೆಚ್ಚುತ್ತಲೇ ಇದೆ.
ಕ್ರಿಮಿನಾಲಜಿ ಅಥವಾ ಅಪರಾಧಶಾಸ್ತ್ರ ಎನ್ನುವುದು ವಿವಿಧ ರೀತಿಯಲ್ಲಿ ಅಪರಾಧದ ಅಧ್ಯಯನವನ್ನು ಒಳಗೊಂಡಿರುವ ಕ್ಷೇತ್ರವಾಗಿದೆ. ಇದು ವಿಧಿವಿಜ್ಞಾನ, ಖಾಸಗಿ ತನಿಖೆ, ಅಪರಾಧಗಳನ್ನು ಪರಿಹರಿಸುವುದು ಮತ್ತು ಇತರ ವಿಷಯಗಳನ್ನು ಒಳಗೊಂಡ ಕ್ಷೇತ್ರವಾಗಿದೆ. ಆದಾಗ್ಯೂ, ಅಪರಾಧವು ನೋಡಲು ಕುತೂಹಲಕಾರಿಯಾಗಿ ಕಂಡುಬಂದರೂ, ಅಪರಾಧಶಾಸ್ತ್ರದಲ್ಲಿನ ವೃತ್ತಿಜೀವನವು ದುರ್ಬಲ ಹೃದಯದವರಿಗೆ ಖಂಡಿತಾ ಅಲ್ಲ ಅಂತಲೇ ಹೇಳಬಹುದು.
ಈ ಕ್ಷೇತ್ರದಲ್ಲಿ ನೀವು ಕೆಲಸ ಮಾಡಬೇಕೆಂದರೆ ನಿಮಗೆ ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆ ಪ್ರಕ್ರಿಯೆ ಒಲಿದಿರಬೇಕು. ಕುತೂಹಲದ ಜೊತೆಗೆ ಅಪರಾಧವನ್ನು ಬಗೆಹರಿಸಲು ಹಾಗೂ ಅದನ್ನು ಪೂರ್ಣಗೊಳಿಸಲು ನಿಮಗೆ ಅಸಾಧಾರಣ ಧೈರ್ಯದ ಅಗತ್ಯವಿರುತ್ತದೆ. ಹಾಗಾಗಿ ನೀವು ಕ್ರಿಮಿನಾಲಜಿಯಲ್ಲಿ ಆಸಕ್ತಿ ಹೊಂದಿದ್ದರೆ ಈ ಕ್ಷೇತ್ರದಲ್ಲಿಯೇ ಉದ್ಯೋಗ ಮಾಡಲು ಉತ್ಸುಕರಾಗಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ.
ಕ್ರಿಮಿನಾಲಜಿಯಲ್ಲಿ ಅವಕಾಶಗಳು
ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಅವಲಂಬಿಸಿ, ಅಪರಾಧಶಾಸ್ತ್ರದಲ್ಲಿ ನಿಮಗೆ ಸಾಕಷ್ಟು ಅವಕಾಶಗಳಿವೆ. ಈಗಾಗಲೇ ಇಲ್ಲಿರುವ ವೃತ್ತಿಪರರು ಹೆಚ್ಚಿನ ಬೇಡಿಕೆಯಲ್ಲಿದ್ದು, ಅವರು ಸ್ಪರ್ಧಾತ್ಮಕ ಸಂಬಳ ಪ್ಯಾಕೇಜ್ಗಳೊಂದಿಗೆ ಉನ್ನತ ಪ್ರೊಫೈಲ್ ಉದ್ಯೋಗಗಳನ್ನು ಸಹ ಹೊಂದಿದ್ದಾರೆ.
ಆದಾಗ್ಯೂ, ಈ ಕ್ಷೇತ್ರದ ಬಗ್ಗೆ ಹೆಚ್ಚಿನ ಜ್ಞಾನದೊಂದಿಗೆ ಸಜ್ಜುಗೊಳ್ಳುವುದು, ಸರಿಯಾದ ಸಂಶೋಧನೆ, ಅಪರಾಧವನ್ನು ಪರಿಹರಿಸುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವುದು ಮುಂತಾದ ಅಂಶಗಳ ಮೇಲೆ ಇಲ್ಲಿನ ಯಶಸ್ಸು ನಿಂತಿದೆ ಎಂಬುದನ್ನು ನೆನಪಿಡಬೇಕು.
ಅಪರಾಧ ಶಾಸ್ತ್ರದಲ್ಲಿರುವ ಕೆಲವು ಜನಪ್ರಿಯ ಉದ್ಯೋಗ ಪಾತ್ರಗಳು ಹೀಗಿವೆ.
*ಅಪರಾಧ ತನಿಖಾಧಿಕಾರಿ*ಅಪರಾಧ ದೃಶ್ಯ ವಿಶ್ಲೇಷಕ
*ಅಪರಾಧ ಪ್ರಯೋಗಾಲಯ ವಿಶ್ಲೇಷಕ
*ಫೋರೆನ್ಸಿಕ್ ಸರ್ಜನ್
*ಫೋರೆನ್ಸಿಕ್ ಇಂಜಿನಿಯರ್
*ಖಾಸಗಿ ಪತ್ತೆದಾರ
*ಪ್ರಾದೇಶಿಕ ಅಪರಾಧ ತಡೆ ಸಂಯೋಜಕರು
*ಸಲಹೆಗಾರರು
*ಸಂಘರ್ಷದ ಮಧ್ಯವರ್ತಿಗಳು ಮತ್ತು ಸಮಾಲೋಚಕರು
*ರಿಹ್ಯಾಬಿಟೇಶನ್ ಸ್ಪೆಷಲಿಸ್ಟ್
*ಕ್ರಿಮಿನಲ್ ವಕೀಲರು
-ಸರ್ಕಾರದೊಂದಿಗೆ ಕೆಲಸ ಮಾಡುವ ಕ್ರಿಮಿನಲ್ ವಕೀಲರು
-ಸ್ವತಂತ್ರ ಕ್ರಿಮಿನಲ್ ವಕೀಲರು
ಇನ್ನು, ಈ ಆಸಕ್ತಿದಾಯಕ ಮತ್ತು ಲಾಭದಾಯಕ ಕ್ಷೇತ್ರಕ್ಕೆ ಪ್ರವೇಶಿಸಲು ನಿಮ್ಮ ಪ್ರಯಾಣವನ್ನು ನೀವು ಹೇಗೆ ಪ್ರಾರಂಭಿಸಬಹುದು ಅನ್ನೋದನ್ನು ನೋಡೋದಾದ್ರೆ,
ಬೇಕಾಗುವ ಅರ್ಹತೆ: ಅಪರಾಧಶಾಸ್ತ್ರದಲ್ಲಿ ವೃತ್ತಿಜೀವನವನ್ನು ಪ್ರವೇಶಿಸಲು ನೀವು ಅರ್ಹರಾಗಬೇಕೆಂದರೆ ಮೊದಲು ನೀವು +2 ಪರೀಕ್ಷೆಯಲ್ಲಿ ವಿಜ್ಞಾನವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದು ಅದರಲ್ಲಿ ತೇರ್ಗಡೆಗೊಂಡಿರಬೇಕು.
ಸ್ನಾತಕೋತ್ತರ ಪದವಿಗಳಿಗಾಗಿ, ಅಭ್ಯರ್ಥಿಗಳು ಅಪರಾಧಶಾಸ್ತ್ರ, ಸೈಬರ್ ಅಪರಾಧ ಅಥವಾ ಕಾನೂನಿನಂತಹ ಸಂಬಂಧಿತ ಕ್ಷೇತ್ರದಲ್ಲಿ ಬಿಎ ಪದವಿಯನ್ನು ಹೊಂದಿರಬೇಕು.
ಮಾಡಬಹುದಾದ ಕೋರ್ಸ್ಗಳು
ಅಪರಾಧಶಾಸ್ತ್ರದ ಜಗತ್ತಿನಲ್ಲಿ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ವಿವಿಧ ಹಂತಗಳಲ್ಲಿ ವಿವಿಧ ಕೋರ್ಸ್ಗಳು ಲಭ್ಯವಿದೆ. ಇವುಗಳಲ್ಲಿ ಆರು ತಿಂಗಳ ಅವಧಿಗೆ ಕಲಿಸಲಾಗುವ ಸರ್ಟಿಫಿಕೇಟ್ ಕೋರ್ಸ್ಗಳು, ಸಾಂಪ್ರದಾಯಿಕ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ ಜೊತೆಗೆ ವಿಧಿ ವಿಜ್ಞಾನ ಅಥವಾ ಅಪರಾಧಶಾಸ್ತ್ರದಲ್ಲಿ ಡಿಪ್ಲೊಮಾ ಕಾರ್ಯಕ್ರಮಗಳು ಸೇರಿವೆ.
ಅವುಗಳಲ್ಲಿ ಜನಪ್ರಿಯ ಕೋರ್ಸ್ ಗಳ ಪಟ್ಟಿ ಹೀಗಿದೆ.
* ಫೊರೆನ್ಸಿಕ್ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್
* ಸೈಬರ್ ಕ್ರೈಮ್ ಡಿಪ್ಲೊಮಾ ಕೋರ್ಸ್
* ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್ ಡಿಪ್ಲೊಮಾ ಕೋರ್ಸ್
*ಡಿಪ್ಲೊಮಾ ಇನ್ ಕ್ರಿಮಿನಲ್ ಲಾ (ಡಿ.ಕ್ರಿನ್)
*ಕ್ರಿಮಿನಾಲಜಿ ಮತ್ತು ಪೆನಾಲಜಿಯಲ್ಲಿ ಡಿಪ್ಲೊಮಾ
* ಅಪರಾಧಶಾಸ್ತ್ರ ಮತ್ತು ನ್ಯಾಯ ವಿಜ್ಞಾನದಲ್ಲಿ ಬ್ಯಾಚುಲರ್ ಪದವಿ ಕೋರ್ಸ್
* ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್
* ಫೊರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ ರಿಸರ್ಚ್ ನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್
*ಕ್ರಿಮಿನಾಲಜಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ (M.Sc)
*ಕ್ರಿಮಿನಾಲಜಿ ಮತ್ತು ಕ್ರಿಮಿನಲ್ ಜಸ್ಟೀಸ್ನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ (MA)
*ಭಯೋತ್ಪಾದನಾ ವಿರೋಧಿ ಕಾನೂನಿನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ (MA)
*ಕ್ರಿಮಿನಲ್ ಲಾ ಮತ್ತು ಕ್ರಿಮಿನಾಲಜಿಯಲ್ಲಿ ಮಾಸ್ಟರ್ ಆಫ್ ಲೆಜಿಸ್ಲೇಟಿವ್ ಲಾ (LLM)
*ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ (ಅಪರಾಧಶಾಸ್ತ್ರ)
ಕ್ರಿಮಿನಾಲಜಿ ಕೋರ್ಸ್ಗಳನ್ನು ಮಾಡಬೇಕೆಂದಿದ್ದರೆ ಅದನ್ನು ಕಲಿಸುವ ಮುಖ್ಯ ಕಾಲೇಜುಗಳು ಅಪರಾಧಶಾಸ್ತ್ರ ಬೇಡಿಕೆಯಲ್ಲಿರುವ ವೃತ್ತಿಯಾಗಿದ್ದರೂ ನಮ್ಮ ದೇಶದಲ್ಲಿ ಇನ್ನೂ ಸೀಮಿತ ಸಂಖ್ಯೆಯ ಕಾಲೇಜುಗಳು ಅಪರಾಧಶಾಸ್ತ್ರ ಕ್ಷೇತ್ರದಲ್ಲಿ ಉತ್ತಮ ಕೋರ್ಸ್ಗಳನ್ನು ಕಲಿಸುತ್ತಿವೆ.
ಫೋರೆನ್ಸಿಕ್ಸ್ ಅಥವಾ ಕ್ರಿಮಿನಾಲಜಿ ಕ್ಷೇತ್ರಕ್ಕೆ ಬಂದಾಗ, ನೀವು ಈ ಕೋರ್ಸ್ಗಳಿಗೆ ಉನ್ನತ ಕಾಲೇಜುಗಳನ್ನು ಹುಡುಕಬೇಕು. ಅಂಥ ಸಂದರ್ಭದಲ್ಲಿ ನೀವು ಪರಿಗಣಿಸಬಹುದಾದ ಕೆಲವು ಕಾಲೇಜುಗಳ ಲಿಸ್ಟ್ ಇಲ್ಲಿವೆ.
*ಲೋಕನಾರಾಯಣ ಜಯಪ್ರಕಾಶ್ ನಾರಾಯಣ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್, ದೆಹಲಿ
*B.H.U ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಉತ್ತರ ಪ್ರದೇಶ
*B.I.T.S ಪಿಲಾನಿ, ಕರ್ನಾಟಕ, ಭಾರತ
*ಬಿ.ಯು. ಅಥವಾ ಬುಂದೇಲ್ಖಂಡ್ ವಿಶ್ವವಿದ್ಯಾಲಯ, ಉತ್ತರ ಪ್ರದೇಶ
*ಡಾ.ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ, ಉತ್ತರ ಪ್ರದೇಶ
*ಮಧ್ಯಪ್ರದೇಶದ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯ
*ಕೆ.ಯು. ಅಥವಾ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಕರ್ನಾಟಕ
*ಮದ್ರಾಸ್ ವಿಶ್ವವಿದ್ಯಾಲಯ, ತಮಿಳುನಾಡು
*ಇನ್ಸ್ಟಿಟ್ಯೂಟ್ ಆಫ್ ಫೋರೆನ್ಸಿಕ್ ಸೈನ್ಸ್, ಮಹಾರಾಷ್ಟ್ರ
*ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸ್
ಅಗತ್ಯವಿರುವ ಕೌಶಲ್ಯಗಳು
ಅಪರಾಧಶಾಸ್ತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ಆರಂಭಿಸಲು ನೀವು ಕೆಲವೊಂದಿಷ್ಟು ಮುಖ್ಯವಾದ ಕೌಶಲ್ಯಗಳನ್ನು ಹೊಂದಿರುವುದು ಬಹಳ ಮುಖ್ಯ. ಅಪರಾಧಶಾಸ್ತ್ರವು, ಸಮಸ್ಯೆಗಳನ್ನು ಪರಿಹರಿಸಲು, ಸಂದರ್ಭಗಳನ್ನು ವಿಶ್ಲೇಷಿಸಲು ಮತ್ತು ಸಂಭವನೀಯ ವಿವರಣೆಗಳನ್ನು ನೀಡಲು ವ್ಯಕ್ತಿಯ ಅಂತರ್ಗತ ಸಾಮರ್ಥ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಆರಂಭಿಕ ಹಂತವಾಗಿ, ಅರ್ಜಿ ಸಲ್ಲಿಸಲು ಬಯಸುವ ಕೆಲಸದ ಪಾತ್ರವನ್ನು ಅವಲಂಬಿಸಿ ಅಭ್ಯರ್ಥಿಯು ಹೊಂದಿರಬೇಕಾದ ಕೆಲವು ಕೌಶಲ್ಯಗಳು ಇಲ್ಲಿವೆ.
· ವಿಶ್ಲೇಷಣಾ ಕೌಶಲ್ಯ
· ಡೇಟಾ ಮತ್ತು ಪುರಾವೆಗಳನ್ನು ಸಂಗ್ರಹಿಸುವ ಸಾಮರ್ಥ್ಯ
· ಅಪರಾಧ ಮಾದರಿಗಳನ್ನು ಅಧ್ಯಯನ ಮಾಡುವುದು
· ಅಗತ್ಯವಿರುವಂತೆ ತಾಂತ್ರಿಕ ಸಾಫ್ಟ್ವೇರ್ ಮತ್ತು ಉಪಕರಣಗಳನ್ನು ಬಳಸುವ ಸಾಮರ್ಥ್ಯ
· ಬಲವಾದ ಕಂಪ್ಯೂಟರ್ ಜ್ಞಾನ ಹೊಂದಿರುವುದು
ವೇತನ ಎಷ್ಟು ಸಿಗಬಹುದು?
ಕ್ರಿಮಿನಾಲಜಿಯಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಅಂಥವರನ್ನು ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳು, ಹಾಗೆಯೇ ಕಾನೂನು ಸಂಸ್ಥೆಗಳು, ಪೊಲೀಸ್ ಇಲಾಖೆಗಳು, ಆಸ್ಪತ್ರೆಗಳು, ಎನ್ಜಿಒಗಳು ಮತ್ತು ಕಾನೂನು ಸಂಸ್ಥೆಗಳು ನೇಮಕ ಮಾಡಿಕೊಳ್ಳುತ್ತವೆ.
ನೀವು ಯಾವ ವಿಭಾಗದಲ್ಲಿ ಕೆಲಸ ಮಾಡುತ್ತೀರಿ ಅನ್ನೋದ್ರ ಮೇಲೆ ನಿಮಗೆ ವೇತನ ಸಿಗುತ್ತದೆ. ಅದರಲ್ಲೂ ನೀವು ತಿಂಗಳಿಗೆ 1.5 ಲಕ್ಷದಿಂದ ಹಿಡಿದು 4 ಲಕ್ಷದ ವರೆಗೂ ಗಳಿಸಬಹುದು. ಈ ಕ್ಷೇತ್ರದಲ್ಲಿ ಅನುಭವ ಹಾಗೂ ಜ್ಞಾನ ಹೆಚ್ಚಾಗಿದ್ದರೆ ನೀವು ಉತ್ತಮ ಪ್ರೊಫೈಲ್ ಗಳೊಂದಿಗೆ ಹೆಚ್ಚನ ಸಂಬಳವನ್ನೂ ಪಡೆಯಬಹುದಾಗಿದೆ. ಆದ್ದರಿಂದ ಟಿವಿಯಲ್ಲಿನ ಅಪರಾಧ ಸರಣಿಗಳು ಅಥವಾ ಅಪರಾಧ ಕಾದಂಬರಿಗಳು ನಿಮಗೆ ಆಸಕ್ತಿದಾಯಕವಾಗಿದ್ದರೆ ಅಲ್ಲಿಯೂ ಕೂಡ ನಿಮಗೆ ಸಾಕಷ್ಟು ಅವಕಾಶಗಳಿವೆ.
ಒಟ್ಟಾರೆ ಯಾವುದೇ ಕ್ಷೇತ್ರವಾದರೂ ನಿಮ್ಮ ಸಾಮರ್ಥ್ಯದ ಮೇಲೆ ನಿಮ್ಮ ಅಭಿವೃದ್ಧಿ ನಿಂತಿರುತ್ತದೆ. ಈ ಕ್ಷೇತ್ರ ಅದರಿಂದ ಹೊರತಾಗಿಲ್ಲ. ಇಲ್ಲಿಯೂ ಕೂಡ ನಿಮ್ಮ ಕಾರ್ಯಕ್ಷಮತೆಯ ಮೇಲೆಯೇ ನಿಮ್ಮ ವೃತ್ತಿಯಲ್ಲಿನ ಅಭಿವೃದ್ಧಿ ಹಾಗೂ ವೇತನ ನಿಂತಿರುತ್ತದೆ. ಈ ಕ್ಷೇತ್ರಕ್ಕೆ ಬೇಕಾದ ಬುದ್ಧಿವಂತಿಕೆ ನಿಮ್ಮಲ್ಲಿದ್ದರೆ ನೀವು ಈ ವೃತ್ತಿಯಲ್ಲಿ ಎತ್ತರಕ್ಕೇಬಹುದು ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ.
ಆದ್ರೆ ಕೇಳೋದಿಕ್ಕೆ ಕುತೂಹಲಕಾರಿಯಾಗಿದ್ದರೂ ಈ ವೃತ್ತಿಯಲ್ಲಿ ಸಾಕಷ್ಟು ರಿಸ್ಕ್ ಇರೋದು ಸುಳ್ಳಲ್ಲ. ಆದ್ರೆ ಅವುಗಳನ್ನೂ ಮೀರಿದ್ದು ನಿಮ್ಮ ಆಸಕ್ತಿ ಹಾಗೂ ಬುದ್ಧಿವಂತಿಕೆ. ಹಾಗಾಗಿ ಬರುವ ಸಮಸ್ಯೆಗಳನ್ನು ಎದುರಿಸಿ ನಿಮ್ಮದೇ ಪ್ಯಾಷನ್ ಅನ್ನು ವೃತ್ತಿಯಾಗಿ ಕಂಡುಕೊಳ್ಳುತ್ತೀರಿ ಎಂದಾದರೆ ಇದು ಒಂದು ಒಳ್ಳೆಯ ಆಯ್ಕೆಯಾಗಬಹುದು.
ಹಾಗಿದ್ರೆ ಇನ್ನೇಕೆ ತಡ, ಅಪರಾಧ ಶಾಸ್ತ್ರದಲ್ಲಿ ನೀವು ಆಸಕ್ತಿ ಹೊಂದಿದ್ದರೆ, ಇದರಲ್ಲೇ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದಿದ್ದರೆ ಇಂದೇ ಇದಕ್ಕೇ ತಯಾರಿ ಆರಂಭಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ