ಕೋವಿಡ್ನಂತಹ (Covid) ಮಾರಕ ಸಾಂಕ್ರಾಮಿಕ ರೋಗ ವಿಶ್ವವನ್ನೇ ಆಹುತಿ ತೆಗೆದುಕೊಂಡ ನಂತರ ಹೆಚ್ಚಿನ ಜನರು ಆರ್ಥಿಕ ಹಾನಿಗೊಳಗಾಗಿದ್ದಾರೆ. ಅದೆಷ್ಟೋ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ (Layoffs), ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ, ಒಟ್ಟಿನಲ್ಲಿ ವಿಶ್ವವನ್ನೇ ಈ ರೋಗ ನಲುಗುವಂತೆ ಮಾಡಿತು. ಉದ್ಯೋಗಿ ಕಡಿತ (Job Cut), ವಜಾಗೊಳಿಸುವಿಕೆ ಹೆಚ್ಚು ರೂಢಿಗೆ ಬಂದಿದ್ದೇ ಕೋವಿಡ್ ನಂತರ ಎಂದೇ ಹೇಳಬಹುದು. ಉದ್ಯೋಗ ನಷ್ಟಗೊಂಡವರಿಗೆ ಸಹಾಯ ನೀಡಿದ್ದೆ ಫ್ರೀಲ್ಯಾನ್ಸಿಂಗ್ ಉದ್ಯೋಗವಾಗಿತ್ತು.
ಇದೀಗ ಫ್ರೀಲ್ಯಾನ್ಸಿಂಗ್ ಅನ್ನೇ ಮಿಲಿಯಗಟ್ಟಲೆ ಜನರು ವೃತ್ತಿಯನ್ನಾಗಿ ಮಾಡಿಕೊಂಡಿದ್ದು 9-5 ಉದ್ಯೋಗಕ್ಕೆ ಬದಲಾಗಿ ಫ್ರಿಲ್ಯಾನ್ಸಿಂಗ್ ಅನ್ನು ನೆಚ್ಚಿಕೊಂಡಿದ್ದಾರೆ. ಹಾಗಿದ್ದರೆ ಫ್ರಿಲ್ಯಾನ್ಸಿಂಗ್ ಅನ್ನು ನೀವು ವೃತ್ತಿಯನ್ನಾಗಿ ಮಾಡಿಕೊಳ್ಳುವವರಾಗಿದ್ದರೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
1) ನಿಮ್ಮ ಯಶಸ್ಸಿನ ಉದ್ದೇಶ ಮನದಟ್ಟು ಮಾಡಿಕೊಳ್ಳಿ
ಯಾವುದೇ ವೃತ್ತಿಯನ್ನು ಆರಂಭಿಸುವ ಮುನ್ನ ಉದ್ದೇಶವನ್ನು ಮನದಟ್ಟು ಮಾಡಿಕೊಳ್ಳಿ. ಇದು ನಿಮ್ಮ ವೃತ್ತಿಜೀವನವನ್ನು ಯೋಜಿಸಲು ಸಹಾಯ ಮಾಡುತ್ತದೆ. ಫ್ರಿಲ್ಯಾನ್ಸಿಂಗ್ ವೃತ್ತಿ ಕೂಡ ಇದಕ್ಕೆ ಹೊರತಲ್ಲ ಇಲ್ಲಿಯೂ ಉದ್ದೇಶ ಮುಖ್ಯವಾಗಿದೆ. ಹೆಚ್ಚಿನ ಸೇವೆ ಹಾಗೂ ಕೆಲಸಗಾರರ ಸಹಾಯದೊಂದಿಗೆ ಫ್ರಿಲ್ಯಾನ್ಸಿಂಗ್ ವೃತ್ತಿಯನ್ನು ವಿಸ್ತರಿಸಿಕೊಳ್ಳಿ.
2) ಉದ್ಯೋಗ ನಡೆಸುತ್ತಿರುವಿರಿ ಎಂಬುದನ್ನು ಮನನ ಮಾಡಿಕೊಳ್ಳಿ
ಫ್ರಿಲ್ಯಾನ್ಸಿಂಗ್ನಲ್ಲಿ ನಿಮಗೆ ನೀವೇ ಮಾಲಿಕರು. ಹಾಗಾಗಿ ನೀವು ವ್ಯವಹಾರವನ್ನು ನಡೆಸುತ್ತಿದ್ದೀರಿ ಎಂಬುದು ನಿಮ್ಮ ಮನಸ್ಸಿನಲ್ಲಿರಲಿ. ಒಬ್ಬ ವಾಣಿಜ್ಯೋದ್ಯಮಿಯಾಗಿ, ನೀವು ನಿಜವಾದ ವ್ಯವಹಾರದಂತೆ ನಿಮ್ಮ ಫ್ರಿಲ್ಯಾನ್ಸಿಂಗ್ ವೃತ್ತಿಗೆ ಒಲವು ತೋರದಿದ್ದರೆ, ನೀವು ತೊಂದರೆಗೆ ಸಿಲುಕುತ್ತೀರಿ.
ಹಣಕಾಸಿನ ಕುರಿತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಬಿಲ್ ಪಾವತಿಸುವಷ್ಟು ಹಣವನ್ನು ನೀವು ಫ್ರಿಲ್ಯಾನ್ಸಿಂಗ್ನಿಂದ ಪಡೆಯುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರಾರಂಭದಿಂದಲೇ ಆದಾಯದ ಗುರಿಯನ್ನು ರಚಿಸುವುದು ನಿಮ್ಮ ಸೇವಾ ದರಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
3) ನಿಮ್ಮ ಸೇವೆಗಳನ್ನು ವಿವರಿಸಿ
ನಿಮ್ಮ ಫ್ರಿಲ್ಯಾನ್ಸಿಂಗ್ ವೃತ್ತಿಜೀವನದ ಬಗ್ಗೆ ಯಾವುದೇ ನಿಶ್ಚಯ ಇಲ್ಲದಿರುವುದು ನಿಮ್ಮ ಪ್ರಗತಿಗೆ ಹಾನಿಯನ್ನುಂಟು ಮಾಡಬಹುದು. ನೀವು ಏನು ನೀಡಬೇಕೆಂಬುದರ ಬಗ್ಗೆ ನೀವು ಖಚಿತವಾಗಿರಬೇಕು. ನಿಮ್ಮ ಗ್ರಾಹಕರು ಕೆಲಸದ ಬಗ್ಗೆ ನೀವು ಹೊಂದಿರುವ ಗಂಭೀರತೆ ಅಥವಾ ಪ್ರಾಜೆಕ್ಟ್ಗಳನ್ನು ತಲುಪಿಸುವ ಸಾಮರ್ಥ್ಯದ ಬಗ್ಗೆ ಯಾವುದೇ ಸಂದೇಹಗಳನ್ನು ಹೊಂದಲು ನೀವು ಬಿಡಬಾರದು. ನಿಮ್ಮ ಫ್ರಿಲ್ಯಾನ್ಸಿಂಗ್, ಸೇವೆಗಳನ್ನು ವಿವರಿಸುವುದು ಹಾಗೂ ಸೇವೆಯ ವಿತರಣೆಗಳನ್ನು ನಿರ್ದಿಷ್ಟಪಡಿಸುವುದನ್ನು ಒಳಗೊಂಡಿರುತ್ತದೆ.
ನಿಮ್ಮ ಗುರಿಯನ್ನು ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವಂತೆ ಸೇವೆಗಳನ್ನು ಸರಿಹೊಂದಿಸಿಕೊಳ್ಳಿ.
ಗ್ರಾಹಕರನ್ನು ನಿಮ್ಮತ್ತ ಆಕರ್ಷಿಸಿಕೊಳ್ಳಲು ನಿಮ್ಮ ಸೇವೆಗಳ ವಿವರಗಳನ್ನೊಳಗೊಂಡ ಪೋರ್ಟ್ಫೊಲಿಯೋ ರಚಿಸಿ. ಹಿಂದಿನ ಗ್ರಾಹಕರಿಂದ ವಿಮರ್ಶೆಗಳನ್ನು ಪಡೆದುಕೊಳ್ಳಿ. ನಿಮ್ಮ ಕೆಲಸದ ಎಲ್ಲಾ ವಿವರಗಳು ಈ ಪೋರ್ಟ್ಫೊಲಿಯೊದಲ್ಲಿರಲಿ. ಧನಾತ್ಮಕ ವಿಮರ್ಶೆಗಳನ್ನು ಪೋರ್ಟ್ಫೊಲಿಯೊದಲ್ಲಿ ನಮೂದಿಸಿ.
4) ಶಿಸ್ತು
ಫ್ರಿಲ್ಯಾನ್ಸಿಂಗ್ ವೃತ್ತಿಯನ್ನು ಆಯ್ದುಕೊಂಡಲ್ಲಿ ಸಾಕಷ್ಟು ಶಿಸ್ತು, ಸಂಯಮ ನೀವು ಹೊಂದಿರುವುದು ಅಗತ್ಯವಾಗಿದೆ. ಫ್ರಿಲ್ಯಾನ್ಸಿಂಗ್ ಉದ್ಯಮದಲ್ಲಿ ಕೂಡ ಕೆಲಸದ ಟ್ರ್ಯಾಕ್ ಅನ್ನು ನೀವು ಹೊಂದಿರಬೇಕು. ಕಚೇರಿಯಲ್ಲಿ ಕೆಲಸ ಮಾಡುವಾಗ ಯಾವ ರೀತಿಯ ಶಿಸ್ತುಬದ್ಧತೆಯನ್ನು ನೀವು ಪ್ರದರ್ಶಿಸುತ್ತೀರೋ ಅದನ್ನು ನಿಮ್ಮ ಸ್ವಂತ ಉದ್ಯಮದಲ್ಲಿ ಕೂಡ ಪ್ರದರ್ಶಿಸಬೇಕು. ಸರಿ ತಪ್ಪುಗಳ ಆಳ ವಿಶ್ಲೇಷಣೆಯನ್ನು ಮಾಡಬೇಕು.
ಸರಿಯಾದ ವೇಳಾಪಟ್ಟಿಯ ಮೂಲಕ ಪರಿಣಾಮಕಾರಿ ಸಮಯ ನಿರ್ವಹಣೆಯನ್ನು ಸಾಧಿಸಬಹುದು. ಗ್ರಾಹಕರಿಗೆ ಸೇವೆಯನ್ನು ಸೂಕ್ತ ಸಮಯಕ್ಕೆ ವಿತರಿಸುವುದು, ಮುಖ್ಯ ಕೆಲಸಗಳಿಗೆ ಹೆಚ್ಚಿನ ಆಸಕ್ತಿ ನೀಡುವುದು, ಆದ್ಯತೆಗಳಿಗೆ ಅನುಸಾರವಾಗಿ ಕೆಲಸ ಮಾಡುವುದು ಮೊದಲಾದ ಸಲಹೆಗಳನ್ನು ಪಾಲಿಸಬೇಕು.
5) ವೃತ್ತಿಯನ್ನು ಪ್ರಚಾರಗೊಳಿಸುವುದು
ಸರಿಯಾದ ಪ್ರಚಾರವಿಲ್ಲದಿದ್ದರೆ ಯಾವುದೇ ಉದ್ಯೋಗ ಕೂಡ ಗುರಿಮುಟ್ಟುವುದಿಲ್ಲ. ಉತ್ತಮ ಸಂಪರ್ಕವನ್ನು ಸ್ಥಾಪಿಸುವುದು ಪ್ರಚಾರಕ್ಕೆ ಮುಖ್ಯ ಅಂಶವಾಗಿದೆ. ಹೆಚ್ಚಿನ ಫ್ರಿಲ್ಯಾನ್ಸರ್ ಸೇವಾ ಒದಗಿಸುವವರನ್ನು ಸಂಪರ್ಕದಲ್ಲಿರಿಸಿಕೊಳ್ಳಿ. ಆನ್ಲೈನ್ ಸಹಾಯಗಳನ್ನು ಪಡೆದುಕೊಳ್ಳಿ. ನಿಮ್ಮ ಫ್ರಿಲ್ಯಾನ್ಸಿಂಗ್ ಉದ್ಯಮದ ವಿವರಗಳನ್ನು ಆನ್ಲೈನ್ನಲ್ಲಿ ಪ್ರಚಾರಪಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ