ಅನೇಕ ಜನರು ತಮ್ಮ ವೃತ್ತಿಜೀವನವನ್ನು (Career Life) ಶುರು ಮಾಡಿದಾಗ ತುಂಬಾನೇ ಉತ್ಸಾಹದಿಂದ ಮತ್ತು ಹೊಸತನ್ನು ಕಲಿತುಕೊಳ್ಳಬೇಕು ಮತ್ತು ಆ ಕ್ಷೇತ್ರದಲ್ಲಿ ತುಂಬಾನೇ ಸಾಧನೆ ಮಾಡಬೇಕೆಂದೆಲ್ಲಾ ಅಂದು ಕೊಂಡಿರುತ್ತಾರೆ. ಆದರೆ ಏನು ಮಾಡೋದು ಇಲ್ಲಿ ಕೆಲಸ (JOB) ಮಾಡುವುದೊಂದನ್ನು ಬಿಟ್ಟರೆ ಬೇರೆ ಯಾವ ಅಂಶಗಳು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ ಅಂತ ಹೇಳಬಹುದು. ಹೌದು.. ವೃತ್ತಿಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ( Career Crisis) ಮತ್ತು ಕೆಲವೊಮ್ಮೆ ನಾವೇ ಆಯ್ಕೆಯಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರುತ್ತೇವೆ. ಇದರಿಂದಾಗಿ ನಮಗೆ ಅನೇಕರಿಗೆ 35 ಮತ್ತು 40 ವರ್ಷ ವಯಸ್ಸಿನ ಆಸುಪಾಸಿನಲ್ಲಿ ತಾವು ಮಾಡುತ್ತಿರುವ ಕೆಲಸ ತುಂಬಾನೇ ಸಪ್ಪೆ ಅಂತ ಅನ್ನಿಸೋದಕ್ಕೆ ಶುರುವಾಗುತ್ತದೆ.
ಅಧ್ಯಯನಗಳ ಪ್ರಕಾರ, ಅನೇಕ ಯಶಸ್ವಿ ವೃತ್ತಿಪರರು ತಮ್ಮ 30-40 ವರ್ಷ ವಯಸ್ಸಿನ ಮಧ್ಯದಲ್ಲಿ ತಮ್ಮ ಉದ್ಯೋಗಗಳ ಬಗ್ಗೆ ತುಂಬಾನೇ ಅತೃಪ್ತ ಭಾವನೆಯನ್ನು ಅನುಭವಿಸಲು ಪ್ರಾರಂಭಿಸಬಹುದು. "ಯಪ್ಪಾ ಇಡೀ ಜೀವನ ಇದೇ ಕೆಲಸ ಮಾಡಬೇಕೆ?" ಎಂದು ಅವರು ಆಶ್ಚರ್ಯ ಪಡಬಹುದು ಅಥವಾ ಅವರು ಹಿಂದೆ ತೆಗೆದುಕೊಂಡ ನಿರ್ಧಾರಗಳಿಗೆ ಪಶ್ಚಾತ್ತಾಪ ಸಹ ಪಡಬಹುದು.
ವೃತ್ತಿಜೀವನದ ಬಿಕ್ಕಟ್ಟು ಎಂದರೆ ಹೇಗಿರುತ್ತದೆ ಗೊತ್ತೇ?
"ನನ್ನ ವೃತ್ತಿಜೀವನದ ಆಯ್ಕೆಯ ಬಗ್ಗೆ ನನಗೆ ಈಗ ಅಸಮಾಧಾನದ ಭಾವನೆ ಮೂಡುತ್ತಿದೆ. ನಾನು 13 ವರ್ಷಗಳಿಂದ ಪತ್ರಕರ್ತನಾಗಿದ್ದು, ಈಗ 35ನೇ ವಯಸ್ಸಿನಲ್ಲಿ, ನಾನು ನನ್ನ ವೃತ್ತಿಜೀವನ ಮುಂದುವರಿಸಲು ಇಷ್ಟವಾಗುತ್ತಿಲ್ಲ. ನನ್ನ ವೃತ್ತಿಪರ ಜೀವನವು ಏಕತಾನತೆಯಿಂದ ಕೂಡಿದೆ. ಯಾವುದೇ ಹಣಕಾಸಿನ ಬೆಳವಣಿಗೆ ಇಲ್ಲ ಮತ್ತು ಹೆಚ್ಚು ಆರ್ಥಿಕವಾಗಿ ಮತ್ತು ಸೃಜನಾತ್ಮಕವಾಗಿ ತೃಪ್ತಿಕರವಾದ ಬೇರೆಯದ್ದನ್ನು ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತಿದ್ದೇನೆ. ಈ ವೃತ್ತಿಜೀವನದಿಂದ ಹೊರ ಬರಲು ನಾನು ಹೊಸದನ್ನು ಪ್ರಯತ್ನಿಸಲು ಬಯಸುತ್ತೇನೆ ಮತ್ತು ವರ್ಷದ ಅಂತ್ಯದ ವೇಳೆಗೆ ನಾನು ಆ ನಿಟ್ಟಿನಲ್ಲಿ ಕೆಲಸ ಮಾಡಲು ಯೋಜಿಸುತ್ತಿದ್ದೇನೆ " ಎಂದು ಮುಂಬೈ ಮೂಲದ ಮಾಧ್ಯಮ ವೃತ್ತಿಪರರಾದ ವೈಭವಿ ಹೇಳುತ್ತಾರೆ.
ಜನರು ವೃತ್ತಿಜೀವನದ ಬಿಕ್ಕಟ್ಟನ್ನು ಏಕೆ ಅನುಭವಿಸುತ್ತಾರೆ?
ವೈಯಕ್ತಿಕ ಸಬಲೀಕರಣ ತರಬೇತುದಾರ ಮತ್ತು ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಸ್ಟ್ ಆಗಿರುವ ಖ್ಯಾತಿ ಬಿರ್ಲಾ ಅವರು “ವ್ಯಕ್ತಿಗಳು ತಮ್ಮ ಕೆಲಸದಿಂದ ಸಂಪರ್ಕ ಕಡಿದುಕೊಂಡಾಗ ವೃತ್ತಿಜೀವನದ ಬಿಕ್ಕಟ್ಟನ್ನು ಅನುಭವಿಸುತ್ತಾರೆ. ಈ ಕೆಲಸದಲ್ಲಿ ಅವರಿಗೆ ನಿಜವಾಗಿ ಆಸಕ್ತಿ ಇಲ್ಲದೆ ಇರುವಾಗ ಅಥವಾ ಇಂತಹ ಕೆಲಸಗಳನ್ನು ಆಯ್ಕೆ ಮಾಡಿಕೊಂಡಾಗ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ” ಎಂದು ಹೇಳುತ್ತಾರೆ.
“ನಾನು ತಪ್ಪು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಅಥವಾ ಉದ್ಯೋಗದಲ್ಲಿ ಒಳ್ಳೆಯ ಸ್ಥಾನದಲ್ಲಿಲ್ಲದೆ ಇದ್ದಾಗ ನಾವು ಮುಂದೆ ಏನು ಮಾಡಬೇಕು ಎಂದು ಯೋಚಿಸುವಾಗ ನಿಮಗೆ ಎದುರಾಗುವ ಆ ವಿಷಾದದ ಮನೋಭಾವನೆ ನಿಮ್ಮ ವೃತ್ತಿಪರ ಬಿಕ್ಕಟ್ಟಿಗೆ ಕಾರಣವಾಗುತ್ತದೆ" ಎಂದು ಅವರು ಹೇಳುತ್ತಾರೆ.
“ಮೂರರಿಂದ ನಾಲ್ಕು ದಶಕಗಳ ವೃತ್ತಿಜೀವನದ ಆರು ಮುಖ್ಯ ಹಂತಗಳಿವೆ. ಒಬ್ಬರ ವೃತ್ತಿಜೀವನದ ಆರಂಭಿಕ ಹಂತಗಳು ಸಹ ಹೊಂದಾಣಿಕೆಯಾಗದ ಅತ್ಯುನ್ನತ ಸಾಮರ್ಥ್ಯವನ್ನು ಹೊಂದಿವೆ. ನೀವು ನಿಮ್ಮ ಉನ್ನತ ಶಿಕ್ಷಣ ಅಥವಾ ಕಾಲೇಜು ಪದವಿಯನ್ನು ಪಡೆದಾಗ ಮೈಲಿಗಲ್ಲನ್ನು ಆಕಾಂಕ್ಷೆ ಹಂತ ಎಂದು ಕರೆಯಲಾಗುತ್ತದೆ.
ಈ ಹಂತದಲ್ಲಿ, ನೀವು ನಿರ್ವಹಿಸಲು ಬಯಸುವ ಉದ್ಯಮ, ಸ್ಥಾನ ಅಥವಾ ಉದ್ಯೋಗದ ವಿಷಯದಲ್ಲಿ ನೀವು ಏನನ್ನು ತೊಡಗಿಸಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ಗಂಭೀರ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಉದ್ಯೋಗ ಪಡೆಯಲು ಯೋಜಿಸುವ ಯುವಕರು ಸರಿಯಾಗಿ ಯೋಚನೆ ಮಾಡಲು ಸಮಯವನ್ನು ಮೀಸಲಿಡಬೇಕು" ಎಂದು ಅವರು ವಿವರಿಸುತ್ತಾರೆ.
ಸಾಮಾಜಿಕ, ಸಾಂಸ್ಕೃತಿಕ ಅಥವಾ ಕೌಟುಂಬಿಕ ಒತ್ತಡದಲ್ಲಿ ವ್ಯಕ್ತಿಗಳು ತಮ್ಮ ವೃತ್ತಿಯನ್ನು ಆರಿಸಿಕೊಂಡಿರಬಹುದು. ಅವರು ತಮ್ಮ ಕೆಲಸಗಳಿಂದ ನಿರಾಶೆಗೊಂಡಾಗ ಈ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಇದನ್ನು ಲಘುವಾಗಿ ಪರಿಗಣಿಸಬಾರದು.
"ವೃತ್ತಿಜೀವನದ ಬಿಕ್ಕಟ್ಟಿಗೆ ಕೊಡುಗೆ ನೀಡುವ ಮತ್ತೊಂದು ಅಂಶವೆಂದರೆ ಈಡೇರದ ಉದ್ಯೋಗ ಉದ್ದೇಶಗಳು. ಒಂದು ನಿರ್ದಿಷ್ಟ ಉದ್ಯಮದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಏನು ಬೇಕಾಗುತ್ತದೆ ಎಂಬುದರ ಬಗ್ಗೆ ಜನರಿಗೆ ಆಗಾಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಉದಾಹರಣೆಗೆ, ಗ್ಲಾಮರ್ ಉದ್ಯಮದಲ್ಲಿ ಕೆಲಸ ಮಾಡುವುದು ಅಷ್ಟು ಕಷ್ಟ ಎಂದು ನನಗೆ ತಿಳಿದಿರಲಿಲ್ಲ ಎಂದು ನನ್ನ ಗ್ರಾಹಕರೊಬ್ಬರು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರು ಒಂದು ನಿರ್ದಿಷ್ಟ ಯೋಜನೆಯಲ್ಲಿ ದೀರ್ಘಕಾಲ ಮತ್ತು ಕಷ್ಟಪಟ್ಟು ಕೆಲಸ ಮಾಡಿದ್ದರು ಮತ್ತು ಅಲ್ಲಿ ಅವರು ನಿರೀಕ್ಷಿಸಿದಂತೆ ಬಡ್ತಿಯು ಸಿಗಲಿಲ್ಲ ಎಂಬ ಕಾರಣಕ್ಕೆ ಅವರಿಗೆ ವೃತ್ತಿಜೀವನದ ಬಿಕ್ಕಟ್ಟು ಕಾಡುತ್ತಿರಬೇಕು” ಎಂದು ಹೇಳಿದರು.
ವೃತ್ತಿಜೀವನದ ಬಿಕ್ಕಟ್ಟಿನ ಚಿಹ್ನೆಗಳು
ಇಲ್ಲೊಂದು ಸರಳವಾದ ಉದಾಹರಣೆ ಇದೆ ನೋಡಿ.. ಕಾರಿನ ಇಂಜಿನ್ ಬಿಸಿಯಾಗಿರುವಾಗ ನಾವು ಏನು ಮಾಡುತ್ತೇವೆ? ನಾವು ಅದನ್ನು ಸ್ವಿಚ್ ಆಫ್ ಮಾಡುತ್ತೇವೆ. ಹಾಗೆಯೇ ಕೆಲಸ ತುಂಬಾ ಬೋರ್ ಆಗಿದ್ದರೆ, ಸ್ವಲ್ಪ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು.
ಒಮ್ಮೆ ಚೆನ್ನಾಗಿ ವಿಶ್ರಾಂತಿ ಪಡೆದ ನಂತರ, ನಿಮ್ಮ ವೃತ್ತಿಪರ ಜೀವನವನ್ನು ಮರು ಮೌಲ್ಯಮಾಪನ ಮಾಡಿ. ನೀವು ಈ ಕೆಲಸವನ್ನು ಏಕೆ ಮಾಡುತ್ತಿದ್ದೀರಿ? ನೀವು ಕೆಲಸದ ಬಗ್ಗೆ ಅಸಂತುಷ್ಟರಾಗಿದ್ದೀರಾ ಅಥವಾ ನೀವು ಕೆಲಸ ಮಾಡುವ ತಂಡ, ಕೆಲಸದ ಒತ್ತಡ, ಕಂಪನಿಯ ನೀತಿಗಳು, ಅಥವಾ ಬೇರೆ ವಿಷಯ ಏನಾದರೂ ಇದೆಯಾ? ಕೆಲವು ಜನರು ಈ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಇದನ್ನು ವೃತ್ತಿಜೀವನದ ಬಿಕ್ಕಟ್ಟು ಎಂದು ಕರೆಯಬಹುದು. ಆದರೆ ವಾಸ್ತವವಾಗಿ ಆಗಾಗ್ಗೆ ಹೆಚ್ಚಿನ ಒತ್ತಡದ ಸನ್ನಿವೇಶಗಳೊಂದಿಗೆ ವ್ಯವಹರಿಸುವುದರಿಂದ ಈ ರೀತಿ ಅನ್ನಿಸುತ್ತದೆ.
"ವಿರಾಮದ ನಂತರವೂ ಕೆಲಸ ನಿಮಗೆ ಅಷ್ಟೊಂದು ಆಸಕ್ತಿದಾಯಕ ಅಂತ ಅನ್ನಿಸುತ್ತಿಲ್ಲ ಅಂತಾದರೆ, ನೀವು ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕು ಮತ್ತು ನಿಮ್ಮ ಜೀವನದ ಮುಂದಿನ ಹಂತಗಳನ್ನು ಸಂಪೂರ್ಣ ಜಾಗೃತಿಯಿಂದ ಯೋಜಿಸಬೇಕು" ಎಂದು ಅವರು ವಿವರಿಸುತ್ತಾರೆ.
ಮತ್ತೊಂದೆಡೆ, ತಾವು ಮುಂದೆ ಏನನ್ನು ಮಾಡಲು ಬಯಸುತ್ತೇವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಸ್ವಯಂ ಅರಿವು ಹೊಂದಿರುವ ಮತ್ತು ಕೋವಿಡ್ ನಂತರ ಕಂಡು ಬರುವಂತೆ ವೃತ್ತಿಜೀವನವನ್ನು ಯಶಸ್ವಿಯಾಗಿ ಬದಲಾಯಿಸಿಕೊಂಡಿರುವ ಜನರಿದ್ದಾರೆ. ನೀವು ಅಂತಹ ಪರಿಸ್ಥಿತಿಗಳನ್ನು ಎದುರಿಸಿದರೆ, ವೃತ್ತಿಪರರೊಂದಿಗೆ ಕುಳಿತು ಮಾತನಾಡಿ ಪರಿಹಾರವನ್ನು ಕಂಡುಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.
"ನಿಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ತರಬೇತುದಾರರು ನಿಮಗೆ ಸಹಾಯ ಮಾಡಬಹುದು. ಈ ಸಮಸ್ಯೆಯ ಉಗಮಕ್ಕೆ ಕೊಡುಗೆ ನೀಡಬಹುದಾದ ನೀವು ಈ ಹಿಂದೆ ತೆಗೆದುಕೊಂಡಿರಬಹುದಾದ ಯಾವುದೇ ತಪ್ಪು ಕೆಲಸದ ನಿರ್ಧಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ. ಜೀವನ ತರಬೇತುದಾರನು ನಿಮ್ಮೊಳಗೆ ಸ್ಪಷ್ಟತೆ ಮತ್ತು ವಿಶ್ವಾಸವನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು, ಇದರಿಂದ ನೀವು ಅಂತಹ ಗೊಂದಲಮಯ ಆಲೋಚನೆಗಳನ್ನು ಜಯಿಸಬಹುದು. ಅವರು ನಿಮ್ಮ ವ್ಯಕ್ತಿತ್ವ, ಸ್ವಯಂ-ಅರಿವು, ನಿಮ್ಮ ಉದ್ದೇಶದೊಂದಿಗೆ ಹೊಂದಾಣಿಕೆ ಮತ್ತು ದಿನವನ್ನು ಎದುರಿಸಲು ನಿಮ್ಮನ್ನು ನಿರುತ್ಸಾಹಗೊಳಿಸುವ ಬಗ್ಗೆ ಮಾತನಾಡುತ್ತಾರೆ" ಎಂದು ಖ್ಯಾತಿ ಹೇಳುತ್ತಾರೆ.
ಒಮ್ಮೆ ಅವರು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿದ ನಂತರ ಮತ್ತು ನೀವು ಯಾವುದರ ಬಗ್ಗೆ ತುಂಬಾನೇ ಉತ್ಸುಕರಾಗಿದ್ದೀರಿ, ನಿಮಗೆ ಏನು ಸರಿಹೊಂದುತ್ತದೆ ಎಂದು ಅರಿತುಕೊಂಡು, ಹೊಸ ಕೆಲಸವನ್ನು ನೀವು ಪ್ರಾರಂಭಿಸಬೇಕು. ಅಲ್ಲದೆ ನಿಮ್ಮ ಹೊಸ ಕೆಲಸಕ್ಕೆ ಒಂದು ಸೂಕ್ತವಾದ ಕ್ರಿಯಾ ಯೋಜನೆಯನ್ನು ಸಹ ರೂಪಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ. ಕೆಲಸ ಮತ್ತು ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ನಿಮ್ಮ ವೃತ್ತಿಪರ ಜೀವನವನ್ನು ಆನಂದದಾಯಕವಾಗಿಸಲು ಅವು ನಿಮಗೆ ಸಹಾಯ ಮಾಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ