• Home
 • »
 • News
 • »
 • career
 • »
 • Twitterನಿಂದ Appleವರೆಗೆ ಎಲ್ಲೆಲ್ಲೂ ಉದ್ಯೋಗ ಕಡಿತ: ಹೊಸ ನೇಮಕಾತಿಗಳಿಗೂ ಬ್ರೇಕ್

Twitterನಿಂದ Appleವರೆಗೆ ಎಲ್ಲೆಲ್ಲೂ ಉದ್ಯೋಗ ಕಡಿತ: ಹೊಸ ನೇಮಕಾತಿಗಳಿಗೂ ಬ್ರೇಕ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Job Cut: ಆಕ್ಸಿಯೋಸ್ ವರದಿಯ ಪ್ರಕಾರ ಮೈಕ್ರೋಸಾಫ್ಟ್ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬುದು ತಿಳಿದು ಬಂದಿದೆ. ಕಂಪನಿಯು ವಿವಿಧ ಹಂತಗಳು, ತಂಡಗಳು ಅಂತೆಯೇ ಪ್ರಪಂಚದ ಭಾಗಗಳಲ್ಲಿ ಉದ್ಯೋಗ ಕಡಿತ ನಿಯಮವನ್ನು ಜಾರಿಗೊಳಿಸಿದೆ.

 • Share this:

  ಎಲೋನ್ ಮಸ್ಕ್ (Elon Musk) ಟ್ವಿಟರ್‌ನ ( Twitter) ಅಧಿಪತ್ಯ ವಹಿಸಿಕೊಂಡ ನಂತರ ವೆಚ್ಚಕಡಿತ ಭಾಗವಾಗಿ ಕಂಪನಿಯು ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತು (Twitter Fired Employees). ಇದರ ಜೊತೆಗೆ ಇನ್ನೊಂದು ಅಂಶ ಕೂಡ ನಡೆದಿದ್ದು ಕುತೂಹಲಕಾರಿಯಾದ ಬೆಳವಣಿಗೆಯಂತೆ ವಜಾಗೊಳಿಸಿದ ಉದ್ಯೋಗಿಗಳನ್ನು ಮರಳಿ ಕಂಪನಿಗೆ ಬರುವಂತೆ ಸಂಸ್ಥೆ ತಿಳಿಸಿದ್ದು, ಈ ಉದ್ಯೋಗಿಗಳನ್ನು ತಪ್ಪಾಗಿ ವಜಾಗೊಳಿಸಲಾಗಿದೆ ಇಲ್ಲದಿದ್ದರೆ ಕಾರ್ಯಾಚರಣೆಗಳಿಗೆ ತುಂಬಾ ಅಗತ್ಯವೆಂದು ಮನಗಂಡ ನಂತರ ಹಿಂತಿರುಗಲು ಹೇಳಲಾಗಿದೆ ಎಂಬುದಾಗಿ ನಂತರ ವರದಿಯಾದ ಸುದ್ದಿ ತಿಳಿಸಿದೆ.


  ಅದಾಗ್ಯೂ ಟ್ವಿಟರ್‌ನ ಉದ್ಯೋಗಿ ವಜಾಗೊಳಿಸುವಿಕೆಯ ನಿರ್ಧಾರವು ಟೆಕ್ ಉದ್ಯಮದಲ್ಲಿ ದೊಡ್ಡ ಪರಿವರ್ತನೆಯ ಭಾಗವಾಗಿ ಪರಿಣಾಮ ಬೀರಿದೆ. ಫೇಸ್‌ಬುಕ್ ಮೂಲ ಕಂಪನಿ ಮೆಟಾ ತನ್ನ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ದೊಡ್ಡ ಪ್ರಮಾಣದ ವಜಾಗೊಳಿಸುವಿಕೆಯನ್ನು ನಡೆಸಲು ನಿರ್ಧರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.


  ಹಣದುಬ್ಬರ ಸಮಸ್ಯೆಗಳು ಹಾಗೂ ವಿಶ್ವದ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರಗಳನ್ನು ಹೆಚ್ಚಿಸಿರುವುದರಿಂದ ವಿಶ್ವದ ಆರ್ಥಿಕತೆಯು ಹಿಂಜರಿಯುತ್ತಿದ್ದು ಈ ಸಮಯದಲ್ಲಿ ಹೆಚ್ಚಿನ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಕ್ರಮಕ್ಕೆ ಮುಂದಾಗಿವೆ. ಯಾವೆಲ್ಲಾ ಬೃಹತ್ ಟೆಕ್ ಕಂಪನಿಗಳು ಉದ್ಯೋಗಿ ವಜಾ ಕ್ರಮವನ್ನು ಕೈಗೊಂಡಿವೆ ಎಂಬುದನ್ನು ತಿಳಿದುಕೊಳ್ಳೋಣ


  ಟ್ವಿಟರ್


  ಟ್ವಿಟರ್ ಸಿಇಒ ಪರಾಗ್ ಅಗರವಾಲ್, ಸಿಎಫ್‌ಒ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸುವುದರೊಂದಿಗೆ ಮಸ್ಕ್ ತಮ್ಮ ಸ್ವಾಧೀನ ಕ್ರಮವನ್ನು ಆರಂಭಿಸಿದರು.


  ನವೆಂಬರ್ 4 ರಂದು ಸಂಸ್ಥೆ 7500 ಉದ್ಯೋಗಿಗಳಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತು. ಉದ್ಯೋಗಿಗಳನ್ನು ವಜಾಗೊಳಿಸುವ ಮೊದಲು ಅವರಿಗೆ ಇಮೇಲ್ ಮೂಲಕ ಈ ಕುರಿತು ತಿಳಿಸಲಾಯಿತು. ಭಾರತೀಯ ಉದ್ಯೋಗಿಗಳಿಗೆ ಇಮೇಲ್ ಅನ್ನು ಬೆಳಗ್ಗಿನ ಜಾವ 4 ಗಂಟೆಗೆ ಬಂದಿತು ಮತ್ತು ಎಲ್ಲಾ ಸುದ್ದಿಮಾಧ್ಯಮಗಳು ಟ್ವಿಟರ್ ವಜಾಗೊಳಿಸುವಿಕೆಯ ಮಾಹಿತಿಯನ್ನು ಪ್ರಕಟಿಸಿದ್ದು, ಕಂಪನಿಯ ಮಾರ್ಕೆಟಿಂಗ್, ಸಂವಹನ ಹಾಗೂ ಎಂಜಿನಿಯರ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳ ಮೇಲೆ ಈ ವಜಾಗೊಳಿಸುವಿಕೆ ಪ್ರಭಾವ ಬೀರಿದೆ ಎಂದು ತಿಳಿಸಿತ್ತು. ಟ್ವಿಟರ್ ಭಾರತೀಯ ಕಚೇರಿಯು 250 ರಿಂದ 300 ಉದ್ಯೋಗಿಗಳನ್ನು ಹೊಂದಿತ್ತು.


  ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರಿಗೆ ಬಂಪರ್!


  ಮೆಟಾ


  ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾ ಕೂಡ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರಕ್ಕೆ ಅಚಲವಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ. ಅಕ್ಟೋಬರ್‌ನಲ್ಲಿ ವರ್ಷದ ದುರ್ಬಲ ರಜೆಯ ಸೂಚನೆಯನ್ನು ನೀಡಿತು ಹಾಗೂ ಮುಂದನ ವರ್ಷ ವೆಚ್ಚವನ್ನು ಹೆಚ್ಚಿಸಿತು. ಇದರಿಂದ ಮೆಟಾದ ಸ್ಟಾಕ್ ಮಾರ್ಕೆಟ್ $67 ಶತಕೋಟಿ ನಷ್ಟಕ್ಕೆ ಕಾರಣವಾಯಿತು. ಈ ವರ್ಷ ಕಂಪನಿ ಕಳೆದುಕೊಂಡ 500 ಶತಕೋಟಿ ಮೌಲ್ಯದೊಂದಿಗೆ ಈ ನಷ್ಟವೂ ಸೇರಿಕೊಂಡಿದೆ ಎಂಬುದಾಗಿ ವರದಿ ತಿಳಿಸಿದೆ.


  ರಾಯಿಟರ್ಸ್ ಪ್ರಕಾರ, ನಿಧಾನಗತಿಯ ಜಾಗತಿಕ ಆರ್ಥಿಕ ಬೆಳವಣಿಗೆ, ಟಿಕ್‌ಟಾಕ್‌ನಿಂದ ತೀವ್ರ ಪೈಪೋಟಿ, ಆ್ಯಪಲ್ ಸಂಸ್ಥೆಯ ಗೌಪ್ಯತೆ ಬದಲಾವಣೆಗಳು, ಹೆಚ್ಚಿದ ನಿಯಂತ್ರಕ ಒತ್ತಡ ಮತ್ತು ಮೆಟಾವರ್ಸ್‌ನಲ್ಲಿನ ಬೃಹತ್ ವೆಚ್ಚದ ಬಗ್ಗೆ ಕಾಳಜಿ ಹೊಂದಿರುವ ಕಂಪನಿಗಳಿಂದ ಸಂಸ್ಥೆಯು ಇಷ್ಟು ದೊಡ್ಡ ಮಟ್ಟದಲ್ಲಿ ನಷ್ಟಕ್ಕೆ ಒಳಗಾಯಿತು ಎಂಬುದು ತಿಳಿದುಬಂದಿದೆ.


  ಸ್ನ್ಯಾಪ್


  ಸ್ನ್ಯಾಪ್‌ಚಾಟ್ ಆ್ಯಪ್‌ ಅನ್ನು ಅಭಿವೃದ್ಧಿಪಡಿಸುವ ಹಾಗೂ ಮುನ್ನಡೆಸುತ್ತಿರುವ ಸ್ನ್ಯಾಪ್ ಕಂಪನಿಯು ಈ ವರ್ಷದ ಆಗಸ್ಟ್‌ನಲ್ಲಿ 6400 ಉದ್ಯೋಗಿಗಳಲ್ಲಿ 20% ದಷ್ಟು ವಜಾ ನಡೆಸಿದೆ. ಸ್ನ್ಯಾಪ್‌ನ ಸ್ಟಾಕ್ ಬೆಲೆಯು 80% ಕ್ಕಿಂತ ಹೆಚ್ಚು ಕುಸಿದಿರುವುದರಿಂದ ಕಂಪನಿ ಉದ್ಯೋಗಿಗಳನ್ನು ತೆಗೆದುಹಾಕಬೇಕಾಯಿತು ಎಂದು ತಿಳಿಸಿದೆ.


  ಮಿನಿ- ಆ್ಯಪ್‌ಗಳು, ಗೇಮ್ಸ್ ಹಾಗೂ ಸೋಶಿಯಲ್ ಮ್ಯಾಪಿಂಗ್ ಜೆನ್ಲಿ (ಕಂಪನಿ ಇದನ್ನು 2017 ರಲ್ಲಿ ಸ್ವಾಧೀನಪಡಿಸಿಕೊಂಡಿತು) ಯಲ್ಲಿ ಕೆಲಸ ಮಾಡುವ ಡೆವಲಪರ್‌ಗಳ ಮೇಲೆ ಇತರರಿಗಿಂತ ಹೆಚ್ಚಿನ ಪರಿಣಾಮ ಬೀರಿದೆ ಎಂಬುದು ತಿಳಿದುಬಂದಿದೆ.


  ಆದಾಯದ ಬೆಳವಣಿಗೆಯನ್ನು ಪುನರ್ ವೇಗಗೊಳಿಸಲು ನಾವು ಕೆಲಸವನ್ನು ಮುಂದುವರಿಸುತ್ತೇವೆ ಅಂತೆಯೇ ಯಾವುದೇ ಪರಿಸರದಲ್ಲಿ ಕೂಡ ಸ್ನ್ಯಾಪ್‌ನ ದೀರ್ಘಕಾಲದ ಯಶಸ್ಸನ್ನು ನಾವು ಖಚಿತಪಡಿಸಿಕೊಳ್ಳಬೇಕು. ಹಾಗಾಗಿ ದೀರ್ಘಾವಧಿಯ ಯಶಸ್ಸಿಗೆ ಉದ್ಯೋಗಿಗಳನ್ನು ತೆರವುಗೊಳಿಸುವುದೊಂದೇ ಮಾರ್ಗ ಎಂದು ನಾವು ಮನಗಂಡಿದ್ದು ಈ ಬದಲಾವಣೆಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ ಸ್ನ್ಯಾಪ್ ಸಿಇಒ ಮತ್ತು ಸಹಸ್ಥಾಪಕ ಇವಾನ್ ಸ್ಪೀಗೆಲ್ ಬರೆದುಕೊಂಡಿದ್ದಾರೆ.


  ಮೈಕ್ರೋಸಾಫ್ಟ್


  ಆಕ್ಸಿಯೋಸ್ ವರದಿಯ ಪ್ರಕಾರ ಮೈಕ್ರೋಸಾಫ್ಟ್ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬುದು ತಿಳಿದು ಬಂದಿದೆ. ಕಂಪನಿಯು ವಿವಿಧ ಹಂತಗಳು, ತಂಡಗಳು ಅಂತೆಯೇ ಪ್ರಪಂಚದ ಭಾಗಗಳಲ್ಲಿ ಉದ್ಯೋಗ ಕಡಿತ ನಿಯಮವನ್ನು ಜಾರಿಗೊಳಿಸಿದೆ. ಎಲ್ಲಾ ಸಂಸ್ಥೆಗಳಂತೆಯೇ ನಿಯಮಿತವಾಗಿ ವ್ಯಾಪಾರದ ಆದ್ಯತೆಗಳನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ರಚನಾತ್ಮಕ ಹೊಂದಾಣಿಕೆಗಳನ್ನು ಮಾಡುತ್ತೇವೆ. ನಮ್ಮ ವ್ಯಾಪಾರದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುವ ನಾವು ಮುಂದಿನ ವರ್ಷದಲ್ಲಿ ಪ್ರಮುಖ ಬೆಳವಣಿಗೆಯ ಕ್ಷೇತ್ರಗಳಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಮೈಕ್ರೋಸಾಫ್ಟ್ ಆಕ್ಸಿಯೋಸ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.


  ಇಂಟೆಲ್


  ಇಂಟೆಲ್ ಸಂಸ್ಥೆ ವೆಚ್ಚವನ್ನು ಸರಿದೂಗಿಸಲು ಸಾವಿರಾರು ಉದ್ಯೋಗಿಗಳನ್ನು ಕೈಬಿಡಲು ಯೋಜಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಹೀಗಾಗಿ ಈ ವರದಿಯ ಪ್ರಕಾರ ಪರಿಸ್ಥಿತಿಯ ಜ್ಞಾನ ಹೊಂದಿರುವ ಜನರನ್ನು ಉಲ್ಲೇಖಿಸಿದೆ. ವಜಾಗೊಳಿಸುವಿಕೆಯು ಕಂಪನಿಯ ಮಾರಾಟ ಮತ್ತು ಮಾರ್ಕೆಟಿಂಗ್ ಗುಂಪಿಗೆ ವಿಶೇಷವಾಗಿ 20% ದಷ್ಟು ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುವ ಕಡಿತಗೊಳಿಸುವ ಯೋಜನೆಯನ್ನು ಹೊಂದಿದೆ.


  ಕೋವಿಡ್ ಯುಗದಲ್ಲಿ ಸಣ್ಣ ಅಭಿವೃದ್ಧಿ ಕಂಡಿದ್ದ ಸಂಸ್ಥೆ ತದನಂತರ ಪಿಸಿ (PC ) ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ ಹೆಚ್ಚಿನ ನಷ್ಟ ಅನುಭವಿಸಿತು. ಹಾಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಇಂಟೆಲ್‌ಗೆ ಹೆಚ್ಚಿನ ಒತ್ತಡ ಉಂಟು ಮಾಡಿದೆ ಎನ್ನಲಾಗಿದೆ.


  ಇದನ್ನೂ ಓದಿ: Brainly Fires Employees: ಟ್ವಿಟ್ಟರ್, Byjus ಬಳಿಕ ಮತ್ತೊಂದು ಕಂಪನಿಯಿಂದ ಉದ್ಯೋಗಿಗಳಿಗೆ ಗೇಟ್​ಪಾಸ್​


  ಅಮೆಜಾನ್


  ಯಾವುದೇ ಉದ್ಯೋಗಿ ವಜಾ ಘೋಷಣೆಗಳನ್ನು ರಿಟೇಲ್ ತಾಣ ಅಮೆಜಾನ್ ಘೋಷಿಸದೇ ಇದ್ದರೂ ವರ್ಷದ ಉಳಿದ ಅವಧಿಗೆ ತನ್ನ ರಿಟೇಲ್ ವ್ಯವಹಾರದಲ್ಲಿ ಕಾರ್ಪೊರೇಟ್ ನೇಮಕಾತಿಯನ್ನು ಸ್ಥಗಿತಗೊಳಿಸಿದೆ. ಕಂಪನಿಯ ಆಂತರಿಕ ಪ್ರಕಟಣೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಈ ಸುದ್ದಿಯನ್ನು ಬಹಿರಂಗಪಡಿಸಿದೆ. ನೇಮಕಾತಿದಾರರು ಸ್ವೀಕರಿಸಿರುವ ಇಮೇಲ್‌ನಲ್ಲಿ ಸಂಸ್ಥೆಯು ಕಾರ್ಪೋರೇಟ್ ವಲಯಗಳಿಗೆ ನೇಮಕಾತಿಯನ್ನು ನಿಲ್ಲಿಸಿದೆ ಎಂದು ಸೂಚಿಸಿದೆ.


  ಅಮೆಜಾನ್‌ನ ಸ್ಟೋರ್ ವ್ಯವಹಾರವು ಸಂಸ್ಥೆಯ ಭೌತಿಕ ಹಾಗೂ ಆನ್‌ಲೈನ್ ರಿಟೇಲ್ ವ್ಯವಹಾರ, ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳನ್ನು ಒಳಗೊಂಡಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅಮೆಜಾನ್ ನೇಮಕಾತಿಯನ್ನು ನಿಲ್ಲಿಸುವ ಮೊದಲು ಈ ವಿಭಾಗದಲ್ಲಿ 10,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು ಎಂದು ತಿಳಿಸಿದೆ.


  ಆ್ಯಪಲ್


  ಆ್ಯಪಲ್ ಸಂಸ್ಥೆ ಕೂಡ ಅನೇಕ ವಲಯಗಳಲ್ಲಿ ಉದ್ಯೋಗಿ ವಜಾಗೊಳಿಸುವಿಕೆಯನ್ನು ನಡೆಸುತ್ತಿದೆ ಎಂಬುದು ವರದಿಯಾಗಿದೆ. ರಜಾದಿನಗಳ ಸಮಯದಲ್ಲಿ ಕಂಪನಿಯ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂಬುದು ಸಂಸ್ಥೆಯ ಹೇಳಿಕೆಯಾಗಿದೆ. ಹೊಸ ಕೋವಿಡ್ -19 ಸೋಂಕುಗಳನ್ನು ಎದುರಿಸಲು ಚೀನಾದ ಲಾಕ್‌ಡೌನ್ ನೀತಿಯಿಂದಾಗಿ ಐಫೋನ್ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಪೂರೈಕೆಯ ಮೇಲೆ ಪರಿಣಾಮ ಬೀರಲಿದೆ ಎಂಬುದು ಸಂಸ್ಥೆಯ ಊಹೆಯಾಗಿದೆ.


  ಭವಿಷ್ಯದ ಸಾಧನಗಳು ಮತ್ತು ದೀರ್ಘಕಾಲೀನ ಯೋಜನೆಗಳಲ್ಲಿ ಕೆಲಸ ಮಾಡುವ ತಂಡಗಳಿಗೆ ಈ ಕಡಿತ ಅನ್ವಯಿಸುವುದಿಲ್ಲ, ಆದರೆ ಇದು ಪ್ರಮಾಣಿತ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ಹುದ್ದೆಗಳು ಮತ್ತು ಇತರ ಕೆಲವು ಕಾರ್ಪೊರೇಟ್ ಹುದ್ದೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಬ್ಲೂಮ್‌ಬರ್ಗ್ ತಿಳಿಸಿದೆ.


  ಸ್ಟ್ರೈಪ್


  ಐರಿಶ್-ಅಮೇರಿಕನ್ ಹಣಕಾಸು ಸೇವೆಗಳ ಕಂಪನಿಯಾಗಿರುವ ಸ್ಟ್ರೈಪ್ ಇ-ಕಾಮರ್ಸ್ ಕಂಪನಿಗಳಿಗೆ ಪಾವತಿ ಪ್ರಕ್ರಿಯೆ ಸಾಫ್ಟ್‌ವೇರ್ ಮತ್ತು API ಗಳನ್ನು ಒದಗಿಸುತ್ತದೆ. ಸಂಸ್ಥೆಯ ಗ್ರಾಹಕರ ಪಟ್ಟಿಯಲ್ಲಿ ಅಮೆಜಾನ್, ಉಬರ್, ಜೂಮ್, ಸ್ಲ್ಯಾಕ್ ಮತ್ತು ಇತರ ಸಂಸ್ಥೆಗಳು ಸೇರಿವೆ. ಕಂಪನಿಯು ತನ್ನ ಉದ್ಯೋಗಿಗಳ ಸುಮಾರು 14% ದಷ್ಟನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಸ್ಟ್ರೈಪ್‌ನಲ್ಲಿ ಸುಮಾರು 14% ದಷ್ಟು ಉದ್ಯೋಗಿಗಳು ಕಂಪನಿಯನ್ನು ತೊರೆಯಲಿದ್ದು, ಸಂಸ್ಥೆಯ ಸಂಸ್ಥಾಪಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.


  ಸ್ಟ್ರೈಪ್‌ ಪ್ರಭಾವಿತರಾದ ಉದ್ಯೋಗಿಗಳನ್ನು ಕುರಿತು ನಾವು ಭಾವಿಸಿದ ಅನುಭವವನ್ನು ನೀಡಲು ಸಾಧ್ಯವಾಗದಿರುವುದು ನಮಗೆ ನೋವುಂಟುಮಾಡಿದೆ ಎಂದು ಸ್ಟ್ರೈಪ್ ಸಿಇಒ ಪ್ಯಾಟ್ರಿಕ್ ಕಾಲಿನ್ಸ್ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ ತಿಳಿಸಿದ್ದಾರೆ.


  ಬೈಜೂಸ್


  ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಬೈಜುಸ್ ಅಕ್ಟೋಬರ್ ಫಂಡಿಂಗ್ ಸುತ್ತಿನಲ್ಲಿ $22 ಶತಕೋಟಿ ಮೌಲ್ಯದ್ದಾಗಿದ್ದು, ಕಂಪನಿಯು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ $250 ಮಿಲಿಯನ್ ಸಂಗ್ರಹಿಸಿದೆ. ಸಂಸ್ಥೆಯು ವಿಶ್ವದ ಅತಿದೊಡ್ಡ ಎಜ್ಯುಕೇಶನ್-ಟೆಕ್ ಕಂಪನಿಗಳಲ್ಲಿ ಒಂದಾಗಿದೆ.


  ಅಗತ್ಯಕ್ಕಿಂತ ಹೆಚ್ಚಾದ ಉದ್ಯೋಗಿಗಳು ಹಾಗೂ ಹುದ್ದೆಗಳಲ್ಲಿನ ಪುನರಾವರ್ತನೆಯ ಕಾರಣವನ್ನು ನೀಡಿ 2,500 ಉದ್ಯೋಗಿಗಳ ವಜಾವನ್ನು ಬೈಜೂಸ್ ಘೋಷಿಸಿದೆ. ಪಿಟಿಐ ವರದಿಯ ಪ್ರಕಾರ ಸಂಸ್ಥೆಯು ಜಗತ್ತಿನಾದ್ಯಂತ 10,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ತಿಳಿಸಿದ್ದು, ಅದರಲ್ಲಿ ಅರ್ಧದಷ್ಟನ್ನು ಭಾರತದಿಂದ ನೇಮಿಸಿಕೊಳ್ಳಲಿದೆ ಎಂದು ತಿಳಿಸಿರುವುದಾಗಿ ವರದಿಮಾಡಿದೆ. ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯೊಂದಿಗೆ ಒಪ್ಪಂದಕ್ಕಾಗಿ ಸಹಿ ಹಾಕಿದ್ದಕ್ಕಾಗಿ ಕಂಪನಿ ಟೀಕೆಗೆ ಗುರಿಯಾಯಿತು.

  Published by:Kavya V
  First published: