ನಾವು ಎಷ್ಟೋ ಸಲ ‘ಸಾಕಪ್ಪಾ ಸಾಕು ಒಬ್ಬರ ಕೈ ಕೆಳಗೆ ತಿಂಗಳ ಸಂಬಳಕ್ಕೆ (Salary) ದುಡಿಯುವುದು, ನಮ್ಮದೇ ಏನಾದರೂ ಒಂದು ಸ್ವಂತ ವ್ಯವಹಾರ (Business) ಶುರು ಮಾಡ್ಕೊಬೇಕು’ ಅಂತಾ ಅನೇಕ ಬಾರಿ ಯೋಚನೆ ಮಾಡುತ್ತಿರುತ್ತೇವೆ. ಹೀಗೆ ಯೋಚಿಸಿದಾಗ ಮೊದಲು ನಮ್ಮ ತಲೆಯಲ್ಲಿ ಬರುವ ಯೋಚನೆ ಹಣ ಹೂಡಿಕೆ (Investment) ಮಾಡುವುದು. ಆದರೆ ಸಿಕ್ಕ ಸಿಕ್ಕ ಕಡೆ ಹೂಡಿಕೆ ಮಾಡುವುದಕ್ಕಿಂತ ಕಡಿಮೆ ಹಣವನ್ನು ಹೂಡಿಕೆ ಮಾಡಿ ಸ್ಥಿರವಾದ ಆದಾಯವನ್ನು ಕೊಡುವ ವ್ಯವಹಾರದ ಕಲ್ಪನೆಗಳನ್ನು ನಿರ್ಧರಿಸುವುದು ಒಳ್ಳೆಯದು. ಏಕೆಂದರೆ ಹೆಚ್ಚು ಹಣ (Money) ಹೂಡಿಕೆ ಮಾಡಿದಾಗ ನಮಗೆ ಆದಾಯ (Income) ಸಹ ಬೇಗನೆ ಬರಬೇಕೆಂಬ ಬಯಕೆ ಇನ್ನಷ್ಟು ಬಲಗೊಳ್ಳುತ್ತದೆ ಮತ್ತು ನಾವು ನಿರೀಕ್ಷಿಸಿದ ಆದಾಯವನ್ನು ಪಡೆಯದೆ ಇದ್ದಾಗ ನಮಗೆ ನಿರಾಶೆ ಉಂಟಾಗುತ್ತದೆ.
ಈ ಯುಗವನ್ನು ಒಂದು ರೀತಿಯಲ್ಲಿ ನಾವು ಸ್ಟಾರ್ಟ್ ಅಪ್ ಯುಗ ಅಂತಾನೆ ಹೇಳಬಹುದು. ಈಗಂತೂ ಹೊಸ ಹೊಸ ವ್ಯವಹಾರ ಕಲ್ಪನೆಗಳು ಮಾರುಕಟ್ಟೆಗೆ ಬರುತ್ತಿವೆ ಮತ್ತು ಅವುಗಳ ಅನುಷ್ಠಾನದ ಆಧಾರದ ಮೇಲೆ ಜನರು ಲಾಭವನ್ನು ಗಳಿಸುತ್ತಿದ್ದಾರೆ. ಇಂತಹ ಹೊಸ ವ್ಯವಹಾರ ಕಲ್ಪನೆಯಲ್ಲಿ ಕಾರು ಡಿಟೇಲಿಂಗ್ ಸಹ ಒಂದಾಗಿದೆ.
ಈ ವ್ಯವಹಾರವನ್ನು ನೀವು ಶುರು ಮಾಡಲು ಅತೀ ಸಣ್ಣ ಹೂಡಿಕೆಯ ಅಗತ್ಯವಿದೆ, ಆದರೂ ಅದನ್ನು ಸರಿಯಾಗಿ ಅಭಿವೃದ್ಧಿಪಡಿಸಿದರೆ ಕೋಟಿವರೆಗೂ ಆದಾಯವನ್ನು ಪಡೆಯಬಹುದು. ನಿಮ್ಮ ಹೂಡಿಕೆ ಸುಮಾರು 1 ಲಕ್ಷ ರೂಪಾಯಿ ಮಾತ್ರ ಆಗಿರುತ್ತದೆ.
ಕಾರ್ ಡಿಟೇಲಿಂಗ್ ಆರಂಭಿಸಲು ಎಷ್ಟು ಹಣ ಬೇಕು?
ಕಾರ್ ಡಿಟೇಲಿಂಗ್ ವರ್ಕ್ಶಾಪ್ ತೆರೆಯುವ ಮೊದಲು, ನಿಮಗೆ ನೀರಿನ ಸಂಪರ್ಕ ಉತ್ತಮವಾಗಿರು ಜಾಗದ ಅಗತ್ಯವಿರುತ್ತದೆ. ನೀವು ಇದನ್ನು ತಿಂಗಳಿಗೆ 20,000 ರೂಪಾಯಿಗಳವರೆಗೆ ಬಾಡಿಗೆಗೆ ತೆಗೆದುಕೊಳ್ಳಬೇಕಾಗುತ್ತದೆ. ನೀವು ಈಗಾಗಲೇ ಪ್ಲಾಟ್ ಹೊಂದಿದ್ದರೆ, ಉದ್ಯಮಕ್ಕೆ ತುಂಬಾನೇ ಒಳ್ಳೆಯದು.
ನೀವು ಮೂರು ಜಾಕ್ಗಳು ಮತ್ತು 4 ಕಾರ್ ಮೌಂಟಿಂಗ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಇದಕ್ಕೆ ನಿಮಗೆ ಸುಮಾರು 15,000 ರೂಪಾಯಿಯಷ್ಟು ಖರ್ಚಾಗುತ್ತದೆ.
ಕಾರ್ ಡಿಟೇಲಿಂಗ್ ಉದ್ಯಮಕ್ಕೆ ಅಗತ್ಯವಾದ ಉಪಕರಣ
ನಿಮಗೆ ಒದ್ದೆ ಮತ್ತು ಒಣ ವ್ಯಾಕ್ಯೂಮ್ ಕ್ಲೀನರ್ ಅಗತ್ಯವಿರುತ್ತದೆ, ಅದು 80 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರಬೇಕು. ಇದಕ್ಕಾಗಿ ನಿಮಗೆ 20,000 ರಿಂದ 25,000 ರೂಪಾಯಿ ವೆಚ್ಚ ತಗುಲಬಹುದು. ಹೆವಿ-ಡ್ಯೂಟಿ ಟೂಲ್ ಕಿಟ್ ಅಗತ್ಯವಿರುತ್ತದೆ, ಇದಕ್ಕೆ ಸುಮಾರು 5,000 ರೂಪಾಯಿ ಆಗುತ್ತದೆ. ಮಿನಿ ಕಂಪ್ರೆಸರ್, ಜೆಟ್ ಮತ್ತು 1 ವಾಟರ್ ಮೋಟರ್ ಮತ್ತು ಪೈಪ್ ನಿಮಗೆ 10,000 ರೂಪಾಯಿಗೆ ಸಿಗುತ್ತವೆ. ನಂತರ 20,000 ರೂಪಾಯಿಗಳವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಟ್ಟೆ ಒಣಗಿಸುವ ಯಂತ್ರ ಒಂದು ಬೇಕಾಗುತ್ತದೆ.
ಅನೇಕ ಮಾರ್ಕೆಟಿಂಗ್ ಕಂಪನಿಗಳು ಒಂದು ತಿಂಗಳ ಸಾಲದ ಮೇಲೆ ಕಾರು ತೊಳೆಯುವ ಮತ್ತು ಒಣಗಿಸುವ ರಾಸಾಯನಿಕಗಳನ್ನು ನೀಡುತ್ತವೆಯಾದರೂ, ನೀವು ಮೊದಲ ತಿಂಗಳಿಗೆ ನಗದು ಪಾವತಿಸಬೇಕಾದರೆ, ವೆಚ್ಚವು 10,000 ರೂಪಾಯಿಗಿಂತ ಕಡಿಮೆ ಇರುತ್ತದೆ. ಆದರೆ ವಿದೇಶಿ ರಾಸಾಯನಿಕಗಳು 15,000 ರಿಂದ 20,000 ರೂಪಾಯಿಗಳವರೆ ಇರುತ್ತದೆ
ಈ ವ್ಯವಹಾರದ ಆದಾಯ ಮಾದರಿ ಹೇಗಿರುತ್ತದೆ?
ಕಾರ್ ಡಿಟೇಲಿಂಗ್ ಸಮಯದಲ್ಲಿ ಕಾರನ್ನು ಚೆನ್ನಾಗಿ ಸ್ವಚ್ಛಗೊಳಿಸಲು 500 ರಿಂದ 1000 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಡಿಟೇಲಿಂಗ್ ಅಂಗಡಿಯಲ್ಲಿ ಪ್ರತಿದಿನ ಸುಮಾರು ಹತ್ತು ಕಾರುಗಳನ್ನು ತೊಳೆಯಲು ಬರುತ್ತವೆ. ಒಂದು ತಿಂಗಳಲ್ಲಿ 300 ವಾಹನಗಳಾದರೆ, ರಜಾದಿನಗಳು ಮತ್ತು ಹವಾಮಾನದ ಏರಿಳಿತಗಳಿಂದಾಗಿ ಸರಾಸರಿ 200 ವಾಹನಗಳು ತಿಂಗಳಿಗೆ ಸಿಗುತ್ತವೆ ಎಂದು ಭಾವಿಸಿದರೂ ತಿಂಗಳ ಗಳಿಕೆ ಒಟ್ಟು 1 ಲಕ್ಷ ರೂಪಾಯಿ ಆಗುತ್ತದೆ.
ಅದೇ ಸಮಯದಲ್ಲಿ, ಡ್ರೈಕ್ಲೀನಿಂಗ್ಗೆ ಸುಮಾರು 2000-4000 ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಒಂದು ಕೇಂದ್ರದಲ್ಲಿ ಪ್ರತಿದಿನ ಸರಾಸರಿ 3 ರಿಂದ 4 ಕಾರುಗಳು ಡ್ರೈ ಕ್ಲೀನಿಂಗ್ಗೆ ಬರುತ್ತವೆ. ಒಂದು ತಿಂಗಳಲ್ಲಿ 120 ಕಾರುಗಳು ಅಂತಾ ಲೆಕ್ಕ ತೆಗೆದುಕೊಂಡರೂ, ಒಂದು ಕಾರಿಗೆ ಸರಾಸರಿ 3000 ರೂಪಾಯಿ ತೆಗೆದುಕೊಂಡರೆ, ಅದು ಒಂದು ತಿಂಗಳಿಗೆ ಒಟ್ಟು 3.2 ಲಕ್ಷ ರೂಪಾಯಿ ಆಗುತ್ತದೆ.
ಹಾಗಾಗಿ ಕಾರ್ ಡಿಟೇಲಿಂಗ್ ವ್ಯವಹಾರವು ತುಂಬಾ ಲಾಭದಾಯಕವಾಗಿದೆ ಉದ್ಯಮವಾಗಿದೆ. ಜೊತೆಗೆ ಈ ಉದ್ಯಮವನ್ನು ಆರಂಭಿಸಲು ಹೆಚ್ಚು ಬಂಡವಾಳದ ಅಗತ್ಯವೂ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ