• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • World's Expensive Resort: ಇದು ವಿಶ್ವದ ಅತ್ಯಂತ ಐಷಾರಾಮಿ ರೆಸಾರ್ಟ್, ಒಂದು ರಾತ್ರಿಗೆ ತಗುಲುವ ವೆಚ್ಚದಲ್ಲಿ ಸ್ವಂತ ಮನೆನೇ ಕಟ್ಟಬಹುದು!

World's Expensive Resort: ಇದು ವಿಶ್ವದ ಅತ್ಯಂತ ಐಷಾರಾಮಿ ರೆಸಾರ್ಟ್, ಒಂದು ರಾತ್ರಿಗೆ ತಗುಲುವ ವೆಚ್ಚದಲ್ಲಿ ಸ್ವಂತ ಮನೆನೇ ಕಟ್ಟಬಹುದು!

ಅಟ್ಲಾಂಟಿಸ್ ದಿ ರಾಯಲ್‌

ಅಟ್ಲಾಂಟಿಸ್ ದಿ ರಾಯಲ್‌

ದುಬೈನ ಹೊಸ ಅತ್ಯಂತ ಐಷಾರಾಮಿ ರೆಸಾರ್ಟ್‌ ಅಟ್ಲಾಂಟಿಸ್ ದಿ ರಾಯಲ್‌, ವಿಶ್ವದ ಅತ್ಯಂತ ಪ್ರಸಿದ್ಧ ಪ್ರದರ್ಶಕರಾದ, ಹೆಸರಾಂತ ಅಮೆರಿಕನ್ ಗಾಯಕಿ ಬೆಯೋನ್ಸ್ ಅವರ ಗ್ರ್ಯಾಂಡ್ ರಿವೀಲ್ ಪ್ರದರ್ಶನದ ಮೂಲಕ ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡಿತು.

  • Share this:

ಐಷಾರಾಮಿ ಗಗನ ಚುಂಬಿ ಕಟ್ಟಡಗಳು (Luxury Skyscrapers) , ಎಲ್ಲೆಲ್ಲೂ ನೋಡಿದರೂ ಝಗಮಗಿಸುವ ವೈಭವ (Glory) , ಸೆಲೆಬ್ರಿಟಿಗಳಿಂದ (Celebrity) ಹಿಡಿದು ವಿಶ್ವದ ಶ್ರೀಮಂತರ ವಿಹಾರ ಸ್ಥಳವೆಂದರೆ ಅದು ದುಬೈಯಲ್ಲದೆ (Dubai) ಬೇರೆ ಯಾವ ಸ್ಥಳವೂ ಅಲ್ಲ. ಹಾಲಿಡೇ (Holiday) ತಾಣಗಳಿಂದ ಆರಂಭಿಸಿ ಕ್ಲಬ್ ಪಬ್‌ಗಳ (Pub) , ಸುಂದರ ಸೊಗಸಾದ ರೆಸಾರ್ಟ್‌ಗಳ (Resort) ತವರೂರಾಗಿರುವ ದುಬೈ, ಇದೀಗ ಐಷಾರಾಮಿ ರೆಸಾರ್ಟ್ ಹೋಟೆಲ್ ಅಟ್ಲಾಂಟಿಸ್ ದಿ ರಾಯಲ್‌ಗೆ (Atlantis the Royal) ಅತಿಥಿಗಳನ್ನು ಬರಮಾಡಿಕೊಳ್ಳುವ ಸನ್ನಾಹದಲ್ಲಿ ಸಜ್ಜಾಗಿದೆ.


ದುಬೈನ ಹೊಸ ಅತ್ಯಂತ ಐಷಾರಾಮಿ ರೆಸಾರ್ಟ್‌ ಅಟ್ಲಾಂಟಿಸ್ ದಿ ರಾಯಲ್‌, ವಿಶ್ವದ ಅತ್ಯಂತ ಪ್ರಸಿದ್ಧ ಪ್ರದರ್ಶಕರಾದ, ಹೆಸರಾಂತ ಅಮೆರಿಕನ್ ಗಾಯಕಿ ಬೆಯೋನ್ಸ್ ಅವರ ಗ್ರ್ಯಾಂಡ್ ರಿವೀಲ್ ಪ್ರದರ್ಶನದ ಮೂಲಕ ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡಿತು. ಸ್ವರ್ಗವೇ ಧರೆಗಿಳಿದು ಬಂದಂತಹ ನೋಟಕ್ಕೆ ಸಾಕ್ಷಿಯಾಗಿರುವ ಅಟ್ಲಾಂಟಿಸ್ ರಾಯಲ್ ಅತ್ಯಂತ ಮನಮೋಹಕ ಒಳಾಂಗಣ ವಿನ್ಯಾಸವನ್ನು ಹೊಂದಿದೆ.


ಮಂತ್ರಮುಗ್ಧಗೊಳಿಸುವ ರೆಸಾರ್ಟ್ ವಿನ್ಯಾಸ


ಈ ರೆಸಾರ್ಟ್‌ ಅನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವರ್ಗಲೋಕಕ್ಕೆ ಬಂದಂತಹ ಅನುಭವ ಉಂಟಾಗಲಿದೆ ಏಕೆಂದರೆ ಪ್ರವೇಶ ದ್ವಾರದ ಆಕರ್ಷಕ ನೋಟ ಎಂತಹವರನ್ನೂ ಮಂತ್ರಮುಗ್ಧಗೊಳಿಸಲಿದೆ.


ಈ ರೆಸಾರ್ಟ್‌ನ ಒಂದೊಂದು ದೃಶ್ಯಾವಳಿಗಳು ಕೂಡ ಮನಮೋಹಕವಾಗಿದ್ದು ಅತ್ಯದ್ಭುತವಾಗಿದೆ. $1.2 ಶತಕೋಟಿ ಮೌಲ್ಯದ ಅಟ್ಲಾಂಟಿಸ್ ದಿ ರಾಯಲ್, ದುಬೈ ಮೂಲದ ಹೊಟೇಲ್ ಉದ್ಯಮಿ ಕೆರ್ಜ್ನರ್ ಇಂಟರ್ನ್ಯಾಷನಲ್ ಲಿಮಿಟೆಡ್‌ನ ಸುಪರ್ದಿಗೆ ಒಳಪಟ್ಟ ಅತ್ಯಮೂಲ್ಯ ಸ್ವತ್ತಾಗಿದ್ದು ರೆಸಾರ್ಟ್‌ನಲ್ಲಿರುವ 795 ಐಷಾರಾಮಿ ಕೊಠಡಿಗಳು ಫೆಬ್ರವರಿಯ ಮಧ್ಯಭಾಗದಲ್ಲಿಯೇ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದೆ.


ಕಣ್ಣುಕುಕ್ಕುವ ನೋಟ ಬೆಲೆ ಕೂಡ ದುಬಾರಿ


ರೆಸಾರ್ಟ್‌ನ ಲಾಬಿಯಿಂದಲೇ ಕಣ್ಣುಕುಕ್ಕುವ ವೈಭವವನ್ನು ಪಡೆದುಕೊಂಡಿದ್ದು, ಎತ್ತರದಲ್ಲಿರುವ ಜಲಚರ ಶಿಲ್ಪ ಹಾಗೂ ಅದರಿಂದ ತೊನೆದಾಡುವ ನೀರಿನ ಹರಿಯುವಿಕೆ ಅತಿಥಿಗಳ ನೋಟವನ್ನು ತನ್ನೆಡೆಗೆ ಸೆಳೆದುಕೊಳ್ಳದೇ ಇರಲಾರದು. ಚೆಕ್ ಇನ್‌ನಿಂದ ತೊಡಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ರೆಸಾರ್ಟ್‌ನಲ್ಲಿ ಬಳಸಲಾಗಿದೆ. ಉನ್ನತ ಮಟ್ಟದ ಲಕ್ಸುರಿ ಸೂಟ್ ರೂಮ್‌ಗೆ ತಗುಲುವ ವೆಚ್ಚ ಒಂದು ರಾತ್ರಿಗೆ $100,000 ( ಭಾರತೀಯ ರೂಪಾಯಿಗಳಲ್ಲಿ 8275000) ಎಂಬುದಾಗಿ ಹೋಟೆಲ್ ಅಧಿಕಾರಿಗಳು ತಿಳಿಸಿದ್ದಾರೆ.


ಬೇಸಿಕ್ ಕೊಠಡಿಯ ಅತ್ಯುನ್ನತ ಸೌಲಭ್ಯಗಳು


ಬೇಸಿಕ್ ಕೊಠಡಿಗಳಲ್ಲೊಂದಾದ ಸೀಸ್ಕೇಪ್ ಕಿಂಗ್‌ನ ಬೆಲೆ ಒಂದು ರಾತ್ರಿಗೆ 4,135 ದಿರ್ಹಮ್‌ಗಳಿಗೆ ಪ್ರಾರಂಭವಾಗುತ್ತದೆ. ಕಿಂಗ್ ಸೈಜ್ ಬೆಡ್ ಈ ಕೊಠಡಿಯಲ್ಲಿದ್ದು, ಲೌಂಜರ್ ಹಾಗೂ ಡೆಸ್ಕ್ ಹಾಗೂ ವಿಶಾಲವಾದ ಕ್ಲೋಸೆಟ್‌ಗಳನ್ನು ಒಳಗೊಂಡಿದೆ.


ಇದನ್ನೂ ಓದಿ: ಇದು ವಿಶ್ವದ ಅತ್ಯಂತ ದುಬಾರಿ ಮನೆ, ಈ ದುಡ್ಡಲ್ಲಿ ಇಡೀ ದೇಶವನ್ನೇ ಖರೀದಿ ಮಾಡ್ಬಹುದು!


ಈ ಕೊಠಡಿಯಲ್ಲಿರುವ ಪೀಠೋಪಕರಣಗಳು ಅತ್ಯಂತ ಆರಾಮದಾಯಕ ಎಂದೆನಿಸಿದ್ದು, ಸ್ನಾನಗೃಹದಲ್ಲಿ ಅತಿಥಿಗಳಿಗಾಗಿ ಗೋಲ್ಡನ್ ಟೂತ್ ಬ್ರಷ್‌ಗಳು, ಬಾಚಣಿಗೆಗಳು, ಬ್ಯಾಕ್ ಸ್ಕ್ರಬ್ಬರ್, ಫ್ಲಿಪ್-ಫ್ಲಾಪ್‌ಗಳು ಮತ್ತು ಬೀಚ್ ಬ್ಯಾಗ್‌ಗಳನ್ನು ಒಳಗೊಂಡಿದೆ. ಈ ಎಲ್ಲಾ ವಸ್ತುಗಳನ್ನು ಶುಲ್ಕರಹಿತವಾಗಿ ಮನೆಗೆ ಕೂಡ ಅತಿಥಿಗಳು ತೆಗೆದುಕೊಂಡು ಹೋಗಬಹುದಾಗಿದೆ.


ದುಡ್ಡು ಕೊಟ್ಟಷ್ಟೂ ಸೌಲಭ್ಯ ಕೂಡ ಜಾಸ್ತಿ


ಈ ಹೋಟೆಲ್‌ನ ವಿಶೇಷತೆ ಏನೆಂದರೆ ಇದು ಅಂತಿಂಥ ಹೋಟೆಲ್‌ ಅಲ್ಲ ಬದಲಿಗೆ ಇಲ್ಲಿ ತಂಗಿರುವ ಅತಿಥಿಗಳು ಸುಮ್ಮನೆ ತಮ್ಮ ತಮ್ಮ ಕೊಠಡಿಗಳ ಒಳಗೆಯೇ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದೇನಿಲ್ಲ. ಕಾರಂಜಿಗಳ ಮುಂದೆ ಸೆಲ್ಫಿ ತೆಗೆಸಿಕೊಳ್ಳಬಹುದು ಹಾಗೂ ಶಾಪಿಂಗ್ ಕೂಡ ಮಾಡಬಹುದಾಗಿದೆ.


ಇನ್ನು ಬೀಚ್ ಪ್ರದೇಶದಲ್ಲಿ ಹೆಚ್ಚುವರಿ 10,000 ದಿರ್‌ಹಮ್‌ಗಳನ್ನು ನೀಡುವ ಮೂಲಕ ಒಂಭತ್ತು ಜನರಿಗೆ ಅವಕಾಶವಿರುವ ಲಿವಿಂಗ್ ರೂಮ್, ಬಟ್ಟೆ ಬದಲಾಯಿಸುವ ಸೌಲಭ್ಯ, ಶವರ್ ಹಾಗೂ ಸಣ್ಣ ಖಾಸಗಿ ಪೂಲ್ ಅನ್ನು ಬಳಸಬಹುದಾಗಿದೆ. ಹೋಟೆಲ್‌ನಲ್ಲಿ ಸ್ಪಾ ಸೌಲಭ್ಯಗಳೂ ಇದ್ದು, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ವಿಶ್ರಾಂತಿ ಕೊಠಡಿಗಳನ್ನು ಹೊಂದಿದೆ.


ವಿಶ್ವದ ಪ್ರಸಿದ್ಧ ಬಾಣಸಿಗರ ಕೈರುಚಿ ಸವಿಯುವ ಭಾಗ್ಯ


ಅತ್ಯಂತ ರುಚಿಯಾದ ಖಾದ್ಯಗಳು, ತರೇಹವಾರಿ ತಿನಿಸುಗಳು ಹಾಗೂ ಇದನ್ನು ತಯಾರಿಸಲೆಂದೇ ವಿಶ್ವದ ಏಳು ಪ್ರಸಿದ್ಧ ಬಾಣಸಿಗರನ್ನು ವ್ಯವಸ್ಥೆ ಮಾಡಲಾಗಿದೆ.ಹೆಸರಿಗೆ ತಕ್ಕಂತೆಯೇ ಅಟ್ಲಾಂಟಿಸ್ ದಿ ರಾಯಲ್ ವೈಭವೋಪೇತ ವಿನ್ಯಾಸ ಹಾಗೂ ಸೌಲಭ್ಯಗಳನ್ನೊಳಗೊಂಡಿದ್ದು ಪ್ರತಿಯೊಂದು ವಿಧದಲ್ಲಿಯೂ ಅತಿಥಿ ಅಭ್ಯಾಗತರಿಗೆ ವಿಶಿಷ್ಟವಾದ ಆತಿಥ್ಯವನ್ನು ಉಣಬಡಿಸುತ್ತದೆ. ಇಲ್ಲಿರುವ ಅತಿಥಿ ಸತ್ಕಾರ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳುವಂತಹದ್ದು ಹಾಗೂ ಅತಿಥಿಗಳಿಗೆ ಇಷ್ಟವಾಗುವಂತಹ ರೀತಿಯಲ್ಲಿಯೇ ಹೋಟೆಲ್ ಸೌಲಭ್ಯಗಳನ್ನು ಹೊಂದಿದೆ.

Published by:ವಾಸುದೇವ್ ಎಂ
First published: