Costly Phones: ಭಾರತದಲ್ಲೇ ಉತ್ಪಾದನೆ ಮಾಡಿದರೂ ಸ್ಮಾರ್ಟ್​ಫೋನ್ ಯಾಕೆ ದುಬಾರಿ? ತಯಾರಕರ ಅಳಲು ಇದು

Challenges of Smartphone Production in India: ಮೇಕ್ ಇನ್ ಇಂಡಿಯಾ ಆಶಯದಂತೆ ಭಾರತದಲ್ಲಿ ಸ್ಮಾರ್ಟ್​ಫೋನ್​ಗಳನ್ನ ತಯಾರಿಸಲಾಗುತ್ತಿದ್ದರೂ ಬೆಲೆ ದುಬಾರಿ ಆಗುತ್ತಿದೆ. ಈ ಬಗ್ಗೆ ಉದ್ದಿಮೆಯ ಸಂಘಟನೆಯು ಕಳವಳ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ನವದೆಹಲಿ, ಡಿ. 28: ಎರಡು ವರ್ಷಗಳ ಹಿಂದೆ ಭಾರತದಲ್ಲಿ 10 ಸಾವಿರ ರೂ ಒಳಗೆ ಒಳ್ಳೊಳ್ಳೆಯ ಸ್ಮಾರ್ಟ್​ಫೋನ್​ಗಳು (Smartphones) ಸಿಗುತ್ತಿದ್ದವು. ಈಗ ಆಯ್ಕೆ ಬಹಳ ಸೀಮಿತವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪನಿಗಳ ಸ್ಮಾರ್ಟ್​ಫೋನ್​ಗಳ ಬೆಲೆ ಭಾರತದಲ್ಲಿ ಹೆಚ್ಚುತ್ತಿದೆ. ಶಿಯಾವೊಮಿ (Xiaomi), ಓಪ್ಪೋ (Oppo), ರಿಯಲ್ಮಿ (Realme) ಮೊದಲಾದ ಕಂಪನಿಗಳ ಸ್ಮಾರ್ಟ್​ಫೋನ್​ಗಳು ಒಂದೇ ವರ್ಷದಲ್ಲಿ ಹಲವು ಬಾರಿ ಬೆಲೆ ಹೆಚ್ಚಳ ಕಂಡಿವೆ. ಬಹುತೇಕ ಎಲ್ಲಾ ಕಂಪನಿಗಳ ಫೋನ್​ಗಳೂ ದುಬಾರಿ ಆಗುತ್ತಲೇ ಬಂದಿವೆ.

ಹಿಂದೆ ಭಾರತದಲ್ಲಿ ಸ್ಮಾರ್ಟ್​ಫೋನ್​ಗಳೊಳಗೆ ಬೆಲೆ ಇಳಿಕೆ ಪೈಪೋಟಿ ಸಖತ್ತಾಗಿ ಇತ್ತು. 15 ಸಾವಿರ ರೂ ಮೌಲ್ಯದ ಫೋನ್​ಗಳು 10 ಸಾವಿರಕ್ಕೆಲ್ಲ ಸಿಗುತ್ತಿತ್ತು. ಈಗ ಬೆಲೆ ಏರಿಕೆ ಪೈಪೋಟಿ ನಡೆಯುತ್ತಿರುವಂತಿದೆ. ಸರ್ಕಾರದ ಮೇಕ್ ಇನ್ ಇಂಡಿಯಾ ಆಶಯದಂತೆಯೇ ಹಲವು ಕಂಪನಿಗಳು ಭಾರತದಲ್ಲಿ ತಮ್ಮ ಸ್ಮಾರ್ಟ್​ಫೋನ್​ಗಳ ತಯಾರಿಕೆ ಮಾಡುತ್ತಿವೆ. ಹೀಗಾಗಿದ್ದಲ್ಲಿ ಸಹಜವಾಗಿಯೇ ಬೆಲೆ ಇಳಿಕೆ ಆಗಬೇಕಿತ್ತು. ಆದರೂ ಯಾಕೆ ಫೋನ್​ಗಳ ಬೆಲೆ ಹೆಚ್ಚಳವಾಗುತ್ತಿದೆ ಎಂಬ ಪ್ರಶ್ನೆ ಸಹಜ. ಇದಕ್ಕೆ ಭಾರತದ ಮೊಬೈಲ್ ಉದ್ದಿಮೆಯ ಸಂಘಟನೆಯು (ICEA) ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉತ್ತರ ಇದೆ.

ಆಮದು ಸುಂಕವೇ ವಿಲನ್:

ಇಂಡಿಯಾ ಸೆಲುಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ಸಂಸ್ಥೆಯ ಛೇರ್ಮನ್ ಪಂಕಜ್ ಮೋಹಿಂದ್ರು ಅವರು ಕೇಂದ್ರ ಐಟಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಬರೆದ ಪತ್ರದಲ್ಲಿ ಸ್ಮಾರ್ಟ್​ಫೋನ್ ಉದ್ದಿಮಿಗೆ ಆಗಿರುವ ಸಮಸ್ಯೆಗಳ ಬಗ್ಗೆ ವಿಶದವಾಗಿ ತಿಳಿಸಿದ್ದಾರೆ.

ಅವರ ಪ್ರಕಾರ, ಕಳೆದ ಬಾರಿಯ ಕೇಂದ್ರೀಯ ಬಜೆಟ್​ನಲ್ಲಿ ಆಮದು ಸುಂಕಗಳನ್ನ (Import Duties) ಹೆಚ್ಚಿಸಿದ್ದು ಸ್ಮಾರ್ಟ್​ಫೋನ್ ಉದ್ದಿಮೆಗೆ ಹೊಡೆತ ಕೊಟ್ಟಿದೆಯಂತೆ. ಅಂದರೆ, ಸ್ಮಾರ್ಟ್​ಫೋನ್ ತಯಾರಿಕೆಗೆ ಅಗತ್ಯವಾಗಿರುವ ಕ್ಯಾಮೆರಾ ಮಾಡ್ಯೂಲ್ಸ್, ಚಾರ್ಜರ್, ಪಿಸಿಬಿಎ, ಪವರ್ ಬ್ಯಾಂಕ್ ಮತ್ತಿತರ ಅಗತ್ಯ ಬಿಡಿಭಾಗಗಳನ್ನ ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸರ್ಕಾರದ ಆಮದು ಸುಂಕಗಳಿಂದಾಗಿ ಇವುಗಳ ಬೆಲೆ ಹೆಚ್ಚಳವಾಗುತ್ತಿದೆ. ಇದರಿಂದ ಸ್ಮಾರ್ಟ್​ಫೋನ್ ತಯಾರಿಕೆಯ ವೆಚ್ಚ ಏರಿಕೆ ಆಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: 5G Network: ದೇಶದ ಜನತೆಗೆ ಸಿಹಿ ಸುದ್ದಿ! ಮುಂದಿನ ವರ್ಷ ಈ ನಗರಗಳಲ್ಲಿ ಫಸ್ಟ್‌ 5G ಸೇವೆ ಸಿಗಲಿದೆಯಂತೆ

2014-15ರಲ್ಲಿ ಭಾರತದಲ್ಲಿ 19 ಸಾವಿರ ಕೋಟಿ ರೂ ಮೌಲ್ಯದಷ್ಟು 6 ಕೋಟಿ ಮೊಬೈಲ್ ಫೋನ್​ಗಳ ಉತ್ಪಾದನೆ ಆಗುತ್ತಿತ್ತು. ಕೆಂದ್ರ ಸರ್ಕಾರ ಭಾರತದಲ್ಲಿ ಉತ್ಪಾದನಾ ವಲಯಕ್ಕೆ ಪುಷ್ಟಿಕೊಡಲು ಹಲವು ಪ್ರೋತ್ಸಾಹಕ ಯೋಜನೆಗಳನ್ನ ಕೈಗೊಂಡಿತು. ಇದರ ಪರಿಣಾಮವಾಗಿ ಜಾಗತಿಕ ಕಂಪನಿಗಳ ಗಮನ ಇತ್ತ ಹರಿದು ಉತ್ಪಾದನೆ ಶುರು ಮಾಡಿದವು. ಪರಿಣಾಮವಾಗಿ 2020-21ರಲ್ಲಿ 2.2 ಲಕ್ಷ ಕೋಟಿ ರೂ ಮೌಲ್ಯದಷ್ಟು 33 ಕೋಟಿ ಮೊಬೈಲ್​ಗಳ ಫೋನ್​ಗಳ ತಯಾರಿಕೆ ಭಾರತದಲ್ಲಿ ಆಗುತ್ತಿವೆ.

ಎಲ್ಲವೂ ಸುಗಮವಾಗಿ ಸಾಗುವಾಗ ಕೇಂದ್ರ ಸರ್ಕಾರ ಆಮದು ಸುಂಕವನ್ನ ಹೆಚ್ಚಿಸುವ ಮೂಲಕ ಉತ್ಪಾದನಾ ವಲಯಕ್ಕೆ ಹೊಡೆತ ಕೊಟ್ಟಿದೆ. ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (PLI- Production-linked Incentive) ಯೋಜನೆಯ ಆಶಯಕ್ಕೆ ಈ ಆಮದು ಸುಂಕದಿಂದ ಸಂಚಕಾರವಾಗಿದೆ ಎಂಬುದು ಮೊಬೈಲ್ ಉದ್ದಿಮೆಯ ಸಂಘಟನೆಯ ವಾದ. ಅಂದರೆ, ಪಿಎಲ್​ಐ ಯೋಜನೆಯ ಉದ್ದೇಶ ಇರುವುದೇ ಉತ್ಪಾದನಾ ಪ್ರಮಾಣ ಹೆಚ್ಚಿಸಿ ಉತ್ಪನ್ನದ ಬೆಲೆ ಇಳಿಸುವುದೇ ಆಗಿದೆ. ಹೆಚ್ಚು ಉತ್ಪಾದನೆ ಮಾಡಿದರೆ ಸರ್ಕಾರ ನಿರ್ದಿಷ್ಟ ಸಬ್ಸಿಡಿ ಕೊಡುತ್ತದೆ. ಆದರೆ, ಆಮದು ಸುಂಕ ಹೆಚ್ಚಿರುವುದರಿಂದ ಮೊಬೈಲ್ ಕಂಪನಿಗಳು ಹೆಚ್ಚು ಫೋನ್​ಗಳನ್ನ ತಯಾರಿಸಲು ಆಗುತ್ತಿಲ್ಲ. ಈ ರೀತಿ ಮೊಬೈಲ್ ಫೋನ್​ಗಳ ಉತ್ಪಾದನಾ ಪ್ರಮಾಣ ತಗ್ಗಿಸುವುದರಿಂದ ಈ ಉದ್ದಿಮೆಗೆ 10ರಿಂದ 15 ಸಾವಿರ ಕೋಟಿ ರೂ ನಷ್ಟ ಆಗಿದೆ ಎಂದು ಐಸಿಇಎ ಹೇಳುತ್ತದೆ.

ಇದನ್ನೂ ಓದಿ: Okaya Electric Faast E-scooter: ಕೇವಲ 2 ಸಾವಿರ ರೂ.ಗೆ ಸ್ಕೂಟರ್ ಬುಕ್ ಮಾಡಿ, ಒಂದೇ ಚಾರ್ಜ್​​ನಲ್ಲಿ 200 Km ಕ್ರಮಿಸುತ್ತೆ ನೋಡಿ!

ಜಿಎಸ್​ಟಿ ವಿಲನ್:

ಮೊಬೈಲ್ ಫೋನ್ ಮಾರುಕಟ್ಟೆಗೆ ತೆರಿಗೆಯ ಬರೆಯೂ ಬಿದ್ದಿದೆ. ಜಿಎಸ್​ಟಿ ತೆರಿಗೆ ವ್ಯವಸ್ಥೆ ಬರುವ ಮುನ್ನ ಮೊಬೈಲ್ ಹ್ಯಾಂಡ್​ಸೆಟ್​ಗಳ ಮೇಲೆ ಶೇ. 8.2ರಷ್ಟು ತೆರಿಗೆ ಇತ್ತು. ನಂತರ ಸರ್ಕಾರ ಶೇ. 12ರಷ್ಟು ಜಿಎಸ್​ಟಿ ನಿಗದಿ ಮಾಡಿತು. ಅಂದರೆ ಶೇ. 50ರಷ್ಟು ತೆರಿಗೆ ಹೆಚ್ಚಳವಾಯಿತು. ಅಷ್ಟು ಸಾಲದೆಂಬಂತೆ ಸರ್ಕಾರ ಜಿಎಸ್​ಟಿಯನ್ನ ಶೇ. 18ಕ್ಕೆ ಏರಿಸಿತು. ಇದರಿಂದ ಮೊಬೈಲ್ ಫೋನ್ ಸಹಜವಾಗಿಯೇ ದುಬಾರಿ ಆಗಿದೆ. ತತ್​ಪರಿಣಾಮವಾಗಿ ಬೇಡಿಕೆಯೂ ಇಳಿದಿದೆ.

ತೆರಿಗೆ ಇಳಿಕೆಗೆ ಸಲಹೆ:

ಮೊಬೈಲ್ ಫೋನ್​ಗಳ ಮೇಲಿನ ಜಿಎಸ್​ಟಿಯನ್ನ ಶೇ. 18ರಿಂದ ಶೇ. 12ಕ್ಕೆ ಇಳಿಸಿ. ಮೊಬೈಲ್ ಫೋನ್​ನ ಬಿಡಿಭಾಗಗಳ ಮೇಲಿನ ಜಿಎಸ್​ಟಿಯನ್ನ ಶೇ. 5ಕ್ಕೆ ತಗ್ಗಿಸಿ ಎಂದು ಐಸಿಇಎ ಇತ್ತೀಚೆಗಷ್ಟೇ ಸರ್ಕಾರಗಳಿಗೆ ಮನವಿ ಮಾಡಿತ್ತು.
Published by:Vijayasarthy SN
First published: