ಇತ್ತೀಚಿಗೆ ಬ್ಯಾಂಕ್ ಎಟಿಎಂಗಳಲ್ಲಿ (Bank ATM) 2 ಸಾವಿರ ಮುಖಬೆಲೆಯ ನೋಟುಗಳು ಅಷ್ಟಾಗಿ ಬರುತ್ತಿಲ್ಲ. ಹಾಗೆಯೇ ದಿನಬಳಕೆಯಲ್ಲಿ ಆ ಪಿಂಕ್ ಕಲರ್ ನೋಟುಗಳನ್ನು ನೋಡುವುದು ಅಪರೂಪವಾಗಿಬಿಟ್ಟಿದೆ. 500, 1000 ನೋಟುಗಳ ಅಮಾನ್ಯವಾದ ಬಳಿಕ ಸರ್ಕಾರ (Government) 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು (2 Thousand Notes) ಚಲಾವಣೆಗೆ ತಂದಿತ್ತು. ಆದರೆ ಇದೀಗ ಆ ನೋಟುಗಳು ಜನಸಾಮಾನ್ಯರ ಕಣ್ಣಿಗೆ ಅಷ್ಟಾಗಿ ಕಾಣಿಸುತ್ತಿಲ್ಲ.
ಹಾಗಿದ್ರೆ ಶೀಘ್ರವೇ ಈ ನೋಟು ಕೂಡ ಬಂದ್ ಆಗಲಿದೆಯೇ? ಮತ್ತೆ ನೋಟುಗಳ ಅಮಾನ್ಯೀಕರಣವಾಗುತ್ತಾ? ಯಾಕೆ ಎಲ್ಲಿಯೂ ಆ ನೋಟುಗಳು ಕಾಣಿಸುತ್ತಿಲ್ಲ? ಎಟಿಎಂಗಳಲ್ಲಿ ಕೂಡ ಬರುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತರ ಬ್ಯಾಂಕ್‌ಗಳಿಗೆ 2000 ರೂ.ಗಳ ಕರೆನ್ಸಿ ನೋಟುಗಳನ್ನು ವಿತರಿಸಲು ನಿರ್ಬಂಧಗಳನ್ನು ವಿಧಿಸಿದೆಯೇ? ಎಂಬ ಬಗ್ಗೆ ಕೂಡ ಊಹಾಪೋಹಗಳು ಹರಡಿದ್ದವು. ಹಾಗಿದ್ದರೆ ನಿಜ ಯಾವುದು? ಏನು ನಡೆಯುತ್ತಿದೆ ಎಂಬ ಬಗ್ಗೆ ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಬ್ಯಾಂಕ್‌ಗಳಿಗೆ ಯಾವುದೇ ಸೂಚನೆ ನೀಡಲಾಗಿಲ್ಲ!
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ಗಳಿಗೆ ಎಟಿಎಂಗಳಲ್ಲಿ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ವಿತರಿಸಲು ನಿರ್ಬಂಧಗಳನ್ನು ವಿಧಿಸಿದೆಯೇ? ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರು. ಬ್ಯಾಂಕ್ ಎಟಿಎಂಗಳಲ್ಲಿ 2000 ರೂಪಾಯಿ ನೋಟುಗಳನ್ನು ತುಂಬದಂತೆ ಬ್ಯಾಂಕ್‌ಗಳಿಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ತನ್ನ ಮಗನ ಆರೋಗ್ಯಕ್ಕಾಗಿ 10 ವರ್ಷದ ಬಾಲಕನನ್ನು ಬಲಿಕೊಟ್ಟ ಪಾಪಿ! ದುಷ್ಕೃತ್ಯಕ್ಕೆ ಚಿಕ್ಕಪ್ಪನೇ ಸಾಥ್
"ನೋಟುಗಳ ಬಳಕೆ, ಗ್ರಾಹಕರ ಅಗತ್ಯತೆ ಮುಂತಾದವುಗಳ ಆಧಾರದ ಮೇಲೆ ಬ್ಯಾಂಕ್‌ಗಳು ಎಟಿಎಂಗಳಿಗೆ ಹಣದ ಮೊತ್ತ ಮತ್ತು ಯಾವ ಮುಖಬೆಲೆಯ ನೋಟುಗಳ ಅಗತ್ಯತೆ ಇದೆ ಎಂಬ ಬಗ್ಗೆ ತಮ್ಮದೇ ಆದ ಮೌಲ್ಯಮಾಪನವನ್ನು ಮಾಡುತ್ತವೆ" ಎಂದು ಸೀತಾರಾಮನ್ ಹೇಳಿದರು.
ನೋಟುಗಳ ಹೊಸ ವಿನ್ಯಾಸದ ಯಾವುದೇ ಯೋಜನೆ ಇಲ್ಲ!
ಇನ್ನು, ಸಂಸತ್ತಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ 2000 ರೂಪಾಯಿ ನೋಟುಗಳ ಭವಿಷ್ಯದ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಲಾಯಿತು. ರಾಜ್ಯಸಭಾ ಸದಸ್ಯರಾದ ರಾಜಮಣಿ ಪಟೇಲ್ ಅವರು ಮಹಾತ್ಮ ಗಾಂಧಿ (ಹೊಸ) ಸರಣಿಯ ಭಾಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ಮುಖಬೆಲೆಯ ಹೊಸ ವಿನ್ಯಾಸದ ನೋಟುಗಳನ್ನು ಪರಿಚಯಿಸುತ್ತಿದೆಯೇ? ಎಂದು ಕೇಳಿದರು.
ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, 2016 ರಲ್ಲಿ ಆರ್‌ಬಿಐ 2000 ರೂ. ನೋಟುಗಳ ಹೊಸ ವಿನ್ಯಾಸವನ್ನು ಪರಿಚಯಿಸಿರುವುದರಿಂದ ಅಂತಹ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು, 2019-20ರಿಂದ ಹೊಸದಾಗಿ 2000 ರೂಪಾಯಿ ನೋಟುಗಳನ್ನು ಮುದ್ರಿಸಿಲ್ಲ. ಆದರೆ, 2000 ರೂಪಾಯಿ ನೋಟುಗಳನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದೂ ಕೂಡ ಹೇಳಿದರು.
ಇದಕ್ಕೂ ಮುನ್ನಾದಿನ ಲೋಕಸಭೆಯಲ್ಲಿ ಸಂಸದ ಸಂತೋಷ್ ಕುಮಾರ್ ಅವರು, ಸುಮಾರು 9.21 ಲಕ್ಷ ಕೋಟಿ ಮೌಲ್ಯದ ರೂ. 500 ಮತ್ತು ರೂ.2000 ಮುಖ್ಯಬೆಲೆಯ ನೋಟುಗಳು ಅಮಾನ್ಯೀಕರಣದ ನಂತರ ಚಲಾವಣೆಯಿಂದ ಹೊರಗುಳಿದಿವೆ ಎಂಬ ಬಗ್ಗೆ ಕೇಳಿದ್ದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರು.
"ಅಂತಹ ಯಾವುದೇ ಮಾಹಿತಿ ಅಥವಾ ಡೇಟಾ ಲಭ್ಯವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿಗಳ ಪ್ರಕಾರ, ಮಾರ್ಚ್ 2017 ರ ಅಂತ್ಯಕ್ಕೆ ಚಲಾವಣೆಯಲ್ಲಿರುವ 500 ಮತ್ತು 2000 ರೂಪಾಯಿ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯವು 9.512 ಲಕ್ಷ ಕೋಟಿ ಆಗಿತ್ತು, ಆದರೆ 2022 ರ ಮಾರ್ಚ್ ಅಂತ್ಯಕ್ಕೆ ಇದರ ಮೌಲ್ಯವು 27.057 ಲಕ್ಷ ಕೋಟಿಗಳಷ್ಟಿತ್ತು”ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ