ಉದ್ಯಮಿ ರತನ್ ಟಾಟಾ (Ratan Tata) ತಮ್ಮ ವಿನಮ್ರ ವರ್ತನೆ ಹಾಗೂ ಔದಾರ್ಯದಿಂದಲೇ ಜನಮಾನಸದಲ್ಲಿ ಖ್ಯಾತರಾದವರು. ತಮ್ಮೊಂದಿಗೆ ಇತರರನ್ನು ಬೆಳೆಸಬೇಕೆಂಬ ಧ್ಯೇಯದೊಂದಿಗೆ ಅನೇಕ ವ್ಯಾಪಾರೋದ್ಯಮಿಗಳಿಗೆ ಸಹಾಯ ಮಾಡುವ ರತನ್ ಟಾಟಾ ಅವರ ಜೀವನ ಪ್ರತಿಯೊಬ್ಬರಿಗೂ ಮಾರ್ಗದರ್ಶಕ (Guide) ಎಂದೆನಿಸಿದೆ. ಇಂದಿನ ಲೇಖನದಲ್ಲಿ ಕೂಡ ರತನ್ ಟಾಟಾ ಅವರ ಬೆಂಬಲ ಹಾಗೂ ಮಾರ್ಗದರ್ಶನದ ಮೂಲಕ ಬ್ಯುಸಿನೆಸ್ (Business) ಟೈಕೂನ್ ಆಗಿ ಬೆಳೆದ ದಂಪತಿ ಕಥೆಯನ್ನು ತಿಳಿಸಲಿದ್ದೇವೆ.
ರತನ್ ಟಾಟಾ ಮಾರ್ಗದರ್ಶನ
ಇಂಧನ ವಿತರಣಾ ಕಂಪನಿ ರೆಪೋಸ್‌ನ ಮಾಲೀಕರಾದ ಅದಿತಿ ಭೋಸಲೆ ವಾಲುಂಜ್ ಮತ್ತು ಚೇತನ್ ವಾಲುಂಜ್ ದೃಢಸಂಕಲ್ಪ ಹಾಗೂ ಛಲವಿದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬ ಪ್ರೇರಣೆಯನ್ನು ಯುವ ಉದ್ಯಮಿಗಳಿಗೆ ನೀಡುತ್ತದೆ. ಇಳಿವಯಸ್ಸಿನಲ್ಲೂ ಕೊಂಚವೂ ವಿಶ್ರಾಂತಿ ತೆಗೆದುಕೊಳ್ಳದೆ ಹಗಲಿರುಳು ಬ್ಯುಸಿಯಾಗಿರುವ ರತನ್ ಟಾಟಾ ಅವರ ಮಾರ್ಗದರ್ಶನ ದಂಪತಿಗಳಿಗೆ ಹೇಗೆ ದೊರೆಯಿತು? ಟಾಟಾ ಬೆಂಬಲ ಪಡೆಯಲು ದಂಪತಿಗಳು ಮಾಡಿದ ಹರಸಾಹಸಗಳೇನು ಎಂಬುದನ್ನು ಅರಿತುಕೊಳ್ಳೋಣ
ರೆಪೋಸ್ ಎನರ್ಜಿ ಸ್ಟಾರ್ಟಪ್ ಕಂಪನಿಗೆ ರತನ್ ಟಾಟಾರೇ ಮೊದಲ ಹೂಡಿಕೆದಾರರು
ಚೇತನ್ ಮತ್ತು ಅದಿತಿ ಭೋಸ್ಲೆ ವಾಲುಂಜ್ ರೆಪೋಸ್ ಎನರ್ಜಿ ಎಂಬ ಸ್ಟಾರ್ಟಪ್ ಕಂಪನಿಯನ್ನು ಪ್ರಸ್ತುತ ನಡೆಸುತ್ತಿದ್ದಾರೆ. ಸಾಂಪ್ರದಾಯಿಕ ಇಂಧನ ವ್ಯಾಪಾರದಲ್ಲಿಯೂ ಇಂಧನ ಬಳಕೆಯನ್ನು ಕಡಿಮೆ ಮಾಡುವುದು ದಂಪತಿ ಉದ್ದೇಶವಾಗಿದೆ. Repos ಮೊಬೈಲ್ ಪೆಟ್ರೋಲ್ ಪಂಪ್ ಅನ್ನು ವಾಹನಗಳಿಗೆ ಕಟ್ಟಲಾಗಿದ್ದು ಅವು ಟ್ರಕ್‌ಗಳ ಮೂಲಕ ಡೀಸೆಲ್ ವಿತರಿಸುತ್ತಾರೆ. ಸಂಸ್ಥೆಯು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ರಚಿಸಿದ್ದು, ಅಲ್ಲಿ ಡೀಸೆಲ್ ಗ್ರಾಹಕರು ಮತ್ತು ವಿತರಣಾ ಪಾಲುದಾರರು ನೇರವಾಗಿ ಸಂಪರ್ಕಿಸಬಹುದು
ಕಂಪನಿಯು ಎಲ್ಲಾ ರೀತಿಯ ಇಂಧನಗಳನ್ನು ಒಂದೇ ಸೂರಿನಡಿಯಲ್ಲಿ ಸಂಗ್ರಹಿಸಿ ತಂತ್ರಜ್ಞಾನದ ಮೂಲಕ ಶಕ್ತಿಯ ವಿತರಣೆಯನ್ನು ಮಾಡುವುದು ಅದಿತಿ ಹಾಗೂ ಚೇತನ್ ಗುರಿಯಾಗಿದೆ. ತಮ್ಮ ಉದ್ಯಮ ವೆಚ್ಚಕ್ಕೆ ಅನುಗುಣವಾಗಿರಬೇಕು ಎಂಬುದು ದಂಪತಿಗಳ ಬಯಕೆಯಾಗಿತ್ತು. ಹಾಗಾಗಿ 2017 ರಲ್ಲಿ ಟಾಟಾ ಬೆಂಬಲಿತ ಯೋಜನೆಯಾಗಿ ಉದ್ಯಮವನ್ನು ಆರಂಭಿಸಿದರು. ಹೇಗಾದರೂ ಮಾಡಿ ರತನ್ ಟಾಟಾ ಅವರನ್ನು ಭೇಟಿಯಾಗಬೇಕೆಂಬುದು ದಂಪತಿಗಳು ಶತಸಿದ್ಧರಾದರು ಹಾಗೂ ಕೊನೆಗೂ ತಮ್ಮಾಸೆಯನ್ನು ಈಡೇರಿಸಿಕೊಂಡರು.
ದಂಪತಿ ಟಾಟಾರನ್ನು ಭೇಟಿಯಾಗಿದ್ದು ಹೇಗೆ?
ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಅನಿಸಿಕೆಯನ್ನು ಹಂಚಿಕೊಂಡಿರುವ ಭೋಸ್ಲೆ, ಟಾಟಾರನ್ನು ಸಂಧಿಸುವುದು ಎಂದರೆ ನೀವು ಸುಲಭವಾಗಿ ಸಂಧಿಸಬಹುದಾದ ಅಕ್ಕಪಕ್ಕದ ನೆರೆಹೊರೆಯವರಂತಲ್ಲ ಎಂದು ತಿಳಿಸಿದ್ದಾರೆ. ಆಗ ಅವರು ಟಾಟಾ ಅಧ್ಯಕ್ಷರಾಗಿದ್ದರು. ಬ್ಯುಸಿನೆಸ್‌ನ ಗಂಧಗಾಳಿ ಗೊತ್ತಿಲ್ಲದ ದಂಪತಿಗಳು ಕೆಲಸ ಕಲಿಯಬೇಕಾದ ಪರಿಸ್ಥಿತಿ ಬಂದೊದಗಿತು.
ತಮ್ಮ ಯೋಜನೆಯನ್ನು 3ಡಿ ಮಾದರಿಯಲ್ಲಿ ತಯಾರಿಸಿ ಅದನ್ನು ರತನ್ ಟಾಟಾ ಅವರ ಮುಂದೆ ಪ್ರಸ್ತುತಪಡಿಸುವ ಇಚ್ಛೆಯೊಂದಿಗೆ ಹೊರಟರು. ಮೊದಲಿಗೆ ಕೈಬರಹದ ಮೂಲಕ ರತನ್ ಟಾಟಾ ಅವರನ್ನು ಸಂಧಿಸುವ ಉದ್ದೇಶವನ್ನು ತಿಳಿಸಿದರು. ಟಾಟಾಗೆ ನಿಕಟರಾಗಿರುವ ವ್ಯಕ್ತಿಗಳನ್ನು ಸಂಧಿಸಿದರು. ಮುಂಬೈನಲ್ಲಿರುವ ರತನ್ ಟಾಟಾ ನಿವಾಸಕ್ಕೆ ತೆರಳಿ ಅಲ್ಲಿ 12 ಗಂಟೆಗಳ ಕಾಲ ಅವರಿಗಾಗಿ ಕಾಯುತ್ತಿದ್ದರು. ಅದಾಗ್ಯೂ ರತನ್ ಟಾಟಾ ತುಂಬಾ ಬ್ಯುಸಿಯಾಗಿರುತ್ತಿದ್ದರು ಹೀಗೆ ಪ್ರತಿ ದಿನ ದಂಪತಿಗಳು ಟಾಟಾ ನಿವಾಸಕ್ಕೆ ತೆರಳುವುದು ಅವರಿಗಾಗಿ ಕಾಯುವುದು ಹಾಗೂ ಮರಳಿ ತಾವು ತಂಗಿದ್ದ ಹೋಟೆಲ್ ಕೊಠಡಿಗೆ ಮರಳುವುದು ಹೀಗೆ ಮಾಡುತ್ತಿದ್ದರು ಎಂಬುದನ್ನು ಭೋಸ್ಲೆ ತಿಳಿಸಿದ್ದಾರೆ.
ಟಾಟಾರೇ ಅದಿತಿಗೆ ಫೋನ್ ಮಾಡಿದ್ದರಂತೆ
ಆದರೆ ಅದೊಂದು ದಿನ ಒಂದೇ ಗಂಟೆಯೊಳಗೆ ದಂಪತಿಗಳಿಗೆ ದೂರವಾಣಿ ಕರೆ ಬಂದಿತು ಹಾಗೂ ಆ ಧ್ವನಿ ತುಂಬಾ ಸೌಮ್ಯವಾಗಿತ್ತು ಮತ್ತು ನಾನು ಅದಿತಿಯೊಂದಿಗೆ ಮಾತನಾಡಬಹುದೇ ಎಂದು ಆ ಬದಿಯಿಂದ ಕೇಳಿಸಿತು. ನಾನು ರತನ್ ಟಾಟಾ ಮಾತನಾಡುತ್ತಿದ್ದೇನೆ ನಿಮ್ಮ ಪತ್ರ ನನ್ನ ಕೈ ಸೇರಿದೆ ನಾವು ಭೇಟಿಯಾಗಬಹುದೇ? ಎಂದು ಸ್ವತಃ ಟಾಟಾರೇ ದಂಪತಿಗಳನ್ನು ವಿನಂತಿಸಿದ್ದಾರೆ. ಆದರೆ ಟಾಟಾರಂತಹ ಖ್ಯಾತ ವ್ಯಕ್ತಿ ತಮ್ಮೊಂದಿಗೆ ಹೀಗೆ ಮಾತನಾಡಬಹುದು ಎಂದು ಅದಿತಿ ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ತಿಳಿಸುತ್ತಾರೆ.
ಯಶಸ್ಸಿನ ನಾಗಾಲೋಟದಲ್ಲಿ ದಂಪತಿ
ಶೀಘ್ರದಲ್ಲೇ ಟಾಟಾರನ್ನು ಭೇಟಿಯಾದ ಅದಿತಿ ಹಾಗೂ ಅವರ ಪತಿ ಅವರ ಮುಂದೆ ತಮ್ಮ ಯೋಜನೆಗಳನ್ನು ಹಾಗೂ ಪ್ರಸ್ತುತಿಗಳನ್ನು ಪರಿಚಯಿಸಿದರು. ಪ್ರಭಾವಿತರಾದ ರತನ್ ಟಾಟಾ ಕಂಪನಿಯಲ್ಲಿ ಎರಡು ಬಾರಿ ಹೂಡಿಕೆ ಮಾಡಿದರು. ರೆಪೋಸ್ ಇದೀಗ ಭಾರತದಾದ್ಯಂತ 188 ನಗರಗಳಲ್ಲಿ ಪ್ರಸ್ತುತವಾಗಿದೆ. ಅದಿತಿ ದಂಪತಿಗಳು ಸಾವಿರಕ್ಕೂ ಹೆಚ್ಚಿನ ವ್ಯಾಪಾರ ಪಾಲುದಾರರನ್ನು ಹೊಂದಿದ್ದಾರೆ ಹಾಗೂ ಮೇ 2022 ರಲ್ಲಿ ಕಂಪನಿಯು ಟಾಟಾ ಗ್ರೂಪ್‌ನಿಂದ ರೂ 56 ಕೋಟಿ ಫಂಡಿಂಗ್ ಅನ್ನು ಪಡೆದುಕೊಂಡಿತು.
ಇಂಧನ ಕಳ್ಳತನ ಹಾಗೂ ಮೇಲ್ವಿಚಾರಣೆ ಕೂಡ ಸಾಧ್ಯ
ರತನ್ ಟಾಟಾರೇ ನಮ್ಮ ಕಂಪನಿಯ ಆರಂಭಿಕ ಹೂಡಿಕೆದಾರರಾಗಿ ದೊರೆಯಲು ನಾವು ಅದೃಷ್ಟ ಮಾಡಿದ್ದೇವೆ ಎಂಬುದು ಅದಿತಿ ಹಾಗೂ ಚೇತನ್ ಭಾವುಕ ನುಡಿಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆ 65 ಕೋಟಿ ವ್ಯವಹಾರ ನಡೆಸಿದ್ದು ವ್ಯಾಪಾರ ಬಹುಮಟ್ಟಿಗೆ ಯಶಸ್ವಿಯಾಗಿ ಬೆಳೆಯುತ್ತಿದೆ ಎಂದು ಅದಿತಿ ತಿಳಿಸಿದ್ದಾರೆ.
ಕಂಪನಿಯು ಮೊಬೈಲ್ ಇಂಧನ ಕೇಂದ್ರಗಳಿಗೆ ಎಟಿಎಂಗಳಂತೆ ಕಾರ್ಯನಿರ್ವಹಿಸುತ್ತದೆ ಎಂಬುದು ಅದಿತಿ ಮಾತಾಗಿದೆ. ಉದ್ಯಮಗಳಿಗೆ ಸಂಸ್ಥೆ ಇಂಧನವನ್ನು ಸುಲಭವಾಗಿ ತಲುಪಿಸುತ್ತದೆ ಇಂಧನ ಕಳ್ಳತನವನ್ನು ಪರಿಶೀಲಿಸಲು ಮತ್ತು ಇಂಧನ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ದಂಪತಿಗಳು 2,000 ಸಂಚಾರಿ ಇಂಧನ ಕೇಂದ್ರಗಳನ್ನು ನಿಯೋಜಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ