ಉದ್ಯೋಗಿಗಳ ಭವಿಷ್ಯ ನಿಧಿ (Employees Provident Fund) ಯೋಜನೆಯಡಿಯಲ್ಲಿ ವೇತನ ಮಿತಿಯನ್ನು ಈಗ ರೂ 15,000 ರೂ.ಗಳಿಂದ ರೂ 21,000 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ (Central Government) ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ 2014ರ ಸೆಪ್ಟೆಂಬರ್ನಲ್ಲಿ ವೇತನ ಮಿತಿಯನ್ನು ಹೆಚ್ಚಿಸಿತ್ತು. ಈ ಪ್ರಸ್ತಾಪವು ಜಾರಿಗೆ ಬಂದರೆ ಇಪಿಎಫ್ (EPF) ಯೋಜನೆ ಮತ್ತು ನೌಕರರ ಪಿಂಚಣಿ ಯೋಜನೆಗೆ ನೀಡುವ ಕೊಡುಗೆಯ ಮೊತ್ತದ ಮೇಲೆ ಪರಿಣಾಮ ಬೀರಲಿದೆ. ಹಾಗೆಯೇ ನಿವೃತ್ತಿಯ ಸಮಯದಲ್ಲಿ ಉದ್ಯೋಗಿಗೆ ಅರ್ಹವಾಗಿರುವ ಪಿಂಚಣಿ ಮೊತ್ತದ ಮೇಲೆ ಕೂಡ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
ವೇತನದ ಮಿತಿಯನ್ನು ರೂ 21,000 ಕ್ಕೆ ಹೆಚ್ಚಿಸಿದರೆ ಇಪಿಎಫ್ ಮತ್ತು ಇಪಿಎಸ್ ಕೊಡುಗೆಗಳ ಮೇಲೆ ಈ ಹೆಚ್ಚಳವು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಪಿಂಚಣಿ ಕೊಡುಗೆಗಳ ಮೇಲೆ ಹೆಚ್ಚಳ
ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಖಾತೆಗೆ ಕೊಡುಗೆಗಳನ್ನು ತಿಂಗಳಿಗೆ ರೂ 15,000 ಕ್ಕೆ ಮೂಲ ವೇತನವನ್ನು ಮಿತಿಗೊಳಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಹಾಗಾಗಿ ಇಪಿಎಸ್ ಖಾತೆಗೆ ಗರಿಷ್ಠ ಕೊಡುಗೆಯನ್ನು ತಿಂಗಳಿಗೆ ರೂ 1,250 ಕ್ಕೆ ನಿರ್ಬಂಧಿಸಲಾಗಿದೆ. ಸರಕಾರವು ವೇತನ ಮಿತಿಯನ್ನು ರೂ 21,000 ಕ್ಕೆ ಹೆಚ್ಚಿಸಿದರೆ, ಈ ಕೊಡುಗೆಯನ್ನು ಹೆಚ್ಚಿಸಲಾಗುತ್ತದೆ. ಅಂದರೆ ತಿಂಗಳ ಇಪಿಎಸ್ ಕೊಡುಗೆಯು ರೂ, 1,749 ಆಗಲಿದೆ ಎಂದು ಪರಿಣಮ್ ಲಾ ಮತ್ತು ಅಸೋಸಿಯೇಟ್ಸ್ನ ಹಿರಿಯ ಪಾಲುದಾರರಾದ ಮಲ್ಲಿಕಾ ನೂರಾನಿ ತಿಳಿಸಿದ್ದಾರೆ.
ನಿವೃತ್ತಿಯ ಸಮಯದಲ್ಲಿ ಹೆಚ್ಚಿನ ಪಿಂಚಣಿ
ಇಪಿಎಫ್ ಯೋಜನೆಯಡಿಯಲ್ಲಿ ವೇತನದ ಮಿತಿ ಹೆಚ್ಚಳವು ನಿವೃತ್ತಿಯ ಸಮಯದಲ್ಲಿ ಹೆಚ್ಚಿನ ಪಿಂಚಣಿ ಮೊತ್ತಕ್ಕೆ ಕಾರಣವಾಗುತ್ತದೆ. ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ, 2014 ರ ಪ್ರಕಾರ, ಇಪಿಎಸ್ ಪಿಂಚಣಿ ಲೆಕ್ಕಾಚಾರದ ಸೂತ್ರವು ಈ ಕೆಳಗಿನಂತಿರುತ್ತದೆ:
(ಪಿಂಚಣಿ ಪಡೆಯಬಹುದಾದ ಸೇವೆಯ ವರ್ಷಗಳ ಸಂಖ್ಯೆ X 60 ತಿಂಗಳ ಸರಾಸರಿ ಮಾಸಿಕ ವೇತನ)/70. ವೇತನ ಮಿತಿ ಮಿತಿಯನ್ನು 21,000 ರೂ.ಗೆ ಹೆಚ್ಚಿಸಿದರೆ, ನಂತರ ಪಡೆಯುವ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗುತ್ತದೆ. ಉದ್ಯೋಗಿಯು 20 ವರ್ಷಗಳಿಗಿಂತ ಹೆಚ್ಚು ಸೇವೆಗೈದಿದ್ದರೆ 2 ವರ್ಷಗಳನ್ನು ಸೇವಾ ಅವಧಿಗೆ ಬೋನಸ್ ಆಗಿ ಸೇರಿಸಲಾಗುತ್ತದೆ.
ಇದನ್ನೂ ಓದಿ: ಒಮ್ಮೆ ಠೇವಣಿ ಮಾಡಿ, ಪ್ರತಿ ತಿಂಗಳು ಪಿಂಚಣಿ ಪಡೆಯಿರಿ! ಹೇಗೆ ಅಂತೀರಾ? ಇಲ್ಲಿದೆ ನೋಡಿ
ಉದ್ಯೋಗಿಗಳ ಇಪಿಎಸ್ ವ್ಯಾಪ್ತಿ
ಇಪಿಎಫ್ ಕಾನೂನುಗಳ ಪ್ರಕಾರ ಉದ್ಯೋಗಿಯ ಮಾಸಿಕ ಮೂಲ ವೇತನವು ರೂ 15,000 ವನ್ನು ಮೀರಿದಲ್ಲಿ ಆ ಉದ್ಯೋಗಿಯು ಇಪಿಎಫ್ ಯೋಜನೆಯ ಭಾಗವಾಗಿದ್ದರೂ ಅವರಿಗೆ ಇಪಿಎಸ್ಗೆ ಸೇರಲಾಗುವುದಿಲ್ಲ.
ಇನ್ನು ಮೂಲ ವೇತನ ಮಿತಿಯನ್ನು ರೂ 21,000 ಕ್ಕೆ ಹೆಚ್ಚಿಸಿದರೆ, ಹೆಚ್ಚಿನ ಮೂಲ ವೇತನವಿರುವ ಉದ್ಯೋಗಿಗಳು ಇಪಿಎಸ್ಗೆ ಸೇರಲು ಅರ್ಹರಾಗಿರುತ್ತಾರೆ. ಉದ್ಯೋಗಿಯ ಮೂಲವೇತನವು ರೂ 15,000 ಕ್ಕಿಂತ ಮೇಲ್ಪಟ್ಟು ರೂ 21,000ಕ್ಕಿಂತ ಕಡಿಮೆ ಇದ್ದರೆ ಪ್ರಸ್ತಾವನೆಯ ಅನ್ವಯ ಆ ಉದ್ಯೋಗಿಯು ಕಡ್ಡಾಯವಾಗಿ ಇಪಿಎಸ್ ಸದಸ್ಯರಾಗಿ ಪರಿಗಣಿತವಾಗುತ್ತಾರೆ. ಈ ನೌಕರರು ನಿವೃತ್ತಿ ಸಮಯದಲ್ಲಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಕಡಿಮೆ ಇಪಿಎಫ್ ಕೊಡುಗೆಗಳು
ಪ್ರಸ್ತಾವಿತ ಯೋಜನೆಯ ಅನ್ವಯ ರೂ 1,250 ರಿಂದ ಇಪಿಎಸ್ ಕೊಡುಗೆಯನ್ನು ರೂ 1,749 ಕ್ಕೆ ಹೆಚ್ಚಿಸುವುದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಕಡಿಮೆ ಇಪಿಎಫ್ ಸಂಗ್ರಹಣೆಗೆ ಕಾರಣವಾಗಬಹುದು.ಏಕೆಂದರೆ ಉದ್ಯೋಗದಾತರು ಪ್ರಸ್ತುತ ಇಪಿಎಸ್ ಖಾತೆಗೆ ಗರಿಷ್ಠ ರೂ 1,250 ಅನ್ನು ಠೇವಣಿ ಮಾಡುವುದು ಇದಕ್ಕೆ ಕಾರಣವಾಗಿದೆ. ಇಪಿಎಸ್ಗೆ ಠೇವಣಿ ಹೆಚ್ಚಿಸಿದರೆ, ಇಪಿಎಫ್ ಖಾತೆಗೆ ಬ್ಯಾಲೆನ್ಸ್ ಠೇವಣಿ ಕಡಿಮೆಯಾಗುತ್ತದೆ.
ಉದಾಹರಣೆಗೆ ಒಬ್ಬ ಉದ್ಯೋಗಿಯ ಮೂಲ ವೇತನ ತಿಂಗಳಿಗೆ ರೂ 30,000 ವಾದರೆ ಅವರ ಉದ್ಯೋಗದಾತರು ಇಪಿಎಫ್ ಖಾತೆಗೆ ರೂ 3,600 ಅನ್ನು ಠೇವಣಿ ಮಾಡುತ್ತಾರೆ. ಅಂದರೆ ಇಲ್ಲಿ ಲೆಕ್ಕಹಾಕಿದಾಗ ಮೂಲವೇತನ 30,000 ದಲ್ಲಿ 12% ದಂತೆ ರೂ 3600 ಇಪಿಎಫ್ ಖಾತೆಗೆ ಹಾಗೆಯೇ 12% ದಲ್ಲಿ 8.33% ಇಪಿಎಸ್ ಖಾತೆಗೆ, ಪಿಂಚಣಿ ಖಾತೆಗೆ ಸಲ್ಲುತ್ತದೆ. ಇಪಿಎಸ್ ಕೊಡುಗೆ, ವೇತನದ ಮಿತಿ ರೂ. 15,000. ಆದ್ದರಿಂದ, ಇಪಿಎಸ್ ಪಿಂಚಣಿ ಕೊಡುಗೆಯನ್ನು ರೂ. 1,250ಕ್ಕೆ ನಿರ್ಬಂಧಿಸಲಾಗಿದೆ. ರೂ. 2,350 ಇಪಿಎಫ್ ಖಾತೆಗೆ ಹೋಗುತ್ತದೆ.
ಇದನ್ನೂ ಓದಿ: ನಿವೃತ್ತಿ ನಂತರ ಖಾಸಗಿ ಉದ್ಯೋಗಿಗಳಿಗೂ ಸಿಗುತ್ತೆ ಪಿಂಚಣಿ! ಮೊದಲು ಈ ಕೆಲ್ಸ ಮಾಡಿ ಮುಗ್ಸಿ
ವೇತನದ ಮಿತಿಯನ್ನು ತಿಂಗಳಿಗೆ ರೂ 21,000 ಕ್ಕೆ ಹೆಚ್ಚಿಸಿದರೆ, ಇಪಿಎಸ್ ಪಿಂಚಣಿ ಕೊಡುಗೆ ತಿಂಗಳಿಗೆ ರೂ 1,749 ವಾದರೆ ಬಾಕಿ ಮೊತ್ತ ರೂ 1,851 ಅನ್ನು ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ