• Home
 • »
 • News
 • »
 • business
 • »
 • ಎಷ್ಟು ಬಾರಿ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಬಹುದು? ಈ ನಿಯಮಗಳು ತಿಳಿದಿರಲಿ

ಎಷ್ಟು ಬಾರಿ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಬಹುದು? ಈ ನಿಯಮಗಳು ತಿಳಿದಿರಲಿ

ಆಧಾರ್ ಕಾರ್ಡ್

ಆಧಾರ್ ಕಾರ್ಡ್

Aadhaar Card Updates- ಆಧಾರ್ ಕಾರ್ಡ್ ಅನ್ನು ಆನ್​ಲೈನ್​ನಲ್ಲಿ ಸುಲಭವಾಗಿ ಅಪ್​ಡೇಟ್ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಂತ ಪದೇ ಪದೇ ವಿವರ ಅಪ್​ಡೇಟ್ ಮಾಡಲು ಆಗುವುದಿಲ್ಲ. ಅದಕ್ಕೆ ಪ್ರತ್ಯೇಕ ನಿಯಮಗಳಿವೆ.

 • News18
 • 4-MIN READ
 • Last Updated :
 • Share this:

  ನಮ್ಮ ಜೀವನವ್ಯವಹಾರಕ್ಕೆ ಅತ್ಯಗತ್ಯವಾಗಿರುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಪ್ರಮುಖವಾದುದು. ಇದು ನಮಗೆ ಅಡ್ರೆಸ್ ಪ್ರೂಫ್ ಆಗಿದೆ, ಐಡಿ ಪ್ರೂಫ್ ಆಗಿದೆ. ಬಹುತೇಕ ಎಲ್ಲಾ ಸೇವೆಗಳಿಗೂ ಆಧಾರ್ ಕಾರ್ಡ್ ಅಗತ್ಯವಾದ ದಾಖಲೆ ಎನಿಸಿದೆ. ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸದೇ ಇದ್ದರೂ ನಮಗೆ ಬಹಳ ಉಪಯೋಗಕ್ಕೆ ಬರುವ ದಾಖಲೆಯಾದ್ದರಿಂದ ಅದಕ್ಕೆ ಬಹಳ ಮಹತ್ವವಿದೆ. ಈಗ ಸರ್ಕಾರ ಆಧಾರ್ ಕಾರ್ಡ್ ಅಪ್​ಡೇಟ್ ಕಾರ್ಯವನ್ನ ಸುಲಭಗೊಳಿಸಿದೆ. ಜನರು ತಮ್ಮ ವಾಸಸ್ಥಳ ಬದಲಿಸಿದಾಗೆಲ್ಲಾ ಆಧಾರ್ ಕಾರ್ಡ್​ನಲ್ಲಿ ವಿಳಾಸ ಬದಲಿಸಿಕೊಳ್ಳಬಹುದು. ಜನ್ಮದಿನಾಂಕ, ಹೆಸರು ಇತ್ಯಾದಿ ವಿವರಗಳ ಬದಲಾವಣೆಗೂ ಅವಕಾಶ ಇದೆ. ಹಾಗಂತ ಪದೇ ಪದೇ ಆಧಾರ್ ಕಾರ್ಡ್ ವಿವರಗಳನ್ನ ಬದಲಿಸಲು ಆಸ್ಪದ ಇದೆಯಾ? ನಿಯಮಗಳು ಏನಿವೆ? ಇಲ್ಲಿದೆ ವಿವರ.


  ಆಧಾರ್ ಕಾರ್ಡ್​ನಲ್ಲಿ ಎಷ್ಟು ಬಾರಿ ಹೆಸರು ಬದಲಿಸಬಹುದು?


  ಆಧಾರ್ ಕಾರ್ಡ್ ಯೋಜನೆಯ ಹೊಣೆ ಹೊತ್ತಿರುವ ಯುಐಡಿಎಐ (UIDAI) ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ನೀವು ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೆಸರನ್ನ ಎರಡು ಬಾರಿ ಮಾತ್ರ ತಿದ್ದುಪಡಿ ಮಾಡಬಹುದು. ಹಾಗಾಗಿ, ಪದೇ ಪದೇ ಆಧಾರ್ ಕಾರ್ಡ್​ನಲ್ಲಿ ಹೆಸರು ತಿದ್ದುಪಡಿ ಮಾಡಲು ಹೋಗದಿರಿ.


  ಆಧಾರ್ ಕಾರ್ಡ್​ನಲ್ಲಿ ನನ್ನ ಜನ್ಮದಿನಾಂಕ ಎಷ್ಟು ಬಾರಿ ಬದಲಿಸಬಹುದು?


  ಆಧಾರ್ ಕಾರ್ಡ್​ನಲ್ಲಿ ನಾವು ಒಮ್ಮೆ ಮಾತ್ರ ಜನ್ಮದಿನಾಂಕದ ಬದಲಾವಣೆಗೆ ಅವಕಾಶ ಇರುತ್ತದೆ. ಹೆಸರಿನಲ್ಲಾದರೆ ಸ್ಪೆಲಿಂಗ್ ದೋಷಗಳು ಕಾಣಿಸುತ್ತವೆ. ಹೀಗಾಗಿ, ಆಧಾರ್ ಕಾರ್ಡ್​ನಲ್ಲಿ ಹೆಸರಿನ ತಿದ್ದುಪಡಿ ಬೇಕಾಗಬಹುದು. ಆದರೆ, ಜನ್ಮದಿನಾಂಕದಲ್ಲಿ ಯಾರಿಗಾದರೂ ಗೊಂದಲ ಇರುವುದು ಅಪರೂಪ. ಕೆಲವೊಮ್ಮೆ ನಿಜವಾದ ಜನ್ಮದಿನಾಂಕ ಬೇರೆ ಇರುತ್ತದೆ, ಶಾಲೆಗೆ ಸೇರಿಸುವಾಗ ಕೊಡುವ ದಿನಾಂಕ ಬೇರೆ ಇರುತ್ತದೆ. ಈ ಕಾರಣಕ್ಕೆ ಆಧಾರ್ ಕಾರ್ಡ್​ನಲ್ಲಿ ಜನ್ಮದಿನಾಂಕದ ಗೊಂದಲ ಏರ್ಪಡಬಹುದು. ಹೀಗಾಗಿ, ಒಮ್ಮೆ ಮಾತ್ರ ಜನ್ಮದಿನಾಂಕದ ತಿದ್ದುಪಡಿಗೆ ಅವಕಾಶ ಕೊಡಲಾಗಿದೆ. ಅದರಲ್ಲೂ ಆಧಾರ್ ಕಾರ್ಡ್ ಮಾಡಿಸುವಾಗ ಕೊಟ್ಟಿದ್ದ ಜನ್ಮದಿನಾಂಕಕ್ಕೂ ಈಗ ತಿದ್ದುಪಡಿಗೆ ಕೊಡುತ್ತಿರುವ ಜನ್ಮದಿನಾಂಕಕ್ಕೂ 3 ವರ್ಷಕ್ಕಿಂತ ಹೆಚ್ಚು ಅಂತರ ಇದ್ದರೆ ತಿದ್ದುಪಡಿ ಅಸಾಧ್ಯ.


  ಇದನ್ನೂ ಓದಿ: ಎಲ್ಲಾ ಮನೆಮಠ ಮಾರಿಕೊಂಡ ವಿಶ್ವದ ಅತಿ ಶ್ರೀಮಂತ ವ್ಯಕ್ತಿ; ಕಾರಣ ಇದು


  ಸುಮ್ಮನೆ ಜನ್ಮದಿನಾಂಕದ ತಿದ್ದುಪಡಿ ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ದಾಖಲೆ ಕೊಡಬೇಕು. ಆಗ ನಿಮ್ಮ ಡೇಟ್ ಆಫ್ ಬರ್ತ್ ವೆರಿಫೈ ಆಗುತ್ತದೆ. ಮತ್ತೆ ನೀವು ತಿದ್ದುಪಡಿ ಮಾಡಲು ಆಗುವುದಿಲ್ಲ. ನೀವು ಇನ್ನೂ ದಾಖಲೆ ಕೊಟ್ಟಿಲ್ಲದೇ ಇದ್ದರೆ ಅದನ್ನ ಘೋಷಿತ ವರ್ಗಕ್ಕೆ ಸೇರಿಸಲಾಗುತ್ತದೆ. ಆಗ ನೀವು ತಿದ್ದುಪಡಿ ಮಾಡಬೇಕೆಂದು ಜನ್ಮದಿನಾಂಕದ ಪ್ರೂಫ್ ಇರುವ ದಾಖಲೆಯನ್ನ ಸಲ್ಲಿಸಲೇಬೇಕು.


  ವಿಳಾಸ ಬದಲಾವಣೆ ಅವಕಾಶ ಎಷ್ಟು ಬಾರಿ?:


  ಆಧಾರ್ ಕಾರ್ಡ್​ನಲ್ಲಿರುವ ವಿಳಾಸವನ್ನು ಬದಲಿಸುವ ಅವಕಾಶ ಇದೆಯಾದರೂ ಅದು ಒಮ್ಮೆ ಮಾತ್ರವೇ ಎಂಬುದು ನೆನಪಿರಲಿ. ನೀವು ಯಾವತ್ತೂ ಕೂಡ ಖಾಯಂ ವಿಳಾಸದಲ್ಲೇ ಆಧಾರ್ ಕಾರ್ಡ್ ಮಾಡಿಸುವುದು ಸೂಕ್ತ. ಸ್ವಂತ ಮನೆ ಇರುವ ವಿಳಾಸವನ್ನ ನೀವು ಆಧಾರ್ ಕಾರ್ಡ್​ಗೆ ಕೊಡಬಹುದು. ನಗರದಲ್ಲಿ ನಿಮಗೆ ಸ್ವಂತ ಮನೆ ಇಲ್ಲವಾದರೆ ಊರಿನಲ್ಲಿರುವ ನಿಮ್ಮ ಮನೆಯ ವಿಳಾಸವನ್ನೇ ಕೊಡಬಹುದು. ಪದೇ ಪದೇ ವಿಳಾಸ ಬದಲಿಸುವ ಗೋಜಿಗೆ ಹೋಗುವುದು ತಪ್ಪುತ್ತದೆ.


  ಇದನ್ನೂ ಓದಿ: Quick Heal- ಕ್ಯಾಲ್ಕುಲೇಟರ್ ರಿಪೇರಿ ಹುಡುಗ ಆ್ಯಂಟಿ-ವೈರಸ್ ಸಾಫ್ಟ್​ವೇರ್ ಕಂಪನಿಯ ಒಡೆಯನಾದ ಕಥೆ


  ಏನು ದಾಖಲೆಗಳು ಬೇಕಾಗುತ್ತದೆ?


  ಹೆಸರು ಬದಲಾವಣೆಗೆ: ವೋಟರ್ ಐಡಿ, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ಒಂದು ದಾಖಲೆ ಸಲ್ಲಿಸಬಹುದು.


  ವಿಳಾಸ ಬದಲಾವಣೆಗೆ: ಬ್ಯಾಂಕ್ ಸ್ಟೇಟ್ಮೆಂಟ್, ಬ್ಯಾಂಕ್ ಪಾಸ್​​ಬುಕ್, ರೇಷನ್ ಕಾರ್ಡ್, ವಾಟರ್ ಬಿಲ್ ಇತ್ಯಾದಿ ಯಾವುದಾದರೂ ಒಂದು ದಾಖಲೆ ಕೊಡಬೇಕಾಗಬಹುದು.


  ಜನ್ಮದಿನಾಂಕ ಬದಲಾವಣೆಗೆ: ಜನನ ಪ್ರಮಾಣಪತ್ರ (Birth Certificate), ಪಾಸ್​ಪೋರ್ಟ್, ಪಾನ್ ಕಾರ್ಡ್, ಪರೀಕ್ಷೆ ಮಾರ್ಕ್​ಶೀಟ್ ಇತ್ಯಾದಿ ಯಾವುದಾದರೂ ಒಂದು ದಾಖಲೆ.


  ಎಲ್ಲಕ್ಕಿಂತ ಮೊದಲು ಫೋನ್ ನಂಬರ್ ಜೋಡಿಸಿ:


  ನೀವು ಆಧಾರ್ ಕಾರ್ಡ್ ಮಾಡಿಸುವಾಗ ಫೋನ್ ನಂಬರ್ ಅನ್ನ ಸೇರಿಸಿಲ್ಲದೇ ಇದ್ದರೆ ಮೊದಲು ಆ ಕೆಲಸ ಮಾಡಿ. ಅದಾದರೆ ನೀವು ಆನ್​ಲೈನ್​ನಲ್ಲೇ ಆಧಾರ್ ಕಾರ್ಡ್​ನ ವಿವರವನ್ನು ತಿದ್ದುಪಡಿ ಮಾಡಬಹುದು. ಆಧಾರ್ ಕಾರ್ಡ್ ಅನ್ನು ಆನ್​ಲೈನ್​ನಲ್ಲೇ ದಾಖಲೆ ತೆಗೆದು ಪ್ರಿಂಟ್ ತೆಗೆದುಕೊಳ್ಳಬಹುದು. ಫೋನ್ ನಂಬರ್ ಜೋಡಿಸಬೇಕೆಂದರೆ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಫೋನ್ ನಂಬರ್ ಆ್ಯಡ್ ಮಾಡಿಸಬೇಕು.


  ಇದನ್ನೂ ಓದಿ: ಯುಪಿಐ ಮೂಲಕ IPO ಮತ್ತು ಗವರ್ನ್ಮೆಂಟ್ ಬಾಂಡ್​ಗಳಲ್ಲಿ 5 ಲಕ್ಷದವರೆಗೆ ಹೂಡಿಕೆ ಸಾಧ್ಯ


  ಆನ್​​ಲೈನ್​ನಲ್ಲಿ ವಿಳಾಸ ಬದಲಾವಣೆ ಹೇಗೆ?


  ನೀವು https://ssup.uidai.gov.in/ssup/ ಪೋರ್ಟಲ್​ಗೆ ಹೋದರೆ ಅಲ್ಲಿ ತಿದ್ದುಪಡಿ ಅವಕಾಶ ಸಿಗುತ್ತದೆ. ಅಲ್ಲಿ The Self-Service online mode ಅನ್ನ ಆಯ್ದುಕೊಳ್ಳಿ. ಅದರಲ್ಲಿ Update Demographics Data ಆಪ್ಷನ್ ಆರಿಸಿಕೊಳ್ಳಿ. ಇಲ್ಲಿ ನಿಮಗೆ ಬೇಕಾದ ವಿವರ ಅಪ್​ಡೇಟ್ ಮಾಡಬಹುದು. ಎಲ್ಲವನ್ನೂ ನಮೂದಿಸಿದ ಮೇಲೆ Proceed ಕ್ಲಿಕ್ ಮಾಡಿ.


  ನಂತರದ ಪೇಜ್​ನಲ್ಲಿ ಅಗತ್ಯ ದಾಖಲೆಗಳನ್ನ ಕೇಳುತ್ತದೆ. ಅದನ್ನ ಕೊಟ್ಟು Submit ಕ್ಲಿಕ್ ಮಾಡಿದರೆ ಮುಗಿಯಿತು. ನೀವು ಮಾಡಿದ ತಿದ್ದುಪಡಿ ಆಧಾರ್ ಕಾರ್ಡ್​ನಲ್ಲಿ ವ್ಯಕ್ತವಾಗಲು ಕೆಲ ಸಮಯ ಹಿಡಿಯಬಹುದು. ಆ ಬಳಿಕ ನೀವು ಅಪ್​ಡೇಟೆಡ್ ಆಧಾರ್ ಕಾರ್ಡ್​ನ ಪ್ರಿಂಟ್ ಪಡೆದುಕೊಳ್ಳಬಹುದು.

  Published by:Vijayasarthy SN
  First published: