ಈಗ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ (Aadhar Card) ಮನೆಯ ವಿಳಾಸವನ್ನು ಬದಲಾಯಿಸಲು (Residential Address) ಅಥವಾ ಅಪ್ಡೇಟ್ ಮಾಡಲು ಆಧಾರ್ ಕೇಂದ್ರಕ್ಕೆ ಹೋಗುವ ಅವಶ್ಯಕತೆ ಇಲ್ಲ. ಏಕೆಂದರೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ Unique Identification Authority of India (UIDAI)) ತನ್ನ ನಿವಾಸಿಗಳಿಗೆ ತಮ್ಮ ಮನೆಯ ವಿಳಾಸವನ್ನು ಆನ್ಲೈನ್ನಲ್ಲಿಯೇ ಅಪ್ಡೇಟ್ (Online Update) ಮಾಡಿಕೊಳ್ಳುವ ಅವಕಾಶವನ್ನು ಒದಗಿಸಿದೆ. ಮನೆಯ ವಿಳಾಸವನ್ನು ಅಪ್ಡೇಟ್ ಮಾಡಿಕೊಳ್ಳುವುದಕ್ಕೆ ಇನ್ಮುಂದೆ ಆನ್ಲೈನ್ನಲ್ಲಿ ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಸಹ ಬೇಕಾಗುತ್ತದೆ ನೋಡಿ. ಈ ವಿಚಾರವನ್ನು ಯುಐಡಿಎಐ ಅಧಿಕೃತವಾಗಿ ಮಂಗಳವಾರದಂದು ತಿಳಿಸಿದೆ.
ರೇಷನ್ ಕಾರ್ಡ್, ಅಂಕಪಟ್ಟಿ, ಮದುವೆ ಪ್ರಮಾಣಪತ್ರ, ಪಾಸ್ಪೋರ್ಟ್ ಇತ್ಯಾದಿಗಳಂತಹ ಸಂಬಂಧ ದಾಖಲೆಗಳ ಪುರಾವೆಗಳನ್ನು ಸಲ್ಲಿಸಿದ ನಂತರ, ಅರ್ಜಿದಾರರು ಮತ್ತು ಕುಟುಂಬದ ಮುಖ್ಯಸ್ಥರ (ಎಚ್ಒಎಫ್ = Head Of Family) ಹೆಸರು ಮತ್ತು ಅವರ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ನಂತರ ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.
ಈ ಪ್ರಕ್ರಿಯೆಗೆ ಕುಟುಂಬದ ಮುಖ್ಯಸ್ಥರಿಂದ ಒಟಿಪಿ ಆಧಾರಿತ ದೃಢೀಕರಣದ ಅಗತ್ಯವಿದೆ.
ಒಂದು ವೇಳೆ ಸಂಬಂಧ ದಾಖಲೆಯ ಪುರಾವೆ ಲಭ್ಯವಿಲ್ಲದಿದ್ದರೆ, ಯುಐಡಿಎಐ ಸೂಚಿಸಿದ ನಮೂನೆಯಲ್ಲಿ ಕುಟುಂಬದ ಮುಖ್ಯಸ್ಥರಿಂದ ಸ್ವಯಂ ಘೋಷಣೆಯನ್ನು ಸಲ್ಲಿಸಲು ಯುಐಡಿಎಐ ನಿವಾಸಿಗೆ ಒದಗಿಸುತ್ತದೆ.
ಯಾರಿಗೆ ಸಹಾಯ?
"ಆಧಾರ್ ನಲ್ಲಿ ಎಚ್ಒಎಫ್ ಆಧಾರಿತ ಆನ್ಲೈನ್ ವಿಳಾಸ ನವೀಕರಣವು ತಮ್ಮ ಆಧಾರ್ ನಲ್ಲಿ ವಿಳಾಸವನ್ನು ನವೀಕರಿಸಲು ತಮ್ಮದೇ ಹೆಸರಿನಲ್ಲಿಯ ಪೂರಕ ದಾಖಲೆಗಳನ್ನು ಹೊಂದಿಲ್ಲದ ಮಕ್ಕಳು, ಸಂಗಾತಿ, ಪೋಷಕರು ಮುಂತಾದವರಿಗೆ ಹೆಚ್ಚಿನ ಸಹಾಯವಾಗುತ್ತದೆ.
ವಿವಿಧ ಕಾರಣಗಳಿಂದಾಗಿ ಜನರು ನಗರಗಳು ಮತ್ತು ಪಟ್ಟಣಗಳನ್ನು ಸ್ಥಳಾಂತರಿಸುತ್ತಿರುವುದರಿಂದ, ಇಂತಹ ಸೌಲಭ್ಯವು ಲಕ್ಷಾಂತರ ಜನರಿಗೆ ಪ್ರಯೋಜನಕಾರಿಯಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಯುಐಡಿಎಐ ಸೂಚಿಸಿದ ವಿಳಾಸ ದಾಖಲೆಯ ಯಾವುದೇ ಮಾನ್ಯ ಪುರಾವೆಯನ್ನು ಬಳಸಿಕೊಂಡು ಅಸ್ತಿತ್ವದಲ್ಲಿರುವ ವಿಳಾಸವನ್ನು ಅಪ್ಡೇಟ್ ಮಾಡಿಕೊಳ್ಳುವ ಹೊಸ ಆಯ್ಕೆಯನ್ನು ಇದೀಗ ಒದಗಿಸಿದೆ ಎಂದು ಹೇಳಬಹುದು.
ಈ ಉದ್ದೇಶಕ್ಕೆ ಕುಟುಂಬದ ಮುಖ್ಯಸ್ಥರು ಯಾರಾಗಿರಬಹುದು?
"18 ವರ್ಷಕ್ಕಿಂತ ಮೇಲ್ಪಟ್ಟ ಮನೆಯ ಸದಸ್ಯರು ಈ ಉದ್ದೇಶಕ್ಕಾಗಿ ಎಚ್ಒಎಫ್ ಆಗಬಹುದು ಮತ್ತು ಈ ಪ್ರಕ್ರಿಯೆಯ ಮೂಲಕ ಅವನ ಅಥವಾ ಅವಳ ಸಂಬಂಧಿಕರೊಂದಿಗೆ ಅವರ ವಿಳಾಸವನ್ನು ಹಂಚಿಕೊಳ್ಳಬಹುದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆನ್ಲೈನ್ನಲ್ಲಿ ವಿಳಾಸಗಳನ್ನು ನವೀಕರಿಸಲು ನಿವಾಸಿಗಳು 'ಮೈ ಆಧಾರ್' ಪೋರ್ಟಲ್ ಗೆ ಭೇಟಿ ನೀಡಬಹುದು.
ಎಚ್ಒಎಫ್ ಮಾಹಿತಿ ಗೌಪ್ಯತೆ
ಇದರ ನಂತರ, ನಿವಾಸಿಯು ಎಚ್ಒಎಫ್ ನ ಆಧಾರ್ ಸಂಖ್ಯೆಯನ್ನು ನಮೂದಿಸಲು ಅನುಮತಿಸಲಾಗುತ್ತದೆ. ಆನಂತರ ಎಚ್ಒಎಫ್ ನ ಬಗ್ಗೆ ಸಾಕಷ್ಟು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಎಚ್ಒಎಫ್ ನ ಆಧಾರ್ ನ ಇತರ ಯಾವುದೇ ಮಾಹಿತಿಯನ್ನು ಕಂಪ್ಯೂಟರ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುವುದಿಲ್ಲ.
ಎಚ್ಒಎಫ್ ನ ಆಧಾರ್ ಸಂಖ್ಯೆಯ ಯಶಸ್ವಿ ದೃಢೀಕರಣದ ನಂತರ, ನಿವಾಸಿಯು ಸಂಬಂಧದ ದಾಖಲೆಯ ಪುರಾವೆಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
50 ರೂಪಾಯಿ ಶುಲ್ಕ
ನಿವಾಸಿಗಳು ಈ ಸೇವೆಗಾಗಿ 50 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಯಶಸ್ವಿ ಪಾವತಿಯ ನಂತರ, ಸೇವಾ ವಿನಂತಿ ಸಂಖ್ಯೆಯನ್ನು (ಎಸ್ಆರ್ಎನ್) ನಿವಾಸಿಯೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ವಿಳಾಸ ವಿನಂತಿಯ ಬಗ್ಗೆ ಎಚ್ಒಎಫ್ ಗೆ ಸಂದೇಶವನ್ನು ಸಹ ಕಳುಹಿಸಲಾಗುತ್ತದೆ.
30 ದಿನಗಳೊಳಗೆ ಸಮ್ಮತಿ ಸೂಚಿಸಬೇಕು
"ಎಚ್ಒಎಫ್ ಆ ವಿನಂತಿಯನ್ನು ಅನುಮೋದಿಸಬೇಕು ಮತ್ತು ಅಧಿಸೂಚನೆಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಮೈ ಆಧಾರ್ ಪೋರ್ಟಲ್ ಗೆ ಲಾಗಿನ್ ಆಗುವ ಮೂಲಕ ಅವರ ಸಮ್ಮತಿಯನ್ನು ನೀಡಬೇಕು ಮತ್ತು ವಿನಂತಿಯನ್ನು ಪ್ರಕ್ರಿಯೆಗೊಳಿಸಲಾಗುವುದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಎಚ್ಒಎಫ್ ಅವಳ ಅಥವಾ ಅವನ ವಿಳಾಸವನ್ನು ಹಂಚಿಕೊಳ್ಳಲು ನಿರಾಕರಿಸಿದರೆ ಅಥವಾ ಎಸ್ಆರ್ಎನ್ ರಚಿಸಿದ ನಿಗದಿತ 30 ದಿನಗಳ ಒಳಗೆ ಸ್ವೀಕರಿಸದಿದ್ದರೆ ಅಥವಾ ನಿರಾಕರಿಸದಿದ್ದರೆ, ಆ ವಿನಂತಿಯನ್ನು ರದ್ದುಗೊಳಿಸಲಾಗುತ್ತದೆ.
ಇದನ್ನೂ ಓದಿ: Jimny 5-Door: ಮಾರುತಿ ಸುಜುಕಿ ಜಿಮ್ನಿ 5 ಡೋರ್ ಕಾರು ಎಂಟ್ರಿ! ಥಾರ್ಗೆ ಟಫ್ ಫೈಟ್ ಕೊಡೋದ್ರಲ್ಲಿ ಡೌಟೇ ಇಲ್ಲ!
ಶುಲ್ಕದ ಮರುಪಾವತಿ ಇಲ್ಲ
ಎಸ್ಎಂಎಸ್ ಮೂಲಕ ವಿನಂತಿಯನ್ನು ಮುಕ್ತಾಯಗೊಳಿಸುವ ಬಗ್ಗೆ ನಿವಾಸಿಗೆ ತಿಳಿಸಲಾಗುತ್ತದೆ. ಒಂದು ವೇಳೆ ಎಚ್ಒಎಫ್ ಒಪ್ಪಿಗೆಯನ್ನು ಸ್ವೀಕರಿಸದ ಕಾರಣ ವಿನಂತಿಯನ್ನು ರದ್ದು ಮಾಡಿದರೆ, ಆ ಮೊತ್ತವನ್ನು ಅರ್ಜಿದಾರರಿಗೆ ಮರುಪಾವತಿಸಲಾಗುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ